ADVERTISEMENT

ಅಂದು ಕಟ್ಟಡ ಕಾರ್ಮಿಕ, ಈಗ ಶಿಲ್ಪಿ: ಪ್ರಯತ್ನ, ಪ್ರತಿಭೆ ಇದ್ದರೆ ಎಲ್ಲವೂ ಸಾಧ್ಯ

ಪ್ರಯತ್ನ, ಪ್ರತಿಭೆ ಇದ್ದರೆ ಎಲ್ಲವೂ ಸಾಧ್ಯವೆನ್ನಲು ಕೆ.ಬಿ.ಆನಂದ್ ಸಾಕ್ಷಿ

ಶ.ಗ.ನಯನತಾರಾ
Published 23 ನವೆಂಬರ್ 2022, 22:45 IST
Last Updated 23 ನವೆಂಬರ್ 2022, 22:45 IST
ಶನಿವಾರಸಂತೆ ಸಮೀಪದ ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಗ್ರಾಮದ ಶಿಲ್ಪಿ ಕೆ.ಬಿ.ಆನಂದ್ ಪತ್ನಿ ತೇಜಾವತಿ ಸಹಕಾರದೊಂದಿಗೆ ಶ್ರೀರಾಮ, ಸೀತೆ, ಲಕ್ಷ್ಮಣ ಹಾಗೂ ಆಂಜನೇಯ ವಿಗ್ರಹಗಳನ್ನು ನಿರ್ಮಿಸುತ್ತಿರುವುದು
ಶನಿವಾರಸಂತೆ ಸಮೀಪದ ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಗ್ರಾಮದ ಶಿಲ್ಪಿ ಕೆ.ಬಿ.ಆನಂದ್ ಪತ್ನಿ ತೇಜಾವತಿ ಸಹಕಾರದೊಂದಿಗೆ ಶ್ರೀರಾಮ, ಸೀತೆ, ಲಕ್ಷ್ಮಣ ಹಾಗೂ ಆಂಜನೇಯ ವಿಗ್ರಹಗಳನ್ನು ನಿರ್ಮಿಸುತ್ತಿರುವುದು   

ಶನಿವಾರಸಂತೆ: ಶನಿವಾರಸಂತೆಯಿಂದ ಕುಶಾಲನಗರಕ್ಕೆ ಹೋಗುವಾಗ ಕಣಿವೆ ಗ್ರಾಮದ ರಸ್ತೆಬದಿಯ ತೋಟದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧ ಸತೀಶ್ ಅವರ 6 ಅಡಿ ಎತ್ತರದ ವಿಗ್ರಹ ಹಾಗೂ ಅದು ನಿರ್ಮಾಣವಾಗಿರುವ ಮಂಟಪ ಪ್ರಯಾಣಿಕರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಇಂತಹ ಕಲಾತ್ಮಕ ಮೂರ್ತಿಯನ್ನು ಕೆತ್ತಿದವರು ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಕೂಡ್ಲೂರು ಗ್ರಾಮದ ಕೆ.ಬಿ.ಆನಂದ್.

ಕಲ್ಲು, ಗಾರೆ, ಮರದಲ್ಲಿ ಕಲೆಯನ್ನು ಅರಳಿಸುವ ಕಲಾವಿದರಾದ ಇವರು ಮೊದಲು ಕಟ್ಟಡ ಕಾರ್ಮಿಕರಾಗಿದ್ದು, ಆ ಕೆಲಸದ ಜತೆಯಲ್ಲೇ ಶಿಲ್ಪಕಲೆಯನ್ನೂ ಪ್ರವೃತ್ತಿಯನ್ನಾಗಿಸಿಕೊಂಡರು.

