ADVERTISEMENT

ಅಡುಗೆ ಅನಿಲ; ಬೇಕಿದೆ ಇನ್ನಷ್ಟು ಜಾಗೃತಿ

ಸುರಕ್ಷತೆ ಕುರಿತು ಇಲ್ಲ ಅರಿವು, ಉದಾಸೀನವೇ ಅಪಾಯಕ್ಕೆ ಆಹ್ವಾನ

​ಪ್ರಜಾವಾಣಿ ವಾರ್ತೆ
Published 23 ಜನವರಿ 2023, 5:42 IST
Last Updated 23 ಜನವರಿ 2023, 5:42 IST
ಅಡುಗೆ ಅನಿಲ ಸಿಲಿಂಡರ್‌ನ್ನು ವಾಹನದಿಂದ ಇಳಿಸುತ್ತಿದ್ದ ದೃಶ್ಯ
ಅಡುಗೆ ಅನಿಲ ಸಿಲಿಂಡರ್‌ನ್ನು ವಾಹನದಿಂದ ಇಳಿಸುತ್ತಿದ್ದ ದೃಶ್ಯ   

ಮಡಿಕೇರಿ: ಕೆಲ ದಿನಗಳ ಹಿಂದೆಯಷ್ಟೇ ನಗರದಲ್ಲಿ ಅಡುಗೆ ಅನಿಲ ಸಿಲಿಂಡರ್ ಸೋರಿಕೆಯಿಂದ ಬೆಂಕಿ ಅನಾಹುತವೊಂದು ಸಂಭವಿಸಿತು. ಸ್ವಲ್ಪದರಲ್ಲೇ ಭಾರಿ ದುರಂತವೊಂದು ತಪ್ಪಿತು. ಇನ್ನಷ್ಟು ದುರಂತ ತಡೆಯಲು ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯ ಇದೆ.

ಕೊಡಗು ಜಿಲ್ಲೆಯಲ್ಲಿ ಇಂಡಿಯನ್ ಆಯಿಲ್ ಕಾರ್ಪೋರೇಷನ್, ಹಿಂದೂಸ್ತಾನ ಪೆಟ್ರೋಲಿಯಂ ಕಾರ್ಪೋರೇಷನ್ ಹಾಗೂ ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್‌ ಲಿಮಿಟೆಡ್‌ ಕಂಪನಿಗಳು ಮಾತ್ರವೇ ಅಡುಗೆ ಅನಿಲ ಪೂರೈಸುತ್ತಿವೆ. ಇವುಗಳು ಒಟ್ಟು 16 ಏಜೆನ್ಸಿಗಳ ಮೂಲಕ ಗ್ರಾಹಕರ ಮನೆ ಮನೆಗೆ ಸಿಲಿಂಡರ್‌ಗಳನ್ನು ಒದಗಿಸುತ್ತಿವೆ. ಸಿಲಿಂಡರ್‌ನಲ್ಲಿ ದೋಷಕ್ಕಿಂತ ಹೆಚ್ಚಾಗಿ ಸುರಕ್ಷತೆ ಕುರಿತು ಜನರಿಗೆ ತಿಳಿವಳಿಕೆ ಇಲ್ಲದಿರುವುದೇ ಕೊಡಗು ಜಿಲ್ಲೆಯಲ್ಲಿ ಪ್ರಧಾನವಾಗಿ ಕಾಣುತ್ತಿದೆ.

ಇಲ್ಲಿ ಹಾಡಿ ನಿವಾಸಿಗಳು, ಕಾಡಂಚಿನ ವಾಸಿಗಳು, ಲೈನ್‌ಮನೆಗಳ ನಿವಾಸಿಗಳಿಗೆ ಸುರಕ್ಷತೆ ಕುರಿತು ತಿಳಿವಳಿಕೆಯ ಕೊರತೆ ಇದೆ. ಈ ಕುರಿತು ಏಜೆನ್ಸಿಗಳು ಅಥವಾ ಸಿಲಿಂಡರ್‌ಗಳ ಪೂರೈಕೆದಾರರು ಪರಿಣಾಮಕಾರಿ ಅರಿವು ಮೂಡಿಸಬೇಕಿದೆ ಎಂದು ಸಾರ್ವಜನಿಕರು ಹೇಳುತ್ತಾರೆ.

