ADVERTISEMENT

ಸೋಮವಾರಪೇಟೆ: ಪುಷ್ಪಗಿರಿ ತಪ್ಪಲಿನಲ್ಲಿದೆ ಕುಮಾರಲಿಂಗೇಶ್ವರ ಕ್ಷೇತ್ರ

ಡಿ.ಪಿ.ಲೋಕೇಶ್
Published 14 ಜನವರಿ 2024, 8:24 IST
Last Updated 14 ಜನವರಿ 2024, 8:24 IST
ಸೋಮವಾರಪೇಟೆ ಸಮೀಪದ ಶಾಂತಳ್ಳಿಯಲ್ಲಿ ರಥೋತ್ಸವಕ್ಕೆ ಸಿದ್ಧಗೊಳ್ಳುತ್ತಿರುವ ರಥ.
ಸೋಮವಾರಪೇಟೆ ಸಮೀಪದ ಶಾಂತಳ್ಳಿಯಲ್ಲಿ ರಥೋತ್ಸವಕ್ಕೆ ಸಿದ್ಧಗೊಳ್ಳುತ್ತಿರುವ ರಥ.   

ಸೋಮವಾರಪೇಟೆ: ಇಲ್ಲಿನ ಪುಷ್ಪಗಿರಿ ಹೇಗೆ ಮಳೆ ಸುರಿಸುವ ಬೆಟ್ಟವಾಗಿ ಪ್ರಕೃತಿ ಸೌಂದರ್ಯಕ್ಕೆ ಹೆಸರಾಗಿದೆಯೋ ಹಾಗೆಯೇ ಅನೇಕ ಧಾರ್ಮಿಕ ಕ್ಷೇತ್ರಗಳಿಗೂ, ಐತಿಹಾಸಿಕ ತಾಣಗಳಿಂದಲೂ ಪ್ರಸಿದ್ಧವಾಗಿದೆ. ಅದರಲ್ಲಿ ಮೇಲ್ಪಂಕ್ತಿಯಲ್ಲಿ ನಿಲ್ಲುವಂತದ್ದು ಶ್ರೀಕುಮಾರಲಿಂಗೇಶ್ವರ ಕ್ಷೇತ್ರ.

ಪುಷ್ಪಗಿರಿ ತಪ್ಪಲಿನ ಶಾಂತಳ್ಳಿ ಗ್ರಾಮದಲ್ಲಿ ನೆಲೆಯಾಗಿರುವ ಕುಮಾರಲಿಂಗೇಶ್ವರ ಸ್ವಾಮಿ ದೇಗುಲ ಇತಿಹಾಸ ಪ್ರಸಿದ್ಧವಾದುದು. ಸುಮಾರು 800ಕ್ಕೂ ಅಧಿಕ ವರ್ಷಗಳ ಹಿಂದಿನ ಇತಿಹಾಸ ಹೊಂದಿರುವ ಈ ಕ್ಷೇತ್ರ ಇಂದಿಗೂ ಸಾವಿರಾರು ಭಕ್ತರ ಪಾಲಿಗೆ ಪುಣ್ಯ ಕ್ಷೇತ್ರವಾಗಿದೆ.

ಇಲ್ಲಿನ ಕುಮಾರಲಿಂಗೇಶ್ವರ ದೇವಾಲಯವು ಚೋಳ ಸಾಮ್ರಾಜ್ಯದ ಅರಸರ ಕಾಲದಲ್ಲಿ ನಿರ್ಮಿಸಲಾಗಿದೆ ಎಂದು ಐತಿಹ್ಯ ಹೇಳುತ್ತದೆ. ದೇವಾಲಯದ ವಾಸ್ತುಶಿಲ್ಪ, ಕಂಬಗಳು, ಶಿಲ್ಪಕಲೆಗಳು ಇದಕ್ಕೆ ಪುಷ್ಟಿ ನೀಡುವಂತಿವೆ. ಆದರೆ, ಮತ್ತೆ ಕೆಲವರು ಈ ದೇಗುಲ ಪಾಂಡ್ಯರ ಕಾಲದ್ದು ಎನ್ನುತ್ತಾರೆ. ವಾದ, ವಿವಾದಗಳು ಏನೇ ಇದ್ದರೂ ಈ ದೇಗುಲ ಅತಿ ಪುರಾತನವಾದುದು ಎಂಬುದಂತೂ ಸತ್ಯ. ಪುರಾತತ್ವ ಇಲಾಖೆಯವರು ಇನ್ನಷ್ಟು ಸಂಶೋಧನೆ ನಡೆಸಿ, ದೇಗುಲದ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಹೊರತೆಗೆಯಬೇಕಿದೆ.

