ಮಡಿಕೇರಿ: ಮುಂಬರುವ ದಸರೆಯ ವೇಳೆ ಪ್ರವಾಸೋದ್ಯಮ ಕ್ಷೇತ್ರದವರು ತೊಡಗಿಸಿಕೊಂಡು ವೈವಿಧ್ಯಮಯವಾದ ಕಾರ್ಯಕ್ರಮಗಳನ್ನು ಆಯೋಜಿಸಬಹುದು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಸಲಹೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಇದಕ್ಕೂ ಮುನ್ನ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ವಿಶೇಷ ಆಹ್ವಾನಿತರಾದ ಜಿ.ಚಿದ್ವಿಲಾಸ್ ಅವರು, ‘ದಸರೆ ವೇಳೆಯಲ್ಲಿ ಆಹಾರ ಮೇಳ ಆಯೋಜಿಸಬೇಕು’ ಎಂದು ಹೇಳಿದ ಮಾತಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ದಸರೆಗೂ ಮೊದಲೇ ಆಹಾರ ಮೇಳ ಆಯೋಜಿಸುವುದು ಒಳ್ಳೆಯದು’ ಎಂದರು.
ಮಾತ್ರವಲ್ಲ, ‘ದಸರೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರದವರೂ ತೊಡಗಿಸಿಕೊಂಡು ಹಲವು ಬಗೆಯ ಕಾರ್ಯಕ್ರಮಗಳನ್ನು ಆಯೋಜಿಸುವುದಕ್ಕೆ ಅವಕಾಶಗಳಿವೆ’ ಎಂದು ಹೇಳಿದರು.
ಈ ವರ್ಷ ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು. ಯಾವುದಾದರೂ ಹೊಸ ಕಾರ್ಯಕ್ರಮ ಆಯೋಜಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲೆಯಲ್ಲಿ ಹೋಂ ಸ್ಟೇಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಹೋಂ ಸ್ಟೇ, ಹೋಟೆಲ್ ಸೇರಿದಂತೆ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ‘ಯಶಸ್ಸಿನ ಕಥನ’ಗಳು ಪ್ರಕಟವಾಗಬೇಕು. ಇದರಿಂದ ಹೋಂ ಸ್ಟೇ, ರೆಸಾರ್ಟ್‌ಗಳ ಬಗ್ಗೆ ಹೆಚ್ಚಿನ ವಿಶ್ವಾಸ ಬರಲಿದೆ ಎಂದು ಅಭಿಪ್ರಾಯಪಟ್ಟರು.
ಪ್ರವಾಸೋದ್ಯಮ ಮಾಹಿತಿ ಒಳಗೊಂಡ ಮಾರ್ಗಸೂಚಿಯನ್ನು ತಯಾರಿಸಬೇಕು. ಇಲ್ಲಿನ ಇತಿಹಾಸ, ಸಂಸ್ಕೃತಿ, ಕಲೆ ಬಗ್ಗೆ ಮಾಹಿತಿ ಇರಬೇಕು. ‘ಕಾಫಿ ಟೇಬಲ್ ಬುಕ್’ಅನ್ನು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದರು.
ಮಡಿಕೇರಿ ಕೋಟೆ ಆವರಣದ ಸುತ್ತ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಪ್ರವಾಸೋದ್ಯಮ ಚಟುವಟಿಕೆ ಬಗ್ಗೆ ಮಾಹಿತಿ ನೀಡುವುದು, ಪ್ರವಾಸಿಗರ ರಕ್ಷಣೆ ಮತ್ತು ಸುರಕ್ಷತೆಗೆ ಒತ್ತು ನೀಡುವುದು, ಮೂಲಸೌಕರ್ಯ ಕಲ್ಪಿಸುವುದು ಸೇರಿದಂತೆ ವಿವಿಧ ವಿಚಾರಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು.
ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ನೆಹರೂ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎನ್.ಎಸ್.ಪಣೀಂದ್ರ, ಪರಿಸರ ಅಧಿಕಾರಿ ರಘುರಾಮ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಸಚಿನ್, ಕೆಆರ್‌ಐಡಿಎಲ್ ಸಂಸ್ಥೆಯ ಎಂಜಿನಿಯರ್ ಪ್ರಮೋದ್, ಕೊಡಗು ಜಿಲ್ಲಾ ಟೂರ್ ಅಂಡ್ ಟ್ರಾವೆಲ್ ಅಧ್ಯಕ್ಷ ವಸಂತ್, ಸೋಮವಾರಪೇಟೆ ತಾಲ್ಲೂಕಿನ ಹೋಂ ಸ್ಟೇ ಅಸೋಷಿಯೇಷನ್ ಅಧ್ಯಕ್ಷ ರೋಹಿತ್, ದುಬಾರೆ ರಿವರ್ ರ‍್ಯಾಪ್ಟಿಂಗ್ ಅಸೋಷಿಯೇಷನ್ ಅಧ್ಯಕ್ಷ ಚಂಗಪ್ಪ, ಬರಪೊಳೆ ರಿವರ್ ರ‍್ಯಾಪ್ಟಿಂಗ್ ಅಧ್ಯಕ್ಷ ಸಿ.ಎಸ್.ರತನ್, ಜಿಲ್ಲಾ ಪ್ರವಾಸೋದ್ಯಮ ಸಮಾಲೋಚಕ ಜತಿನ್ ಭಾಗವಹಿಸಿದ್ದರು.
ಪ್ರವಾಸಿ ಸ್ಥಳಗಳ ಬಳಿ ಸೈನ್‌ಬೋರ್ಡ್ ಅಳವಡಿಸಬೇಕು. ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಬೇಕುದಿನೇಶ್ ಕಾರ್ಯಪ್ಪ ಕೂರ್ಗ್ ಹೋಟೆಲ್ಸ್ ಮತ್ತು ರೆಸಾರ್ಟ್ಸ್ ಅಸೋಸಿಯೇಷನ್ (ಕೊಹೆರಾ) ಅಧ್ಯಕ್ಷ
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದ ರಸ್ತೆಯಲ್ಲಿ ಎಲ್ಲೆಂದರಲ್ಲಿ ವಾಹನಗಳು ಸಂಚರಿಸುತ್ತಿದ್ದು ಈ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಬೇಕುಕರುಂಬಯ್ಯ ಹೋಂ ಸ್ಟೇ ಅಸೋಷಿಯೇಷನ್‌ನ ಮಾಜಿ ಅಧ್ಯಕ್ಷ.
ಮಕ್ಕಳ ರೈಲಿನ ಅಗಮನ ಸನ್ನಿಹಿತ
ರಾಜಾಸೀಟಿನಲ್ಲಿ ‘ಮಕ್ಕಳ ಪುಟಾಣಿ ರೈಲು’ ಆರಂಭ ಕುರಿತು ದಕ್ಷಿಣ ವಲಯ ರೈಲ್ವೆ ವಿಭಾಗದ ಎಂಜಿನಿಯರ್‌ಗಳು ಪರಿಶೀಲಿಸಿದ್ದು ಈ ಬಗ್ಗೆ ವರದಿ ಬಂದ ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದರು. ರೈಲು ಬೋಗಿ ಅಳವಡಿಸುವುದು ಸೇರಿದಂತೆ ದಕ್ಷಿಣ ರೈಲ್ವೆ ವಲಯದ ವಿಭಾಗದ ಎಂಜಿನಿಯರ್‌ಗಳು ಮಾಹಿತಿ ಪಡೆದಿದ್ದು ಈ ವೇಳೆ ವರದಿ ಬಂದ ನಂತರ ಪುಟಾಣಿ ರೈಲು ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು ಎಂದರು. ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ವಿಶೇಷ ಆಹ್ವಾನಿತರಾದ ಜಿ.ಚಿದ್ವಿಲಾಸ್ ‘ರಾಜಾಸೀಟಿನಲ್ಲಿ ಮಕ್ಕಳ ರೈಲು ಸ್ಥಗಿತವಾಗಿ ಹಲವು ವರ್ಷಗಳಾಗಿದ್ದು ಈ ಬಗ್ಗೆ ತುರ್ತು ಕ್ರಮವಹಿಸಬೇಕಿದೆ’ ಎಂದು ಮನವಿ ಮಾಡಿದರು. ‘ಪ್ರಜಾವಾಣಿ’ಯು ರಾಜಾಸೀಟ್ ಉದ್ಯಾನದಲ್ಲಿ ಮಕ್ಕಳ ರೈಲು ಮತ್ತೆ ಸಂಚರಿಸಬೇಕು ಎಂಬ ವಿಶೇಷ ವರದಿಗಳನ್ನು ಪ್ರಕಟಿಸಿತ್ತು.
