ADVERTISEMENT

ಕೊಡಗು | ‘ಗ್ಯಾರಂಟಿ’ ತಲುಪಿಸಲು ಹೆಚ್ಚಿನ ಶ್ರಮ ಹಾಕಿ: ಕಾಂತರಾಜು ಸೂಚನೆ

ಯೋಜನೆ ಅನುಷ್ಠಾನ ಸಮಿತಿಯ ಸಭೆಯಲ್ಲಿ ತಾಲ್ಲೂಕು ಅಧ್ಯಕ್ಷ ಜಿ.ಎಂ.ಕಾಂತರಾಜು ಸೂಚನೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2025, 3:52 IST
Last Updated 27 ಜೂನ್ 2025, 3:52 IST
ಗ್ಯಾರಂಟಿ ಯೋಜನೆಯ ತಾಲ್ಲೂಕು ಸಮಿತಿ ಸಭೆ ಸೋಮವಾರಪೇಟೆ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಅನುಷ್ಠಾನ ಸಮಿತಿ ಅಧ್ಯಕ್ಷ ಜಿ.ಎಂ. ಕಾಂತರಾಜು ಅಧ್ಯಕ್ಷತೆಯಲ್ಲಿ ನಡೆಯಿತು.
ಗ್ಯಾರಂಟಿ ಯೋಜನೆಯ ತಾಲ್ಲೂಕು ಸಮಿತಿ ಸಭೆ ಸೋಮವಾರಪೇಟೆ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಅನುಷ್ಠಾನ ಸಮಿತಿ ಅಧ್ಯಕ್ಷ ಜಿ.ಎಂ. ಕಾಂತರಾಜು ಅಧ್ಯಕ್ಷತೆಯಲ್ಲಿ ನಡೆಯಿತು.   

ಸೋಮವಾರಪೇಟೆ: ಗ್ಯಾರಂಟಿ ಯೋಜನೆಗಳು ಫಲಾನುಭವಿಗಳಿಗೆ ಸರಿಯಾಗಿ ತಲುಪದಿದ್ದರೆ ಸಂಬಂಧಿಸಿದ ಅಧಿಕಾರಿಗಳೇ ಹೊಣೆಗಾರರಾಗಿದ್ದು, ಎಲ್ಲರೂ ಫಲಾನುಭವಿಗಳೊಂದಿಗೆ ಶಾಂತ ರೀತಿಯಲ್ಲಿ ಸ್ಪಂದಿಸಿ ಕೆಲಸ ಮಾಡಿಕೊಡಬೇಕು’ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಜಿ.ಎಂ. ಕಾಂತರಾಜು ತಿಳಿಸಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ‘ಗ್ಯಾರಂಟಿ ಯೋಜನೆಗಳನ್ನು ಅರ್ಹರಿಗೆ ತಲುಪಿಸಲು ಅಧಿಕಾರಿಗಳು ಹೆಚ್ಚಿನ ಶ್ರಮ ವಹಿಸಬೇಕು’ಎಂದರು.

‘ಅನ್ನಭಾಗ್ಯ’ ಯೋಜನೆಯಡಿ ಬಿಪಿಲ್ ಹಾಗೂ ಅಂತ್ಯೋದಯ ಪಡಿತರ ಚೀಟಿದಾರರಿಗೆ ತಿಂಗಳ ಅಂತ್ಯದಲ್ಲಿ ಪಡಿತರ ಸರಬರಾಜಾಗುತ್ತಿರುವುದರಿಂದ, ಆಯಾ ತಿಂಗಳಿನಲ್ಲಿಯೇ ಪೂರ್ಣ ಪ್ರಮಾಣದಲ್ಲಿ ಅಕ್ಕಿ ವಿತರಣೆ ಸಾಧ್ಯವಾಗುತ್ತಿಲ್ಲ’ ಎಂದು ಆಹಾರ ನಿರೀಕ್ಷಕಿ ಯಶಸ್ವಿನಿ ಅವರು ಸಭೆಯಲ್ಲಿ ತಿಳಿಸಿದರು.