ADVERTISEMENT

ಸಂಪೂರ್ಣವಾಗಿ ಬೃಹತ್ ಕಲ್ಲುಗಳ ಜೋಡಣೆಯಿಂದ ಈ ದೇಗುಲವು ಸೋಮವಾರಪೇಟೆ ನಗರದಿಂದ 10 ಕಿ.ಮೀ ದೂರದಲ್ಲಿದೆ. ಸುತ್ತಲಿನ ಪ್ರಕೃತಿ ಸೌಂದರ್ಯದ ನಡುವೆ ನೆಲೆ ನಿಂತಿರುವ ಪುಷ್ಪಗಿರಿ ಸಮೀಪದ ಶ್ರೀ ಶಾಂತಮಲ್ಲಿಕಾರ್ಜುನ ದೇವಾಲಯ ಮತ್ತು ಮಲ್ಲಳ್ಳಿ ಜಲಪಾತಕ್ಕೆ ತೆರಳುವ ಮಾರ್ಗ ಮಧ್ಯೆ ಕುಮಾರಲಿಂಗೇಶ್ವರ ದೇವಾಲಯ ನೆಲೆಯಾಗಿದ್ದು, ವರ್ಷವಿಡೀ ಸಾವಿರಾರು ಮಂದಿ ಇಲ್ಲಿಗೆ ಭೇಟಿ ನೀಡುತ್ತಾರೆ.

ಕಳೆದ 64 ವರ್ಷಗಳಿಂದ ಇಲ್ಲಿ ರಥೋತ್ಸವವನ್ನು ವಿಜೃಂಭಣೆಯಿಂದ ನಡೆಸಿಕೊಂಡು ಬರಲಾಗುತ್ತಿದೆ. ಈಗ 65ನೇ ವಾರ್ಷಿಕ ಮಹಾರಥೋತ್ಸಕ್ಕೆ ಸಕಲ ಸಿದ್ಧತೆಗಳೂ ನಡೆಯುತ್ತಿವೆ. ಪ್ರತಿವರ್ಷ ಸಂಕ್ರಾಂತಿ ಹಬ್ಬದ ವೇಳೆ ಜಾತ್ರೋತ್ಸವ ಆರಂಭವಾಗುವುದು ವಾಡಿಕೆ.

ಜ. 13ರಂದು ಶನಿವಾರ ‘ಬೆಳ್ಳಿ ಬಂಗಾರ ದಿನ’ ವೆಂದು ಪರಿಗಣಿಸಿ ವಿಶೇಷ ಪ್ರಾರ್ಥನೆ ಮತ್ತು ಪೂಜೆಯೊಂದಿಗೆ ಜಾತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಲಾಗಿದೆ. ಜಾತ್ರೆ ಪ್ರಯುಕ್ತ ದೇವಾಲಯದಲ್ಲಿ ಕರುವಿನ ಹಬ್ಬ, ಗರುಡಗಂಬದಲ್ಲಿ ತುಪ್ಪದ ನಂದಾದೀಪ ಬೆಳಗುವುದು, ಪುಷ್ಪಗಿರಿ ಬೆಟ್ಟದಲ್ಲಿರುವ ಪುರಾತನ ದೇವಾಲಯದಲ್ಲಿ ದೀಪೋತ್ಸವ, ಅರಸುಬಲ ಸೇವೆ ಸೇರಿದಂತೆ ಪ್ರತಿದಿನ ವಿವಿಧ ಧಾರ್ಮಿಕ ಕೈಂಕರ್ಯಗಳು ನೆರವೇರಲಿದೆ. 16ರಂದು ಮಹಾರಥೋತ್ಸವ ಹಾಗೂ 17ರಂದು ಸಮಾರೋಪ ಸಮಾರಂಭದೊಂದಿಗೆ ಜಾತ್ರೋತ್ಸವಕ್ಕೆ ತೆರೆ ಎಳೆಯಲಾಗುತ್ತದೆ.

