ADVERTISEMENT

ಸಾಹಿತಿ ಕೇಚಮಾಡ ಸುಬ್ಬಮ್ಮ ನಿಧನ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2021, 4:02 IST
Last Updated 14 ಫೆಬ್ರುವರಿ 2021, 4:02 IST
ಸುಬ್ಬಮ್ಮ
ಸುಬ್ಬಮ್ಮ   

ಗೋಣಿಕೊಪ್ಪಲು: ಪ್ರಾಥಮಿಕ ಶಾಲಾ ಶಿಕ್ಷಕಿ, ಕನ್ನಡ ಹಾಗೂ ಕೊಡವ ಭಾಷೆಯಲ್ಲಿ ಸಾಹಿತ್ಯ ಕೃಷಿ ಮಾಡಿದ ಹಿರಿಯ ಸಾಹಿತಿ ಕೇಚಮಾಡ ಸುಬ್ಬಮ್ಮ ತಿಮ್ಮಯ್ಯ (91) ಶನಿವಾರ ಮುಂಜಾನೆ ಕಾನೂರಿನ ಸ್ವಗೃಹದಲ್ಲಿ ನಿಧನರಾದರು.

ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸುಬ್ಬಮ್ಮ ಅವರನ್ನು ಒಂದು ವಾರದ ಹಿಂದೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ಕೊಡಿಸಲಾಗಿತ್ತು.

ಅವರಿಗೆ ಇಬ್ಬರು ಪುತ್ರರು ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯೆ ಕೇಚಮಾಡ ಸರಿತಾ ಪೂಣಚ್ಚ ಸೇರಿದಂತೆ ಇಬ್ಬರು ಸೊಸೆಯಂದಿರು ಇದ್ದಾರೆ. ಮೃತ ಅಂತ್ಯಕ್ರಿಯೆ ಸಂಜೆ ಕಾನೂರಿನ ಕಾಫಿ ತೋಟದಲ್ಲಿ ನೆರವೇರಿತು.

ADVERTISEMENT

ಕಾನೂರಿನ ನಿವಾಸಿ ಸುಬ್ಬಮ್ಮ ಪೊನ್ನಂಪೇಟೆಯಲ್ಲಿ 2016ರಲ್ಲಿ ನಡೆದಿದ್ದ 12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕನ್ನಡ ಮತ್ತು ಕೊಡವ ಭಾಷೆಯಲ್ಲಿ ಹಲವು ಕೃತಿಗಳನ್ನು ರಚಿಸಿದ್ದಾರೆ. ‘ಭಾವನೆಯಲ್ಲರಳಿದ ಪುಷ್ಪದೆಸಳುಗಳು’, ‘ಚುಟುಕಿನ ಸವಿ ಗುಟುಕು’ ಕನ್ನಡದ ಪ್ರಮುಖ ಕೃತಿಗಳಾಗಿದ್ದರೆ, ‘ಪಳೆಯ ತಕ್ಕ್’, ‘ಪೊನ್ತಕ್ಕ್’, ‘ಅಂಜಿ ಕೂಟ್ನ ಅಣಿಮುತ್ತ್’, ‘ಪೊಂದುಳಿ’, ‘ಶ್ರೀಹರಿ ದಶಾವತಾರ’, ‘ಮಹಾಕಾವ್ಯ’ ಹಾಗೂ ‘ಯಕ್ಷ ಪ್ರಶ್ನೆ’ ಕೊಡವ ಭಾಷೆಯ ಪ್ರಮುಖ ಕೃತಿಗಳು.

ಇವರ ಸಾಹಿತ್ಯ ಸೇವೆಗೆ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ‘ಚುಟುಕು ರತ್ನ’ ಪ್ರಶಸ್ತಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಅರಸಿ ಬಂದಿದ್ದವು.

ವಿರಾಜಪೇಟೆಯ ತೂಕ್ ಬೊಳಕ್ ಸಾಹಿತ್ಯ ಅಕಾಡೆಮಿ, ಬೆಂಗಳೂರು ಕೊಡವ ಸಮಾಜ, ಕೊಡಗು ನೌಕರರ ಸಂಘ ಅಲ್ಲದೆ ಹಲವು ಸಂಘ ಸಂಸ್ಥೆಗಳು ಗೌರವಿಸಿದ್ದವು.

ಸುಬ್ಬಮ್ಮ ಜಿಲ್ಲೆಯ ವಿವಿಧೆಡೆ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು.

ಹಿರಿಯ ಸಾಹಿತಿಯ ಅಗಲಿಕೆಗೆ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ವಿರಾಜಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜಿಲ್ಲಾ ಬರಹಗಾರರ ಮತ್ತು ಲೇಖಕರ ಬಳಗ ಶ್ರದ್ಧಾಂಜಲಿ ಸಲ್ಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.