ADVERTISEMENT

ಕೊಡಗು: ಮಾನವ ನಿರ್ಮಿತ ದುರಂತ ಅಲ್ಲ– ಭೂಗರ್ಭ ಶಾಸ್ತ್ರಜ್ಞ ಐಚೆಟ್ಟಿರ ಮಾಚ್ಚಯ್ಯ

‘ಪ್ರಕೃತಿ ವಿಕೋಪದ ವಾಸ್ತವಗಳು: ಮುಂದಿನ ಹೆಜ್ಜೆಗಳು’ ಸಂವಾದ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2018, 12:19 IST
Last Updated 13 ಅಕ್ಟೋಬರ್ 2018, 12:19 IST
ಮಡಿಕೇರಿಯ ಬಾಲಭವನದಲ್ಲಿ ಶನಿವಾರ ಸಮಾನ ಮನಸ್ಕರ ವೇದಿಕೆಯ ಆಶ್ರಯದಲ್ಲಿ ನಡೆದ ಸಂವಾದದಲ್ಲಿ ಭೂವಿಜ್ಞಾನಿ ಐಚೆಟ್ಟಿರ ಮಾಚಯ್ಯ ಮಾತನಾಡಿದರು
ಮಡಿಕೇರಿಯ ಬಾಲಭವನದಲ್ಲಿ ಶನಿವಾರ ಸಮಾನ ಮನಸ್ಕರ ವೇದಿಕೆಯ ಆಶ್ರಯದಲ್ಲಿ ನಡೆದ ಸಂವಾದದಲ್ಲಿ ಭೂವಿಜ್ಞಾನಿ ಐಚೆಟ್ಟಿರ ಮಾಚಯ್ಯ ಮಾತನಾಡಿದರು   

ಮಡಿಕೇರಿ: ‘ಕೊಡಗು ಜಿಲ್ಲೆಯಲ್ಲಿ ಆಗಸ್ಟ್‌ನಲ್ಲಿ ಸಂಭವಿಸಿದ್ದ ಭೂಕುಸಿತವು ಮಾನವ ನಿರ್ಮಿತ ದುರಂತವಲ್ಲ. ಮಳೆ ಹೆಚ್ಚಾದ ಪರಿಣಾಮ ಪ್ರಕೃತಿ ವಿಕೋಪದಿಂದ ಈ ಅನಾಹುತ ಸಂಭವಿಸಿತ್ತು’ ಎಂದು ಭೂಗರ್ಭ ಶಾಸ್ತ್ರಜ್ಞ ಐಚೆಟ್ಟಿರ ಮಾಚ್ಚಯ್ಯ ಪ್ರತಿಪಾದಿಸಿದರು.

ನಗರದ ಬಾಲಭವನದಲ್ಲಿ ಶನಿವಾರ ಸಮಾನ ಮನಸ್ಕರ ವೇದಿಕೆ ಆಶ್ರಯದಲ್ಲಿ ನಡೆದ ‘ಪ್ರಕೃತಿ ವಿಕೋಪದ ವಾಸ್ತವ: ಮುಂದಿನ ಹೆಜ್ಜೆಗಳು’ ಸಂವಾದದಲ್ಲಿ ಅವರು ಮಾತನಾಡಿದರು.

‘ಏಕಾಏಕಿ ಮಳೆ ಸುರಿದಿದ್ದೇ ಈ ದುರಂತಕ್ಕೆ ಕಾರಣ. ಮಾನವನ ಹಸ್ತಕ್ಷೇಪ ಅತ್ಯಲ್ಪ. ಆದರೆ, ಮಾನವ ಹಸ್ತಕ್ಷೇಪದಿಂದ ಭೂಕುಸಿತವಾಗಿದೆ ಎಂದು ಸರ್ಕಾರ ನೇಮಿಸಿದ್ದ ತಜ್ಞರು ನೀಡಿರುವ ವರದಿಯಲ್ಲಿ ಹುರುಳಿಲ್ಲ. ಅವರು ಕ್ಷೇತ್ರ ಕಾರ್ಯ ನಡೆಸಿ ವರದಿ ತಯಾರಿಸಿದ್ದಾರೆಯೋ ಅಥವಾ ಸರ್ಕಾರದ ಒತ್ತಡಕ್ಕೆ ಮಣಿದು ಜನರಿಗೆ ಮಾರಕವಾಗುವ ವರದಿ ನೀಡಿದ್ದಾರೆಯೋ ತಿಳಿಯುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಬ್ರಹ್ಮಗಿರಿ ಹಾಗೂ ಪುಷ್ಪಗಿರಿ ಭೂಪ್ರದೇಶಗಳು ವಿಭಿನ್ನವಾದವು. ಬ್ರಹ್ಮಗಿರಿ ಶ್ರೇಣಿಯು ಅತ್ಯಧಿಕ ಮಳೆ ಬೀಳುವ ಪ್ರದೇಶ. ಅದಕ್ಕೆ ಈ ಶ್ರೇಣಿ ಹೊಂದಿಕೊಂಡಿದೆ. ಕಾವೇರಿ ನದಿಯೂ ತನ್ನ ಪಥ, ವ್ಯಾಪ್ತಿ ಕಂಡುಕೊಂಡಿದೆ. ಆದರೆ, ಪುಷ್ಪಗಿರಿ ಶ್ರೇಣಿಯಲ್ಲಿ ಪ್ರತಿ ವರ್ಷ ಇಷ್ಟೊಂದು ಪ್ರಮಾಣದಲ್ಲಿ ಮಳೆ ಸುರಿಯುತ್ತಿರಲಿಲ್ಲ. ಈ ಬಾರಿ ಏಕಾಏಕಿ ಮಳೆ ಸುರಿದ ಪರಿಣಾಮ ಆ ಭಾಗದ ನದಿಗಳು, ಹೊಳೆಗಳು ಪಥ ಕಂಡುಕೊಂಡವು. ಬೆಟ್ಟದಲ್ಲಿ ಅಂತರ್ಜಲ ಉಕ್ಕಿ ಭೂಕುಸಿತ ಉಂಟಾಯಿತು’ ಎಂದು ಮಾಚಯ್ಯ ವಿಶ್ಲೇಷಿಸಿದರು.

