
ಮಡಿಕೇರಿ: ಒಂದೇ ಸೂರಿನಡಿ ಮರೆತು ಹೋಗಿದ್ದ 148 ವೈವಿಧ್ಯಮಯ ತಿನಿಸುಗಳು ಧುತ್ತನೇ ಕಂಡವು. ಬಾಯಲ್ಲಿ ನೀರೂರಿಸುವಂತಹ ತಿನಿಸುಗಳು ಕಣ್ಣಿಗಷ್ಟೇ ಅಲ್ಲ, ಅಧರಕ್ಕೂ ಉದರಕ್ಕೂ ಹಬ್ಬವನ್ನುಂಟು ಮಾಡಿದವು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ ಇಲ್ಲಿನ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಮಂಗಳವಾರ ಅಯೋಜಿಸಿದ್ದ ‘ಸಿರಿಧಾನ್ಯ’ ಮತ್ತು ‘ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆ’ಯಲ್ಲಿ 60ಕ್ಕೂ ಹೆಚ್ಚು ತಂಡಗಳು 148ಕ್ಕೂ ಅಧಿಕ ತಿನಿಸುಗಳನ್ನು ಸ್ಪರ್ಧೆಗಿರಿಸಿದ್ದರು. ಅವುಗಳಲ್ಲಿ ಸಿರಿಧಾನ್ಯದ ಸಿಹಿ ಖಾದ್ಯ 42, ಸಿರಿಧಾನ್ಯದ ಖಾರ ಖಾದ್ಯ 55 ಹಾಗೂ ಮರೆತು ಹೋದ ಖಾದ್ಯ 51 ಇದ್ದವು.
ಜೋಳ, ರಾಗಿ, ನವಣೆ, ಸಜ್ಜೆ, ಹಾರಕ, ಬರಗು, ಸಾಮೆ ಮತ್ತಿತರ ಸಿರಿಧಾನ್ಯಗಳಿಂದ ಮಾಡಿರುವ ವಿವಿಧ ರೀತಿಯ ತಿಂಡಿ ತಿನಿಸುಗಳು ನೋಡುಗರ ಬಾಯಲ್ಲಿ ನೀರೂರಿಸಿದವು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಚಂದ್ರಶೇಖರ್ ಮಾತನಾಡಿ , ‘ಸಿರಿಧಾನ್ಯ ಸೇವನೆಯಿಂದ ಹಲವು ಪೋಷಕಾಂಶಗಳು ದೊರೆಯಲಿದ್ದು, ಇವುಗಳನ್ನು ಬಳಸಬೇಕು. ಕ್ಯಾಲ್ಸಿಯಂ ದೊರೆತು ಮೂಳೆ ಗಟ್ಟಿಯಾಗಲಿದೆ. ಯಲಿದೆ. ಸಿರಿಧಾನ್ಯ ಬಳಕೆ ಅತ್ಯಗತ್ಯ ’ ಎಂದು ಸಲಹೆ ನೀಡಿದರು.
ಜಿಲ್ಲಾ ಮಟ್ಟಕ್ಕೆ ಖಾರ ತಿನಿಸು, ಸಿಹಿ ತಿನಿಸು ಮತ್ತು ಮರೆತು ಹೋದ ಖಾದ್ಯಗಳಿಗೆ ಪ್ರತ್ಯೇಕ ಪ್ರಥಮ ಬಹುಮಾನವಾಗಿ ₹ 5 ಸಾವಿರ, ದ್ವಿತೀಯ ಬಹುಮಾನ ₹3 ಸಾವಿರ ಹಾಗೂ ತೃತೀಯ ಬಹುಮಾನ₹ 2 ಸಾವಿರ ನೀಡಲಾಗುತ್ತದೆ.
ಆಹಾರ ವಿಜ್ಞಾನ ತಜ್ಞೆ ಎ.ವೀಣಾ, ಸಿಎಫ್‌ಟಿಆರ್‌ಐನ ನಿವೃತ್ತ ವಿಜ್ಞಾನಿ ಮಾಯಾ ಪ್ರಕಾಶ್, ಸಿಎಫ್‌ಟಿಆರ್‌ಐ ಆಹಾರ ಮತ್ತು ಪೌಷ್ಟಿಕಾಂಶ ವಿಭಾಗ ವಿಜ್ಞಾನಿ ಅಮುದಾ ಸೆಂಥಿಲ್ ತೀರ್ಪುಗಾರರಾಗಿದ್ದರು. ಅಂಕಗಳ ಆಧಾರದ ಮೇಲೆ ಸದ್ಯದಲ್ಲೇ ಫಲಿತಾಂಶ ಪ್ರಕಟವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಸಿರಿಧಾನ್ಯ ಜಾಗೃತಿ ಮೂಡಿಸಿ; ಸಿಇಒ
ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ ಹಾಗೂ ಕೃಷಿ ಇಲಾಖೆ ವತಿಯಿಂದ ಸಿರಿಧಾನ್ಯದ ಮಹತ್ವ ಕುರಿತು ಮಡಿಕೇರಿಯ ಕೋಟೆ ಆವರಣದಲ್ಲಿ ಮಂಗಳವಾರ ನಡೆದ ಸಿರಿಧಾನ್ಯ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ ‘ಸಿರಿಧಾನ್ಯ ಬಳಕೆಯಿಂದ ಪೌಷ್ಠಿಕಾಂಶಗಳು ಹೆಚ್ಚಿದ್ದು ಈ ಬಗ್ಗೆ ಜಾಗೃತಿ ಮೂಡಿಸಬೇಕು’ ಎಂದರು. ಸಿರಿಧಾನ್ಯ ಉಪಯೋಗದಿಂದ ದೇಹದಲ್ಲಿ ಆಹಾರದ ಸಮತೋಲನ ಕಾಯ್ದುಕೊಳ್ಳಬಹುದು. ಮಧುಮೇಹ ಮತ್ತು ರಕ್ತದೊತ್ತಡದಿಂದ ದೂರವಿರಬಹುದು ಎಂದರು. ಜಾಥಾ ನಗರದ ಕೋಟೆ ಆವರಣದಿಂದ ಗಾಂಧಿ ಮೈದಾನದವರೆಗೆ ನಡೆಯಿತು. 400ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಕೃಷಿ ಜಂಟಿ ನಿರ್ದೇಶಕ ಚಂದ್ರಶೇಖರ್ ಉಪ ನಿರ್ದೇಶಕ ಸೋಮಶೇಖರ್ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಶಶಿಧರ ಕೃಷಿ ಇಲಾಖೆ ಸಿಬ್ಬಂದಿ ಎನ್‍ಸಿಸಿ ವಿದ್ಯಾರ್ಥಿಗಳು ಕೃಷಿಕರು ಪಾಲ್ಗೊಂಡಿದ್ದರು.
