ADVERTISEMENT

ಜನಸಾಗರದೊಂದಿಗೆ ಮಡಿಕೇರಿಯತ್ತ ಬರುತ್ತಿದೆ ‘ಕೊಡವಾಮೆ ಬಾಳೊ’ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2025, 3:04 IST
Last Updated 7 ಫೆಬ್ರುವರಿ 2025, 3:04 IST
ಮೂರ್ನಾಡುವಿನಲ್ಲಿ ಗುರುವಾರ ನಡೆದ ಪಾದಯಾತ್ರೆಯಲ್ಲಿ ಸಹಸ್ರಾರು ಜನರು ಪಾಲ್ಗೊಂಡಿದ್ದರು.
ಮೂರ್ನಾಡುವಿನಲ್ಲಿ ಗುರುವಾರ ನಡೆದ ಪಾದಯಾತ್ರೆಯಲ್ಲಿ ಸಹಸ್ರಾರು ಜನರು ಪಾಲ್ಗೊಂಡಿದ್ದರು.    

ಮಡಿಕೇರಿ: ‘ಕೊಡವಾಮೆ ಬಾಳೊ’ ಪಾದಯಾತ್ರೆಯಲ್ಲಿ 5ನೇ ದಿನವಾದ ಗುರುವಾರವೂ ಸಹಸ್ರಾರು ಸಂಖ್ಯೆಯಲ್ಲಿ ಕೊಡವರು ಭಾಗಿಯಾದರು. ಬಿರು ಬಿಸಿಲಿನಲ್ಲಿ ಮೂರ್ನಾಡು ಗ್ರಾಮದ ಹೊದ್ದೂರು ನಿವಾಸಿ 96 ವರ್ಷದ ಮಂಡೇಪಂಡ ಕರುಂಬಯ್ಯ ಪಾದಯಾತ್ರೆಯಲ್ಲಿ ಭಾಗವಹಿಸಿ ಅಭಿಮಾನ ಮೆರೆದಿದ್ದು ವಿಶೇಷ ಎನಿಸಿತು. ಹೆಜ್ಜೆ ಇಟ್ಟ ಕಡೆಯಲ್ಲೆಲ್ಲ ಅಪಾರ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದ ದೃಶ್ಯಗಳು ಮೇಕೇರಿಯಿಂದ ಮೂರ್ನಾಡಿನವರೆಗೂ ಕಂಡು ಬಂದವು.

ಭೇತ್ರಿಯ ನೆಲ್ಲಿಮಾನಿಯಿಂದ ಮುಂದುವರೆದ ಪಾದಯಾತ್ರೆಯಲ್ಲಿ ಕೊಡವರು ಮತ್ತು ಕೊಡವ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಗುರುವಾರ ಬೇತ್ರಿ ನೆಲ್ಲಿಮಾನಿಯಿಂದ ಮುಂದುವರೆದ ಕೊಡವಾಮೆ ಬಾಳೊ ಪಾದಯಾತ್ರೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಕೊಡವ ಮತ್ತು ಕೊಡವ ಭಾಷಿಕರು ಪಾಲ್ಗೊಂಡರು.

ADVERTISEMENT

ನಂತರ, ಎಂ.ಬಾಡಗ ಗ್ರಾಮದಲ್ಲಿ ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ ಅವರು ಸಾಂಪ್ರದಾಯಿಕ ಬಾಳೆ ಕಡಿದ ನಂತರ ಪಾದಯಾತ್ರೆ ಮುಂದೆ ಸಾಗಿತು. ಇಲ್ಲಿ ಕೊಡವ ಭಾಷಿಕ ಜನಾಂಗ ಒಕ್ಕೂಟದ ಅಧ್ಯಕ್ಷ ಡಾ.ಸುಭಾಷ್ ನಾಣಯ್ಯ ಅವರು ಪಾದಯಾತ್ರೆಯನ್ನು ಸ್ವಾಗತಿಸಿದರು.

