ADVERTISEMENT

ಮಡಿಕೇರಿ: ‘ವಿದ್ಯೆ ಕಲಿಸಿದ ಶಾಲೆ, ಕಾಲೇಜು ಉಳಿಸಿ’

ಕಾರ್ಯಪ್ಪ ಕಾಲೇಜು ಹಳೇ ವಿದ್ಯಾರ್ಥಿ ಸಂಘದ ಮಹಾಸಭೆ ಮತ್ತು ಸಂತೋಷ ಕೂಟ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 4:21 IST
Last Updated 17 ನವೆಂಬರ್ 2025, 4:21 IST
ಕಾರ್ಯಕ್ರಮವನ್ನು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪಿ.ಎಲ್.ಧರ್ಮ ಉದ್ಘಾಟಿಸಿದರು
ಕಾರ್ಯಕ್ರಮವನ್ನು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪಿ.ಎಲ್.ಧರ್ಮ ಉದ್ಘಾಟಿಸಿದರು   

ಮಡಿಕೇರಿ: ಎಲ್ಲರೂ ತಾವು ಕಲಿತ ಶಾಲಾ, ಕಾಲೇಜುಗಳನ್ನು ಉಳಿಸಿ, ಬೆಳೆಸಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಲ್.ಧರ್ಮ ಹಾಗೂ ಕೊಡಗು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಅಶೋಕ ಸಂಗಪ್ಪ ಆಲೂರ ಕರೆ ನೀಡಿದರು.

ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಹಳೇ ವಿದ್ಯಾರ್ಥಿ ಸಂಘದ ವತಿಯಿಂದ ಕಾಲೇಜಿನಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆ ಹಾಗೂ ಸಂತೋಷ ಕೂಟದಲ್ಲಿ ಇಬ್ಬರೂ ಕುಲಪತಿಗಳು ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಲ್.ಧರ್ಮ, ‘ಪ್ರತಿಯೊಬ್ಬರೂ ತಾವು ಕಲಿತ ಶಿಕ್ಷಣ ಸಂಸ್ಥೆ ಮತ್ತು ಶಿಕ್ಷಕರನ್ನು ಪ್ರೀತಿಸಬೇಕು, ಗೌರವಿಸಬೇಕು. ವಿದ್ಯೆ ಕಲಿಸಿದ ಶಾಲೆ, ಕಾಲೇಜುಗಳನ್ನು ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ’ ಎಂದು ತಿಳಿಸಿದರು.

ADVERTISEMENT

ಹಹ‘ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಬಹಳ ಹಿಂದಿನಿಂದಲೂ ಅತ್ಯಂತ ಹೆಸರು ಮಾಡಿದ ವಿದ್ಯಾಸಂಸ್ಥೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ದೇಶಕ್ಕೆ ಕೊಡುಗೆ ನೀಡಿದ್ದಾರೆ. ಕಾಲೇಜು ಇಂದು ನೋವಿನಲ್ಲಿರುವಾಗ ಕಾಲೇಜಿನ ಅಭಿವೃದ್ಧಿಗೆ ಹಳೇ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕೈಜೋಡಿಸಬೇಕು, ಇದು ನಮ್ಮ ಅಸ್ತಿತ್ವದ ಪ್ರಶ್ನೆ’ ಎಂದರು. 

ಜಿಲ್ಲೆಯಲ್ಲಿ ಕೊಡಗು ವಿಶ್ವವಿದ್ಯಾಲಯದ ಬೆಳವಣಿಗೆಗೆ ಪ್ರತಿಯೊಬ್ಬರೂ ಪ್ರೋತ್ಸಾಹ ನೀಡಬೇಕು ಮತ್ತು ವಿದ್ಯಾರ್ಥಿಗಳು ಹೊರ ಜಿಲ್ಲೆಗಳಿಗೆ ತೆರಳಿ ಶಿಕ್ಷಣ ಪಡೆಯುವ ಬದಲು ಕೊಡಗಿನಲ್ಲಿಯೇ ವ್ಯಾಸಂಗ ಮಾಡಬೇಕು. ಒಂದು ಶಿಕ್ಷಣ ಸಂಸ್ಥೆಯನ್ನು ಹೇಗೆ ಉಳಿಸಿಕೊಳ್ಳಬಹುದು ಎನ್ನುವ ವಿಚಾರವನ್ನು ಹಿರಿಯರೊಂದಿಗೆ ಚರ್ಚಿಸಬೇಕು. ಆ ನಿಟ್ಟಿನಲ್ಲಿ ಕಾಲೇಜಿನ ಹಳೇ ವಿದ್ಯಾರ್ಥಿ ಸಂಘದ ಕಾರ್ಯವೈಖರಿ ಶ್ಲಾಘನೀಯ ಎಂದು ಹೇಳಿದರು.

ಕಾಲೇಜಿನ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ‘ಹಳೇ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಪಡೆದುಕೊಂಡರೆ ಕಾಲೇಜಿನ ಪ್ರಗತಿಗೆ ಸಹಕಾರಿಯಾಗಲಿದೆ‘ ಎಂದರು.

