ADVERTISEMENT

ಮಡಿಕೇರಿ: ಕೆರೆಗಳಿಗೆ ಬೇಕಿದೆ ತಡೆಗೋಡೆ

ಅಪಾಯ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ, ಕೂಡಲೇ ಕ್ರಮ ಕೈಗೊಳ್ಳಲು ಸಾರ್ವಜನಿಕರ ಆಗ್ರಹ

ಕೆ.ಎಸ್.ಗಿರೀಶ್
Published 14 ಜುಲೈ 2025, 6:32 IST
Last Updated 14 ಜುಲೈ 2025, 6:32 IST
ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಸೋಮವಾರಪೇಟೆ ಸಮೀಪದ ಯಡೂರು ಕೆರೆ
ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಸೋಮವಾರಪೇಟೆ ಸಮೀಪದ ಯಡೂರು ಕೆರೆ   

ಮಡಿಕೇರಿ: ಮೇ ತಿಂಗಳಿನಿಂದ ಸುರಿಯುತ್ತಿರುವ ಮುಂಗಾರು ಮಳೆಯಿಂದ ಗ್ರಾಮೀಣ ಭಾಗದ ಎಲ್ಲ ಕೆರೆಗಳೂ ಅವಧಿಗೆ ಮುನ್ನವೇ ತುಂಬಿವೆ. ಆದರೆ, ರಾಜ್ಯ ಹೆದ್ದಾರಿಯಲ್ಲಿರುವ ಕೆರೆಗಳು ಸೇರಿದಂತೆ ಸಾಕಷ್ಟು ಕೆರೆಗಳಿಗೆ ಯಾವುದೇ ರಕ್ಷಣಾ ವ್ಯವಸ್ಥೆ ಇಲ್ಲ.

ಇದರಿಂದ ಕೆರೆ ಬದಿಯ ರಸ್ತೆಯಲ್ಲಿ ವಾಹನ ಸವಾರರು ಹಾಗೂ ಪಾದಚಾರಿಗಳು ಓಡಾಡಲು ಭಯಪಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಕೊಡಗು ಜಿಲ್ಲೆಯಲ್ಲಿರುವ ಸಾಕಷ್ಟು ಕೆರೆಗಳು ಇಂದಿಗೂ ಸಮರ್ಪಕವಾದ ತಡೆಗೋಡೆಗಳನ್ನು ಹೊಂದಿಲ್ಲ. ಕೆಲವು ಕೆರೆಗಳಂತೂ ಅಪಾಯಕ್ಕೆ ಆಹ್ವಾನ ನೀಡುವಂತಿವೆ. ಕೊಡಗು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಎನ್.ಎಸ್.ಭೋಸರಾಜು ಅವರ ಸುಪರ್ದಿಯಲ್ಲೇ ಸಣ್ಣ ನೀರಾವರಿ ಇಲಾಖೆಯೂ ಇರುವುದರಿಂದ ಸಹಜವಾಗಿಯೇ ಜನರಲ್ಲಿ ಎಲ್ಲ ಕೆರೆಗಳಿಗೂ ತಡೆಗೋಡೆ, ಇಲ್ಲವೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬಹುದು ಎಂಬ ನಿರೀಕ್ಷೆ ಇದೆ.

ADVERTISEMENT

ಕೊಡಗು ಜಿಲ್ಲೆಯಲ್ಲಿ ಒಟ್ಟು 1,127 ಕೆರೆಗಳಿದ್ದು, ಅವುಗಳಲ್ಲಿ 1,072 ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿವೆ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ 29‌, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ 16, ಕಾವೇರಿ ನೀರಾವರಿ ನಿಗಮ ವ್ಯಾಪ್ತಿಗೆ 10 ಕೆರೆಗಳು ಸೇರುತ್ತವೆ.

