ಮಡಿಕೇರಿ: ಕೆಎಸ್‌ಆರ್‌ಟಿಸಿ ಬಸ್ ನೌಕರರ ಮುಷ್ಕರದ ಬಿಸಿ ಕೊಡಗು ಜಿಲ್ಲೆಗೂ ತಟ್ಟಿತು. ಆದರೆ, ನೂರಾರು ಖಾಸಗಿ ಬಸ್‌ಗಳು ಸಂಚರಿಸುವ ಮೂಲಕ ಪ್ರಯಾಣಿಕರ ಬವಣೆಯನ್ನು ತಪ್ಪಿಸಿದವು. ಆದಾಗ್ಯೂ, ಹೊರ ಜಿಲ್ಲೆಗೆ ಹೋಗುವ ಪ್ರಯಾಣಿಕರು ಸಕಾಲಕ್ಕೆ ಬಸ್ ಸಿಗದೇ ಪರದಾಡಿದರು.
ವಿದ್ಯಾರ್ಥಿಗಳು, ಕಚೇರಿಗಳಲ್ಲಿ ಕೆಲಸ ಮಾಡುವ ನೌಕರರು, ಶಿಕ್ಷಕರು ಸೇರಿದಂತೆ ಅನೇಕ ವಲಯದ ಜನರು ಮುಷ್ಕರದಿಂದ ಪರಿತಪಿಸಿದರು. ಸಕಾಲಕ್ಕೆ ಬಸ್ ಸಿಗದೇ ಹೈರಣಾದರು.
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬಸ್‌ಗಳಿದ್ದರೂ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಇರಲಿಲ್ಲ. ಮುಷ್ಕರ ಎಂಬ ಕಾರಣಕ್ಕೆ ಬಹುತೇಕ ಮಂದಿ ತಮ್ಮ ಪ್ರಯಾಣವನ್ನು ಮುಂದೂಡಿದ್ದರು. ಅನಿವಾರ್ಯ ಕಾರಣಗಳಿಗಾಗಿ ಸಂಚರಿಸುವವರು ಮಾತ್ರವೇ ನಿಲ್ದಾಣಕ್ಕೆ ಬಂದಿದ್ದರು.
ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಸತೀಶ್ ಅವರು ಬೆಳಿಗ್ಗೆಯೇ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬಂದು ಪರಿಸ್ಥಿತಿ ಪರಾಮರ್ಶಿಸಿದರು. ಖಾಸಗಿ ಬಸ್‌ಗಳನ್ನು ನಿಯೋಜಿಸಿದರು.
ಖಾಸಗಿ ಬಸ್‌ಗಳು ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದೊಳಗೆ ಹಾಗೂ ಬಸ್‌ನಿಲ್ದಾಣದ ಮುಂಭಾಗ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೊರಟವು.
ಹೊರಜಿಲ್ಲೆಯ ಆಸ್ಪತ್ರೆಗಳಿಗೆ ಹೋಗಬೇಕಾದ ರೋಗಿಗಳು ಬಸ್‌ಗಳಿಲ್ಲದೇ ಪರದಾಡಿದರು. ವಿವಿಧ ಆರೋಗ್ಯ ಸಮಸ್ಯೆಗಳಿಗಾಗಿ ಮೈಸೂರು, ಮಂಗಳೂರಿಗೆ ಹೋಗಬೇಕಾದವರು ಬಸ್‌ಗಾಗಿ ಕಾಯುತ್ತಿದ್ದ ದೃಶ್ಯಗಳು ಕಂಡು ಬಂದವು.
ಮತ್ತೊಂದು ಕಡೆ, ಇಲ್ಲಿನ ಜಿಲ್ಲಾಸ್ಪತ್ರೆಗೂ ಹೊರ ಜಿಲ್ಲೆಗಳಿಂದ ಸಾಕಷ್ಟು ಮಂದಿ ರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ. ಹುಣಸೂರು, ಪಿರಿಯಾಪಟ್ಟಣಗಳಿಂದಲೂ ಹೆಚ್ಚಿನ ಬಸ್ ಸಂಚಾರ ಇರದೇ ಅಲ್ಲಿನ ರೋಗಿಗಳು ಪರದಾಡಿದರು.
ಸಂಜೆಯ ವೇಳೆಗೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರದಲ್ಲಿ ಗಣನೀಯ ಏರಿಕೆ ಕಂಡು ಬಂತು. ಮುಂಜಾಗ್ರತಾ ಕ್ರಮವಾಗಿ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದಲ್ಲಿ ಹೆಚ್ಚಿನ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.