ADVERTISEMENT

ಕಾಂಗ್ರೆಸ್‌ ಹಿರಿಯ ಮುಖಂಡ ಮಿಟ್ಟು ಚೆಂಗಪ್ಪ ನಿಧನ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2025, 13:42 IST
Last Updated 24 ಏಪ್ರಿಲ್ 2025, 13:42 IST
ಮಿಟ್ಟು ಚೆಂಗಪ್ಪ
ಮಿಟ್ಟು ಚೆಂಗಪ್ಪ   

ಮಡಿಕೇರಿ: ಪ್ರತಿ ಚುನಾವಣೆಯಲ್ಲೂ ಮೊದಲಿಗೆ ಮತದಾನ ಮಾಡುತ್ತಿದ್ದವರೆಂದೇ ಖ್ಯಾತಿಯಾಗಿದ್ದ, ಕಾಂಗ್ರೆಸ್‌ ಹಿರಿಯ ಮುಖಂಡ ಮಿಟ್ಟು ಚಂಗಪ್ಪ (83) ವಯೋಸಹಜ ಕಾರಣಗಳಿಂದ ಅಮ್ಮತ್ತಿಯಲ್ಲಿ ಗುರುವಾರ ನಿಧನರಾದರು.

ಅವರಿಗೆ ಪತ್ನಿ, ಇಬ್ಬರು ಪುತ್ರಿಯರಿದ್ದಾರೆ. ‘ಶುಕ್ರವಾರ ಮಧ್ಯಾಹ್ನದವರೆಗೂ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಇಲ್ಲಿನ ಗಾಂಧಿ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ. ಬಳಿಕ ಮಡಿಕೇರಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ’ ಎಂದು ಕಾಂಗ್ರೆಸ್‌ನ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಧರ್ಮಜ ಉತ್ತಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

1962ರಿಂದ ಲೋಕಸಭೆ, ವಿಧಾನಸಭೆ ಹಾಗೂ ನಗರಸಭೆ ಸೇರಿದಂತೆ ಎಲ್ಲ ಚುನಾವಣೆಗಳಲ್ಲೂ ಮೊದಲಿಗರಾಗಿ ಒಟ್ಟು 31 ಬಾರಿ ಮತದಾನ ಮಾಡಿದ್ದ ಚಂಗಪ್ಪ, ಪ್ರಜಾಪ್ರಭುತ್ವದ ಬಹಳ ದೊಡ್ಡ ಪ್ರತಿಪಾದಕರಾಗಿದ್ದರು.

ADVERTISEMENT

ಸುಮಾರು 5 ದಶಕಗಳ ಕಾಲ ಕಾಂಗ್ರೆಸ್‌ನಲ್ಲಿದ್ದ ಅವರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಉಪಾಧ್ಯಕ್ಷ ಹಾಗೂ ಎಐಸಿಸಿ ಸದಸ್ಯರಾಗಿದ್ದರು.  ಇಂದಿರಾಗಾಂಧಿ ಸೇರಿದಂತೆ ಪಕ್ಷದ ಬಹುತೇಕ ಹಿರಿಯ ಮುಖಂಡರಿಗೆ ಆತ್ಮೀಯರಾಗಿದ್ದರು. ಪ್ರವಾಸೋದ್ಯಮಿ, ಕೖಷಿಕ, ಕಾಫಿ ಉದ್ಯಮಿಯಾಗಿಯೂ ಗಮನ ಸೆಳೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.