ಇದರೊಂದಿಗೆ ಕೇಂದ್ರ ಸರ್ಕಾರದ ಮಾನಸ ಸರೋವರ ಯೋಜನೆ ವ್ಯಾಪ್ತಿಯಲ್ಲೂ ಜಿಲ್ಲೆಯಲ್ಲಿ ಕೆಲವೊಂದಿಷ್ಟು ಕೆರೆಗಳು ಅಭಿವೃದ್ಧಿ ಹೊಂದಿವೆ. ಆದರೆ, ಇನ್ನುಳಿದ ಕೆರೆಗಳು ಅಭಿವೃದ್ಧಿಯನ್ನೇ ಕಂಡಿಲ್ಲ.

ಕುಶಾಲನಗರದ ತಾವರೆಕೆರೆಯೂ ಅಪಾಯಕಾರಿ ಜೋಂಡು ಹು‌ಲ್ಲಿನ ಹೂಗಳ ರಾಶಿಯನ್ನೇ ತುಂಬಿಕೊಂಡು ಪ್ರವಾಸಿಗರನ್ನು ಸೆಳೆದಿದೆ. ಒಂದು ವೇಳೆ ಇದು ಹೆಸರಿಗೆ ತಕ್ಕಂತೆ ತಾವರೆ ಹೂಗಳನ್ನು ಹೊಂದಿದ್ದರೆ ಜಿಲ್ಲೆ ಮಾತ್ರವಲ್ಲ ರಾಜ್ಯದ ಪ್ರವಾಸಿ ತಾಣವೇ ಆಗಿರುತ್ತಿತ್ತು. ಈ ರೀತಿ ಬಹುತೇಕ ಕೆರೆಗಳು ಅಭಿವೃದ್ಧಿಯ ನಿರೀಕ್ಷೆಯಲ್ಲಿವೆ.

ಕೆರೆಗಳಿಗೆ ವಾಹನಗಳು ಉರುಳಿ ಬಿದ್ದ ಘಟನೆಗಳು ಆಗೊಮ್ಮೆ ಈಗೊಮ್ಮೆ ಸಂಭವಿಸುತ್ತಿವೆ. ಹಾರಂಗಿ ಕೆಳಸೇತುವೆಯಂತೂ ಇಕ್ಕೆಲಗಳಲ್ಲಿ ತಡೆಗೋಡೆಯನ್ನೇ ಹೊಂದಿಲ್ಲ. ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಹೊಸ ಸೇತುವೆ ಇರಲಿ ಕನಿಷ್ಠ ಸುರಕ್ಷತಾ ತಡೆಗೋಡೆಯನ್ನೂ ನಿರ್ಮಿಸಲಾಗಿಲ್ಲ. ಈ ಬಾರಿಯೂ ಶಾಸಕ ಡಾ.ಮಂತರ್‌ಗೌಡ ಅವರು ಹೊಸದೊಂದು ಸೇತುವೆ ನಿರ್ಮಿಸಲಾಗುತ್ತಿದೆ ಎಂಬ ಭರವಸೆ ನೀಡಿದ್ದಾರೆ.

ಸೋಮವಾರಪೇಟೆಯಲ್ಲಿ ಕಳೆದ ವರ್ಷ ಮಹಿಳಾ ಕಾರ್ಮಿಕರಿದ್ದ ವ್ಯಾನ್‌ ಕೆರೆಗೆ ಬಿದ್ದಿರುವುದು (ಸಂಗ್ರಹ ಚಿತ್ರ)
ಚಿಕ್ಕತೋಳೂರು ಗ್ರಾಮದ ಕಾಡುಮನೆ ಮುಖ್ಯ ರಸ್ತೆಯಲ್ಲಿ ಕೆರೆಯ ಸುತ್ತ ತಡೆಗೋಡೆ ಇಲ್ಲದಿರುವುದು
ಚಿಕ್ಕತೋಳೂರು ಗ್ರಾಮದ ಕಾಡುಮನೆ ಮುಖ್ಯ ರಸ್ತೆಯಲ್ಲಿ ಕೆರೆಯ ಸುತ್ತ ತಡೆಗೋಡೆ ಇಲ್ಲದಿರುವುದು
ಲಿಖಿತ್
ಬಾಲಕೃಷ್ಣ ಪೂಜಾರಿ
ಸಿ.ಎಲ್.ವೆಂಕಟೇಶ್
ಮಧು
ಆದರ್ಶ
ಸಣ್ಣ ನೀರಾವರಿ ಇಲಾಖೆ ಸೇರಿದ ಕೆರೆಗಳು ಅಪಾಯದಲ್ಲಿಲ್ಲ. ಬಹುತೇಕ ಎಲ್ಲ ಕೆರೆಗಳಲ್ಲೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ
ಕುಮಾರಸ್ವಾಮಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸಣ್ಣ ನೀರಾವರಿ ಇಲಾಖೆ