ಪ್ರತಿಧ್ವನಿಸಿದ ವಾಹನ ದಟ್ಟಣೆ ಸಮಸ್ಯೆ
ಸಭೆಯಲ್ಲಿ ಜಿಲ್ಲೆಯನ್ನು ಕಾಡುತ್ತಿರುವ ವಾಹನ ದಟ್ಟಣೆ ಸಮಸ್ಯೆ ಪ್ರತಿಧ್ವನಿಸಿತು. ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ವಿಶೇಷ ಆಹ್ವಾನಿತರಾದ ಜಿ.ಚಿದ್ವಿಲಾಸ್ ಈ ವಿಷಯ ಪ್ರಸ್ತಾಪಿಸಿ ಸಭೆಯ ಗಮನ ಸೆಳೆದರು. ಮಡಿಕೇರಿಯ ಕಾವೇರಿ ಕಲಾಕ್ಷೇತ್ರದಲ್ಲಿ ವಾಹನ ನಿಲುಗಡೆಗೆ ಅವಕಾಶ ಮಾಡಬೇಕು ಎಂಬ ಪ್ರಸ್ತಾವ ಇದ್ದು ಈ ಸಂಬಂಧ ತುರ್ತಾಗಿ ಕ್ರಮ ಕೈಗೊಂಡಲ್ಲಿ ಎಲ್ಲರಿಗೂ ಅನುಕೂಲವಾಗಲಿದೆ ಎಂದು ಹೇಳಿದರು. ಜಿಲ್ಲಾಧಿಕಾರಿ ವೆಂಕಟ್ ರಾಜಾ ಪ್ರತಿಕ್ರಿಯಿಸಿ ‘ಇದಕ್ಕಾಗಿ ಅನುದಾನ ಮೀಸಲಿದ್ದು ಟೆಂಡರ್ ಹಂತದಲ್ಲಿದೆ’ ಎಂದು ಹೇಳಿದರು.
ಯಾರು ಏನೆಂದರು?
ಕಾಫಿ ಮಂಡಳಿ ಅಧ್ಯಕ್ಷರಿಗೆ ಆಹ್ವಾನ ಕಾಫಿ ತಯಾರಿಸುವ ವಿಧಾನ ಕುರಿತು ತರಬೇತಿ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಮುಂದಿನ ದಿನದಲ್ಲಿ ಕಾಫಿ ಮಂಡಳಿಯ ಅಧ್ಯಕ್ಷರನ್ನು ಜಿಲ್ಲೆಗೆ ಆಹ್ವಾನಿಸಲಾಗುವುದು
–ಅನಿತಾ ಭಾಸ್ಕರ್ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕಿ
ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಿ ಹೋಟೆಲ್ ಹೋಂಸ್ಟೇ ರೆಸಾರ್ಟ್‌ಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಬೇಕು. ಸಿಸಿಟಿವಿ ದೃಶ್ಯಾವಳಿಗಳಿಂದ ಮಾಹಿತಿ ಪಡೆಯಲು ಸಾಧ್ಯವಾಗಲಿದ್ದು ಆ ನಿಟ್ಟಿನಲ್ಲಿ ಸಾಮೂಹಿಕ ಜವಾಬ್ದಾರಿ ಅಗತ್ಯ
–ಕೆ.ರಾಮರಾಜನ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಪ್ರವಾಸಿಗರಿಗೆ ಕಿರಿಕಿರಿ ತಪ್ಪಿಸಿ ರಾಜಾಸೀಟ್ ಉದ್ಯಾನದ ಮುಖ್ಯ ದ್ವಾರದ ಬಳಿ ಅಂಗಡಿಗಳು ತುಂಬಾ ಇದ್ದು ಪ್ರವಾಸಿಗರಿಗೆ ಕಿರಿಕಿರಿ ಉಂಟಾಗುತ್ತಿದೆ. ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಬೇಕು
–ಮೋಂತಿ ಗಣೇಶ್ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸದಸ್ಯೆ
ಪ್ಲಾಸ್ಟಿಕ್ ನಿಷೇಧಿಸಿ ಪ್ರವಾಸಿ ಬಸ್ ಸೌಕರ್ಯ ಕಲ್ಪಿಸಿ ಜಿಲ್ಲೆಯಲ್ಲಿ ಪ್ಲಾಸ್ಟಿಕ್‌ನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಪ್ರವಾಸಿ ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ಇದರಿಂದ ಸಂಚಾರ ದಟ್ಟಣೆಯನ್ನು ನಿಯಂತ್ರಿಸಬಹುದು. ಮಡಿಕೇರಿಯ ಅಜ್ಜಮಾಡ ದೇವಯ್ಯ ವೃತ್ತದ ಬಳಿ ‘ಮರ್ಕರ ಸ್ಕ್ವೇರ್’ ಅನ್ನು ಅಭಿವೃದ್ಧಿಪಡಿಸಬೇಕು
–ಜಿ.ಚಿದ್ವಿಲಾಸ್ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ವಿಶೇಷ ಆಹ್ವಾನಿತರು.