ADVERTISEMENT

ಅಡುಗೆ ಅನಿಲ ಪೂರೈಕೆ ಕುರಿತು ಗಮನಹರಿಸಬೇಕಾದ ಆಹಾರ ಮತ್ತು ನಾಗರಿಕ ಸರ‌ಬರಾಜು ಇಲಾಖೆಯೇ ಕೊರತೆಗಳಿಂದ ಬಸವಳಿದಿದೆ. ಇಲ್ಲಿನ ಜಿಲ್ಲಾ ಪ್ರಧಾನ ಕಚೇರಿಗೆ ಮಂಜೂರಾಗಿರುವ ಹುದ್ದೆಗಳ ಸಂಖ್ಯೆ 17. ಆದರೆ, ಸದ್ಯ ಕಾರ್ಯ ನಿರ್ವಹಿಸುತ್ತಿರುವವರು ಕೇವಲ ಮೂವರು ಮಾತ್ರ. ಎಲ್ಲ ತಾಲ್ಲೂಕುಗಳಿಗೂ 4 ಮಂದಿ ಬೇಕಿದೆ. ಆದರೆ, ಈಗ ಕಂದಾಯ ಇಲಾಖೆಯಿಂದ ಬಂದಿರುವ ತಲಾ ಒಬ್ಬರು ಬಿಟ್ಟರೆ ಉಳಿದ ಹುದ್ದೆಗಳು ಖಾಲಿ ಇವೆ. ಇಂತಹ ಪರಿಸ್ಥಿತಿಯಲ್ಲಿ ಸುರಕ್ಷತೆ ಕುರಿತು ಗಮನ ಹರಿಸುವುದಾದರೂ ಹೇಗೆ ಎಂಬುದು ಸಿಬ್ಬಂದಿಯ ಪ್ರಶ್ನೆ.

ಸಿಲಿಂಡರ್ ಸ್ಫೋಟ ಪ್ರಕರಣಕ್ಕೆ ಅನಿಲ ಸೋರಿಕೆಯೇ ಮುಖ್ಯ ಕಾರಣ. ಇದರ ಬಗ್ಗೆ ಎಚ್ಚರ ವಹಿಸಿದರೆ ಬೆಂಕಿ ಹೊತ್ತಿಕೊಳ್ಳುವುದು, ಸ್ಫೋಟ ‍ಪ್ರಕರಣಗಳು ಸಂಭವಿಸುವುದಿಲ್ಲ ಎಂಬುದು ಅಗ್ನಿಶಾಮಕ ದಳದ ಅಧಿಕಾರಿಗಳ ಮಾತು. ಸೋರಿಕೆ ಆಗದಂತೆ ಗ್ರಾಹಕರು ಮನೆಯಲ್ಲಿ ವಹಿಸಬೇಕಾದ ಎಚ್ಚರಿಕೆ ಕುರಿತು ಅರಿವು ಮೂಡಿಸುವ ಅಗತ್ಯ ಇದೆ.

ಸುಂಟಿಕೊಪ್ಪ ಭಾಗದಲ್ಲಿ ವಿವಿಧ ಕಾಲೊನಿಗಳು, ಗ್ರಾಮಗಳು ಹಾಗೂ ಶಾಲೆಗಳಲ್ಲೂ ಅಡುಗೆ ಅನಿಲ ಸಿಲಿಂಡರ್‌ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಗ್ಯಾಸ್ ಏಜೆನ್ಸಿಯವರು ಹೇಳುತ್ತಾರೆ. ಇನ್ನಿತರ ಭಾಗಗಳಲ್ಲೂ ವರ್ಷಕ್ಕೆ ಒಮ್ಮೆಯಾದರೂ ಅಲ್ಲಲ್ಲಿ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ. ಆದರೆ, ಇವುಗಳ ಸಂಖ್ಯೆ ಇನ್ನಷ್ಟು ಹೆಚ್ಚಬೇಕಿದೆ.