ಕೆರೆ ಪಕ್ಕದ ರಸ್ತೆಯಲ್ಲಿ ಆತಂಕದ ಪಯಣ

ಸೋಮವಾರಪೇಟೆ: ತಾಲ್ಲೂಕಿನಲ್ಲಿರುವ ಎಲ್ಲ ಕೆರೆಗಳು ತುಂಬಿದ್ದು ಬಹುತೇಕ ಕೆರೆಯ ದಡದಲ್ಲಿ ತಡೆಗೋಡೆಗಳಾಗಲಿ ಬ್ಯಾರಿಕೇಡ್‌ಗಳಾಗಿ ಕಲ್ಲಿನ ರಕ್ಷಣಾ ಬೇಲಿಗಳಾಗಲಿ ನಿರ್ಮಾಣವಾಗಿಲ್ಲ. ಅನೇಕ ಕೆರೆಗಳಲ್ಲಿ ಈಗ ಹೂಳು ತೆಗೆಯಲಾಗಿದ್ದು ಆಳವಾಗಿವೆ. ಗ್ರಾಮಗಳಲ್ಲಿರುವ ಕೆರೆ ದಡದ ಮೇಲಿನ ರಸ್ತೆಗಳಲ್ಲಿ ನಿತ್ಯ ಶಾಲಾ ವಾಹನಗಳು ದ್ವಿಚಕ್ರ ವಾಹನಗಳು ಸಂಚರಿಸುತ್ತವೆ. ಇಂತಹ ರಸ್ತೆಯಲ್ಲಿ ಶಾಲಾ ಮಕ್ಕಳು ನಡೆದುಕೊಂಡು ಹಾಗೂ ಸೈಕಲ್‌ನಲ್ಲಿ ಶಾಲೆಗಳಿಗೆ ತೆರಳುತ್ತಾರೆ. ತಡೆಗೋಡೆ ಇಲ್ಲದಿರುವುದರಿಂದ ಜನರಲ್ಲಿ ಆತಂಕ ಎದುರಾಗಿದೆ. ಸಮೀಪದ ಯಡೂರು ಗ್ರಾಮದ ಊರ ಕೆರೆ ಬಲಿಗಾಗಿ ಬಾಯ್ತೆರೆದು ಕೂತಿರುವಂತೆ ಕಾಣುತ್ತಿದೆ. ರಾಜ್ಯ ಹೆದ್ದಾರಿಯಾಗಿದ್ದು ಮಳೆ ಹೆಚ್ಚಳವಾದಂತೆ ಮಲ್ಲಳ್ಳಿ ಹಾಗೂ ಪುಷ್ಪಗಿರಿ ಪ್ರವಾಸಿ ತಾಣಗಳಿಗೆ ಹೋಗಲು ಈ ಕೆರೆಯ ತಟದಲ್ಲೇ ತೆರಳಬೇಕು.

