ADVERTISEMENT

ವಿರಾಜಪೇಟೆ | ‘ವಿಶ್ವ ನೈತಿಕ ದಿವಾಳಿತನ ಎದುರಿಸುತ್ತಿದೆ’

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2024, 5:06 IST
Last Updated 9 ಅಕ್ಟೋಬರ್ 2024, 5:06 IST
ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು
ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು   

ವಿರಾಜಪೇಟೆ: ‘ಮಾನವೀಯತೆಗಿಂತ ಮಿಗಿಲಾದ ನೈತಿಕತೆ ಬೇರೆ ಇಲ್ಲ’ ಎಂದು ಮಂಗಳೂರಿನ ಸಾಮಾಜಿಕ ಕಾರ್ಯಕರ್ತೆ ಲುಬ್ನಾ ಝಕಿಯಾ ಅಭಿಪ್ರಾಯಪಟ್ಟರು.

ಸಮೀಪದ ಅರಮೇರಿಯ ಕಳಂಚೇರಿ ಮಠದಲ್ಲಿ ಭಾನುವಾರ ನಡೆದ ಮಾಸಿಕ ತತ್ವ ಚಿಂತನ ಗೋಷ್ಠಿ ಹೊಂಬೆಳಕು ಕಾರ್ಯಕ್ರಮದಲ್ಲಿ ‘ನೈತಿಕತೆಯೇ ಸ್ವಾತಂತ್ರ್ಯದ ಭರವಸೆ’ ಎಂಬ ವಿಷಯದ ಕುರಿತು ಅವರು ಮಾತನಾಡಿದರು.

‘ಸಮಾಜದಲ್ಲಿ ಅನೈತಿಕತೆಗೆ ಕಾರಣವಾಗುವ ಎಲ್ಲಾ ಹಾದಿಗಳಿಗೆ ಕಡಿವಾಣ ಹಾಕಲು ಕಾನೂನು ರಚನೆಯಾಗಬೇಕು. ಮಾನವ ರೂಪಿತ ಕಾನೂನುಗಳಿಗಿಂತ ದೈವ ರೂಪಿತ ಕಾನೂನುಗಳು ಕೆಡುಕುಗಳನ್ನು ಸಮರ್ಥವಾಗಿ ತಡೆಯುತ್ತವೆ. ತಾನೊಬ್ಬ ಉತ್ತರದಾಯಿತ್ವವಿರುವ ಪ್ರಜೆ ಎಂಬುದನ್ನು ಮಾನವ ಮರೆತಿರುವುದು ಕೆಡುಕುಗಳಿಗೆ ಕಾರಣವಾಗಿದೆ’ ಎಂದರು.

ADVERTISEMENT

‘ಹೊಣೆಗಾರಿಕೆಯಿಂದ ಜಾರಿಕೊಳ್ಳುವ ಮನೋಧರ್ಮ ಇಂದಿನ ಪೀಳಿಗೆಯ ಮನೋಭಾವ ಎಂಬಂತಾಗಿದೆ. ಇಂದು ವಿಶ್ವವು ನೈತಿಕ ದಿವಾಳಿತನವನ್ನು ಅತಿಯಾಗಿ ಎದುರಿಸುತ್ತಿದೆ. ಆಧುನಿಕತೆಯು ಪ್ರಗತಿಪರ ಎಂಬ ವಾದದೊಂದಿಗೆ ನೈತಿಕತೆಯ ಎಲ್ಲೆಗಳನ್ನು ಮೀರಲಾಗುತ್ತಿದೆ’ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬೆಳಗಾವಿ ಕಿತ್ತೂರು ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯೆ ಎಚ್.ಎಂ.ಕಾವೇರಿ, ‘ನೈತಿಕತೆ ಮತ್ತು ಮೌಲ್ಯಗಳು ನಿರ್ದಿಷ್ಟ ಜಾತಿ ಅಥವಾ ಲಿಂಗಕ್ಕೆ ಸೀಮಿತವಲ್ಲ. ಸ್ವಾತಂತ್ರ್ಯ ಎಂಬುದು ಸ್ವೇಚ್ಛಾಚಾರವಲ್ಲ. ಇತರರ ಸ್ವಾತಂತ್ರ್ಯಕ್ಕೆ ಧಕ್ಕೆ ಬಾರದಂತೆ ಅವರವರ ಹಕ್ಕುಗಳನ್ನು ನಿಭಾಯಿಸಿದಲ್ಲಿ ಸಮಾಜದಲ್ಲಿ ನೆಮ್ಮದಿ ತುಂಬಿರುತ್ತದೆ. ಹೆಣ್ಣು ಮಕ್ಕಳಂತೆ ಗಂಡು ಮಕ್ಕಳಿಗೂ ನೈತಿಕ ಶಿಕ್ಷಣದ ಅಗತ್ಯ ಇದೆ’ ಎಂದರು.

ಕಳಂಚೇರಿ ಮಠಾಧಿಪತಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ‘ಕೆಡುಕುಗಳಿಕೆ ಕಡಿವಾಣ ಹಾಕುವ ಧರ್ಮ ಬೋಧನೆಗಳು ಇಂದಿನ ಪ್ರಗತಿಪರರು ಎನಿಸಿಕೊಂಡವರಿಗೆ ರುಚಿಸುವುದಿಲ್ಲ. ಧರ್ಮವನ್ನು ಒಪ್ಪಿಕೊಳ್ಳುವುದರಿಂದ ಎಲ್ಲಾ ಸ್ವಾತಂತ್ರ್ಯಗಳಿಗೂ ಕುಂದು ಉಂಟಾಗುತ್ತದೆ ಎಂದು ಅವರು ಭಾವಿಸುತ್ತಾರೆ. ಧರ್ಮವನ್ನು ಜೀವನದಲ್ಲಿ ಕೈಬಿಟ್ಟಿರುವುದರಿಂದ ಕುಟುಂಬದಲ್ಲಿನ ಸಂಬಂಧಗಳು ಕಲುಷಿತವಾಗುತ್ತಿವೆ. ಕಲೆ ಮತ್ತು ಪ್ರತಿಭೆಯ ಪ್ರತಿರೂಪಗಳಾಗಿದ್ದ ಧಾರಾವಾಹಿ ಇಂದು ಕುಟುಂಬ ಕಲಹಗಳಿಗೆ ಪುಷ್ಟಿ ನೀಡುತ್ತಿದೆ’ ಎಂದರು.

ಕಾರ್ಯಕ್ರಮದಲ್ಲಿ ಶಪೀನಾ ಮುಹಮ್ಮದ್, ಮುಹೀನಾ ಅಬೂಬಕರ್, ಸಮೀರಾ ರಾಝಿಕ್ ಸೇರಿದಂತೆ ಗ್ರಾಮಸ್ಥರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿರಾಜಪೇಟೆ ಸಮೀಪದ ಅರಮೇರಿಯ ಕಳಂಚೇರಿ ಮಠದಲ್ಲಿ ಭಾನುವಾರ ನಡೆದ ಹೊಂಬೆಳಕು ಕಾರ್ಯಕ್ರಮದಲ್ಲಿ ಮಂಗಳೂರಿನ ಸಾಮಾಜಿಕ ಕಾರ್ಯಕರ್ತೆ ಲುಬ್ನಾ ಝಕಿಯಾ ಮಾತನಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.