
ಸೋಮವಾರಪೇಟೆ: ಹಸಿರನ್ನೇ ಹೊದ್ದ ತಾಲ್ಲೂಕಿನ ಶಾಂತಳ್ಳಿ ಗ್ರಾಮದ ಶ್ರೀಕುಮಾರಲಿಂಗೇಶ್ವರ ಸ್ವಾಮಿ ದೇವರ 67ನೇ ವರ್ಷದ ವಾರ್ಷಿಕ ಮಹಾರಥೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಜ. 13ರಂದು ‘ಬೆಳ್ಳಿ ಬಂಗಾರ ದಿನ’ ಆಚರಣೆಯೊಂದಿಗೆ ಜಾತ್ರೋತ್ಸವಕ್ಕೆ ಚಾಲನೆ ದೊರೆಯಲಿದೆ.
ಸುಮಾರು 900ಕ್ಕೂ ಅಧಿಕ ವರ್ಷಗಳ ಹಿಂದಿನ ಇತಿಹಾಸ ಹೊಂದಿರುವ ಈ ಮಹಾ ರಥೋತ್ಸವಕ್ಕೆ ಕೊಡಗು ಮಾತ್ರವಲ್ಲದೆ ಸುತ್ತಮುತ್ತಲ ಜಿಲ್ಲೆಗಳಿಂದಲೂ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಜಾತಿ, ಮತ, ಪಂಥ, ಧರ್ಮಾತೀತವಾಗಿ ಆಗಮಿಸಿ, ಪ್ರಾರ್ಥನೆ ಸಲ್ಲಿಸುವುದು, ಹರಕೆ ಒಪ್ಪಿಸುವುದು ಇಲ್ಲಿನ ವಿಶೇಷ.
ಸೋಮವಾರಪೇಟೆ ನಗರದಿಂದ 10 ಕಿ.ಮಿ. ದೂರದಲ್ಲಿದ್ದು, ಪ್ರಕೃತಿ ಸೌಂದರ್ಯದ ನಡುವೆ ನೆಲೆ ನಿಂತಿರುವ ಪುಷ್ಪಗಿರಿ ಸಮೀಪದ ಈ ದೇವಾಲಯದಲ್ಲಿ ಭರದ ಸಿದ್ಧತೆಗಳು ಈಗ ನಡೆದಿವೆ.
ಕಳೆದ 6 ದಶಕಗಳಿಂದ ಪ್ರತಿ ವರ್ಷ ಮಕರ ಸಂಕ್ರಾಂತಿಯ ವೇಳೆ ದೇವಾಲಯದಲ್ಲಿ ರಥೋತ್ಸವ ಹಾಗೂ 1 ವಾರಗಳ ತನಕ ಧಾರ್ಮಿಕ ವಿಧಿ ವಿಧಾನಗಳಂತೆ ದೇವರ ಪೂಜೆ ಉತ್ಸವಗಳು ನಡೆಯುತ್ತವೆ.
ವಿವಾಹ ಭಾಗ್ಯಕ್ಕೆ ಪ್ರಾರ್ಥನೆ ಸಲ್ಲಿಸುವುದು, ನವ ದಂಪತಿಗಳು ಮದುವೆ ಕಾಣಿಕೆ ಅರ್ಪಿಸುವುದು, ತಮ್ಮ ಕಷ್ಟಕಾರ್ಪಣ್ಯಗಳಿಗೆ ಪ್ರಾರ್ಥನೆ ಸಲ್ಲಿಸುವುದು ಇಲ್ಲಿ ಸಾಮಾನ್ಯ. ಇದರೊಂದಿಗೆ ಈ ಭಾಗದ ಮನೆ ದೇವರಾಗಿಯೂ ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ಅಗ್ರಪೂಜಿತವಾಗಿದೆ.