ಪಾದಯಾತ್ರೆ ಮೂರ್ನಾಡು ತಲುಪುತ್ತಿದ್ದಂತೆ ಸಹಸ್ರಾರು ಸಂಖ್ಯೆಯಲ್ಲಿ ಕೊಡವರು ಮತ್ತು ಕೊಡವ ಭಾಷಿಕರು ತಮ್ಮ ಸಾಂಪ್ರದಾಯಿಕ ಉಡುಪಿನಲ್ಲಿ ಆಗಮಿಸಿದರು. ಎಲ್ಲಿ ನೋಡಿದರೆ ಅಲ್ಲಿ ಜನರೇ ಇರುವಂತಹ ವಾತಾವರಣ ಸೃಷ್ಟಿಯಾಯಿತು.

ತಳಿಯತಕ್ಕಿ ಬೊಳಕ್, ಕೊಂಬು ಕೊಟ್ಟ್ ವಾಲಗ ಸೇರಿದಂತೆ ಕೊಡವ ಸಾಂಸ್ಕೃತಿಕ ಕಲೆಗಳು ಪಾದಯಾತ್ರೆಯಲ್ಲಿ ಕಂಡು ಬಂದವು. ಪಾದಯಾತ್ರಿಗಳಿಗೆ ಉತ್ತರ ಕೊಡಗಿನ ಕೊಡವ ಮತ್ತು ಕೊಡವ ಭಾಷಿಕ ಜನರು, ಅಲ್ಲಲ್ಲಿ ಕುಡಿಯುವ ನೀರು ಪಾನೀಯ, ಹಣ್ಣು ಹಂಪಲು ನೀಡಿದರು.

ಮೂರ್ನಾಡುವಿನ ಕೊಡವ ಸಾಂಸ್ಕೃತಿಕ ಮತ್ತು ಧಾರ್ಮಿಕ ಕೇಂದ್ರವಾದ ಪಾಂಡಾಣೆ ಮಂದ್‌ನಲ್ಲಿ ತಕ್ಕ ಮುಖ್ಯಸ್ಥರೊಂದಿಗೆ ಪ್ರಾರ್ಥನೆ ನಡೆಸಲಾಯಿತು.

ಪಾದಯಾತ್ರೆಯ ಸಂಚರಿಸಿದ ನೆಲ್ಲಿಮಾನಿ, ಎಂ.ಬಾಡಗ, ಮೂರ್ನಾಡು, ಮುತ್ತರ್ಮುಡಿ, ಕಗ್ಗೊಡ್ಲು, ಹಾಕತ್ತೂರು, ಮೇಕೇರಿ ಗ್ರಾಮಗಳಲ್ಲಿ ಸ್ಥಳೀಯ ಕೊಡವ ಮತ್ತು ಭಾಷಿಕ ಕುಟುಂಬದವರು ತಳಿರು ತೋರಣ ಕಟ್ಟಿ ಭವ್ಯ ಸ್ವಾಗತ ನೀಡಿದರು.

ಮುತ್ತರ್ಮುಡಿಯಲ್ಲಿ ಸಾವಿರಾರು ಪಾದಯಾತ್ರಿಗರಿಗೆ ಕೆಂಬಡತಂಡ ಕುಟುಂಬದ ಜಾಗದಲ್ಲಿ ಮೂರ್ನಾಡು ಕೊಡವ ಸಮಾಜ ಮಧ್ಯಾಹ್ನದ ಭೋಜನ ವ್ಯವಸ್ಥೆ ಕಲ್ಪಿಸಿತ್ತು.

ಸಂಜೆ 4 ಗಂಟೆ ಹೊತ್ತಿಗೆ ಪಾದಯಾತ್ರೆ ಮೇಕೇರಿ ತಲುಪಿತು. ಅಲ್ಲಿಯೇ ತಂಗಲಿರುವ ಸಹಸ್ರಾರ ಜನರ, ಫೆ.7ರಂದು ಮಡಿಕೇರಿಯತ್ತ ಹೊರಡಲಿದ್ದಾರೆ.

ಕುಟ್ಟದಿಂದ ಮಡಿಕೇರಿಗೆ ಸುಮಾರು 82 ಕಿ. ಮೀ ದೂರ ಪಾದಯಾತ್ರೆ ಗುರುವಾರದ ಹೊತ್ತಿಗೆ ಸುಮಾರ 77 ಕಿ.ಮೀ ಕ್ರಮಿಸಿದೆ.

