
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಗುರುವಾರ ಹೊಸ ವರ್ಷ 2026 ಅನ್ನು ಸಾರ್ವಜನಿಕರು ಸಂಭ್ರಮದಿಂದ ಸ್ವಾಗತಿಸಿದರು.
ರಾತ್ರಿ 12 ಗಂಟೆಯಾಗುತ್ತಲೇ ಕೇಕ್ ಕತ್ತರಿಸಿ ಪರಸ್ಪರ ಹಂಚಿ ಸವಿದರು. ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಕೆಲವೆಡೆ ಹಾಡುಗಳನ್ನು ಹಾಕಿ ನರ್ತಿಸಿದರು. ಮತ್ತೆ ಕೆಲವೆಡೆ ಪಟಾಕಿಗಳನ್ನು ಸಿಡಿಸಿ ಖುಷಿಪಟ್ಟರು. ತಡರಾತ್ರಿಯವರೆಗೂ ಎದ್ದಿದ್ದ ಹಲವು ಮಂದಿ ಹೊಸ ವರ್ಷವನ್ನು ಸಂತಸದಿಂದಲೇ ಬರಮಾಡಿಕೊಂಡರು.
ಗುರುವಾರ ಬೆಳಿಗ್ಗೆಯಾಗುತ್ತಲೇ ಹಲವು ಮಂದಿ ದೇಗುಲಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಕುಂಕುಮಾರ್ಚನೆ ಸೇರಿದಂತೆ ಅನೇಕ ಬಗೆಯ ಪೂಜಾ ಕೈಂಕರ್ಯದಲ್ಲಿ ತೊಡಗಿದರು. ದೇವರಿಗೆ ನಮಿಸಿ ಪ್ರಾರ್ಥಿಸಿದರು.
ಗುರುವಾರ ಇಡೀ ದಿನ ಕೇಕ್‌ಗಳ ವ್ಯಾಪಾರ ಭರ್ಜರಿಯಾಗಿ ನಡೆಯಿತು. ಬುಧವಾರ ಬೆಳಿಗ್ಗೆಯಿಂದಲೇ ಆರಂಭವಾದ ಕೇಕ್ ಮಾರಾಟ ಗುರುವಾರ ಸಂಜೆಯವರೆಗೂ ನಡೆದೇ ಇತ್ತು. ವೈವಿಧ್ಯಮಯ ವಿನ್ಯಾಸ ಕೇಕ್‌ಗಳನ್ನು ವಿವಿಧ ಬೇಕರಿಗಳನ್ನು ತಯಾರಿಸಲಾಗಿತ್ತು.
ಹಲವು ಮಂದಿ ಬುಧವಾರ ರಾತ್ರಿ ಕೇಕ್ ಖರೀದಿಸಿದ್ದರೆ, ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಗುರುವಾರ ತಮ್ಮ ತಮ್ಮ ಕಚೇರಿ ಸಮೀಪ ಕೇಕ್ ಕತ್ತರಿಸಿ ಹಂಚಿದರು. ಕೆಲವರು ತಮ್ಮ ತಮ್ಮ ಮನೆಗಳಲ್ಲೂ ಕೇಕ್ ಸವಿದರು.
ಹೊಸ ವರ್ಷಾಚರಣೆ ಪ್ರಯುಕ್ತ ಪ್ರವಾಸಿಗರೂ ರಿಲ್ಯಾಕ್ಸ್ ಮೂಡ್‌ನಲ್ಲಿದ್ದದ್ದು ಕಂಡು ಬಂತು. ಅಬ್ಬಿ ಫಾಲ್ಸ್ ಸೇರಿದಂತೆ ಅನೇಕ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದರು. ಮಾತ್ರವಲ್ಲ, ರೆಸಾರ್ಟ್‌ಗಳಲ್ಲಿ, ಹೋಂಸ್ಟೇಗಳಲ್ಲಿ ಹೊಸ ವರ್ಷಾಚರಣಯನ್ನು ಪ್ರವಾಸಿಗರು ಪ್ರತಿ ವರ್ಷದಂತೆ ಈ ವರ್ಷವೂ ಮಾಡಿದರು.
ಬೆಂಕಿ ಹೊತ್ತಿಸಿ, ಚಳಿ ಓಡಿಸಿದ ಜನರು!
ಹಲವೆಡೆ ಬುಧವಾರ ರಾತ್ರಿ ಕೊರೆಯುತ್ತಿದ್ದ ಚಳಿಗೆ ಜನರು ಬೆಂಕಿ ಹೊತ್ತಿಸಿ ಅದರ ಮುಂದೆ ಕುಳಿತು ಹಾಸ್ಯಚಟಾಕಿಗಳನ್ನು ಹಾರಿಸುತ್ತ ಸಂಭ್ರಮಿಸಿದರು. ಈ ಮೂಲಕ ಚಳಿಯಿಂದ ರಕ್ಷಣೆ ಪಡೆದರು. ನಗರದ ಅಲ್ಲಲ್ಲಿ ಇಂತಹ ದೃಶ್ಯಗಳು ತಡರಾತ್ರಿಯವರೆಗೂ ಕಂಡು ಬಂದವು.
ಸಂಸದ ಜಗದೀಶ ಶೆಟ್ಟರ್ ಓಂಕಾರೇಶ್ವರ ದೇಗುಲಕ್ಕೆ ಭೇಟಿ
ಸಂಸದ ಜಗದೀಶ ಶೆಟ್ಟರ್ ಅವರು 2026ರ ಹೊಸ ವರ್ಷದ ಮೊದಲ ದಿನವಾದ ಗುರುವಾರ ಮಡಿಕೇರಿಯ ಐತಿಹಾಸಿಕ ಓಂಕಾರೇಶ್ವರ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಓಂಕಾರೇಶ್ವರ ದೇಗುಲದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಚುಮ್ಮಿ ದೇವಯ್ಯ ಹಾಗೂ ಇತರ ಸದಸ್ಯರು ಜಗದೀಶ ಶೆಟ್ಟರ್ ಅವರನ್ನು ಬರಮಾಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.