ಶಾಂತಳ್ಳಿ ಹೋಬಳಿಯ ಸುಮಾರು 20 ಗ್ರಾಮಗಳ ನಿವಾಸಿಗಳು ಇದೇ ರಸ್ತೆಯಲ್ಲೇ ಸಂಚರಿಸಬೇಕು. ಸುಬ್ರಮಣ್ಯ ಸಕಲೇಶಪುರ ಮಂಗಳೂರಿಗೆ ತೆರಳುವವರು ಕೆರೆ ತಟದಲ್ಲಿರುವ ರಸ್ತೆಯ ಮೇಲೆ ಸಂಚರಿಸಬೇಕಾಗಿದೆ. ಐದಾರು ಶಾಲಾ ಬಸ್‌ಗಳು ಮಕ್ಕಳನ್ನು ಕರೆದೊಯ್ಯುವ ಖಾಸಗಿ ವ್ಯಾನ್‌ಗಳು ಖಾಸಗಿ ಬಸ್‌ಗಳು ಕಾರ್ಮಿಕರನ್ನು ಕರೆದೊಯ್ಯುವ ವಾಹನಗಳು ಸೇರಿದಂತೆ ನಿತ್ಯವೂ ನೂರಾರು ವಾಹನಗಳು ಸಂಚರಿಸುತ್ತವೆ. ಆದರೆ ಇದುವರೆಗೆ ಕೆರೆಯ ಏರಿಗೆ ರಕ್ಷಣಾ ಬೇಲಿ ಅಳವಡಿಸಿಲ್ಲ. ಲೋಕೋಪಯೋಗಿ ಇಲಾಖೆ ಮತ್ತು ಹಾನಗಲ್ಲು ಗ್ರಾಮ ಪಂಚಾಯಿತಿಗೆ ಗ್ರಾಮಸ್ಥರು ಸುರಕ್ಷಿತ ಕ್ರಮಕ್ಕಾಗಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ದೂರುತ್ತಾರೆ. ಕೆರೆಯಲ್ಲಿ ಹೂಳು ತೆಗೆಸಿದ್ದು ಆಳವಾಗಿದೆ. ಮಳೆಗಾಲದಲ್ಲಿ ಕೆರೆ ಉಕ್ಕಿ ರಸ್ತೆಯ ಮೇಲೆ ಹರಿಯುವಾಗ ರಸ್ತೆ ಯಾವುದು ಕೆರೆಯ ನೀರು ಯಾವುದು ಎಂಬುದು ಪ್ರವಾಸಿಗರಿಗೆ ಗೊತ್ತಾಗುವುದಿಲ್ಲ. ಅದರಲ್ಲೂ ರಾತ್ರಿ ಹೊತ್ತಿನಲ್ಲಿ ಪ್ರವಾಸಿಗರು ತಬ್ಬಿಬ್ಬಾದರೆ ಜಲಸಮಾಧಿಯಾಗಬೇಕಾಗುತ್ತದೆ ಎಂದು ಗ್ರಾಮದ ಹಿರಿಯರು ಆತಂಕ ವ್ಯಕ್ತಪಡಿಸುತ್ತಾರೆ.

ಕಳೆದ ವರ್ಷ ಮಹಿಳಾ ಕಾರ್ಮಿಕರು ವ್ಯಾನ್‌ನಲ್ಲಿ ಕೆರೆ ಏರಿಯಲ್ಲಿ ಸಂಚರಿಸುತ್ತಿದ್ದ ಸಂದರ್ಭ ಎದುರಿಗೆ ಬರುತ್ತಿದ್ದ ವಾಹನವನ್ನು ತಪ್ಪಿಸುವ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿ ವ್ಯಾನ್ ಕೆರೆಗೆ ಮಗುಚಿಗೊಂಡಿತ್ತು. ಬೇಸಿಗೆ ಕಾಲವಾದ್ದರಿಂದ ನಾಲ್ಕೈದು ಅಡಿಯಷ್ಟು ನೀರಿದ್ದ ಪರಿಣಾಮ ವಾಹನ ಮುಳುಗದೆ ಅನಾಹುತ ತಪ್ಪಿತ್ತು. ಆದರೆ ಈ ಘಟನೆ ಮಳೆಗಾಲದಲ್ಲಿ ಆಗಿದ್ದರೆ ವಾಹನ ಮುಳುಗುವ ಸಾಧ್ಯತೆಯೇ ಹೆಚ್ಚು.