‘ಪುಷ್ಪಗಿರಿ ತಪ್ಪಲಿನಲ್ಲಿ ಸತತ 10 ವರ್ಷ ಇದೇ ರೀತಿ ಮಳೆ ಸುರಿದರೆ ಹೊಳೆ, ನದಿಗಳು ತನ್ನ ದಾರಿ ಕಂಡುಕೊಳ್ಳುವ ಸಾಧ್ಯತೆಯಿದೆ. ಆದರೆ, ಶತಮಾನಕ್ಕೆ ಒಮ್ಮೆ ಮಾತ್ರ ಇಂತಹ ಪರಿಸ್ಥಿತಿ ಎದುರಾಗಲಿದೆ’ ಎಂದು ಎಚ್ಚರಿಸಿದರು.

‘ಮುಂಗಾರು ವೃತು ಆರಂಭವಾಗಿ 50 ಲಕ್ಷ ವರ್ಷಗಳೇ ಗತಿಸಿವೆ. ಆ ನಡುವೆ ಎಷ್ಟೋ ಸಂದರ್ಭದಲ್ಲಿ ಇಂತಹ ದುರಂತಗಳು ನಡೆದಿವೆ. ಬಳಿಕ ಆ ಪ್ರದೇಶಗಳಲ್ಲಿ ಹುಲ್ಲು, ಮರ ಬೆಳೆದು ಸಹಜ ಸ್ಥಿತಿಗೆ ಮರಳಿವೆ’ ಎಂದು ಹೇಳಿದರು.

ವಿಜ್ಞಾನಿಗಳಿಗೆ ಸವಾಲು: ಪುಷ್ಪಗಿರಿ ವ್ಯಾಪ್ತಿಯಲ್ಲೇ ಹೆಚ್ಚು ಅನಾಹುತ ನಡೆದಿದೆ. ಅದಕ್ಕೆ ಭೂವಿಜ್ಞಾನಿಗಳು ನಿಖರ ಕಾರಣ ಕಂಡು ಹಿಡಿಯಬೇಕು. ಕೆಲವು ಪರಿಸರವಾದಿಗಳಿಗೆ ಅಭಿವೃದ್ಧಿಯೇ ಬೇಕಿಲ್ಲ. ಅಭಿವೃದ್ಧಿ ಆಗದಿದ್ದರೆ ಜೀವನ ಹೇಗೆ ನಡೆಯುವುದು’ ಮಾಚಯ್ಯ ಪ್ರಶ್ನಿಸಿದರು.

‘ನ್ಯೂಜಿಲೆಂಡ್‌ನಲ್ಲಿ 600 ವರ್ಷಗಳ ಹಿಂದೆ ದೊಡ್ಡ ದುರಂತ ಸಂಭವಿಸಿತ್ತು. ಅದಾದ ನಂತರ ಅಲ್ಲಿನ ಜನರು ವೈಜ್ಞಾನಿಕ ಮಾದರಿ ಬಡಾವಣೆ ನಿರ್ಮಿಸಿಕೊಂಡಿದ್ದಾರೆ’ ಎಂದು ಹೇಳಿದರು.

’ನಮ್ಮ ಆರ್ಥಿಕ ಪರಿಸ್ಥಿತಿಯೂ ಸುಧಾರಣೆ ಆಗಬೇಕು. ಅದಕ್ಕೆ ಪರಿಸರ ನಾಶದ ನೆಪವೊಡ್ಡಿ ಅಡ್ಡಿ ಪಡಿಸುವುದು ಸಲ್ಲದು’ ಎಂದು ಎಚ್ಚರಿಸಿದರು. ಮರ ಗಿಡಗಳಿಂದ ಮಾತ್ರ ಆಮ್ಲಜನಕ ಸಿಗಲಿದೆ ಎಂಬ ವಾದ ಸುಳ್ಳು. ಸಮುದ್ರ, ಭೂಮಿಯಿಂದಲೂ ಆಮ್ಲಜನಕ ಲಭಿಸಲಿದೆ ಎಂದು ಪ್ರತಿಪಾದಿಸಿದರು.

ಹಿರಿಯ ವಕೀಲ ಎ.ಕೆ. ಸುಬ್ಬಯ್ಯ ಮಾತನಾಡಿ, ‘ಭಾರಿ ಮಳೆ ಸುರಿಯದಿದ್ದರೆ ಜಿಲ್ಲೆಯಲ್ಲಿ ಭೂಕುಸಿತವೇ ನಡೆಯುತ್ತಿರಲಿಲ್ಲ. ಮಳೆಯಿಂದ ಆಗಿರುವ ಅನಾಹುತವನ್ನೂ ಮಾನವ ನಿರ್ಮಿತ ದುರಂತವೆಂದು ಬಿಂಬಿಸಲಾಗುತ್ತಿದೆ’ ಎಂದು ದೂರಿದರು.

ಸಮಾನ ಮನಸ್ಕರ ವೇದಿಕೆ ನಂದಾ ಸುಬ್ಬಯ್ಯಪ್ರಾಸ್ತಾವಿಕ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.