ಬಾಲ್ಯದಲ್ಲೇ ಗದ್ದೆಯಲ್ಲಿ ಮೆಣಸಿನ ಕಾಯಿ ಗಿಡಗಳಿಗೆ ನೀರು ಹಾಕುತ್ತಾ ಜೇಡಿಮಣ್ಣಿನಲ್ಲಿ ದೇವರಮೂರ್ತಿ ಮಾಡುವುದನ್ನು ಅಭ್ಯಾಸ ಮಾಡಿ ಕೊಂಡಿದ್ದರು. 1991ರಲ್ಲಿ ಕೊಡ್ಲಿಪೇಟೆಯ ಖ್ಯಾತ ಶಿಲ್ಪಿ ವರಪ್ರಸಾದ ಅವರ ಬಳಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾಗ ಅವರು ಕಲ್ಲಿನಲ್ಲಿ ಕೆತ್ತುತ್ತಿದ್ದ ಶಿಲ್ಪಕಲೆ ಇವರಲ್ಲಿ ಆಸಕ್ತಿ ಮೂಡಿಸಿತು. ಆಸಕ್ತಿಗೆ ಪ್ರೋತ್ಸಾಹದ ನೀರೆರೆದು ಕೆತ್ತನೆಯನ್ನು ವರಪ್ರಸಾದ್ ಅವರು ಕಲಿಸಿಕೊಟ್ಟರು.

ADVERTISEMENT

ನಂತರ ಆನಂದ್ ಮೈಸೂರಿನಲ್ಲಿ ಕೆಲವು ಶಿಲ್ಪಿಗಳ ಬಳಿಯೂ ತರಬೇತಿ ಪಡೆದರು. 2000ದಿಂದ ಸ್ವತಂತ್ರವಾಗಿ ಶಿಲೆಯಲ್ಲಿ ಕಲೆಯರಳಿಸುವ ಕಾಯಕ ಆರಂಭವಾಯಿತು. ಕಲ್ಲು, ಗಾರೆ, ಮರದಲ್ಲಿ ಶಿಲ್ಪಗಳನ್ನು ಮಾಡಿ ಜನರನ್ನು ಆಕರ್ಷಿಸಿದರು. ಬಾಳ ಸಂಗಾತಿಯಾಗಿ ಬಂದ ತೇಜಾವತಿ ಪತಿಯ ಕಲೆಗಾರಿಕೆಗೆ ಸಂಪೂರ್ಣ ಸಹಕಾರ ನೀಡಿದ್ದು, ಇಂದು ಸ್ವತಂತ್ರ ಶಿಲ್ಪಿಯಾಗಲು ಸಾಧ್ಯವಾಯಿತು.

2002ರಿಂದ ಜಿಲ್ಲೆ, ಹೊರ ಜಿಲ್ಲೆಗಳ ದೇವಾಲಯಗಳಿಗೆ ಆದೇಶ ಪಡೆದು ವಿಗ್ರಹಗಳನ್ನು ಮಾಡಿಕೊಡತೊಡ ಗಿದರು. ಎಚ್.ಡಿ.ಕೋಟೆಯಿಂದ ಕಪ್ಪುಶಿಲೆ, ಮಾರ್ಬಲ್, ಇತರ ವಿಗ್ರಹ ಕೆತ್ತನೆ ಕಲ್ಲುಗಳನ್ನು ತರುತ್ತಿದ್ದು ಶಿವ, ಶಿವಲಿಂಗ, ಗಣಪತಿ, ಬಸವಣ್ಣ, ವೀರಭದ್ರಸ್ವಾಮಿ, ನಂದಿಕಂಬ, ನಾಗಮೂರ್ತಿ, ಶಿವಕುಮಾರ ಸ್ವಾಮೀಜಿ, ನಂಜುಂಡ ಸ್ವಾಮೀಜಿ ಇತ್ಯಾದಿ 70-80 ವಿಗ್ರಹ ಗಳನ್ನು ಮಾಡಿದ್ದಾರೆ. 60ಕ್ಕೂ ಅಧಿಕ ದೇವಸ್ಥಾನಗಳಿಗೆ ವಿಗ್ರಹಗಳನ್ನು ಮಾಡಿಕೊಟ್ಟು, ಗೋಪುರವನ್ನೂ ನಿರ್ಮಿಸಿದ್ದಾರೆ.