ಅಪಾಯ ಆಹ್ವಾನಿಸುತ್ತಿದೆ ಚಿಕ್ಕ ತೋಳೂರು ಕೆರೆ

ಶನಿವಾರಸಂತೆ: ಕೊಡಗಿನ ಗಡಿ ಭಾಗದ ಗ್ರಾಮವಾದ ಚಿಕ್ಕತೋಳೂರು ಗ್ರಾಮದ ಕಾಡುಮನೆ ಮುಖ್ಯರಸ್ತೆಯಲ್ಲಿರುವ ಕೆರೆ ತುಂಬಿದೆ. ಕೆರೆಯ ಸುತ್ತ ಯಾವುದೇ ತಡೆಗೋಡೆ ಇಲ್ಲದೇ ಅಪಾಯಕ್ಕೆ ಆಹ್ವಾನಿಸುತ್ತಿದೆ. ತೋಳೂರು ಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುವ ಈ ಕೆರೆ ಬದಿಯಲ್ಲಿ ಸಂಚರಿಸುವುದೇ ದುಸ್ತರ. ವಾಹನ ಚಾಲಕರು ಜಾಗ್ರತೆ ವಹಿಸದಿದ್ದರೆ ಅಪಾಯ ಖಚಿತ. ಗ್ರಾಮ ಪಂಚಾಯಿತಿ ವತಿಯಿಂದ ಈಚೆಗೆ ಕೆರೆಯ ಹೂಳು ತೆಗೆಯಿಸಲಾಗಿದೆ. ಕೆರೆಗೆ ಕಲ್ಲಿನ ತಡೆಗೋಡೆ ನಿರ್ಮಿಸಲಾಗಿದೆ. ಆದರೆ ರಸ್ತೆ ಮಟ್ಟದವರೆಗೆ ಮಾತ್ರ ತಡೆಗೋಡೆ ನಿರ್ಮಿಸಿದ್ದರಿಂದ ರಸ್ತೆ ಮತ್ತು ಕೆರೆ ಯಾವುದು ಎಂದು ಪ್ರಯಾಣಿಕರು ಗೊಂದಲಪಡುವಂತಾಗಿದೆ. ಹೂಳು ತೆಗೆದಿರುವುದರಿಂದ ಕೆರೆಯು ತುಂಬಾ ಆಳವಾಗಿದ್ದು ಅಪಾಯದ ಮಟ್ಟದಲ್ಲಿದೆ. ಈ ರಸ್ತೆಯಲ್ಲಿ ನಿತ್ಯವೂ ಹಲವಾರು ವಾಹನಗಳು ಸಂಚರಿಸುತ್ತವೆ. ಹಲವು ಕೆಎಸ್‌ಆರ್‌ಟಿಸಿ ಬಸ್‌ಗಳು ಹಾಸನದಿಂದ ಹೊಸೂರು ಮಾರ್ಗವಾಗಿ ಸೋಮವಾರಪೇಟೆಗೆ ಸಂಚರಿಸುತ್ತಿರುತ್ತವೆ. ಇಲ್ಲಿ ಯಾವುದೇ ರೀತಿಯ ಬೀದಿ ದೀಪದ ವ್ಯವಸ್ಥೆ ಇಲ್ಲದಿರುವುದರಿಂದ ಕೆರೆ ಕಾಣದಂತಾಗಿದೆ. ಕೆರೆಯ ಇನ್ನೊಂದು ಬದಿಯ ದಡ 15 ಅಡಿ ಆಳ ಇದೆ. ಇದೂ ಅಪಾಯ ಆಹ್ವಾನಿಸುತ್ತಿದೆ.