ADVERTISEMENT

ತಿಂಗಳ 20ನೇ ತಾರೀಕಿನೊಳಗೆ ಅಕ್ಕಿ ಸರಬರಾಜು ಮಾಡುವಂತೆ ಕ್ರಮ ವಹಿಸಲು ಕೆಡಿಪಿ ಸಭೆಯಲ್ಲಿ ಗಮನ ಸೆಳೆಯಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವರಿಗೆ ಈ ಬಗ್ಗೆ ಮನವಿ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

‘ಗೃಹಲಕ್ಷ್ಮೀ’ ಯೋಜನೆಯಡಿ ಫೆಬ್ರುವರಿ ಹಾಗೂ ಮಾರ್ಚ್ ತಿಂಗಳ ಹಣ ಫಲಾನುಭವಿಗಳ ಖಾತೆಗೆ ಜಮೆಯಾಗಿಲ್ಲ. ಏಪ್ರಿಲ್ ತಿಂಗಳ ಹಣ ಖಾತೆಗೆ ಜಮೆಯಾಗಿದ್ದು, ಮೇ ತಿಂಗಳ ಕಂತು ಕೆಲವರಿಗೆ ಮಾತ್ರ ಬಾಕಿಯಿದೆ. ಫೆಬ್ರುವರಿ ‌ಅಂತ್ಯಕ್ಕೆ 634 ಹೊಸ ಅರ್ಜಿಗಳು ಬಂದಿವೆ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿ ತಿಳಿಸಿದರು.

‘ಯುವ ನಿಧಿ’ ಯೋಜನೆಯಡಿ ಪ್ರತಿ ತಿಂಗಳು ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ ನೋಂದಣಿ ಮಾಡಿಕೊಂಡಿರುವ ನಿರುದ್ಯೋಗಿಗಳ ಖಾತೆಗೆ ಹಣ ಜಮೆಯಾಗುತ್ತಿದೆ’ ಎಂದು ಅಧಿಕಾರಿ ಮಂಜುನಾಥ್ ಹೇಳಿದರು.

‘ಗೃಹಜ್ಯೋತಿ’ ಯೋಜನೆಯಡಿ ಶೂನ್ಯ ಬಿಲ್ ಪಡೆಯುತ್ತಿದ್ದವರಿಗೆ ಇದೀಗ ಸರ್ವಿಸ್ ಶುಲ್ಕ ಎಂದು ₹500ರಿಂದ ₹2 ಸಾವಿರದಷ್ಟು ಬಿಲ್ ಬರುತ್ತಿದೆ’ ಎಂದು ಶನಿವಾರಸಂತೆಯ ಅಬ್ಬಾಸ್ ಸಭೆಯ ಗಮನ ಸೆಳೆದರು.

‘ಈ ಬಗ್ಗೆ ಪರಿಶೀಲಿಸಿ ಸಮಸ್ಯೆ ಬಗೆಹರಿಸುವಂತೆ ಅಧ್ಯಕ್ಷ ಕಾಂತರಾಜ್ ಅವರು, ಸಂಬಂಧಿಸಿದ ಅಧಿಕಾರಿಗೆ ಸೂಚಿಸಿದರು.

‘ಶಕ್ತಿ’ ಯೋಜನೆಯಡಿ ಕಳೆದ ಸಾಲಿನ ಸಭೆಯಲ್ಲಿ ಚರ್ಚೆಯಾದಂತೆ ಮಡಿಕೇರಿ-ಬೆಂಗಳೂರು ಬಸ್ ಹಂಡ್ಲಿಯಲ್ಲಿ ನಿಲುಗಡೆಗೆ ಕ್ರಮ ವಹಿಸಲಾಗಿದೆ, ಹರಗ-ಸೂರ್ಲಬ್ಬಿ-ಶಿರಂಗಳ್ಳಿ ಮಾರ್ಗದಲ್ಲಿ ಬಸ್ ಸಂಚಾರ ಕಲ್ಪಿಸಲಾಗಿದೆ’ ಎಂದು ಕೆಎಸ್ಆರ್‌ಟಿಸಿ ಸಂಚಾರ ನಿಯಂತ್ರಕ ಪರಮೇಶ್ ಹೇಳಿದರು.