ಬಡ್ತಿ ಹೊಂದಿದ ಪ್ರಾಂಶುಪಾಲರನ್ನು ಗೌರವಿಸಲಾಯಿತು. ಉತ್ತಮ ಎನ್‌ಸಿಸಿ ಕೆಡೆಟ್ ಸ್ಪರ್ಧೆ ಹಾಗೂ ವಿವಿಧ ಸ್ಪರ್ಧಾ ಚಟುವಟಿಕೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮಕ್ಕೂ ಮೊದಲು ಸಂಘದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ಹಳೇ ವಿದ್ಯಾರ್ಥಿ ಸಂಘದ ಮಹಾಸಭೆ ನಡೆಯಿತು. ಸಭೆಯಲ್ಲಿ ಸಂಘದ ಸದಸ್ಯತ್ವ ಹೆಚ್ಚಿಸುವುದು ಮತ್ತು ಹಳೇ ವಿದ್ಯಾರ್ಥಿ ಸಂಘಕ್ಕೆ ಸ್ವಂತ ಕಟ್ಟಡ ಹೊಂದುವ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಯಿತು.

ಸಂಘದ ಕಾರ್ಯದರ್ಶಿ ಚಂದನ್ ನಂದರಬೆಟ್ಟು, ಉಪಾಧ್ಯಕ್ಷ ಬೊಟ್ಟಂಗಡ ಗಣಪತಿ, ನಿರ್ದೇಶಕರಾದ ಲೋಹಿತ್ ಮಾಗಲು, ದಿಶಾಂತ್ ಗಾಳಿಬೀಡು, ಕೇಲೆಟ್ಟಿರ ದೇವಯ್ಯ, ಆದರ್ಶ್ ಅದ್ಕಲೆಗಾರ್, ಚೀಯಕಪೂವಂಡ ಸಚಿನ್ ಪೂವಯ್ಯ, ಚರಣ್ ಬಲ್ಯದ, ಬಿ.ಜಿ.ಹರ್ಷಿತ್, ಕರವಂಡ ಸೀಮಾ ಗಣಪತಿ, ಖುರ್ಷಿದ್ ಬಾನು ಕೆ.ಎಚ್, ಎಸ್.ಆರ್.ವತ್ಸಲ, ಐಚಂಡಗ ರಶ್ಮಿ ಮೇದಪ್ಪ, ಆಪಾಡಂಡ ಜಾನ್ಸಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಳೆ ವಿದ್ಯಾರ್ಥಿ ಸಂಘದ ಸದಸ್ಯರು

ಇತಿಮಿತಿಗಳ ನಡುವೆ ಯೋಜನೆ ಕೊಡಗು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಅಶೋಕ ಸಂಗಪ್ಪ ಆಲೂರ ಮಾತನಾಡಿ ‘ಹಳೇ ವಿದ್ಯಾರ್ಥಿ ಸಂಘದ ಈ ಸಭೆ ಕೇವಲ ನೆನಪುಗಳ ವಿನಿಮಯದ ಕಾರ್ಯಕ್ರಮವಾಗದೆ ತಾವು ಕಲಿತ ಮಾತೃ ಸಂಸ್ಥೆಗೆ ಕೊಡುಗೆ ನೀಡುವ ಉತ್ತಮ ವೇದಿಕೆಯಾಗಿದೆ’ ಎಂದು ಹೇಳಿದರು. ಕೊಡಗು ವಿಶ್ವವಿದ್ಯಾಲಯ ಕಾಲೇಜಿನ ಅಭಿವೃದ್ಧಿಗೆ ಇತಿಮಿತಿಗಳ ನಡುವೆ ವಿವಿಧ ಯೋಜನೆಗಳನ್ನು ಕೈಗೊಂಡಿದ್ದು ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ತರಲಾಗುವುದು ಎಂದರು. ಇದೇ ವೇಳೆ ಅವರು ಹಳೆ ವಿದ್ಯಾರ್ಥಿ ಸಂಘದ ಚಟುವಟಿಕೆಗಳನ್ನು ಶ್ಲಾಘಿಸಿದರು.

ಬೆನ್ನುಲುಬಾಗಿ ನಿಂತ ಹಳೆ ವಿದ್ಯಾರ್ಥಿ ಸಂಘ ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ.ರಾಘವ ಬಿ. ಮಾತನಾಡಿ ಎರಡು ವಿಶ್ವವಿದ್ಯಾಲಯದ ನಡುವೆ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಕಾರ್ಯನಿರ್ವಹಿಸುತ್ತಿದ್ದು ಸರ್ಕಾರ ಅನುದಾನ ಕೊರತೆ ಇದ್ದರೂ ಕಾಲೇಜಿನ ಹಳೇ ವಿದ್ಯಾರ್ಥಿ ಸಂಘ ಕಾಲೇಜಿನ ಎಲ್ಲಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಬೆನ್ನೆಲುಬಾಗಿ ನಿಂತಿದೆ. ಇದರಿಂದ ಕಾಲೇಜಿಗೆ ನೈತಿಕ ಸ್ಥೈರ್ಯ ಸಿಕ್ಕಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.