ADVERTISEMENT

ಕೊಡವ ಸಾಂಪ್ರದಾಯಿಕ ಪರಿಕರಗಳೊಂದಿಗೆ ಧರಣಿ

‘ವಿಶ್ವ ಆದಿಮಸಂಜಾತ ಸ್ಥಳೀಯ ಜನರ ಅಂತರರಾಷ್ಟ್ರೀಯ ದಿನದ ಪ್ರಯುಕ್ತ ಸಿಎನ್‌ಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2023, 14:05 IST
Last Updated 9 ಆಗಸ್ಟ್ 2023, 14:05 IST
ವಿಶ್ವ ಆದಿಮಸಂಜಾತ ಸ್ಥಳೀಯ ಜನರ ಅಂತರರಾಷ್ಟ್ರೀಯ ದಿನದ ಪ್ರಯುಕ್ತ ಬುಧವಾರ ಕೊಡವ ಸಾಂಪ್ರದಾಯಿಕ ಪರಿಕರಗಳನ್ನು ಮಡಿಕೇರಿಯ ಕೊಡಗು ಜಿಲ್ಲಾಧಿಕಾರಿ ಕಚೇರಿ ಮುಂದಿರಿಸಿ, ವಿನೂತನವಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಸದಸ್ಯರು ಪ್ರತಿಭಟನೆ ನಡೆಸಿದರು
ವಿಶ್ವ ಆದಿಮಸಂಜಾತ ಸ್ಥಳೀಯ ಜನರ ಅಂತರರಾಷ್ಟ್ರೀಯ ದಿನದ ಪ್ರಯುಕ್ತ ಬುಧವಾರ ಕೊಡವ ಸಾಂಪ್ರದಾಯಿಕ ಪರಿಕರಗಳನ್ನು ಮಡಿಕೇರಿಯ ಕೊಡಗು ಜಿಲ್ಲಾಧಿಕಾರಿ ಕಚೇರಿ ಮುಂದಿರಿಸಿ, ವಿನೂತನವಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಸದಸ್ಯರು ಪ್ರತಿಭಟನೆ ನಡೆಸಿದರು   

ಮಡಿಕೇರಿ: ಭಾರತದ ಈಶಾನ್ಯ ಪ್ರಾಂತ್ಯದಲ್ಲಿ 10 ಸ್ವಾಯತ್ತ ಪ್ರದೇಶಗಳಿಗೆ ನೀಡಿರುವ ಸ್ವಯಂ ನಿರ್ಣಯದ ಹಕ್ಕನ್ನು ಕೊಡವರಿಗೂ ನೀಡಬೇಕು ಹಾಗೂ ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ ನೀಡಬೇಕು ಎಂದು ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಬುಧವಾರ ಪ‍್ರತಿಭಟನೆ ನಡೆಸಿತು.

ವಿಶ್ವ ಆದಿಮಸಂಜಾತ ಸ್ಥಳೀಯ ಜನರ ಅಂತರರಾಷ್ಟ್ರೀಯ ದಿನದ ಪ್ರಯುಕ್ತ ಬುಧವಾರ ಕೊಡವ ಸಾಂಪ್ರದಾಯಿಕ ಪರಿಕರಗಳನ್ನು ಜಿಲ್ಲಾಧಿಕಾರಿ ಕಚೇರಿ ಮುಂದಿರಿಸಿ, ವಿನೂತನವಾಗಿ ಪ್ರತಿಭಟನಕಾರರು ಧರಣಿ ನಡೆಸಿದರು.

