ADVERTISEMENT

ದುಬಾರಿ ದರ, ನಿಯಮ ಉಲ್ಲಂಘನೆ; ಕಠಿಣ ಕ್ರಮದ ಎಚ್ಚರಿಕೆ ನೀಡಿದ ಎಸ್‌ಪಿ

ಮಾಂದಲ್‌ಪಟ್ಟಿ ಜೀಪು ಚಾಲಕರ, ಮಾಲೀಕರೊಂದಿಗೆ ಸಭೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 7:17 IST
Last Updated 29 ಜನವರಿ 2026, 7:17 IST
ಮಾಂದಲ್‌ಪಟ್ಟಿಗೆ ಹೋಗುವ ಜೀಪ್‌ ಮಾಲೀಕರು ಮತ್ತು ಚಾಲಕರಿಗೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಅವರು ಬುಧವಾರ ಸಭೆಯಲ್ಲಿ ಹಲವು ಸೂಚನೆಗಳನ್ನು ನೀಡಿದರು
ಮಾಂದಲ್‌ಪಟ್ಟಿಗೆ ಹೋಗುವ ಜೀಪ್‌ ಮಾಲೀಕರು ಮತ್ತು ಚಾಲಕರಿಗೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಅವರು ಬುಧವಾರ ಸಭೆಯಲ್ಲಿ ಹಲವು ಸೂಚನೆಗಳನ್ನು ನೀಡಿದರು   

ಮಡಿಕೇರಿ: ಇಲ್ಲಿಗೆ ಸಮೀಪದ ಮಾಂದಲ್‌ಪಟ್ಟಿಯಲ್ಲಿ ದುಬಾರಿ ದರ ಪಡೆಯುವುದು, ಪ್ರವಾಸಿಗರೊಂದಿಗೆ ಅನುಚಿತ ವರ್ತನೆ, ಅತಿ ವೇಗ, ನಿರ್ಲಕ್ಷ್ಯತನದ ಚಾಲನೆ ಕಂಡು ಬಂದಲ್ಲಿ ಶಿಸ್ತು ಕ್ರಮ ನಿಶ್ಚಿತ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಜೀಪ್ ಚಾಲಕರಿಗೆ ಎಚ್ಚರಿಕೆ ನೀಡಿದರು.

ಇಲ್ಲಿನ ಸಂಚಾರ ಪೊಲೀಸ್ ಠಾಣೆಯಲ್ಲಿ ಜೀಪು ಮಾಲೀಕರು ಮತ್ತು ಚಾಲಕರ ಸಭೆ ನಡೆಸಿದ ಅವರು ಹಲವು ಸೂಚನೆಗಳನ್ನು ನೀಡಿದರು.

ಇನ್ನು ಮುಂದೆ ಮಾಂದಲ್‌ಪಟ್ಟಿಗೆ ತೆರಳುವ ಜೀಪುಗಳನ್ನು ನಿರಂತರ ತಪಾಸಣೆ ಮಾಡಲಾಗುವುದು. ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಪೊಲೀಸ್ ಇಲಾಖೆಯಿಂದ ಕ್ರಮ ಸಂಖ್ಯೆ ಒಳಗೊಂಡ ಸ್ಟಿಕ್ಕರ್ ನೀಡಲಾಗುವುದು. ಅದನ್ನು ಹಾಕಿರುವ ಜೀಪುಗಳು ತಪಾಸಣೆಗೊಳಪಟ್ಟಿದೆ ಎಂದು ಗುರುತಿಸಬಹುದು ಎಂದು ತಿಳಿಸಿದರು.