ಸಾರ್ವಜನಿಕರೂ ಉದಾಸೀನ ಧೋರಣೆ ತಳೆಯದೇ ಅಡುಗೆ ಅನಿಲ ಸಿಲಿಂಡರ್‌ ಸುರಕ್ಷತೆಯ ನಿಯಮಗಳನ್ನು ಪಾಲಿಸಬೇಕು. ಕಾಲಕಾಲಕ್ಕೆ ಅದರ ಪೈಪು, ರೆಗ್ಯೂಲೇಟರ್‌ಗಳನ್ನು ಪರಿಶೀಲಿಸಿ, ನಿಯಮಾವಳಿಯಂತೆ ಬದಲಿಸುತ್ತಿರಬೇಕು. ಜತೆಗೆ, ಅಡುಗೆ ಮುಗಿದ ನಂತರ ರೆಗ್ಯುಲೇಟರ್ ಆಫ್ ಮಾಡಬೇಕು. ಬೀಗ ಹಾಕಿ ಮನೆಯಿಂದ ಹೊರಗೆ ತೆರಳುವಾಗ ಕಡ್ಡಾಯವಾಗಿ ರೆಗ್ಯೂಲೇಟರ್ ಆಫ್ ಆಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಮಧ್ಯರಾತ್ರಿ ಅಥವಾ ಬೆಳಿಗ್ಗೆ ಎದ್ದಾಗ ಅಡುಗೆ ಅನಿಲದ ವಾಸನೆ ಒಂದಿಷ್ಟು ಬಂದರೂ ಸಾಕು ಲೈಟಿನ ಸ್ವಿಚ್‌ಗಳನ್ನು ಆನ್ ಮಾಡದೇ
ಹೊರಗೆ ಬಂದು ಅಗ್ನಿಶಾಮಕ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಉದಾಸೀನವೇ ಅಪಾಯಕ್ಕೆ ಆಹ್ವಾನವಾಗಿದ್ದು, ಸಾರ್ವಜನಿಕರು ಈ ವಿಚಾರದಲ್ಲಿ ಕಟ್ಟೆಚ್ಚರ ವಹಿಸುವುದು ಅಗತ್ಯ.

ಅಡುಗೆ ಅನಿಲ ಮನೆಗೆ ತಲುಪಿಸಲು ಹೆಚ್ಚುವರಿ ಶುಲ್ಕ ವಸೂಲಿ

ಕುಶಾಲನಗರ: ಉಜ್ವಲ ಯೋಜನೆಯಡಿ ಗ್ರಾಮೀಣ ಪ್ರದೇಶದ ಎಲ್ಲಾ ಮನೆಗೂ ಅಡುಗೆ ಅನಿಲ ಸೌಲಭ್ಯ ಕಲ್ಪಿಸಲಾಗಿದೆ. ಇದೀಗ ‌ಹಳ್ಳಿಗಳಲ್ಲೂ ಅಡುಗೆ ಅನಿಲ ಬಳಕೆ ಸಾಮಾನ್ಯವಾಗಿದೆ. ಆದರೆ, ಅಡುಗೆ ಅನಿಲ ಬಳಕೆ ಹಾಗೂ ಸುರಕ್ಷತೆ ಬಗ್ಗೆ ಯಾವುದೇ ಜಾಗೃತಿ ಕಾರ್ಯಕ್ರಮಗಳು
ಆಗುತ್ತಿಲ್ಲ.

ಪಟ್ಟಣದಲ್ಲಿ ಗ್ಯಾಸ್ ಏಜೆನ್ಸಿಯಿಂದ ಆಗಾಗ್ಗೆ ಕಾರ್ಯಕ್ರಮ ಏರ್ಪಡಿಸಿ ಸಿಲಿಂಡರ್
ಬಳಕೆ ಬಗ್ಗೆ ಸಾರ್ವಜನಿಕರಲ್ಲಿ
ಅರಿವು ಹಾಗೂ ಜಾಗೃತಿ ಮೂಡಿಸಲಾಗುತ್ತಿದೆ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಜಾಗೃತಿ ಕಾರ್ಯಕ್ರಮ ನಡೆಯುತ್ತಿಲ್ಲ. ಗ್ರಾಮೀಣ ಪ್ರದೇಶಗಳ ಜನರಿಗೆ
ಮನೆ ಬಾಗಿಲಿಗೆ ಸಿಲಿಂಡರ್ ತಲುಪಿಸಲಾಗುತ್ತಿದೆ. ಆದರೆ, ಅದಕ್ಕೆ ಹೆಚ್ಚುವರಿ ಶುಲ್ಕವನ್ನೂ ಪಡೆಯಲಾಗುತ್ತಿದೆ. ಡೆಲಿವರಿ ಶುಲ್ಕ ಪಡೆಯುವಂತಿಲ್ಲ ಎಂದು ಸರ್ಕಾರ ನಿಯಮವಿದ್ದರೂ ಜನರಿಗೆ ಮಾತ್ರ ಹೊರೆ ತಪ್ಪುತ್ತಿಲ್ಲ.