ಸ್ಪರ್ಧೆಯಲ್ಲಿ ವೈವಿಧ್ಯಮಯ ತಿನಿಸು
ಸಿರಿಧಾನ್ಯದಲ್ಲಿ ಮಾಡಿದ್ದ ರಾಗಿ ದೋಸೆ ನಿಪ್ಪಟ್ಟು ಚಟ್ನಿ ಚಕ್ಕುಲಿ ಕೋಡು ಬಳೆ ಕಜ್ಜಾಯ ಸಿರಿಧಾನ್ಯ ಪಾಯಸ ಸಿರಿಧಾನ್ಯ ಪಲಾವ್ ರಾಗಿ ಬಿಸ್ಕತ್ ಬಿಳಿ ಜೋಳದ ಬಿಸ್ಕತ್ ಸಿರಿಧಾನ್ಯದ ಕೇಕ್ ಸಿರಿಧಾನ್ಯದ ಪಡ್ಡು ಸಿರಿಧಾನ್ಯದ ಲಡ್ಡು ಸಿರಿಧಾನ್ಯ ಚಟ್ನಿ ಸೀಮೆಬದನೆ ಕಟ್ಲೆಟ್ಟ್ ನವಣೆ ದೋಸೆ ಹಲಸಿನ ಕಟ್ಲೆಟ್ಟ್ ಬೂಕಿ ಕಜ್ಜಾಯ ರಾಗಿ ಲಡ್ಡು ಗುಳಿಗೆ ಪಾಯಸ ಸಜ್ಜೆನಾಡು ನವಣೆ ಕಟ್ಲೆಟ್ಟ್ ಪಪ್ಪಾಯಿ ಹಲ್ವ ಸಜ್ಜೆ ಹಲ್ವ ಸಿರಿಧಾನ್ಯ ಒಡೆ ಮೆಂತ್ಯೆ ಸೊಪ್ಪಿನ ಒಡೆ ಮೆಂತ್ಯೆ ಹಿಟ್ಟು ರಾಗಿ ಮತ್ತು ಕ್ಯಾರೇಟ್ ಕೇಕ್ ಶಾಮೆ ಪುಡಿ ಮತ್ತು ಕಾಳುಕಡುಬು ಹುರಿಕಡಲೆ ಚಿಕ್ಕಿ ಇರಲೆಕಾಯಿ ಗೊಜ್ಜು ಗೋಧಿ ಹಲ್ವ ಸಿಹಿ ಕಡುಬು ನವಣೆ ಬಿಸಿಬೇಳೆ ಬಾತ್ ರಾಗಿ ದೋಸೆ ನವಣೆ ಉಪ್ಪಿಟ್ಟು ರಾಗಿ ಹಲ್ವ ರಾಗಿ ಮಿಕ್ಸರ್ ಕಕ್ಕಡ ಸೊಪ್ಪು ಪಾಯಸ ಸಿಹಿ ಗೆಣಸು ಖಾರ ಇರಲೆ ಉಪ್ಪಿನಕಾಯಿ ನವಣೆ ರೊಟ್ಟಿ ಶುಂಠಿ ಚಟ್ನಿ ಕೆಸಸಾರು ಮಾವಿನಕಾಯಿ ಪಾನೀಯ ಕುಂಬಳ ಕೊಡಿ ಪಲ್ಯ ಬರಗು ಒಡೆ ಸಿರಿಧಾನ್ಯ ನಿಪ್ಪಟ್ಟು ಅಡಿಕೆ ಪುಟ್ಟು ನವಣೆ ಬರಗು ಹಲ್ವ ಪತ್ರೋಡೆ ಬೇಂದಿ ಹೀಗೆ ಹಲವು ಖಾದ್ಯಗಳು ಸ್ಪರ್ಧೆಯಲ್ಲಿ ಗಮನ ಸೆಳೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.