ADVERTISEMENT

ಜೀಪುಗಳು ಹೆಚ್ಚಿನ ವೇಗದಲ್ಲಿ ಸಂಚರಿಸುತ್ತಿರುವ ಕುರಿತು ದೂರುಗಳು ಬರುತ್ತಿವೆ. ಕಡಿದಾದ ಮಾರ್ಗದಲ್ಲಿ ಅತಿ ವೇಗದಿಂದ ಅಪಘಾತಗಳು ಸಂಭವಿಸುವ ಅಪಾಯವಿದೆ. ಹಾಗಾಗಿ ಅತಿ ವೇಗದ, ಅಜಾಗರೂಕತೆಯ ಚಾಲನೆ ಮಾಡುವ ಚಾಲಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ಪ್ರವಾಸಿಗರೊಂದಿಗೆ ಎಲ್ಲ ಚಾಲಕರೂ ಸೌಜನ್ಯದಿಂದ ವರ್ತಿಸಬೇಕು. ಹೆಚ್ಚಿನ ಚಾಲಕರು ಸೌಜನ್ಯದಿಂದ ವರ್ತಿಸುತ್ತಿದ್ದಾರೆ. ಆದರೆ, ಕೆಲವೊಬ್ಬರು ಮಾಡುವ ತಪ್ಪಿನಿಂದ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಕಪ್ಪುಚುಕ್ಕೆ ಇಟ್ಟಂತಾಗುತ್ತದೆ. ಹಾಗಾಗಿ, ಎಲ್ಲ ಚಾಲಕರೂ ನಿಯಮಬದ್ಧವಾಗಿರಬೇಕು, ಸೌಜನ್ಯದಿಂದ ವರ್ತಿಸಬೇಕು ಎಂದು ಹೇಳಿದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್.ಟಿ.ಸತೀಶ್ ಮಾತನಾಡಿ, ‘ಚಾಲಕರು ತಮ್ಮ ವಾಹನಗಳ ದಾಖಲಾತಿಗಳನ್ನು ಸರಿಪಡಿಸಿಕೊಳ್ಳಬೇಕು. ಇಲ್ಲದೇ ಇದ್ದರೆ ಪ್ರಕರಣ ದಾಖಲಿಸಲಾಗುವುದು. ಯಾವುದೇ ಅರ್ಜಿ ಸಲ್ಲಿಸಿದರೂ ಶೀಘ್ರವಾಗಿ ಕೆಲಸ ಮಾಡಿಕೊಡಲಾಗುವುದು. ಸಮಸ್ಯೆಗಳಾದಲ್ಲಿ ನೇರವಾಗಿ ನನ್ನನ್ನೇ ಭೇಟಿ ಮಾಡಬಹುದು’ ಎಂದರು.

ಜೀಪು ಚಾಲಕ ಮಾಲೀಕರ ಸಂಘದ ಅಧ್ಯಕ್ಷ ಪಿ.ಟಿ ಉನ್ನಿಕೃಷ್ಣಂ ಮಾತನಾಡಿ, ‘ಮಾಂದಲ್‌ಪಟ್ಟಿಗೆ ₹ 2,500 ದರ ಮಾತ್ರವೇ ತೆಗೆದುಕೊಳ್ಳಬೇಕು, ನೋಡಲು ಪ್ರವಾಸಿಗರಿಗೆ ಒಂದು ಗಂಟೆ ಕಾಲ ಅವಕಾಶ ಕೊಡಬೇಕು. ಅತಿ ವೇಗದ ಚಾಲನೆ ಮಾಡಬಾರದು ಎಂದು ಚಾಲಕರಿಗೆ ಹೇಳುತ್ತೇವೆ’ ಎಂದು ಹೇಳಿದರು.

ಡಿವೈಎಸ್ಪಿಗಳಾ ಸೂರಜ್, ಮೇದಪ್ಪ, ಜೀಪು ಚಾಲಕ ಮಾಲೀಕರ ಸಂಘದ ಅಧ್ಯಕ್ಷ ಪಿ.ಟಿ ಉನ್ನಿಕೃಷ್ಣಂ, ತೆಕ್ಕಡ ಕಾಶಿ ಕಾವೇರಪ್ಪ, ಪ್ರೀತಂ ರೈ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.