ಈಗ ಆ್ಯಪ್‌ಗಳ ಮೂಲಕವೂ ಸಿಲಿಂಡರ್‌ ಬುಕ್‌ ಮಾಡಬಹುದು. ಆನ್‌ಲೈನ್‌ನಲ್ಲಿಯೇ ಹಣ ಭರಿಸಿದರೆ ಸಾಕು. ಆದರೆ,
ಕೆಲವರು ಮನೆ ಮನೆಗೆ ತಲುಪಿಸುವ ಲೆಕ್ಕದಲ್ಲಿ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ದೂರುಗಳು
ಸಾಕಷ್ಟಿವೆ.

ಸಿಲಿಂಡರ್ ಬೆಲೆ ಎಷ್ಟಿದೆಯೋ ಅಷ್ಟು ಮಾತ್ರ ನೀಡಿ. ಹಣ ನೀಡಿ ಸಿಲಿಂಡರ್ ಜೊತೆಗೆ ರಸೀದಿ ಪಡೆಯಬೇಕು. ರಸೀದಿಯಲ್ಲಿ ನಮೂದಿಸಲಾದ ಮೊತ್ತವನ್ನು ಮಾತ್ರ ಗ್ರಾಹಕರು ಪಾವತಿಸಬೇಕು. ಮನೆಗೆ ತಲುಪಿಸಿದ ಕಾರಣ ಏಜೆನ್ಸಿಯವರು ಹೆಚ್ಚುವರಿ ಹಣ ಪಡೆಯುವಂತಿಲ್ಲ ಎಂದು ಅಧಿಕಾರಿಗಳು
ತಿಳಿಸಿದ್ದಾರೆ.

ಜನ ಏನು ಹೇಳುತ್ತಾರೆ?

ಸುರಕ್ಷತೆ ಕುರಿತು ಮಾಹಿತಿ ಇಲ್ಲ

ಗ್ಯಾಸ್ ವಿತರಕರು ಬಳಕೆದಾರರಿಗೆ ಯಾವುದೇ ಸುರಕ್ಷತೆ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಗ್ರಾಮೀಣ ಭಾಗಗಳಲ್ಲಿ ಮುಖ್ಯ ರಸ್ತೆಯಲ್ಲಿಯೇ ಸಿಲಿಂಡರ್ ಇಳಿಸಿ ಹೋಗುತ್ತಾರೆ. ತೂಕ ಮಾಡುತ್ತಿಲ್ಲ. ಇದರೊಂದಿಗೆ 5 ಕಿಮೀ ದೂರದ ತನಕ ಉಚಿತವಾಗಿ ವಿತರಿಸಬೇಕು. ಆದರೆ, ಶುಲ್ಕ ಪಡೆಯುತ್ತಿದ್ದಾರೆ.

ಎಚ್.ಆರ್.ಸುರೇಶ್, ಗೌಡಳ್ಳಿ.

ಗ್ರಾಮಾಂತರ ಪ್ರದೇಶಗಳಲ್ಲಿ ಮಾಹಿತಿ ನೀಡಿ

ಅಡುಗೆ ಅನಿಲ ವಿತರಕರು ಗ್ರಾಮಾಂತರ ಪ್ರದೇಶಗಳಿಗೆ ಕೇವಲ ಸರಬರಾಜಷ್ಟೇ ಮಾಡುತ್ತಾರೆ. ಯಾವುದೇ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡುತ್ತಿಲ್ಲ. ನಾನು ಅಡುಗೆ ಅನಿಲ ಸಿಲಿಂಡರ್‌ ಪರೀಕ್ಷಿಸಿ ತೆಗೆದುಕೊಳ್ಳುತ್ತೇನೆ. ಸೋರಿಕೆ ಇದ್ದರೆ ಗಮನಿಸುತ್ತೇನೆ. ಮನೆಯಲ್ಲಿ ಸುರಕ್ಷತಾ ಕ್ರಮ ಅಳವಡಿಸಿಕೊಂಡಿದ್ದೇನೆ. ಅಡುಗೆ ಅನಿಲ ಸಿಲಿಂಡರ್ ಸಂಪೂರ್ಣ ಗಾಳಿ ಆಡುವ ಸ್ಥಳದಲ್ಲಿ ಇರಿಸಿದ್ದೇನೆ.