ತಾವರೆಕೆರೆ ಅಭಿವೃದ್ಧಿಪಡಿಸಿ ಕುಶಾಲನಗರ ಬಳಿಯ ತಾವರೆಕೆರೆ ಅಭಿವೃದ್ಧಿಪಡಿಸಿ ಪ್ರವಾಸಿ ತಾಣವನ್ನಾಗಿ ಮಾಡಬಹುದು. ಇರ್ಪು ಜಲಪಾತ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಬೇಕು. ಪ್ರವಾಸಿಗರ ಅನುಕೂಲಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು
-ಬಿ.ಆರ್.ನಾಗೇಂದ್ರ ಪ್ರಸಾದ್ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕೂರ್ಗ್ ವಿಲೇಜ್
ರಾಜಾಸೀಟು ಬಳಿ ಕೂರ್ಗ್ ವಿಲೇಜ್‌ಗೆ ಪ್ರವಾಸಿಗರು ಭೇಟಿ ನೀಡುತ್ತಿಲ್ಲ. ಇದನ್ನು ಅಭಿವೃದ್ಧಿಪಡಿಸಬೇಕು.
–ನವೀನ್ ಅಂಬೇಕಲ್ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಉಪಾಧ್ಯಕ್ಷ
ಪ್ರವಾಸಿ ತಾಣಗಳ ಬಗ್ಗೆ ಹೆಚ್ಚು ಪ್ರಚಾರವಾಗಲಿ ಹೊರಜಿಲ್ಲೆಗಳಲ್ಲಿ ಕೊಡಗಿನ ಪ್ರವಾಸಿ ತಾಣಗಳ ಬಗ್ಗೆ ಹೆಚ್ಚು ಪ್ರಚಾರ ಆಗಬೇಕು. ಬಾನುಲಿ ಎಫ್.ಎಂ. ಮಲ್ಟಿ ಫ್ಲೆಕ್ಸ್‌ಗಳಲ್ಲಿ ಕೊಡಗಿನ ಬಗ್ಗೆ ಪ್ರಚಾರ ಆದಾಗ ಪ್ರವಾಸಿಗರಿಗೂ ಕೊಡಗಿನ ಬಗ್ಗೆ ಅಗತ್ಯ ಮಾಹಿತಿ ದೊರಕುತ್ತದೆ
–ಎಚ್.ಟಿ.ಅನಿಲ್ ಜಾನಪದ ಪರಿಷತ್ತಿನ ಮಡಿಕೇರಿ ತಾಲ್ಲೂಕು ಘಟಕದ ಅಧ್ಯಕ್ಷ
ಜಿಲ್ಲಾಧಿಕಾರಿ ನೀಡಿದ ಇತರೆ ಸೂಚನೆಗಳು
ಜಿಲ್ಲೆಯಲ್ಲಿನ ಆಸಕ್ತರು ಕೊಡಗು ಪ್ರವಾಸೋದ್ಯಮ ಅಭಿವೃದ್ಧಿ ಸಂಬಂಧ ಲಿಖಿತವಾಗಿ ಮಾಹಿತಿ ನೀಡಬಹುದು
ದುಬಾರೆಯಲ್ಲಿ ತೂಗುಸೇತುವೆ ನಿರ್ಮಾಣಕ್ಕೆ ಅನುಮೋದನೆ ದೊರೆತಿದ್ದು ಶೀಘ್ರ ಚಾಲನೆ ದೊರೆಯಲಿದೆ
ಹೋಂ ಸ್ಟೇ ರೆಸಾರ್ಟ್ ಟೂರ್ ಮತ್ತು ಟ್ರಾವೆಲ್ ಸಂಸ್ಥೆಯವರು ಇದುವರೆಗೆ ನೋಂದಣಿ ಮಾಡದಿದ್ದಲ್ಲಿ ನೋಂದಣಿ ಮಾಡಿಕೊಳ್ಳುವಂತಾಗಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.