ಜಾತ್ರೋತ್ಸವದ ದಿನ ವಿವಿಧ ಕಲಾ ತಂಡಗಳೊಂದಿಗೆ ಗ್ರಾಮದ ರಥಬೀದಿಯಲ್ಲಿ ಅಲಂಕೃತ ರಥದಲ್ಲಿ ಶ್ರೀ ಕುಮಾರಲಿಂಗೇಶ್ವರ ದೇವರ ಮೆರವಣಿಗೆ ನಡೆಸಲಾಗುವುದು. ರಥವನ್ನು ಎಳೆಯುವ ಸಂದರ್ಭ ಸ್ಥಳೀಯರು ರಸ್ತೆಗೆ ನೀರು ಹಾಕಿ ರಂಗೋಲಿ ಬಿಡಿಸುವುದು, ರಥವನ್ನು ಎಳೆಯುವ ಸಂದರ್ಭ ರಸ್ತೆಗೆ ನೀರು ಹಾಕುವುದು ಸ್ಥಳೀಯರು ನಡೆಸಿಕೊಂಡು ಬಂದಿರುವುದನ್ನು ಕಾಣಬಹುದು.

ಸಾವಿರಾರು ಮಂದಿ ಭಕ್ತಾದಿಗಳು ದೇವಾಲಯಕ್ಕೆ ಆಗಮಿಸಿ ಫಲ ತಾಂಬೂಲ, ದವಸ ಧಾನ್ಯ, ಕಾಣಿಕೆ, ಹರಕೆಗಳನ್ನು ಸಲ್ಲಿಸುತ್ತಾರೆ. ಪ್ರಕೃತಿಯ ಸೌಂದರ್ಯವೇ ನೆಲೆಯಾಗಿರುವ ಶಾಂತಳ್ಳಿಯ ಕುಮಾರಲಿಂಗೇಶ್ವರ ದೇವಾಲಯದ ವಾರ್ಷಿಕ ಜಾತ್ರೆಯನ್ನು ಸುತ್ತಲಿನ ಗ್ರಾಮಸ್ಥರೆಲ್ಲರೂ ಒಟ್ಟಾಗಿ ಸೇರಿ ಆಚರಿಸಿಕೊಂಡು ಬರುತ್ತಿರುವುದು ವಿಶೇಷ.

ನಿರಂತರವಾಗಿ ಅನಾದಿಕಾಲದಿಂದಲೂ ನಡೆದು ಬಂದ ಪದ್ದತಿಯ ಮೇರೆ ಕೂತಿ ನಾಡು, ತೋಳುನಾಡು, ಪುಷ್ಪಗಿರಿ, ಯಡೂರು, ತಲ್ತರೆಶೆಟ್ಟಳ್ಳಿ ಗ್ರಾಮಸ್ಥರು ಸೇರಿದಂತೆ, ಹೊರ ಜಿಲ್ಲೆಯ ನೂರಾರು ಮಂದಿ ಭಕ್ತಾದಿಗಳು ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.

ಜಾತ್ರೆಯನ್ನು ಈ ವ್ಯಾಪ್ತಿಯ ಜನತೆ ಹಬ್ಬದಂತೆ ಸಂಭ್ರಮಿಸುತ್ತಾರೆ. ಉದ್ಯೋಗ ಸೇರಿದಂತೆ ಇನ್ನಿತರ ಕಾರ್ಯ ನಿಮಿತ್ತ ಹೊರಭಾಗದಲ್ಲಿ ನೆಲೆಸಿರುವ ಮಂದಿಯೂ ಸಹ ಈ ಜಾತ್ರೆಯಲ್ಲಿ ಭಾಗಿಯಾಗುತ್ತಾರೆ. ಈಗ ಇಡೀ ಗ್ರಾಮವೇ ಸಂಭ್ರಮದಲ್ಲಿದೆ.

