ಗೋಣಿಕೊಪ್ಪಲು: ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲ್ಲೂಕಿನಾದ್ಯಂತ ಮೂರು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಲಕ್ಷ್ಮಣತೀರ್ಥ ನದಿಪಾತ್ರದಲ್ಲಿ ನೀರು ಸಾಗರಂತೆ ಆಗಿದೆ.
ನದಿ ಉಗಮವಾಗುವ ಶ್ರೀಮಂಗಲ ಇರ್ಪು ಬ್ರಹ್ಮಗಿರಿ ಪರ್ವತದ ತಪ್ಪಲಿನಿಂದ ಹಿಡಿದು, ಕೊಡಗು ಜಿಲ್ಲೆಯಿಂದ ಹೊರಬೀಳುವವರೆಗಿನ ಬಾಳೆಲೆ, ನಿಟ್ಟೂರು, ಜಾಗಲೆವರಗೂ ಲಕ್ಷ್ಮಣತೀರ್ಥ ಪ್ರವಾಹದ ಕಬಂಧ ಬಾಹುಗಳನ್ನು ಚಾಚಿದೆ.
ಶ್ರೀಮಂಗಲ ಭಾಗದಲ್ಲಿ ನದಿ ಪ್ರವಾಹಕ್ಕೆ ನಾಲ್ಕೇರಿ ಶ್ರೀಮಂಗಲ ನಡುವಿನ ಸಂಪರ್ಕ ಸೇತುವೆ ಮುಳುಗಿದ್ದರೆ ಬಾಳೆಲೆ ಭಾಗದಲ್ಲಿ ಕೊಟ್ಟಗೇರಿ ಬಾಳೆಲೆ ನಡುವಿನ ಸೇತುವೆಯೂ ನೀರಿನಲ್ಲಿ ಮುಳುಗಿ ಸಂಚಾರಕ್ಕೆ ಅಡ್ಡಿಯಾಗಿದೆ. ಮತ್ತೊಂದೆಡೆ ಬಲ್ಯಮಂಡೂರು, ಹರಿಹರ, ನಡುವಿನ ಗದ್ದೆ ಬಯಲು ಸಂಪೂರ್ಣವಾಗಿ ಜಲಾವೃತಗೊಂಡಿವೆ. ಕಾನೂರು ವಡ್ಡರಮಾಡು ಭಾಗದ ಗದ್ದೆಗಳು ನಿರಿನಲ್ಲಿ ಮುಳುಗಿದ್ದರೆ, ಬಾಳೆಲೆ, ಕೊಟ್ಟಗೇರಿ, ನಿಟ್ಟೂರು, ಜಾಗಲೆ ನಡುವಿನ ಗದ್ದೆ ಬಯಲು ಸಾಕ್ಷಾತ್ ಸಮುದ್ರದಂತೆ ಕಂಡು ಬರುತ್ತಿದೆ.
ಬಾಳೆಲೆ ನಿಟ್ಟೂರು ನಡುವಿನ ಲಕ್ಷ್ಮಣತೀರ್ಥ ನದಿ ಸೇತುವೆ ದಾಟಿ ಹೋಗುವಾಗ ನೀರಿನ ಹರವು ಮತ್ತು ಗಾಳಿಯ ರಭಸ ಕಂಡು ಭಯವಾಗುತ್ತದೆ. ಆದರೆ ಈ ಭಾಗದಲ್ಲಿ ಸೇತುವೆ ಎತ್ತರ ಹೆಚ್ಚಿರುವುದರಿಂದ ರಸ್ತೆ ಸಂಪರ್ಕ ಕಡಿತವಾಗುವ ಆತಂಕ ದೂರವಾಗಿದೆ.
ಕೊಟ್ಟಗೇರಿ ಬಾಳೆಲೆ ನಡುವೆ ನೀರಿನಲ್ಲಿ ಮುಳುಗಿರುವ ರಸ್ತೆ ಪ್ರವಾಹವನ್ನು ಬಾಳೆಲೆ ಕಂದಾಯ ಅಧಿಕಾರಿಗಳು ವೀಕ್ಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.