ADVERTISEMENT

ಕೊಡಗಿನ ಪ್ರವಾಸಿ ತಾಣಗಳ ಭೇಟಿಗೆ ನಿರ್ಬಂಧ ಮುಂದುವರಿಕೆ

ಪ್ರವಾಸಿಗರಿಗೆ ಹೋಂ ಸ್ಟೇ, ರೆಸಾರ್ಟ್‌ನಲ್ಲಿ ವಾಸ್ತವ್ಯಕ್ಕೆ ಅವಕಾಶ

​ಪ್ರಜಾವಾಣಿ ವಾರ್ತೆ
Published 28 ಜುಲೈ 2020, 12:21 IST
Last Updated 28 ಜುಲೈ 2020, 12:21 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ಮಡಿಕೇರಿ: ಜಿಲ್ಲೆಯ ರೆಸಾರ್ಟ್‌, ಹೋಂ ಸ್ಟೇ, ಹೋಟೆಲ್, ವಸತಿ ಗೃಹ ಸೇರಿದಂತೆ ಆತಿಥ್ಯ ಸೇವಾ ಗೃಹಗಳ ಮೇಲೆ ಕೊಡಗು ಜಿಲ್ಲಾಡಳಿತ ಹೇರಿದ್ದ ನಿರ್ಬಂಧ ಸಡಿಲಿಕೆ ಮಾಡಿದ್ದು ಬುಧವಾರದಿಂದ ಪ್ರವಾಸಿಗರ ವಾಸ್ತವ್ಯಕ್ಕೆ ಮುಕ್ತ ಅವಕಾಶ ಸಿಗಲಿದೆ.

ಲಾಕ್‌ಡೌನ್‌ ಅವಧಿಯಲ್ಲಿ ಜಿಲ್ಲೆಯಲ್ಲಿನ ಪ್ರವಾಸೋದ್ಯಮಕ್ಕೆ ನಿರ್ಬಂಧ ಹೇರಲಾಗಿತ್ತು. ಲಾಕ್‌ಡೌನ್‌ ಸಡಿಲಿಕೆಯಾದ ಬಳಿಕ ಪ್ರವಾಸೋದ್ಯಮ ಚಟುವಟಿಕೆ ಅವಕಾಶ ಕಲ್ಪಿಸಲಾಗಿತ್ತು. ಅದಾದ ಮೇಲೆ ಜೂನ್‌ ಕೊನೆಯಲ್ಲಿ ಕೊರೊನಾ ಸೋಂಕು ಪ್ರಕರಣಗಳು ಜಿಲ್ಲೆಯಲ್ಲೂ ಹೆಚ್ಚಾಗಿದ್ದರಿಂದ ಪ್ರವಾಸಿಗರ ವಾಸ್ತವ್ಯಕ್ಕೆ ನಿರ್ಬಂಧ ಹೇರಲಾಗಿತ್ತು.

ಹೊರ ಜಿಲ್ಲೆಗಳಿಂದ ಆಗಮಿಸುವ ಅತಿಥಿಗಳು ತಂಗುವ ಹೋಟೆಲ್, ಲಾಡ್ಜ್, ವಸತಿ ಗೃಹ, ಆತಿಥ್ಯ ಸೇವೆ ಗೃಹಗಳಿಗೆ ನೇರವಾಗಿ ತೆರಳಬೇಕು. ವಿನಾಕಾರಣ ಯಾವುದೇ ಸ್ಥಳಗಳಿಗೆ ಭೇಟಿ ನೀಡದೇ ವಾಪಸ್‌ ತೆರಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಅಬ್ಬಿ ಜಲಪಾತ, ರಾಜಾಸೀಟ್‌ ಉದ್ಯಾನ, ಇರ್ಫು ಜಲಪಾತ ಸೇರಿದಂತೆ ಯಾವುದೇ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಅವಕಾಶ ಇರುವುದಿಲ್ಲ.

ADVERTISEMENT

ವಿದೇಶ ಮತ್ತು ಹೊರ ರಾಜ್ಯಗಳಿಂದ ಬಂದವರು ಕಡ್ಡಾಯವಾಗಿ 14 ದಿನಗಳ ಕಾಲ ಸಂಪರ್ಕ ತಡೆಯಲ್ಲಿ ಇರಬೇಕು. ಸಂಪರ್ಕ ತಡೆಯಿಂದ ಹೊರ ಬರುವುದು ಅಥವಾ ಸಾರ್ವಜನಿಕವಾಗಿ ತಿರುಗಾಡುವುದು ಕಂಡುಬಂದರೆ ಕ್ರಮ ಕೈಗೊಳ್ಳಲಾಗುವುದು. ನೋಂದಾಯಿತ ಆತಿಥ್ಯ ಗೃಹಗಳಲ್ಲಿ ಮಾತ್ರ ವಾಸ್ತವ್ಯಕ್ಕೆ ಅವಕಾಶವಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.