ಇದರೊಂದಿಗೆ ಸಾರ್ವಜನಿಕರಿಗೆ ವಿವಿಧ ಕ್ರೀಡಾಕೂಟಗಳನ್ನು ಏರ್ಪಡಿಸುವ ಮೂಲಕ ಎಲ್ಲರನ್ನೂ ಒಂದುಗೂಡಿಸುವ ಪ್ರಯತ್ನ ದೇವಾಲಯ ಆಡಳಿತ ಮಂಡಳಿ ಹಾಗೂ ಶ್ರೀಕುಮಾರಲಿಂಗೇಶ್ವರ ಯುವಕ ಸಂಘದಿಂದ ಪ್ರತಿವರ್ಷ ನಡೆಯುತ್ತಿದೆ.

ಸೋಮವಾರಪೇಟೆ ಸಮೀಪದ ಶಾಂತಳ್ಳಿಯ ಶ್ರೀ ಕುಮಾರಲಿಂಗೇಶ್ವರ ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿರುವುದು.
ಸೋಮವಾರಪೇಟೆ ಸಮೀಪದ ಶಾಂತಳ್ಳಿಯ ಶ್ರೀ ಕುಮಾರಲಿಂಗೇಶ್ವರ ದೇವಾಲಯ.
ಶನಿವಾರದಿಂದಲೇ ಧಾರ್ಮಿಕ ಕೈಂಕರ್ಯ ಆರಂಭ 16ರಂದು ನಡೆಯಲಿದೆ ಮಹಾರಥೋತ್ಸವ 17ರಂದು ಸಮಾರೋಪ ಸಮಾರಂಭದೊಂದಿಗೆ ಜಾತ್ರೋತ್ಸವಕ್ಕೆ ತೆರೆ
ಪ್ರಸಕ್ತ ಸಾಲಿನಲ್ಲಿ ಬರಗಾಲವಿದ್ದರೂ ಗ್ರಾಮ ದೇವರ ಉತ್ಸವಕ್ಕೆ ಯಾವುದೇ ಚ್ಯುತಿಯಾಗದಂತೆ ಆಚರಿಸಲು ನಿರ್ಧರಿಸಿ ತಯಾರಿ ನಡೆಸಲಾಗಿದೆ
ಕೆ.ಎಂ. ಲೋಕೇಶ್ ದೇವಾಲಯ ಧರ್ಮದರ್ಶಿ ಮಂಡಳಿ ಅಧ್ಯಕ್ಷ .
ಕಳೆದ 64 ವರ್ಷಗಳಿಂದ ನಡೆಯುತ್ತಿರುವ ಕುಮಾರಲಿಂಗೇಶ್ವರ ರಥೋತ್ಸವ ಶ್ರದ್ಧಾ ಭಕ್ತಿಯಿಂದ ನಡೆಯುತ್ತಿದ್ದೂ ಪ್ರತಿ ವರ್ಷದಂತೆ ಈ ಬಾರಿಯೂ ಎಲ್ಲರೂ ಪಾಲ್ಗೊಳ್ಳುತ್ತೇವೆ.
ಬಿ.ಈ. ಜಯೇಂದ್ರ ವಕೀಲರು.
ಜಾತ್ರೋತ್ಸವದ ಇತರೆ ವಿಶೇಷಗಳು
ಜಾತ್ರೋತ್ಸವದ ಅಂಗವಾಗಿ ತಾಲ್ಲೂಕಿನ ಕೃಷಿ ಇಲಾಖೆ ತೋಟಗಾರಿಕೆ ಸಂಬಾರ ಮಂಡಳಿ ವತಿಯಿಂದ ರೈತರು ಬೆಳೆದ ಬೆಳೆಗಳ ಪ್ರದರ್ಶನ ಏರ್ಪಡಿಸಲಾಗುತ್ತದೆ. ಸ್ಥಳೀಯ ಶ್ರೀ ಕುಮಾರಲಿಂಗೇಶ್ವರ ಯುವಕ ಸಂಘದಿಂದ ಅಂತರ ಜಿಲ್ಲಾಮಟ್ಟದ ಪುರುಷರ ಮುಕ್ತ ಕಬಡ್ಡಿ ಮತ್ತು ಮಹಿಳೆಯರಿಗೆ ಥ್ರೋಬಾಲ್ ಪಂದ್ಯಾಟ ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.