ಪ್ರಕೃತಿಯ ಸೌಂದರ್ಯವೇ ನೆಲೆಯಾಗಿರುವ ಶಾಂತಳ್ಳಿ ಗ್ರಾಮದ ಶ್ರೀ ಕುಮಾರಲಿಂಗೇಶ್ವರ ದೇವಾಲಯದ ವಾರ್ಷಿಕ ಜಾತ್ರೆಯನ್ನು ಗ್ರಾಮಸ್ಥರೆಲ್ಲರೂ ಒಟ್ಟಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಜಾತ್ರೆಯನ್ನು ಈ ವ್ಯಾಪ್ತಿಯ ಜನತೆ ಹಬ್ಬದ ರೀತಿಯಲ್ಲಿ ಸಂಭ್ರಮಿಸುತ್ತಾರೆ. ಉದ್ಯೋಗ ಸೇರಿದಂತೆ ಇನ್ನಿತರ ಕಾರ್ಯ ನಿಮಿತ್ತ ಹೊರಭಾಗದಲ್ಲಿ ನೆಲೆಸಿರುವ ಮಂದಿಯೂ ಸಹ ಈ ಜಾತ್ರೆಯಲ್ಲಿ ಒಟ್ಟಾಗುವುದರಿಂದ ಇಡೀ ಗ್ರಾಮವೇ ಸಂಭ್ರಮದಲ್ಲಿರುತ್ತದೆ. ಇದರೊಂದಿಗೆ ಸಾರ್ವಜನಿಕರಿಗೆ ವಿವಿಧ ಕ್ರೀಡಾಕೂಟಗಳನ್ನು ಏರ್ಪಡಿಸುವ ಮೂಲಕ ಎಲ್ಲರನ್ನೂ ಒಂದುಗೂಡಿಸುವ ಪ್ರಯತ್ನ ದೇವಾಲಯ ಆಡಳಿತ ಮಂಡಳಿ ಹಾಗೂ ಶ್ರೀಕುಮಾರಲಿಂಗೇಶ್ವರ ಯುವಕ ಸಂಘದಿಂದ ಪ್ರತಿವರ್ಷ ನಡೆಯುತ್ತಿದೆ.
ಕೊಡಗು ರಾಜರ ಆಳ್ವಿಕೆ ಕಾಲದಿಂದಲೂ ನಡೆದುಕೊಂಡು ಬಂದ ಪದ್ಧತಿಯಂತೆ ಕೂತಿ ನಾಡು, ತೋಳುನಾಡು, ಗಡಿನಾಡಿಗೆ ಒಳಪಡುವ ಕೊತ್ತನಳ್ಳಿ, ಬೀದಳ್ಳಿ, ಹೆಗ್ಗಡಮನೆ, ಕುಮಾರಳ್ಳಿ, ಬಾಚಳ್ಳಿ, ಯಡೂರು, ತಲ್ತರೆಶೆಟ್ಟಳ್ಳಿ, ಕೂತಿ, ತೋಳೂರುಶೆಟ್ಟಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಭಕ್ತಾದಿಗಳು ವಾದ್ಯಗೋಷ್ಠಿಯ ಮೂಲಕ ದೇವಾಲಯಕ್ಕೆ ಆಗಮಿಸಿ ಅರಸುಬಲ ಸೇವೆ ಸಲ್ಲಿಸುತ್ತಾರೆ. ಇದರೊಂದಿಗೆ ಪುಷ್ಪಗಿರಿ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿ, ಬೃಹತ್ ದೀಪ ಹೊತ್ತಿಸಿ ನಂತರ ವಿಶೇಷ ಶ್ರದ್ಧೆಯೊಂದಿಗೆ ದೇವರನ್ನು ಶಾಂತಳ್ಳಿಗೆ ಕರೆತರುವ ಪದ್ದತಿ ಇಂದಿಗೂ ನಡೆದುಕೊಂಡು ಬಂದಿದೆ.
ಶಾಂತಳ್ಳಿ ಗ್ರಾಮಸ್ಥರಾದ ಕೆ.ಎಂ.ಲೋಕೇಶ್ ದೇವಾಲಯ ಧರ್ಮದರ್ಶಿ ಮಂಡಳಿ ಅಧ್ಯಕ್ಷರಾಗಿ, ಕೆ.ಕೆ.ಮುತ್ತಣ್ಣ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದು, ಎನ್.ಜಿ.ಕೃಷ್ಣಮೂರ್ತಿ ಕ್ಷೇತ್ರದ ಅರ್ಚಕರಾಗಿ ಪೂಜಾ ಕಾರ್ಯ ನಡೆಸುತ್ತಿದ್ದಾರೆ.
