ADVERTISEMENT

ರಸ್ತೆಗೆ ಇಳಿಯದ ಬಸ್‌; ಪ್ರಯಾಣಿಕರ ಪರದಾಟ

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಉರುಳು ಸೇವೆ ನಡೆಸಿ ನೋವು ತೋಡಿಕೊಂಡ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2020, 12:14 IST
Last Updated 11 ಡಿಸೆಂಬರ್ 2020, 12:14 IST
ಮಡಿಕೇರಿಯಲ್ಲಿ ಸಾರಿಗೆ ನೌಕರರು ಪ್ರತಿಭಟನೆ ನಡೆಸಿದರು
ಮಡಿಕೇರಿಯಲ್ಲಿ ಸಾರಿಗೆ ನೌಕರರು ಪ್ರತಿಭಟನೆ ನಡೆಸಿದರು   

ಮಡಿಕೇರಿ: ಬೇಡಿಕೆ ಈಡೇರಿಸಲು ಆಗ್ರಹಿಸಿ ಕೊಡಗು ಜಿಲ್ಲೆಯಲ್ಲೂ ಸಾರಿಗೆ ನೌಕರರು ಶುಕ್ರವಾರ ಪ್ರತಿಭಟನೆ ನಡೆಸಿದರು. ಮಡಿಕೇರಿಯ ಬಸ್‌ ನಿಲ್ದಾಣದಲ್ಲಿ ನೌಕರರು ಉರುಳು ಸೇವೆ ನಡೆಸುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದರು. ತಮ್ಮನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಬೇಕು ಎಂದು ಪಟ್ಟು ಹಿಡಿದರು. ಬಸ್‌ಗಳು ಇಡೀ ದಿನ ರಸ್ತೆ ಇಳಿಯದ ಕಾರಣಕ್ಕೆ ಪ್ರಯಾಣಿಕರು ಪರದಾಟ ನಡೆಸಿದರು.

ಕೆಎಸ್‌ಆರ್‌ಟಿಸಿ ಅಗತ್ಯ ಸೇವೆಗಳಲ್ಲಿ ಒಂದು. ನಾವೂ ಸೇವಾ ವಲಯದಲ್ಲಿದ್ದೇವೆ. ಆದರೆ, ಸರ್ಕಾರ ಮಾತ್ರ ನಮ್ಮ ಕೆಲಸಕ್ಕೆ ತಕ್ಕಂತೆ ವೇತನ ನೀಡುತ್ತಿಲ್ಲ. ಸರ್ಕಾರಿ ನೌಕರರು ಎಂದೂ ಪರಿಗಣಿಸುತ್ತಿಲ್ಲ. ಅದೇ ಶಿಕ್ಷಕರಿಗೆ ಎಲ್ಲ ಸೌಲಭ್ಯಗಳನ್ನೂ ಸರ್ಕಾರ ನೀಡುತ್ತಿದೆ. ಬಸ್‌ ಸಂಚಾರದಿಂದ ಲಾಭವಿಲ್ಲ ಎಂದು ಬೇಡಿಕೆ ಈಡೇರಿಸುತ್ತಿಲ್ಲ. ಸೇವಾ ಕ್ಷೇತ್ರದಲ್ಲಿ ಲಾಭ ನಿರೀಕ್ಷೆ ಮಾಡಲು ಸಾಧ್ಯವೇ? ಸರ್ಕಾರವೇ ಅನುದಾನ ಹೊಂದಿಸಿ ನಮಗೆ ನ್ಯಾಯ ನೀಡಬೇಕು ಎಂದು ನೌಕರರು ಆಗ್ರಹಿಸಿದರು.

ಹಲವು ವರ್ಷಗಳ ಕಾಲ ದುಡಿಮೆ ಮಾಡಿದರೂ ಮೂಲ ವೇತನ ಹೆಚ್ಚುತ್ತಿಲ್ಲ. ಜೊತೆಗೆ, ಕೆಲಸ ಅವಧಿಯೂ ಹೆಚ್ಚು ಎಂದು ನೋವು ತೋಡಿಕೊಂಡರು.

ADVERTISEMENT

ಅಡುಗೆ ತಯಾರಿ:
ಮಡಿಕೇರಿಯ ಬಸ್‌ ನಿಲ್ದಾಣದ ಆವರಣದಲ್ಲಿ ಸಾರಿಗೆ ನೌಕರರು ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಊಟ ತಯಾರಿಸಿ ಅಲ್ಲಿಯೇ ಸೇವಿಸಿದರು. ಸರ್ಕಾರ ಬೇಡಿಕೆ ಈಡೇರಿಸುವ ತನಕ ನಮ್ಮ ಹೋರಾಟ ಮುಂದುವರಿಯಲಿದೆ. ಸಾರ್ವಜನಿಕರಿಗೆ ತೊಂದರೆ ನೀಡುವ ಉದ್ದೇಶ ನಮ್ಮದಲ್ಲ. ಆದರೆ, ನಮಗೂ ಕುಟುಂಬವಿದೆ. ಇದೇ ವೇತನದಿಂದ ಕುಟುಂಬ ನಿರ್ವಹಣೆ ಮಾಡಬೇಕಿದೆ ಎಂದು ನೌಕರರೊಬ್ಬರು ನೋವು ತೋಡಿಕೊಂಡರು.

ಪ್ರಯಾಣಿಕರ ಪರದಾಟ

ಸಾರಿಗೆ ನೌಕರರ ಪ್ರತಿಭಟನೆಯ ಮಾಹಿತಿ ತಿಳಿಯದೇ ಮೈಸೂರು, ಮಂಗಳೂರು, ಹಾಸನ ಹಾಗೂ ಬೆಂಗಳೂರಿಗೆ ತೆರಳಲು ಬಸ್‌ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರು ಪರದಾಟ ನಡೆಸಿದರು. ಇನ್ನೇನು ಬಸ್‌ ಸೇವೆ ಆರಂಭ ಆಗಬಹುದು ಎಂಬ ನಿರೀಕ್ಷೆಯಲ್ಲಿ ಕೆಲವರಿದ್ದರು. ಆದರೆ, ಸಂಜೆಯ ತನಕವೂ ಬಸ್‌ ಸಂಚಾರ ಆರಂಭಗೊಳ್ಳಲಿಲ್ಲ. ಮಂಗಳೂರು ಹಾಗೂ ಮೈಸೂರಿನ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಲು ಬಂದಿದ್ದವರು ಸಂಕಷ್ಟಕ್ಕೆ ಸಿಲುಕಿದ್ದು ಕಂಡುಬಂತು.

ದುಪ್ಪಟ್ಟು ದರ

ಇದನ್ನೇ ಬಳಸಿಕೊಂಡ ಖಾಸಗಿ ಬಸ್‌ಗಳು ದೂರದ ಊರುಗಳಿಗೆ ಬಸ್‌ ಸೇವೆ ನೀಡಿದವು. ಆದರೆ, ದರ ಮಾತ್ರ ದುಪ್ಪಟ್ಟಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.