ಇಂದು ಮಡಿಕೇರಿಗೆ ಪಾದಯಾತ್ರೆ

ಮೇಕೇರಿಯಿಂದ ಮಡಿಕೇರಿಯ ಜನರಲ್‌ ತಿಮ್ಮಯ್ಯ ವೃತ್ತಕ್ಕೆ ಒಂದು ತಂಡ, ಗಾಳಿಬೀಡು ಮಾರ್ಗವಾಗಿ, ತಾಳತ್ಮನೆ ಮಾರ್ಗವಾಗಿ, ಜನರಲ್ ತಿಮ್ಮಯ್ಯ ವೃತ್ತ ತಲುಪಲಿವೆ. ಮತ್ತೊಂದು ಕಡೆಯಿಂದ ಕುಶಾಲನಗರ, ಸುಂಟಿಕೊಪ್ಪ, ಸುಂಪಿಗೆಕಟ್ಟೆ ಮಾರ್ಗವಾಗಿ ಮತ್ತೊಂದು ತಂಡ ಹಾಗೂ ಮಕ್ಕಂದೂರು ಸಂಪಿಗೆಕಟ್ಟೆ ಮಾರ್ಗವಾಗಿ ಒಂದು ತಂಡವು ಸಿದ್ದಾಪುರ, ಚೆಟ್ಟಳ್ಳಿ ಮಾರ್ಗವಾಗಿ ಮತ್ತೊಂದು ತಂಡಗಳು ಬಂದು ಫೀಲ್ಡ್‌ ಮಾರ್ಷಲ್ ಕಾರ್ಯಪ್ಪ ವೃತ್ತವನ್ನು ತಲುಪಿ, ಕಾರ್ಯಪ್ಪ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ, ಜನರಲ್ ತಿಮ್ಮಯ್ಯ ವೃತ್ತದ ಬಳಿ ಸೇರಲಿವೆ. ನಂತರ ಅಲ್ಲಿಂದ ಮಡಿಕೇರಿಯ ಮಂಗೇರಿರ ಮುತ್ತಣ್ಣ ವೃತ್ತ, ಅಜ್ಜಮಾಡ ದೇವಯ್ಯ ವೃತ್ತ, ಕೊಹಿನೂರ್ ವೃತ್ತ, ಎಸ್‌ಬಿಐ ಚೌಕಿ, ಜೂನಿಯರ್ ಕಾಲೇಜು ರಸ್ತೆ ಮೂಲಕವಾಗಿ ಸಾಗಿ ಜನರಲ್ ತಿಮ್ಮಯ್ಯ ಕ್ರೀಡಾಂಗಣದ ಬಳಿ ಇರುವ ಕೊಡವ ಸಮಾಜದ ಮಂದ್‌ನಲ್ಲಿ ಸಮಾವೇಶಗೊಳ್ಳಲಿದೆ ಎಂದು ಈ ಹಿಂದೆ ಸುದ್ದಿಗೋಷ್ಠಿಯಲ್ಲಿ ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಮಾಹಿತಿ ನೀಡಿದ್ದರು.

96 ವರ್ಷದ ಹಿರಿಯರೂ ಪಾದಯಾತ್ರೆಯಲ್ಲಿ ಗುರುವಾರ ಪಾಲ್ಗೊಂಡಿದ್ದರು.
ಮೂರ್ನಾಡುವಿನ ಪಾದಯಾತ್ರೆಯಲ್ಲಿ ಪಾಲ್ಗೊಂಡಿರುವ ಸಹಸ್ರಾರು ಜನರು.
ಪಾದಯಾತ್ರೆಯಲ್ಲಿ ಗುರುವಾರ ಕಂಡು ಬಂದ ಅಪಾರ ಜನಸ್ತೋಮ