ಈ ವೇಳೆ ಮಾತನಾಡಿದ ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ, ‘ಕೊಡವರು ವಿಶಿಷ್ಟವಾದ ಸಾಮಾಜಿಕ, ಸಾಂಸ್ಕೃತಿಕ ವ್ಯವಸ್ಥೆಯನ್ನು ಹೊಂದಿರುವ ಬುಡಕಟ್ಟು ಜನಾಂಗ. ಇವರು ವಿಭಿನ್ನ ಭಾಷೆ ಮತ್ತು ನಂಬಿಕೆಗಳನ್ನು ಹೊಂದಿದ್ದಾರೆ. ಸಾಂಪ್ರದಾಯಿಕವಾಗಿ ಅವರು ಕೊಡವ ಭೂಮಿಯಲ್ಲೇ ಉಳಿದುಕೊಂಡಿದ್ದಾರೆ. ನಂಬಿಕೆ ಮತ್ತು ಸಂಸ್ಕೃತಿಯನ್ನು ತಮ್ಮ ಹೊಸ ಪೀಳಿಗೆಗೆ ರವಾನಿಸಿದ್ದಾರೆ. ಈ ರೀತಿಯ ವಿಶಿಷ್ಟ ಮತ್ತು ಅತಿಸೂಕ್ಷ್ಮ ಜನಾಂಗದ ಹಕ್ಕುಗಳನ್ನು ಆಡಳಿತ ವ್ಯವಸ್ಥೆ ಮುಂದೆ ಪ್ರತಿಪಾದಿಸುವುದು ನಮ್ಮ ಕರ್ತವ್ಯ ಎನಿಸಿದೆ’ ಎಂದರು.

ADVERTISEMENT

‘ವಿಶ್ವಸಂಸ್ಥೆ 2007 ಸೆಪ್ಟೆಂಬರ್‌ನಲ್ಲಿ ಜನರಲ್ ಅಸೆಂಬ್ಲಿ ಆದಿಮಸಂಜಾತ ಸ್ಥಳೀಯರ ಹಕ್ಕುಗಳ ಘೋಷಣೆಯನ್ನು ಅಂಗೀಕರಿಸಿತು. ಈ ಘೋಷಣೆಯು ಸ್ಥಳೀಯ ಜನರ ಹಕ್ಕುಗಳನ್ನು ರಕ್ಷಿಸುತ್ತದೆ. ಭಾರತ ಸೇರಿದಂತೆ 146 ದೇಶಗಳು ಈ ಘೋಷಣೆಯನ್ನು ಅಂಗೀಕರಿಸಿವೆ. ಆದಿಮಸಂಜಾತ ಜನರಾಗಿರುವ ಕೊಡವರು, ಭೂಮಿ ಸೃಷ್ಟಿಯಾದ ದಿನದಿಂದಲೂ ಕೊಡಗನ್ನು ತಮ್ಮ ಅವಿಭಾಜ್ಯ ಮತ್ತು ಸಾಂಪ್ರದಾಯಿಕ ಜನ್ಮಭೂಮಿಯನ್ನಾಗಿ ಪಡೆದಿದ್ದಾರೆ’ ಎಂದು ಪ್ರತಿಪಾದಿಸಿದರು.

ಆದಿವಾಸಿ ಮೂಲನಿವಾಸಿ ಕೊಡವ ಜನಾಂಗವನ್ನು ಸಂವಿಧಾನದ ಎಸ್.ಟಿ ಪಟ್ಟಿಯಲ್ಲಿ ಸೇರಿಸಬೇಕು. ಕೊಡವ ಜನಾಂಗದ ನಿಖರವಾದ, ಸಮಗ್ರ ಜನಾಂಗೀಯ ಕುಲಶಾಸ್ತ್ರ ಅಧ್ಯಯನ ನಡೆಸಬೇಕು. ಕೊಡವ ಸಾಂಪ್ರದಾಯಿಕ ಕಾಯ್ದೆಯಂತೆ ಜನಾಂಗೀಯ ‘ಧಾರ್ಮಿಕ ಸಂಸ್ಕಾರ ಗನ್’ ಹಕ್ಕುಗಳನ್ನು ರಕ್ಷಿಸಬೇಕು ಎಂದು ಆಗ್ರಹಿಸಿದರು.

