ADVERTISEMENT

ಮಡಿಕೇರಿ | ಮಾವು ಮತ್ತು ಹಲಸು ಮೇಳ; ₹ 22 ಲಕ್ಷ ವಹಿವಾಟು

​ಪ್ರಜಾವಾಣಿ ವಾರ್ತೆ
Published 1 ಜೂನ್ 2023, 23:30 IST
Last Updated 1 ಜೂನ್ 2023, 23:30 IST

ಮಡಿಕೇರಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ ಹಾಗೂ ಕೊಡಗು ಜಿಲ್ಲಾ ಹಾಪ್ ಕಾಮ್ಸ್ ಸಹಯೋಗದೊಂದಿಗೆ ಮಡಿಕೇರಿ ನಗರದ ಹಾಪ್ ಕಾಮ್ಸ್ ಮುಖ್ಯ ಕಚೇರಿ ಆವರಣದಲ್ಲಿ ಈಚೆಗೆ ನಡೆದ ಮಾವು ಮತ್ತು ಹಲಸು ಮೇಳದಲ್ಲಿ ₹ 22 ಲಕ್ಷ ವಹಿವಾಟು ನಡೆದಿದೆ.

ಈ ಮೇಳದಲ್ಲಿ ಮಂಡ್ಯ, ರಾಮನಗರ, ಮಂಗಳೂರು, ಮೈಸೂರು ಭಾಗಗಳಿಂದ ರೈತರು ತಾವೇ ಬೆಳೆದಿರುವ ಹಾಗೂ ನೈಸರ್ಗಿಕವಾಗಿ ಮಾಗಿಸಿದ ಒಟ್ಟು 17 ವಿವಿಧ ತಳಿಗಳಾದ ಮಲ್ಲಿಕಾ, ಅಲ್ಫಾನ ಸೋ, ಮಲಗೋವಾ, ತೋತಪುರಿ, ನೀಲಂ, ರಸಪುರಿ, ಸಿಂದೂರ, ಬದಾಮಿ, ಕೇಸರ್ ಹಾಗೂ ಇತ್ಯಾದಿ ಹಣ್ಣುಗಳನ್ನು 20 ಮಳಿಗೆಗಳಲ್ಲಿ ಮಾರಾಟ ಮಾಡಲಾಯಿತು.

ಇದರ ಜೊತೆಗೆ ಪುತ್ತೂರಿನ 2 ಪ್ರಮುಖ ನರ್ಸರಿಗಳು ವಿವಿಧ ಜಾತಿಯ ಹಲಸಿನ ತಳಿಗಳು, ಮಾವು ತಳಿಗಳನ್ನು ಹಾಗೂ ಇತರೆ ಹಣ್ಣಿನ ಕಸಿ ಗಿಡಗಳನ್ನು ಮಾರಾಟ ಮಾಡಲಾಯಿತು. ಇದೇ ಪ್ರಥಮ ಬಾರಿಗೆ ಮಾವಿನ ಹಣ್ಣು ಹಾಗೂ ಹಲಸಿನಿಂದ ಸಂಸ್ಕರಣೆ ಮಾಡಿರುವ ಪದಾರ್ಥಗಳನ್ನು ಸಹ ಮಾರಾಟಕ್ಕೆ ಇಡಲಾಗಿದೆ. ಒಟ್ಟು ಮೂರು ದಿನದ ಮೇಳದಲ್ಲಿ 6,000 ಗ್ರಾಹಕರು ಭೇಟಿ ನೀಡಿದ್ದು, ಅಂದಾಜು 21,000 ಕೆ.ಜಿ.ಮಾವಿನ ಹಣ್ಣುಗಳು ಮಾರಾಟವಾಗಿದೆ. ಅಂದಾಜು 6 ಸಾವಿರ ವಿವಿಧ ಜಾತಿಯ ಹಲಸಿನ ತಳಿಗಳು, ಮಾವು ತಳಿಗಳನ್ನು ಹಾಗೂ ಇತರೆ ಹಣ್ಣಿನ ಕಸಿ ಗಿಡಗಳೂ ಮಾರಾಟವಾಗಿವೆ.

ADVERTISEMENT

ಇದರಿಂದ ಕೊಡಗಿನ ಗ್ರಾಹಕರಿಗೆ ವಿವಿಧ ರೀತಿಯ ಮಾವಿನ ಹಣ್ಣುಗಳನ್ನು ರಿಯಾಯಿತಿ ದರದಲ್ಲಿ ಪರಿಚಯಿಸುವುದರೊಂದಿಗೆ ರೈತರಿಗೂ ಸಹ ಮಧ್ಯವರ್ತಿಗಳು ಇಲ್ಲದೇ ನೇರವಾಗಿ ಮಾರಾಟ ಮಾಡಿರುವುದರಿಂದ ಲಾಭದಾಯಕವಾಗಿದೆ ಎಂದು ತೋಟಗಾರಿಕೆ ಉಪ ನಿರ್ದೇಶಕರಾದ ಎಚ್.ಆರ್.ನಾಯಕ್ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.