1 ವಾರಗಳ ತನಕ ನಡೆಯಲಿರುವ ಜಾತ್ರಾ ಮಹೋತ್ಸವ ಸುತ್ತಮುತ್ತಲ ಜಿಲ್ಲೆಗಳಿಂದ ಆಗಮಿಸುವ ಭಕ್ತವೃಂದ ಸಾವಿರಾರು ಮಂದಿ ಭಾಗಿಯಾಗುವ ವರ್ಷದ ಮೊದಲ ಜಾತ್ರೆ
ಚೋಳರ ಕಾಲದ ದೇವಾಲಯ ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ದೇವಾಲಯವು ಚೋಳ ಅರಸರ ಕಾಲದಲ್ಲಿ ನಿರ್ಮಿಸಲಾಗಿದೆಯೇ ಅಥವಾ ಪಾಂಡ್ಯರ ಕಾಲದಲ್ಲಿ ನಿರ್ಮಿಸಲಾಗಿದೆಯೇ ಎಂಬುದು ಈವರೆಗೂ ಖಚಿತವಾಗಿಲ್ಲ ಎಂದು ಗ್ರಾಮದ ಹಿರಿಯರು ಹೇಳುತ್ತಾರೆ. ದೇಗುಲದ ಶಿಲ್ಪಕಲೆ ಕಂಬಗಳು ಕತ್ತೆನೆಯನ್ನು ಆಧರಿಸಿ ಇದು ಚೋಳರ ಕಾಲದ್ದು ಎಂದು ಕೆಲವರು ಹೇಳುತ್ತಾರೆ. ಇದಕ್ಕೆ ಪೂರಕವಾಗಿ ದೇವಾಲಯದ ಹಿಂಭಾಗ 7 ಮಾನವ ಆಕೃತಿಗಳನ್ನು ಕೆತ್ತಲಾಗಿದ್ದು ಇದು ಚೋಳರ ಕಾಲದಲ್ಲಿ ಆಡಳಿತ ನಡೆಸಿದ 7 ರಾಜರುಗಳನ್ನು ಪ್ರತಿಬಿಂಬಿಸುತ್ತವೆ. 7ನೇ ತಲೆಮಾರಿನ ರಾಜನ ಕಾಲದಲ್ಲಿ ಈ ದೇವಾಲಯ ನಿರ್ಮಾಣವಾಗಿರಬಹುದು ಎಂದು ಪ್ರತಿಪಾದಿಸುತ್ತಾರೆ. ಆದರೆ ದೀಪಾವಳಿ ಹಬ್ಬದಂದು ಈ ಭಾಗದ ಮಂದಿ ಕಾಡಿನಿಂದ ಲಕ್ಕೆ ಗಿಡದ ಸೊಪ್ಪುಗಳನ್ನು ಮನೆಗೆ ತಂದು ‘ಬೆಚ್ಚು ಬೆಚ್ಚು ಬೆಳಗುಂಬಳ ಇದು ನಮ್ಮ ಬೆಚ್ಚಲ್ಲ ಪಾಂಡ್ಯರ ಬೆಚ್ಚು’ ಎಂದು ಘೋಷಣೆ ಕೂಗಿ ಸೊಪ್ಪನ್ನು ಮನೆಯ ಚಾವಣಿಗೆ ಹಾಕುತ್ತಾರೆ. ಬೆಚ್ಚು ಎಂದರೆ ಆದೇಶ ಎಂದರ್ಥ-ಪಾಂಡ್ಯರ ಆದೇಶದ ಮಾತುಗಳು ಈ ಭಾಗದಲ್ಲಿ ಇಂದಿಗೂ ಮುಂದುವರೆದುಕೊಂಡು ಬಂದಿದೆ. ಸಂಪೂರ್ಣವಾಗಿ ಬೃಹತ್ ಕಲ್ಲುಗಳ ಜೋಡಣೆಯಿಂದ ನಿರ್ಮಾಣಗೊಂಡಿರುವ ದೇವಾಲಯದ ಗರ್ಭಗುಡಿಯಲ್ಲಿ ಶ್ರೀ ಕುಮಾರಲಿಂಗೇಶ್ವರ ಸ್ವಾಮಿಯನ್ನು ಪ್ರತಿಷ್ಠಾಪಿಸಲಾಗಿದ್ದು 1958ರಿಂದ 5 ದಿನಗಳ ಕಾಲ ಜಾತ್ರೋತ್ಸವ ರಥೋತ್ಸವವನ್ನು ನಡೆಸಿಕೊಂಡು ಬರಲಾಗುತ್ತಿದೆ. ಅದಕ್ಕೂ ಮುಂಚೆ ವಾರ್ಷಿಕ ಒಂದು ದಿನ ಮಾತ್ರ ಜಾತ್ರೋತ್ಸವ ನಡೆಯುತ್ತಿತ್ತು. 