ಕುಶಾಲನಗರ: ಅರೆಭಾಷೆ ಕನ್ನಡದ ಉಪಭಾಷೆ ಎಂದು ಹೇಳುವುದನ್ನು ಬಿಡಬೇಕು. ಅದು ಒಂದು ಸ್ವತಂತ್ರವಾದ ಭಾಷೆ. ಇದರಲ್ಲಿ ಗಾದೆಗಳು, ಸೋಬಾನೆಗಳು, ರಾಮಾಯಣ, ಜನಪದ ಗೀತೆಗಳು ಇವೆ. ಇದು ಉಪಭಾಷೆ ಅಲ್ಲ ಎಂಬ ಸ್ವಾಭಿಮಾನ ಬಾರದೆ ಹೋದರೆ ಭಾಷೆಯನ್ನು ಉಳಿಸಿಕೊಳ್ಳುವುದು ಕಷ್ಟ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಪ್ರತಿಪಾದಿಸಿದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಕುಶಾಲನಗರ, ಆಲೂರು ಸಿದ್ದಾಪುರ, ಸುಂಟಿಕೊಪ್ಪ, ಗುಡ್ಡೆಹೊಸೂರು, ನಂಜರಾಯಪಟ್ಟಣ, ಚೆಟ್ಟಳ್ಳಿ, ಪಿರಿಯಾಪಟ್ಟಣ, ಸೋಮವಾರಪೇಟೆ ಹಾಗೂ ಯಡವಾರೆ ಗೌಡ ಸಮಾಜಗಳ ಸಹಕಾರದಲ್ಲಿ ಇಲ್ಲಿನ ರೈತ ಸಹಕಾರ ಭವನದಲ್ಲಿ ಭಾನುವಾರ ನಡೆದ ಅರೆಭಾಷೆ ಗಡಿನಾಡ ಉತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಆರಂಭವಾಗಿರುವ ಅರೆಭಾಷೆ ಅಧ್ಯಯನ ಪೀಠಕ್ಕೆ ಸರ್ಕಾರ ₹ 5 ಕೋಟಿ ಬಿಡುಗಡೆ ಮಾಡಬೇಕು ಎಂದು ಇಲ್ಲಿನ ಎಲ್ಲ ಗೌಡ ಸಮಾಜಗಳು ನಿರ್ಣಯ ಕೈಗೊಂಡು ಸರ್ಕಾರಕ್ಕೆ ಪತ್ರ ಕಳುಹಿಸಬೇಕು. ಮಾತ್ರವಲ್ಲ, ಅಕಾಡೆಮಿಯೂ ಹೆಚ್ಚುವರಿ ಅನುದಾನಕ್ಕೆ ಒತ್ತಾಯಿಸಬೇಕು ಎಂದು ಅವರು ಆಗ್ರಹಿಸಿದರು.
‘ಅರೆಭಾಷೆ ಮಾತನಾಡುವವರ ಸಂಖ್ಯೆಯನ್ನು ಅಕಾಡೆಮಿ ದಾಖಲಿಸಿ, ಅರೆಭಾಷಿಕರಿರುವ ಪ್ರದೇಶದಲ್ಲಿರುವ ಊರುಗಳ ವಿವರಣಾತ್ಮಕ ನಿಘಂಟು ತಯಾರಿಸಬೇಕು. ಅರೆಭಾಷಿಕ ಗೌಡರನ್ನು ನೆಲೆ ನಿಲ್ಲಿಸಿದ ಅದ್ಭುತವಾದ ಮನೆತನದ ಹೆಸರುಗಳನ್ನು ನಾಶ ಮಾಡದಿರುವುದು ನಮ್ಮ ಸಂಸ್ಕೃತಿಗೆ ಗಟ್ಟಿಯಾಗಿ ಅಂಟಿಕೊಳ್ಳುವ ವಿಧಾನ ಎಂಬುದನ್ನು ಮರೆಯಬಾರದು’ ಎಂದು ಕಿವಿಮಾತು ಹೇಳಿದರು.
