ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆ ಸೋಮವಾರವೂ ಮುಂದುವರಿದಿದೆ. ಮಳೆಯೊಂದಿಗೆ ಬಿರುಸಾಗಿ ಬೀಸುತ್ತಿರುವ ಶೀತಗಾಳಿಯಿಂದ ಜನಸಾಮಾನ್ಯರು ಅಕ್ಷರಶಃ ಹೈರಣಾಗಿದ್ದಾರೆ. ಕಳೆದ ಮೂರು ವರ್ಷಗಳಿಗಿಂತ ಕಡಿಮೆ ತಾಪಮಾನ ಆಗಸ್ಟ್ ತಿಂಗಳಲ್ಲಿ ದಾಖಲಾಗಿದ್ದು, ಹಲವೆಡೆ ಕನಿಷ್ಠ ತಾಪಮಾನ 17 ಡಿಗ್ರಿಗೂ ಕಡಿಮೆ ಇದೆ. ಇದರಿಂದ ಜನರು ನಡುಗುವಂತಾಗಿದೆ.
ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯು ಸೋಮವಾರವೂ ಬಿರುಸಾಗಿ ಸುರಿದಿದೆ. ಮಡಿಕೇರಿಯಲ್ಲಿ ಬೀಸುತ್ತಿರುವ ಬಿರುಗಾಳಿಗೆ ಕೊಡೆ ಹಿಡಿದು ನಡೆಯುವುದೂ ದುಸ್ತರ ಎನಿಸಿದೆ. ಗಾಳಿಗೆ ಮುರಿದು ಬಿದ್ದ ಕೊಡೆಗಳು ರಸ್ತೆ ಬದಿಯಲ್ಲಿ ಕಾಣಿಸಲಾರಂಭಿಸಿವೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಈ ವರ್ಷ ಮತ್ತೊಮ್ಮೆ ನದಿ ತೊರೆಗಳೆಲ್ಲವೂ ಉಕ್ಕಿ ಹರಿಯಲಾರಂಭಿಸಿವೆ, ಜಲಪಾತಗಳ ಭೋರ್ಗರೆತ ಮತ್ತಷ್ಟು ಹೆಚ್ಚಾಗಿದೆ. ಹಾರಂಗಿ ಜಲಾಶಯದ ಒಳ ಹರಿವು ಮತ್ತಷ್ಟು ಹೆಚ್ಚಿದ್ದು, ನದಿಗೆ 10 ಸಾವಿರಕ್ಕೂ ಅಧಿಕ ಕ್ಯುಸೆಕ್ ನೀರನ್ನು ಬಿಡಲಾಗುತ್ತಿದೆ. ಬಿರುಸಿನ ಮಳೆ ಮುಂದುವರಿದಿರುವುದರಿಂದ ನದಿ ತೀರದ ನಿವಾಸಿಗಳಲ್ಲಿ ಆತಂಕ ಹೆಚ್ಚಿದೆ.
ಎಲ್ಲೆಡೆ ದಟ್ಟ ಮೋಡಗಳು ಆವರಿಸಿದ್ದು, ಮಂಜು ಮುಸುಕಿದ ವಾತಾವರಣ ಇದೆ. ಇದರಿಂದ ವಾಹನ ಸವಾರರು ವಾಹನ ಚಾಲನೆ ಮಾಡಲು ಪರದಾಡುವಂತಾಗಿದೆ.
ಬಿರುಸಾಗಿ ಬೀಸುತ್ತಿರುವ ಗಾಳಿ ಹಾಗೂ ಮಳೆಯಿಂದ ಗುಡ್ಡದ ಕೆಳಗೆ, ಗುಡ್ಡದ ಮೇಲೆ, ಇಳಿಜಾರಿನಲ್ಲಿ ವಾಸಿಸುವ ಮಂದಿ ಆತಂಕಪಡುವಂತಾಗಿದೆ. ಮೇ ತಿಂಗಳ ಕೊನೆಯಿಂದ ಆರಂಭವಾಗಿರುವ ಮಳೆ ಆಗಸ್ಟ್ ಮಧ್ಯಭಾಗದಲ್ಲೂ ಸುರಿಯುತ್ತಿರುವುದು ಅವರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಆರೆಂಜ್ ಅಲರ್ಟ್; ಶಾಲಾ ಕಾಲೇಜುಗಳಿಗೆ ರಜೆ
ಇಂದು ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆ ಬೀಳುವ ಮುನ್ನಚ್ಚರಿಕೆ ನೀಡಿರುವ ಹವಾಮಾನ ಇಲಾಖೆ ‘ಆರೆಂಜ್ ಅಲರ್ಟ್’ ನೀಡಿದೆ. ಇದರ ಬೆನ್ನಲ್ಲೇ ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ಸಹ ಗಾಳಿ ಸಹಿತ ಹೆಚ್ಚಿನ ಮಳೆಯಾಗುತ್ತಿರುವುದರಿಂದ ಆ.18ರಂದು ಜಿಲ್ಲೆಯ ಎಲ್ಲ ಅಂಗನವಾಡಿ ಪ್ರಾಥಮಿಕ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಿಗೆ ರಜೆ ನೀಡಲಾಗಿದೆ ಎಂದು ಆದೇಶಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.