ಕೆರೆಯು ಬೆಟ್ಟದ ಸನಿಹದಲ್ಲೇ ಇದ್ದು ಮಳೆಗಾಲದಲ್ಲಿ ಬೆಟ್ಟದಿಂದ ಬರುವ ಮಳೆ ನೀರಿನಿಂದ ಕೆರೆ ತುಂಬಿರುತ್ತದೆ. ಕೂಡಲೇ ಸಂಬಂಧಪಟ್ಟ ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿ ಮುಂದೆ ಸಂಭವಿಸಬಹುದಾದ ಅಪಾಯವನ್ನು ತಪ್ಪಿಸಲು ತಡೆಗೋಡೆ ನಿರ್ಮಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇನ್ನು ಹೊನ್ನಮ್ಮನ ಕೆರೆಗೂ ತಡೆಗೋಡೆ ಇಲ್ಲ. ದೊಡ್ಡಮಳ್ತೆ ಒಳಗುಂದ ಅಬ್ಬೂರುಕಟ್ಟೆ ಮಾರ್ಗವಾಗಿ ಸಂಚರಿಸುವ ವಾಹನ ಚಾಲಕರು ಜೀವ ಕೈಯಲ್ಲಿ ಹಿಡಿದು ಸಂಚರಿಸ‌ಬೇಕಿದೆ. ಬ್ಯಾಡಗುಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುವ ಕೊಡ್ಲಿಪೇಟೆ ಹೋಬಳಿಯ ಬಾಣಂತನಮ್ಮನ ಕೆರೆ ಕುಶಾಲನಗರದ ತಾವರೆಕೆರೆ ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುವ ಯಡೂರು ಕೆರೆ ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುವ ಕೊಡ್ಲಿಪೇಟೆಯ ಚಿಕ್ಕಭಂಡಾರ ಕೆರೆ ಕೆರೆ ಸೇರಿದಂತೆ ಈ ಭಾಗದ ಹಲವು ಕೆರೆಗಳಿಗೆ ತಡೆಗೋಡೆ ಇಲ್ಲ. ತಡೆಗೋಡೆ ಜತೆಗೆ ಕೆರೆಗಳನ್ನು ಅಭಿವೃದ್ಧಿ ಪಡಿಸಬೇಕು ಎಂಬುದು ಸ್ಥಳೀಯರ ಒತ್ತಾಯ.