‘ದುಂಡಳ್ಳಿ, ಮಾದ್ರೆ, ಚಂಗಡಹಳ್ಳಿ ಮಾರ್ಗದಲ್ಲಿ ನೂತನ ಮಾರ್ಗದಲ್ಲಿ ಬಸ್ ಹಾಕಿದ್ದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವುದು’ ಎಂದು ಸದಸ್ಯ ಅಬ್ಬಾಸ್ ಮನವಿ ಮಾಡಿದರು.

ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಕುಮಾರ್, ಸದಸ್ಯ ರಾಜಪ್ಪ, ಐದು ಇಲಾಖೆಗಳ ಅಧಿಕಾರಿಗಳು, ಸಮಿತಿಯ ಸದಸ್ಯರು ಹಾಜರಿದ್ದರು.

ಸೋಮವಾರಪೇಟೆ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆಯ ತಾಲ್ಲೂಕು ಸಮಿತಿ ಸಭೆಯಲ್ಲಿ ಅಧಿಕಾರಿಗಳು ಹಾಜರಿದ್ದರು
ತಾಕೇರಿ ಮಾರ್ಗದಲ್ಲಿ ಭಾನುವಾರ ಬಸ್‌ ಸೌಲಭ್ಯ ಕಲ್ಪಿಸಿ  ಗೃಹಲಕ್ಷ್ಮಿ: ಜಮೆಯಾಗದ ಫೆಬ್ರುವರಿ, ಮಾರ್ಚ್ ತಿಂಗಳ ಹಣ 20ನೇ ತಾರೀಕಿನೊಳಗೆ ಪಡಿತರ ನೀಡಿ 
ಸೋಮವಾರಪೇಟೆಯಿಂದ ಮಡಿಕೇರಿಗೆ ಬೆಳಿಗ್ಗೆ ಶಾಲಾ– ಕಾಲೇಜು ಸಮಯದಲ್ಲಿ ಬಸ್ ವ್ಯವಸ್ಥೆ ಕಲ್ಪಿಸಬೇಕು
ರಾಜು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ

‘ವಿದ್ಯುತ್ ಮೀಟರ್ ಮನೆಯ ಹೊರಗೆ ಹಾಕಿಸಿ’

‘ಮೀಟರ್ ರೀಡಿಂಗ್‌ಗೆ ಬರುವ ಸಂದರ್ಭ ಮನೆಯ ಬಾಗಿಲು ಹಾಕಿದ್ದರೆ ಮುಂದಿನ ತಿಂಗಳ ರೀಡಿಂಗ್‌ನಲ್ಲಿ ಎರಡೂ ತಿಂಗಳಿಗೆ ಸೇರಿಸಿ ಒಟ್ಟಿಗೆ ಬಿಲ್ ನೀಡುತ್ತಿರುವುದರಿಂದ ಕೆಲವರು ಹೆಚ್ಚುವರಿ ಹಣ ಪಾವತಿ ಮಾಡಬೇಕಿದೆ. ಇದಕ್ಕೆ ಅವಕಾಶ ಕಲ್ಪಿಸದೇ ಒಂದು ವೇಳೆ ಬಾಗಿಲು ಹಾಕಿದ್ದರೆ ಕಳೆದ ತಿಂಗಳ ಸರಾಸರಿ ಬಿಲ್ ಹಾಕಬೇಕು’ ಎಂದು ಸಭೆಯಲ್ಲಿದ್ದ ಸದಸ್ಯ ಎಸ್.ಎಂ. ಡಿಸಿಲ್ವಾ ಸಭೆಯ ಗಮನ ತಂದರು. ‘ಎಲ್ಲಾ ಗ್ರಾಹಕರು ವಿದ್ಯುತ್ ಮೀಟರ್‌ಗಳನ್ನು ಮನೆಯ ಹೊರಭಾಗದಲ್ಲಿ ಹಾಕಿಸಿದರೆ ಮೀಟರ್ ರೀಡಿಂಗ್‌ಗೆ ಅನುಕೂಲವಾಗುತ್ತದೆ. ಈ ಕುರಿತು ಇಲಾಖೆಯ ನಿರ್ದೇಶನವಿದ್ದು ಇದನ್ನು ಎಲ್ಲರೂ ಪಾಲಿಸಿದರೆ ಸಮಸ್ಯೆ ಇರುವುದಿಲ್ಲ’ ಎಂದು ಅಧಿಕಾರಿ ಯಶಸ್ವಿನಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.