15 ವರ್ಷಗಳ ಹಿಂದೆ ಜಾನುವಾರುಗಳ ಜಾತ್ರೆಗೂ ಶಾಂತಳ್ಳಿ ಜಾತ್ರೆ ಪ್ರಸಿದ್ಧಿಯಾಗಿತ್ತು. ಇತ್ತೀಚಿನ ವರ್ಷಗಳಿಂದ ಜಾನುವಾರು ಜಾತ್ರೆ ಸ್ಥಗಿತಗೊಂಡಿದೆ ಎಂದು ಶಾಂತಳ್ಳಿ ಗ್ರಾಮಾಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಲಿಂಗರಾಜು ತಿಳಿಸಿದ್ದಾರೆ.
13ರಿಂದ 17ರವರೆಗೆ ಜಾತ್ರೋತ್ಸವ ಜ. 13ರಂದು ‘ಬೆಳ್ಳಿ ಬಂಗಾರ ದಿನ’ ಆಚರಣೆಯೊಂದಿಗೆ ಸಂಜೆ 6.30ರಿಂದ ಪ್ರಸಕ್ತ ವರ್ಷದ ಜಾತ್ರೆ ಪ್ರಾರಂಭೋತ್ಸವ ಪೂಜೆ ನಡೆಯಲಿದೆ. 14ರಂದು ‘ಮಕರ ಸಂಕ್ರಮಣ ಕರುವಿನ ಹಬ್ಬ’ ಹಾಗೂ 7 ಗಂಟೆಗೆ ದೇಗುಲದ ಗರುಡ ಕಂಬದ ಅಗ್ರಪೀಠದಲ್ಲಿ ತುಪ್ಪದ ನಂದಾದೀಪವನ್ನು ಬೆಳಗಿಸಲಾಗುತ್ತದೆ. ಇದರೊಂದಿಗೆ ಅಂಕುರಾರ್ಪಣ ಪೂಜೆ ಮಹಾಮಂಗಳಾರತಿ ಪ್ರಾರ್ಥನೆ ಪ್ರಸಾದ ಸ್ವೀಕಾರ ನೆರವೇರಲಿದೆ. 15ರಂದು ‘ಅರಸು ಬಲ ಸೇವೆ’ ಪೂಜೆ ನಡೆಯಲಿದೆ. ಸಂಜೆ 7.30ರಿಂದ ಗಣಹೋಮ ರಂಗಪೂಜೆ ಬೀದಿ ಉತ್ಸವ ಮಹಾಮಂಗಳಾರತಿ ಕಾರ್ಯಕ್ರಮಗಳು ಜರುಗುತ್ತವೆ. 16ರಂದು ಮಧ್ಯಾಹ್ನ 12.05ಕ್ಕೆ 67ನೇ ಮಹಾ ರಥೋತ್ಸವ ಜರುಗಲಿದೆ. ಶ್ರೀಕುಮಾರಲಿಂಗೇಶ್ವರ ಯುವಕ ಸಂಘದ ವತಿಯಿಂದ ಜಿಲ್ಲಾ ಮಟ್ಟದ ಥ್ರೋಬಾಲ್ ಕಬಡ್ಡಿ ಮತ್ತು ವಾಲಿಬಾಲ್ ಪಂದ್ಯಾಟಗಳು ನಡೆಯಲಿವೆ. 17ರಂದು ಮಹಾ ಸಂಪ್ರೋಕ್ಷಣೆ ಮಂಗಳ ಪ್ರಾರ್ಥನೆಯ ನಂತರ ಪ್ರಸಕ್ತ ವರ್ಷದ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ ಎಂದು ದೇವಾಲಯ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಕೆ.ಎಂ.ಲೋಕೇಶ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.