ADVERTISEMENT

ಸೋಮವಾರಪೇಟೆ: ಸರ್ವೆಗೆ ಗ್ರಾಮಸ್ಥರ ವಿರೋಧ; ಅಧಿಕಾರಿಗಳು ವಾಪಸ್

ಸೂಕ್ತ ದಾಖಲಾತಿಯೊಂದಿಗೆ ಬಂದು ಸರ್ವೆ ನಡೆಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 7:28 IST
Last Updated 12 ಸೆಪ್ಟೆಂಬರ್ 2025, 7:28 IST
ಸೋಮವಾರಪೇಟೆ ತಾಲ್ಲೂಕಿನ ಬೆಟ್ಟದಳ್ಳಿ ಗ್ರಾಮದ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ಅರಣ್ಯ ಇಲಾಖಾಧಿಕಾರಿಯನ್ನು ಗ್ರಾಮಸ್ಥರು ಪ್ರಶ್ನಿಸಿದರು.
ಸೋಮವಾರಪೇಟೆ ತಾಲ್ಲೂಕಿನ ಬೆಟ್ಟದಳ್ಳಿ ಗ್ರಾಮದ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ಅರಣ್ಯ ಇಲಾಖಾಧಿಕಾರಿಯನ್ನು ಗ್ರಾಮಸ್ಥರು ಪ್ರಶ್ನಿಸಿದರು.   

ಪ್ರಜಾವಾಣಿ ವಾರ್ತೆ

ಸೋಮವಾರಪೇಟೆ: ತಾಲ್ಲೂಕಿನ ಬೆಟ್ಟದಳ್ಳಿ ಗ್ರಾಮದಲ್ಲಿನ 22 ಎಕರೆ ಸ್ಥಳವನ್ನು ಸರ್ವೆ ನಡೆಸಲು ಮುಂದಾದ ಅಧಿಕಾರಿಗಳಿಗೆ ಗುರುವಾರ ಗ್ರಾಮಸ್ಥರ ವಿರೋಧ ಎದುರಾಯಿತು.

ಸೂಕ್ತ ದಾಖಲಾತಿ ಇಲ್ಲದೇ ಸರ್ವೇ ನಡೆಸಲಾಗುತ್ತಿದೆ ಎಂದು ಆರೋಪಿಸಿದ ಗ್ರಾಮಸ್ಥರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕೊನೆಗೆ ಅಧಿಕಾರಿಗಳು ವಾಪಸ್ ತೆರಳಿದರು.

ADVERTISEMENT

ಅರಣ್ಯ, ಕಂದಾಯ ಮತ್ತು ಗ್ರಾಮ ಪಂಚಾಯಿತಿ ವತಿಯಿಂದ ಅಧಿಕಾರಿಗಳು ಸರ್ವೆ ಕಾರ್ಯಕ್ಕೆಂದು ಬಂದಿದ್ದರು. ಬೆಟ್ಟದಳ್ಳಿ ಸಮುದಾಯ ಭವನದಲ್ಲಿ ರೈತರೊಂದಿಗೆ ಸಭೆಯನ್ನು ನಡೆಸಿ, ಪರಿಭಾವಿತ ಅರಣ್ಯ (ಡೀಮ್ಡ್ ಫಾರೆಸ್ಟ್) ಕುರಿತು ಸರ್ವೆ ನಡೆಸುವುದಾಗಿ ಅರಣ್ಯ ಇಲಾಖೆಯ ಡಿಆರ್‌ಎಫ್ಓ ಸತೀಶ್ ಮಾಹಿತಿ ನೀಡಿದರು. ಈ ವೇಳೆ ಸ್ಥಳದ ಮೂಲ ನಕ್ಷೆ ತೋರಿಸಲು ಸ್ಥಳೀಯರು ಒತ್ತಾಯಿಸಿದರು. ಯಾವುದೇ ದಾಖಲಾತಿಯನ್ನು ತೆಗೆದುಕೊಂಡು ಅಧಿಕಾರಿಗಳು ಬಂದಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 3 ರಿಂದ 4 ಸಾವಿರ ಎಕರೆ ಅರಣ್ಯ ಇದ್ದು, ಸರಿಯಾದ ನಕ್ಷೆ ಇಲ್ಲದೆ, ಯಾವ ರೀತಿಯಲ್ಲಿ 22 ಎಕರೆ ಡೀಮ್ಡ್ ಅರಣ್ಯವನ್ನು ಗುರುತಿಸುತ್ತೀರಿ ಎಂದು ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಸಂಪತ್ ಅಧಿಕಾರಿಗಳನ್ನು ಪ್ರಶ್ನಿಸಿದರು. ಸರಿಯಾದ ದಾಖಲೆಯೊಂದಿಗೆ ಬಂದು ಸರ್ವೆ ನಡೆಸುವಂತೆ ತಿಳಿಸಿದರು.