ನಂದಿನಿ, ಆಶಾ ಕಾರ್ಯಕರ್ತೆ, ಬಲ್ಲಮಾವಟಿ

ಸಿಲಿಂಡರ್ ಪೈಪ್‌ ಬದಲಿಸುತ್ತಿಲ್ಲ

ಹಿಂದೆ 6 ತಿಂಗಳಿಗಾದರು ಸಿಲಿಂಡರ್ ಪೈಪ್ ಬದಲಾಯಿಸಲು ಹೇಳುತ್ತಿದ್ದರು. ಈಗ ಅದೂ ಇಲ್ಲ. ಕಟ್ಟಿಗೆ ಒಲೆ ಉರಿಸುವ ರೀತಿಯಲ್ಲಿ ಗ್ಯಾಸ್ ಒಲೆ ಬಳಸಲಾಗುತ್ತಿದೆ. ಇದರ ಬಗ್ಗೆ ಜಾಗೃತಿ ಬೇಕಾಗಿದೆ.

ನಾರಾಯಣಸ್ವಾಮಿ ನಾಯ್ಡು, ಗೋಣಿಕೊಪ್ಪಲು.

ಮಾಹಿತಿ ನೀಡುತ್ತಿದ್ದೇವೆ

ಸುಂಟಿಕೊಪ್ಪದ ಜನತಾ ಕಾಲೊನಿ, ಉಪ್ಪುತೋಡು ಹಾಗು ಎಲ್ಲಾ ಪಂಚಾಯಿತಿಗಳಲ್ಲೂ ತಿಂಗಳಿಗೊಮ್ಮೆ ಸುರಕ್ಷತೆ ಕುರಿತು ಮಾಹಿತಿ ನೀಡುತಿದ್ದೇವೆ. ಶಾಲೆಗಳಲ್ಲಿ ಇಂಧನ ಉಳಿತಾಯ ಸಪ್ತಾಹ ಆಚರಿಸುವ ಮೂಲಕ ಮಕ್ಕಳಿಗೂ ಮಾಹಿತಿ ನೀಡುತಿದ್ದೇವೆ.

ರಾಕೇಶ್, ವ್ಯವಸ್ಥಾಪಕ, ಇಂಡೇನ್ ಗ್ಯಾಸ್ ಏಜೆನ್ಸಿ, ಸುಂಟಿಕೊಪ್ಪ

4 ಸಾವಿರ ಸಂಪರ್ಕಕ್ಕೆ ಒಬ್ಬ ಮೆಕಾನಿಕ್‌

2 ವರ್ಷಕ್ಕೊಮ್ಮೆ ಪ್ರತಿ ಮನೆಗೆ ಭೇಟಿ ನೀಡಿ ತಪಾಸಣೆ ಮಾಡುತ್ತೇವೆ. ಈಗ ಮುಂದಿನ 3 ತಿಂಗಳು ಕಳೆದ ನಂತರ ಮನೆ ಮನೆಗೆ ಭೇಟಿ ನೀಡಿ ಪರಿಶೀಲಿಸುತ್ತೇವೆ. 4 ಸಾವಿರ ಸಂಪರ್ಕಕ್ಕೆ ಒಬ್ಬ ಮೆಕಾನಿಕ್‌ ಇದ್ದಾರೆ.

ಕೆ.ಎಸ್.ರಮೇಶ್, ದೇವಿ ಗ್ಯಾಸ್‌ ಏಜೆನ್ಸಿಯ ವ್ಯವಸ್ಥಾಪಕರು.

ನಿರ್ವಹಣೆ; ಕೆ.ಎಸ್.ಗಿರೀಶ

ಪೂರಕ ಮಾಹಿತಿ– ಡಿ.ಪಿ.ಲೋಕೇಶ, ರಘು ಹೆಬ್ಬಾಲೆ, ಎಂ.ಎಸ್.ಸುನಿಲ್, ಎಂ.ಎನ್.ಹೇಮಂತ, ಜೆ.ಸೋಮಣ್ಣ, ರೆಜಿತ್‌ಕುಮಾರ್ ಗುಹ್ಯ, ಸಿ.ಎಸ್.ಸುರೇಶ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.