‘ಕೊಡವ ತಕ್ಕ್ (ಭಾಷೆ) ಅನ್ನು 8ನೇ ಶೆಡ್ಯೂಲ್‍ಗೆ ಸೇರಿಸಬೇಕು, ಪಠ್ಯಕ್ರಮ ಮತ್ತು ಆಡಳಿತದಲ್ಲಿ ಪರಿಚಯಿಸಬೇಕು. ಕೊಡವ ಜಾನಪದ ಪರಂಪರೆಯನ್ನು ಅಮೂರ್ತ ಸಂಸ್ಕೃತಿಯಲ್ಲಿ ಸೇರಿಸಬೇಕು. ಯುನೆಸ್ಕೋದ ಪರಂಪರೆ ಪಟ್ಟಿಯಲ್ಲಿ ಕೊಡವ ಜಾನಪದ ಪರಂಪರೆಯನ್ನು ಜೀವಂತಗೊಳಿಸಲು, ಸರ್ಕಾರ ಕಾರ್ಯಕ್ರಮ ರೂಪಿಸಬೇಕು. ವಿಶ್ವ ಕೊಡವಾಲಜಿ ಸಂಶೋಧನಾ ಕೇಂದ್ರ ಮತ್ತು ಕೊಡವ ಅಡ್ವಾನ್ಸ್ಡ್ ಶಿಕ್ಷಣ ಕೇಂದ್ರ ಸ್ಥಾಪಿಸಲು ಸರ್ಕಾರಿ ಭೂಮಿ ನೀಡಬೇಕು’ ಎಂದು ಒತ್ತಾಯಿಸಿದರು.

‘ನಾಲ್ನಾಡಿನ ಅರಮನೆ ಮತ್ತು ಮಡಿಕೇರಿ ಕೋಟೆ ಅರಮನೆ ಸಂಚಿನಲ್ಲಿ ನಡೆದ ಕೊಡವರ ರಾಜಕೀಯ ಹತ್ಯೆಗಳ ಸ್ಮಾರಕಗಳು ನಿರ್ಮಾಣಗೊಳ್ಳಬೇಕು. ಉಲುಗುಲಿ, ಸುಂಟಿಕೊಪ್ಪ, ಮುಳ್ಳುಸೋಗೆಗಳಲ್ಲಿ ಕೊಡವ ಶೌರ್ಯವನ್ನು ಪ್ರತಿಬಿಂಬಿಸುವ ಯುದ್ಧ ಸ್ಮಾರಕಗಳನ್ನು ಸ್ಥಾಪಿಸಬೇಕು’ ಎಂದು ಮನವಿ ಮಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಅವರ ಮೂಲಕ ಹಕ್ಕೊತ್ತಾಯಗಳ ಮನವಿ ಪತ್ರವನ್ನು ಸರ್ಕಾರಕ್ಕೆ ಸಲ್ಲಿಸಿದರು.

ಪುಲ್ಲೇರ ಸ್ವಾತಿ ಕಾಳಪ್ಪ, ಪಟ್ಟಮಾಡ ಲಲಿತಾ, ಕೂಪದಿರ ಪುಷ್ಪಾ ಮುತ್ತಪ್ಪ, ಚೋಳಪಂಡ ಜ್ಯೋತಿ ನಾಣಯ್ಯ, ಕಲಿಯಂಡ ಪ್ರಕಾಶ್, ಜಮ್ಮಡ ಮೋಹನ್, ಬಾಚರಣಿಯಂಡ ಚಿಪ್ಪಣ್ಣ, ಅಜ್ಜಿಕುಟ್ಟಿರ ಲೋಕೇಶ್, ಪಟ್ಟಮಾಡ ಕುಶ ಸೇರಿದಂತೆ ಹಲವು ಮಂದಿ ಇದ್ದರು.

ಪ್ರತಿಭಟನೆ ಪ್ರಯುಕ್ತ ಬುಧವಾರ ಮಡಿಕೇರಿಯ ಕೊಡಗು ಜಿಲ್ಲಾಧಿಕಾರಿ ಕಚೇರಿ ಮುಂದಿರಿಸಿದ್ದ ಕೊಡವ ಸಾಂಪ್ರದಾಯಿಕ ಪರಿಕರಗಳು

ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಕಾರರು ಬೇಡಿಕೆಗಳನ್ನು ಈಡೇರಿಸಲು ಒತ್ತಾಯ ಎಡಿಸಿ ಮೂಲಕ ಸರ್ಕಾರಕ್ಕೆ ಮನವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.