ಕಳೆದ ಒಂದೂವರೆ ವರ್ಷದಿಂದ ಕೃಷಿ ಭೂಮಿಗಾಗಿ ಈ ಭಾಗದ ರೈತರು ಹೋರಾಟ ನಡೆಸುತ್ತಿದ್ದೇವೆ. ಆದರೆ, ಯಾವುದೇ ಪರಿಹಾರ ಕಂಡಿಲ್ಲ. ಮುಂದಿನ ದಿನಗಳಲ್ಲಿ ಸರ್ಕಾರ ರೈತ ವಿರೋಧಿ ಕ್ರಮ ತೆಗೆದುಕೊಂಡಲ್ಲಿ, ಮುಂದೆ ನಡೆಯುವ ಎಲ್ಲ ಸ್ಥಳೀಯ ಚುನಾವಣೆಯನ್ನು ಗ್ರಾಮಸ್ಥರು ಬಹಿಷ್ಕರಿಸುವುದಾಗಿ ತಿಳಿಸಿದರು.

ರೈತ ಹೋರಾಟ ಸಮಿತಿ ಅಧ್ಯಕ್ಷ ಚಕ್ರವರ್ತಿ ಸುರೇಶ್ ಮಾತನಾಡಿ, ‘ಡೀಮ್ಡ್ ಫಾರೆಸ್ಟ್, ದೇವರಕಾಡು ಸರ್ವೆ ನಡೆಸಲು ನಮ್ಮ ಅಭ್ಯಂತರ ಇಲ್ಲ. ನಮ್ಮದು ಸಿ ಮತ್ತು ಡಿ ಕೃಷಿ ಭೂಮಿಗೆ ವಿರೋಧ ಇದೆ. ಯಾವುದೇ ಸರ್ವೆ ನಡೆಸಲು ಅಧಿಕಾರಿಗಳು ಬಂದರೂ, ಸೂಕ್ತ ದಾಖಲಾತಿಯೊಂದಿಗೆ ಬಂದು ಸರ್ವೆ ನಡೆಸಿ, ಅದಕ್ಕೆ ಬೇಲಿ ಹಾಕಿಕೊಳ್ಳಲಿ. ರೈತರಿಗೆ ಯಾವುದೇ ಸಮಸ್ಯೆಯಾಗಬಾರದು’ ಎಂದರು.

ಸಭೆಯಲ್ಲಿ ಅಧ್ಯಕ್ಷ ಕೆ.ಬಿ.ಸುರೇಶ್, ಕಾನೂನು ಸಲಹೆಗಾರರಾದ ಬಿ.ಜೆ.ದೀಪಕ್ ಮುಖಂಡರಾದ ಬಗ್ಗನ ಅನಿಲ್, ಕೆ.ಎಂ.ಲೋಕೇಶ್, ಸಿ.ಎಸ್.ನಾಗರಾಜು ಹಾಗೂ ಗ್ರಾಮಸ್ಥರು, ಕಂದಾಯ ಇಲಾಖೆಯ ಕಂದಾಯ ಅಧಿಕಾರಿ ದಾಮೋದರ್. ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ರವಿ ಹಾಗೂ ಸರ್ವೆಯರ್ ನರಸಯ್ಯ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.