ಮಡಿಕೇರಿಯಲ್ಲಿ ಬಿಗಿ ಭದ್ರತೆ; ಪೊಲೀಸರಿಂದ ಹಲವು ಸೂಚನೆ

ಮಡಿಕೇರಿಗೆ ಫೆ. 7ರಂದು ತಲುಪಲಿರುವ ಪಾದಯಾತ್ರೆಯಲ್ಲಿ ಅಂದಾಜು 15ರಿಂದ 25 ಸಾವಿರ ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಇವರ ಭದ್ರತೆಗಾಗಿ 700ರಿಂದ 800 ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದ್ದಾರೆ. ಒಟ್ಟು 6 ಡಿವೈಎಸ್‌ಪಿ 18 ಇನ್‌ಸ್ಪೆಕ್ಟರ್‌ಗಳು 35 ಸಬ್‌ಇನ್‌ಸ್ಪೆಕ್ಟರ್‌ಗಳು 55 ಸಹಾಯಕ ಸಬ್‌ಇನ್‌ಸ್ಪೆಕ್ಟರ್‌ಗಳು 430 ಕಾನ್‌ಸ್ಟೆಬಲ್‌ಗಳೊಂದಿಗೆ ಕರ್ನಾಟಕ ರಾಜ್ಯ ಮೀಸಲು ಪಡೆಯ 100 ಮಂದಿ ನಗರ ಸಶಸ್ತ್ರ ಮೀಸಲು ಪಡೆಯ 70 ಮಂದಿಯನ್ನು ನಿಯೋಜಿಸಲಾಗಿದೆ. ಪೊಲೀಸರ ಸೂಚನೆಗಳು * ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವವರು ಶಾಂತಿಯುತವಾಗಿ ರಸ್ತೆಯ ಒಂದು ಬದಿಯಲ್ಲಿ ನಡೆಯಬೇಕು * ಪಾದಯಾತ್ರೆಯ ಆಯೋಜಕರು ಪಾದಯಾತ್ರೆಯ ಜೊತೆಯಲ್ಲೇ ವಾಹನಗಳು ಬಾರದಂತೆ ಎಚ್ಚರ ವಹಿಸಬೇಕು. ನಿಗದಿತ ಸ್ಥಳಗಳಲ್ಲಿ ವಾಹನ ನಿಲುಗಡೆ ಮಾಡಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಕುರಿತು ಆಯೋಜಕರು ನಿಗಾ ವಹಿಸಬೇಕು * ಸಾರ್ವಜನಿಕರಿಗೆ ಹಾಗೂ ತುರ್ತು ಸೇವಾ ವಾಹನಗಳಿಗೆ ತೊಂದರೆಯಾಗದಂತೆ ಪಾದಯಾತ್ರೆಯಲ್ಲಿರುವ ಸ್ವಯಂಸೇವಕರು ಗಮನ ಹರಿಸಬೇಕು * ಎಲ್ಲಿಯೂ ರಸ್ತೆ ತಡೆ ಮಾಡದಂತೆ ಪಾದಯಾತ್ರೆಯ ಆಯೋಜಕರು ಕ್ರಮ ವಹಿಸಬೇಕು * ಯಾವುದೇ ಬಗೆಯಲ್ಲೂ ಅಹಿತಕರ ಘಟನೆ ನಡೆಯದಂತೆ ಆಯೋಜಕರು ಹೆಚ್ಚಿನ ಗಮನ ಇಟ್ಟಿರಬೇಕು

ಮಡಿಕೇರಿಯಲ್ಲಿ ಇಂದು ಮದ್ಯ ಮಾರಾಟ ನಿಷೇಧ

ಪಾದಯಾತ್ರೆಯ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಫೆ. 7ರಂದು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಮದ್ಯ ಮಾರಾಟವನ್ನು ಮಡಿಕೇರಿ ನಗರದಲ್ಲಿ ನಿಷೇಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಹಿತಕರ ಘಟನೆ ನಡೆದರೆ ಮಾಹಿತಿ ಕೊಡಿ

ಯಾವುದೇ ಬಗೆಯ ಅಹಿತಕರ ಘಟನೆ ನಡೆದರೆ ಕೂಡಲೇ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಸಹಾಯವಾಣಿ 112 ದೂ: 08272-228330 ಹಾಗೂ ಮೊ: 9480804900 ಗೆ ಕರೆ ನೀಡಿ ಮಾಹಿತಿ ನೀಡಬಹುದು ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.