ಕ್ರಿ.ಶ 1–2ನೇ ಶತಮಾನದಲ್ಲಿ ಬಳಕೆಯಲ್ಲಿದ್ದಿರಬಹುದಾದ ಪದಗಳನ್ನು ಅರೆಭಾಷಿಕ ಸಮುದಾಯ ಇನ್ನೂ ಕಾಪಿಟ್ಟುಕೊಂಡಿದ್ದು, ಅವು ಬದಲಾಗದೇ ಉಳಿದಿರುವುದು ಅರೆಭಾಷಿಕರ ಭಾಗ್ಯ. ಅರೆಭಾಷಿಕರು ಬದುಕುವ ಊರಿನ ಸ್ಥಳನಾಮಗಳನ್ನು ತಯಾರು ಮಾಡಿದರೆ ಕರ್ನಾಟಕಕ್ಕ ಮಾದರಿಯಾಗುತ್ತದೆ ಎಂದು ಸಲಹೆ ನೀಡಿದರು.
2011 ಜನಗಣತಿಯ ಪ್ರಕಾರ ದೇಶದಲ್ಲಿ 19,569 ಭಾಷೆಗಳಿವೆ. ಸಂವಿಧಾನ ಕೇವಲ 22 ಭಾಷೆಗಳನ್ನು ಅಂಗೀಕರಿಸಿದೆ. ಅದರಲ್ಲಿ 18 ಉತ್ತರ ಭಾರತದ ಭಾಷೆಗಳು. ಎಲ್ಲ ಭಾಷೆಗಳನ್ನೂ ಉಳಿಸಿಕೊಳ್ಳುವುದು ಎಂದರೆ ಮನೆ ಎದುರು ಬಣ್ಣ ಬಣ್ಣದ ರಂಗೋಲಿ ಇದ್ದ ಹಾಗೆ ಎಂದು ಉಪಮೆಗಳನ್ನು ಪ್ರಸ್ತಾಪಿಸಿ ಭಾಷೆಗಳ ಮಹತ್ವ ಕುರಿತು ಮಾತನಾಡಿದರು.
‘ಈಗ ರಾಜ್ಯದಲ್ಲಿ 55 ಸಾವಿರ ಶಿಕ್ಷಕ ಹುದ್ದೆಗಳು ಖಾಲಿ ಇವೆ. ಮುಂದಿನ ವರ್ಷ ಮಾರ್ಚ್ ಅಂತ್ಯಕ್ಕೆ 36 ಸಾವಿರ ಮಂದಿ ನಿವೃತ್ತರಾಗುತ್ತಾರೆ. ಹೆಚ್ಚು, ಕಡಿಮೆ 1 ಲಕ್ಷ ಶಿಕ್ಷಕರ ಕೊರತೆ ಎದುರಾಗುತ್ತದೆ. ಮೈಸೂರು ವಿಶ್ವವಿದ್ಯಾಲಯದಲ್ಲಿ 700 ಉಪನ್ಯಾಸಕ ಹುದ್ದೆಗಳು ಖಾಲಿ ಇವೆ. ಒಂದು ವಿಶ್ವವಿದ್ಯಾಲಯ ಆರಂಭಿಸಲು ಕನಿಷ್ಠ ₹ 100 ಕೋಟಿಯ ಅಗತ್ಯ ಇದೆ. ಪರಿಸ್ಥಿತಿ ಹೀಗಿರುವಾಗ, ಕೌಶಲ ನಮ್ಮ ವಿದ್ಯಾರ್ಥಿಗಳಿಗೆ ಬರುವುದಾದರೂ ಹೇಗೆ? ಬಹುರಾಷ್ಟ್ರೀಯ ಕಂಪನಿಗಳಲ್ಲಿ ಅವರು ಕೆಲಸಕ್ಕೆ ಸೇರುವುದಾದರೂ ಹೇಗೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಜನಸಂಖ್ಯೆ ಆಧಾರದಲ್ಲಿ ಕ್ಷೇತ್ರ ಪುನರ್ ವಿಂಗಡನೆಯ ಕಾರ್ಯವು ನಡೆಯುವುದರ ಬಗ್ಗೆ ಚರ್ಚೆ ನಡೆದಿದೆ. ಇದರಿಂದಾಗಿ ದಕ್ಷಿಣ ರಾಜ್ಯಗಳಿಗೆ ಯಾವ ರೀತಿಯ ನ್ಯಾಯ ಸಿಗಲಿದೆ ಎಂಬುದನ್ನು ಗಮನಿಸಬೇಕಿದೆ ಎಂದರು.
ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಚಿನ್ನಸ್ವಾಮಿ, ಸದಸ್ಯ ಸಂದೀಪ್ ಪೂಳಕಂಡ, ಕುಶಾಲನಗರ ಗೌಡ ಸಮಾಜ ಅಧ್ಯಕ್ಷ ಚಿಲ್ಲನ ಗಣಿ ಪ್ರಸಾದ್, ಕುಶಾಲನಗರ ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ ,ಆಲೂರು ಸಿದ್ದಾಪುರದ ದೇವಾಯೀರ ಗಿರೀಶ್, ಶುಂಠಿಕೊಪ್ಪ ಸಮಾಜದ ಕುಂಜಿಲನ ಮಂಜುನಾಥ್, ಗುಡ್ಡೆ ಹೊಸೂರು ಗೌಡ ಸಮಾಜ ಅಧ್ಯಕ್ಷ ಗುಡ್ಡೆಮನೆ ವಿಶುಕುಮಾರ್, ನಂಜರಾಯ ಪಟ್ಟಣದ ಕೆಮ್ಮಾರನ ಉತ್ತಯ್ಯ ಚೆಟ್ಟಳ್ಳಿ ಸಮಾಜದ ರಾಘವಯ್ಯ ಐಯ್ಯಂಡ್ರ, ಚಿಕ್ಕತ್ತೂರು ಸಮಾಜದ ಚೆರಿಯ ಮನೆ ಮಂದಪ್ಪ, ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷ ನವೀನ ಅಂಬೆಕ್ಕಲ್ ಭಾಗವಹಿಸಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಕುಶಾಲನಗರ ಕೊಪ್ಪ ಗಡಿಭಾಗದ ಕಾವೇರಿ ಪ್ರತಿಮೆ ಬಳಿ ಹೊರಟ ಮೆರವಣಿಗೆಗೆ ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಚಾಲನೆ ನೀಡಿದರು. ಅಕಾಡೆಮಿ ಸದಸ್ಯ ಸಂಚಾಲಕರಾದ ಪೊನ್ನಚ್ಚನ ಮೋಹನ್ ಸ್ವಾಗತಿಸಿದರು.
ಅರೆಭಾಷಿಕರ ಜನಗಣತಿ ಹಾಗೂ ಸ್ಥಳನಾಮ ಸಂಬಂಧ ಬಗ್ಗೆ ಅಗತ್ಯ ಕ್ರಮ ವಹಿಸಲಾಗುವುದು. ಮುಂದಿನ ವರ್ಷದಲ್ಲಿ ಅರೆಭಾಷೆ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗುವುದು.ಸದಾನಂದ ಮಾವಜಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ
ಶಾಸಕ ಡಾ.ಮಂತರ್‌ಗೌಡ ಮಾತನಾಡಿ ಅರೆಭಾಷೆ ಸಾಹಿತ್ಯ ಸಂಸ್ಕೃತಿ ಉಳಿಸಿ ಬೆಳೆಸಬೇಕು. ಮುಂದಿನ ಪೀಳಿಗೆಗೆ ಅರೆಭಾಷೆ ಕಲಿಸಬೇಕು ಎಂದರು. ಪ್ರತಿಯೊಬ್ಬರೂ ಅರೆಭಾಷೆ ಮಾತನಾಡುವ ಮೂಲಕ ಭಾಷೆ ಉಳಿಸಲು ಸಾಧ್ಯ. ಆ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಭಾಷೆ ಬೆಳವಣಿಗೆಗೆ ಶ್ರಮಿಸಬೇಕು ಎಂದು ಅವರು ಕರೆ ನೀಡಿದರು.
ಬಿಜೆಪಿ ಹಿರಿಯ ಮುಖಂಡ ಕೆ.ಜಿ.ಬೋಪಯ್ಯ ಮಾತನಾಡಿ ‘ಅರೆಭಾಷೆ ಎಲ್ಲೆಡೆ ಗಟ್ಟಿಯಾಗಿ ಬೆಳೆಯಬೇಕು ಅರೆಭಾಷೆ ಮೂಲ ಸಂಸ್ಕೃತಿ ಉಳಿಯಬೇಕು ಮತ್ತು ಪಸರಿಸುವಂತಾಗಬೇಕು’ ಎಂದು ಕರೆ ನೀಡಿದರು. ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿಗೆ ಹೆಚ್ಚಿನ ಒತ್ತು ನೀಡಬೇಕು. ಅರೆಭಾಷೆ ಅಕಾಡೆಮಿ ಸ್ಥಾಪನೆಯಿಂದ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಅರೆಭಾಷೆ ಗುರಿತಿಸುವಂತಾಗಿದೆ ಎಂದು ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.