
ಕುಶಾಲನಗರ: ಬೆಂಗಳೂರಿನ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ ವತಿಯಿಂದ ಗುರುವಾರ ಇಲ್ಲಿನ ಪುರಸಭೆ ಸಭಾಂಗಣದಲ್ಲಿ ಮೈಸೂರು ಹಾಗೂ ಕೊಡಗು ಜಿಲ್ಲಾ ಸ್ಥಳೀಯ ನಗರ ಸಂಸ್ಥೆಗಳ ಪರಿಸರ ಅಧಿಕಾರಿಗಳು, ಆರೋಗ್ಯ ನಿರೀಕ್ಷಕರಿಗೆ ಪೌರಾಡಳಿತ ನಿರ್ದೇಶನಾಲಯದ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಚಕ್ರೀಯ ಆರ್ಥಿಕತೆ, ಘನತ್ಯಾಜ್ಯ ನಿರ್ವಹಣೆ ಕುರಿತು ಒಂದು ದಿನದ ಕಾರ್ಯಾಗಾರ ಏರ್ಪಡಿಸಲಾಗಿತ್ತು.
ಕಾರ್ಯಾಗಾರಕ್ಕೆ ಚಾಲನೆ ನೀಡಿದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಟಿ.ಜಿ.ಪ್ರೇಮಕುಮಾರ್, ‘ಉತ್ತಮ ಪರಿಸರ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕಿದೆ. ದಿನನಿತ್ಯ ಉತ್ಪತ್ತಿಯಾಗುವ ಕಸವನ್ನು ವಿಂಗಡಿಸಿ ಸೂಕ್ತವಾಗಿ ವಿಲೇವಾರಿ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ನಮ್ಮ ಕಸ- ನಮ್ಮ ಹೊಣೆ ಎಂಬ ರೀತಿಯಲ್ಲಿ ನಾವು ಕಸವನ್ನು ಸೂಕ್ತವಾಗಿ ವಿಲೇವಾರಿ ಮಾಡಿದರೆ ಸ್ವಚ್ಛ ಪರಿಸರ ಸಾಧ್ಯ’ ಎಂದರು.
ಪುರಸಭೆಯ ಮುಖ್ಯಾಧಿಕಾರಿ ಟಿ.ಎಸ್.ಗಿರೀಶ್ ಮಾತನಾಡಿ, ‘ಪರಿಣಾಮಕಾರಿ ತ್ಯಾಜ್ಯ ನಿರ್ವಹಣೆಗೆ ನಾವು ಆದ್ಯತೆ ನೀಡಬೇಕಿದೆ. ಈ ತರಬೇತಿಯು ಘನತ್ಯಾಜ್ಯ ನಿರ್ವಹಣೆ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಸಹಕಾರಿಯಾಗಿದೆ. ಕಸ ನಿರ್ವಹಣೆಗೆ ಸಮುದಾಯ ಕೈಜೋಡಿಸಿದರೆ ಉತ್ತಮ ಪರಿಸರ ನಿರ್ಮಿಸಲು ಸಾಧ್ಯ’ ಎಂದು ಹೇಳಿದರು.
ಪೌರಾಡಳಿತ ನಿರ್ದೇಶನಾಲಯದ ಸ್ವಚ್ಛ್ ಭಾರತ್ ಮಿಷನ್ ವಿಭಾಗದ ಮನ್ವಯಾಧಿಕಾರಿ ಎಚ್.ವಿಜಯಲಕ್ಷ್ಮಿ ಮಾತನಾಡಿ,‘ಎಂಪ್ರಿ ಸಂಸ್ಥೆಯ ಪರಿಸರ ಸ್ವಚ್ಛತೆ, ಘನತ್ಯಾಜ್ಯ ನಿರ್ವಹಣೆ ಮತ್ತು ವಿಲೇವಾರಿ ಬಗ್ಗೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಹಾಗೂ ಜನ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಮೂಲಕ ಪರಿಸರ ಸ್ವಚ್ಛತೆ ಹಾಗೂ ಘನತ್ಯಾಜ್ಯ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ’ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿ ಅನಿರುದ್ಧ್ ದತ್ತ ಘನತ್ಯಾಜ್ಯ ನಿರ್ವಹಣೆ ಕುರಿತು ಹಾಗೂ ವಾಸುಕಿ ಹಸಿ ತ್ಯಾಜ್ಯದಿಂದ ಗೊಬ್ಬರ ತಯಾರಿಕೆ ಕುರಿತು ಪ್ರಾತ್ಯಕ್ಷಿಕೆ ನೀಡಿದರು.
ಜಿಲ್ಲಾ ಘನತ್ಯಾಜ್ಯ ನಿರ್ವಹಣೆಯ ಪ್ರವರ್ತಕ ಎಂ.ಕೀರ್ತಿಪ್ರಸಾದ್, ಎಂಪ್ರಿ ಸಂಸ್ಥೆಯ ತರಬೇತುದಾರ ಎನ್. ರಾಘವೇಂದ್ರ, ಎ.ಎಂ. ರುಚಿತಾ ಶ್ರೀ, ಪುರಸಭೆಯ ಹಿರಿಯ ಆರೋಗ್ಯಾಧಿಕಾರಿ ಎಂ.ಸಿ.ಉದಯ್ ಕುಮಾರ್ ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.