ಅನಾಹುತಕ್ಕೂ ಮುನ್ನ ಎಚ್ಚರಿಕೆ ವಹಿಸಿ

ಮಳೆ ಧಾರಾಕಾರವಾಗಿ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಯಡೂರು ಕೆರೆ ತುಂಬಿದೆ. ಕೆರೆ ಹೂಳು ತೆಗೆದಿರುವ ಕಾರಣ ನೀರಿನ ಸಂಗ್ರಹ ಜಾಸ್ತಿಯಾಗಿದೆ. ತಂತಿ ಬೇಲಿ ಅಥವಾ ರೈಲಿಂಗ್ಸ್ ಅಳವಡಿಸುವುದಕ್ಕೆ ಸರ್ಕಾರ ಅನುದಾನ ಕಲ್ಪಿಸಬೇಕು. ಅನಾಹುತವಾದ ನಂತರ ಕ್ರಮ ಕೈಗೊಳ್ಳುವುದಕ್ಕಿಂತ ಮೊದಲೇ ಎಚ್ಚರ ವಹಿಸಬೇಕು.
–ಎ.ಸಿ.ಲಿಖಿತ್ ಕೃಷಿಕ ಯಡೂರು
ಸುರಕ್ಷತಾ ಕ್ರಮ ಕೈಗೊಳ್ಳಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಯಡೂರು ಗ್ರಾಮದ ಕೆರೆ ಅಪಾಯದಲ್ಲಿದೆ. ಈಗಾಗಲೇ ತುಂಬಿ ಹರಿಯುತ್ತಿದ್ದು ರಸ್ತೆ ಮತ್ತು ಕೆರೆ ಒಂದೇ ರೀತಿಯಲ್ಲಿ ಕಾಣುತ್ತದೆ. ಸಾಕಷ್ಟು ಪ್ರವಾಸಿಗರು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ. ಹೊರ ಜಿಲ್ಲೆ ಮತ್ತು ರಾಜ್ಯದ ಸಾಕಷ್ಟು ವಾಹನಗಳು ಇಲ್ಲಿ ಬರುತ್ತಿರುವುದರಿಂದ ಅಪಾಯ ಎದುರಾಗುವ ಮುನ್ನ ಸಂಬಂಧಿಸಿದ ಇಲಾಖೆ ಸುರಕ್ಷತಾ ಕ್ರಮವನ್ನು ತೆಗೆದುಕೊಳ್ಳಬೇಕು.
–ಬಾಲಕೃಷ್ಣ ಪೂಜಾರಿ ಅಧ್ಯಕ್ಷ ಸೋಮವಾರಪೇಟೆ
ವಾಹನ ಚಾಲಕರು ಮತ್ತು ಮಾಲೀಕರ ಸಂಘ ಮುಂದಾಗುವ ಅನಾಹುತ ತಪ್ಪಿಸಿ ಹೊನ್ನಮ್ಮನೆ ಕೆರೆ ಎದುರು ಭಾಗ ದೊಡ್ಡಮಳ್ತೆಗೆ ಹೋಗುವ ರಸ್ತೆಯಲ್ಲಿ ತಡೆಗೋಡೆ ಇಲ್ಲದ ಕಾರಣ ತುಂಬಾ ಅಪಾಯಕಾರಿಯಾಗಿದೆ. ಕೂಡಲೇ ಕೆರೆ ಸುತ್ತ ತಡೆಗೋಡೆ ನಿರ್ಮಿಸಿ ಮುಂದಾಗಬಹುದಾದ ಅನಾಹುತವನ್ನು ತಪ್ಪಿಸಲು ಸಂಬಂಧಿಸಿದವರು ಕ್ರಮ ಕೈಗೊಳ್ಳಬೇಕು.
–ಸಿ.ಎಲ್.ವೆಂಕಟೇಶ್ ದೊಡ್ಡಮಳ್ತೆ ಹಿರಿಕರ ಗ್ರಾಮ
ಬಾಣಂತಮ್ಮ ಕೆರೆಗೆ ಬೇಲಿ ನಿರ್ಮಿಸಿ ತುಂಬಾ ಐತಿಹಾಸಿಕ ಹಿನ್ನೆಲೆ ಹೊಂದಿರುವ ಬಾಣಂತಮ್ಮ ಕೆರೆ ಏರಿ ರಸ್ತೆಯಲ್ಲಿ ತಡೆಗೋಡೆ ಇಲ್ಲದೇ ಜನರು ಓಡಾಡಲು ಭಯಪಡುತ್ತಿದ್ದಾರೆ. ಕೂಡಲೇ ಈ ಕೆರೆಗೆ ತಡೆಗೋಡೆ ಅಥವಾ ರಕ್ಷಣಾ ಬೇಲಿ ನಿರ್ಮಿಸಬೇಕು.
–ಮಧು ಬೆಂಬಳೂರು ಕೊಡ್ಲಿಪೇಟೆ
ತಡೆಗೋಡೆ ನಿರ್ಮಿಸಿ ಹೊನ್ನಮ್ಮನಕೆರೆ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಕೆರೆಯ ಸುತ್ತ ತಡೆಗೋಡೆ ಇಲ್ಲದೆ ತುಂಬಾ ಅಪಾಯಕಾರಿಯಾಗಿದೆ. ಕೂಡಲೇ ತಡೆಗೋಡೆ ನಿರ್ಮಿಸಿ ಅಪಾಯವನ್ನು ತಪ್ಪಿಸಬೇಕು.
–ಕೆ.ಪಿ.ಆದರ್ಶ ಕೂಗೆಕೊಡಿ ಗ್ರಾಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.