ಜನರ ಬೇಡಿಕೆಗೆ ಅನುಗುಣವಾಗಿ ವಿನ್ಯಾಸ ಮಾಡಿ ಶಿಲೆಯಲ್ಲಿ ಕಲೆ ಅರಳಿಸುತ್ತಿದ್ದು ಗಾತ್ರಕ್ಕೆ ತಕ್ಕಂತೆ ಒಂದು ವಿಗ್ರಹ ಮಾಡಲು 1-2 ತಿಂಗಳ ಕಾಲಾವಕಾಶ ತೆಗೆದುಕೊಳ್ಳುತ್ತಾರೆ. ಕಲ್ಲಿಗೆ ವಿಧ್ಯುಕ್ತವಾಗಿ ಪೂಜೆ ಸಲ್ಲಿಸಿ, ಆಯ ಅಳತೆ ಮಾಡಿ ತನ್ಮಯರಾಗಿ ವಿಗ್ರಹ ಮೂಡಿಸುತ್ತಾರೆ.

‘ಬಾಲ್ಯದಿಂದಲೂ ಬಡತನದಲ್ಲಿ ಬೆಳೆದು ಬಂದ ಅವರು ತಂದೆಯನ್ನು ಕಳೆದುಕೊಂಡ ನಂತರ ತಾಯಿಯ ಆಸರೆಯಲ್ಲಿ ಬೆಳೆದರು. ತಮ್ಮ ಶ್ರಮಕ್ಕೆ, ದುಡಿಮೆಗೆ ತಕ್ಕ ಸಂಭಾವನೆ ಪಡೆಯುವ ಹಾಗೂ ಜನಸಾಮಾನ್ಯರ ಕೈಗೆ ಎಟುಕುವ ಬೆಲೆಗೆ ವಿಗ್ರಹಗಳನ್ನು ನಿರ್ಮಿಸಿಕೊಡುವ ಪ್ರಾಮಾಣಿಕ ಶಿಲ್ಪಿ ಎಂಬ ಹೆಸರಿಗೂ ಪಾತ್ರವಾಗಿದ್ದಾರೆ. ಸಾಹಿತ್ಯ ಸಮ್ಮೇಳನ, ಸಂಘಸಂಸ್ಥೆಗಳಲ್ಲಿ ಸನ್ಮಾನಿತರಾಗಿ ಪ್ರಶಸ್ತಿಗಳನ್ನೂ ಪಡೆದಿದ್ದಾರೆ.

ಕೃಷಿಕ, ಕಟ್ಟಡ ಕಾರ್ಮಿಕ ಹಾಗೂ ಶಿಲ್ಪಿಯಾಗಿರುವ ಕಾಯಕ ಯೋಗಿ ಪತಿ ಆನಂದ್ ಅವರಿಗೆ ಪತ್ನಿ ತೇಜಾವತಿ ನೆರಳಾಗಿ ನಿಂತು ಸಹಕಾರ ನೀಡುತ್ತಿದ್ದಾರೆ. ಪುತ್ರರಾದ ಚೇತನ್ ಮತ್ತು ಸುನೀತ್ ಕುಮಾರ್ ಅವರೂ ವಿದ್ಯಾಭ್ಯಾಸದ ಜತೆ ಕಲಾವಿದರಾಗಿ ರೂಪುಗೊಳ್ಳುತ್ತಿದ್ದಾರೆ. ಚೇತನ್ ಜೇಡಿ ಮಣ್ಣು ಮತ್ತು ಹುತ್ತದ ಮಣ್ಣಿನಲ್ಲಿ ವಿಗ್ರಹ ಮಾಡುತ್ತಿದ್ದು, ಸುನೀತ್ ಕುಮಾರ್ ಚಿತ್ರಕಲೆಯ ಅಭ್ಯಾಸ ಮಾಡುತ್ತಿದ್ದಾರೆ.

ಪ್ರಸ್ತುತ ಶಿಲ್ಪಿ ಆನಂದ್ ಚಿಕ್ಕಕಲ್ಲೂರು ಗ್ರಾಮದ ಆಂಜನೇಯ ದೇವಸ್ಥಾನಕ್ಕೆ ಗಾರೆಯಲ್ಲಿ ಶ್ರೀರಾಮ, ಸೀತೆ, ಲಕ್ಷ್ಮಣ ಹಾಗೂ 4 ಆಂಜನೇಯ ವಿಗ್ರಹಗಳನ್ನು ನಿರ್ಮಿಸಿದ್ದು ಅಂತಿಮ ರೂಪ ನೀಡುವ ಕೆಲಸದಲ್ಲಿ ತೊಡಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.