ಮಡಿಕೇರಿ: ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಅಮೃತ್–2 ಯೋಜನೆ ಕಾಮಗಾರಿಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡದೇ ಇರುವುದರಿಂದ ಸಮಸ್ಯೆಯಾಗಿದೆ ಎಂಬ ಆಕ್ರೋಶ ಕೇವಲ ಜನರಲ್ಲಿ ಮಾತ್ರವಲ್ಲ ನಗರಸಭೆ ಸದಸ್ಯರಲ್ಲೂ ಇದೆ. ಈಚೆಗೆ ನಡೆದ ಕೌನ್ಸಿಲ್ ಸಭೆಯಲ್ಲಿ ಪಕ್ಷಾತೀತವಾದ ಆಕ್ರೋಶ ವ್ಯಕ್ತವಾಗಿದೆ. ಕೆಲವು ಸದಸ್ಯರು, ಆಟೊ ಚಾಲಕರು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ಕೇಂದ್ರ ಸರ್ಕಾರದ ಈ ಯೋಜನೆಯು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ನಗರದಲ್ಲಿ ಅನುಷ್ಠಾನಗೊಳ್ಳುತ್ತಿದೆ. ನಗರದಲ್ಲಿರುವ ಎಲ್ಲ 7,917 ಮನೆಗಳಿಗೂ ಕುಡಿಯುವ ನೀರಿನ ಸಂಪರ್ಕ ನೀಡುವ ಗುರಿ ಹೊಂದಲಾಗಿದೆ. ಇದಕ್ಕಾಗಿ 125 ಕಿ.ಮೀ ಪೈಪ್‌ಲೈನ್ ಹಾಕಬೇಕಿದ್ದು, ಸದ್ಯ 40 ಕಿ.ಮೀ ಪೈಪ್ ಹಾಕಲಾಗಿದೆ.
ಈ ಪೈಪ್‌ಲೈನ್ ಅಳವಡಿಕೆಗಾಗಿ ಅಗೆದ ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚಿಲ್ಲದೇ ಇರುವುದರಿಂದ ಸಮಸ್ಯೆಗೆ ಮೂಲ ಎನಿಸಿದೆ. ಇದರಿಂದ ಕಾರುಗಳು, ಬೈಕುಗಳು ಮಣ್ಣಿನಲ್ಲಿ ಹೂತು ಹೋಗುತ್ತಿವೆ. ಜನರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ನಿಯಮದ ಪ್ರಕಾರ ಗುಂಡಿಯನ್ನು ಅಗೆದ ಮೇಲೆ ಅದರ ಮೇಲೆ ಡಾಂಬರು ಹಾಕಬೇಕು. ಆದರೆ, ಡಾಂಬರು ಹಾಕುವುದು ಇರಲಿ ಕನಿಷ್ಠ ಪಕ್ಷ ಗುಂಡಿಯನ್ನು ಸಮರ್ಪಕವಾಗಿ ಮುಚ್ಚಿಲ್ಲ. ಮಳೆ ನಿರಂತರವಾಗಿ ಬೀಳುತ್ತಲೇ ಇರುವುದರಿಂದ ಗುಂಡಿಗಳು ಹಳ್ಳ ಬೀಳುತ್ತಿವೆ. ಮಣ್ಣು ಇನ್ನಷ್ಟು ಕೆಳಕ್ಕೆ ಕುಸಿಯುತ್ತಿದೆ. ಇದರಿಂದ ವಾಹನಗಳ ಚಕ್ರಗಳು ಅವುಗಳಲ್ಲಿ ಸಿಲುಕುತ್ತಿವೆ.
ಟಿ.ಜಾನ್ ಬಡಾವಣೆ ಸೇರಿದಂತೆ ನಗರದ ಕೆಲವೆಡೆ ಹೂತು ಹೋಗುವ ಕಡೆಯಲ್ಲಿ ಸ್ಥಳೀಯರು ಗಿಡಗಂಟಿಗಳನ್ನು ನೆಟ್ಟು, ಚಾಲಕರಿಗೆ ನೆರವಾಗಿದ್ದಾರೆ. ಇಷ್ಟಾದರೂ, ಅಧಿಕಾರಿಗಳು ಮಾತ್ರ ತಮಗೂ ಇದಕ್ಕೂ ಸಂಬಂಧವೇ ಇಲ್ಲವೇನೋ ಎಂಬಂತೆ ಇದ್ದಾರೆ ಎಂದು ಜನರು ದೂರುತ್ತಾರೆ.
ಹೊಸ ರಸ್ತೆಗಳನ್ನೂ ಅಗೆದು ಹಾಕಲಾಗಿದೆ: ಹಲವೆಡೆ ನಿರ್ಮಿಸಿದ ಹೊಸ ರಸ್ತೆಗಳನ್ನೂ ಬಿಡದೇ ಅಗೆದು ಹಾಕಲಾಗಿದೆ. ಇದು ಆಯಾ ವಾರ್ಡಿನ ಸದಸ್ಯರಿಗೆ ಕೋಪ ತರಿಸಿದೆ. ಕನಿಷ್ಠ ಪಕ್ಷ ಅಗೆದ ಮೇಲೆ ಮೊದಲಿನಂತೆಯೇ ರಸ್ತೆ ಮಾಡಬೇಕಿತ್ತು. ಅದನ್ನೂ ಮಾಡದೇ ಇರುವುದರಿಂದ ಅವರ ಕೋಪ ಇಮ್ಮಡಿಗೊಂಡಿದೆ.
ಮಳೆಗೂ ಮುನ್ನವೇ ಮುಗಿಸಬೇಕಿತ್ತು: ಮಡಿಕೇರಿಯಲ್ಲಿ ಯಾವ ರೀತಿ ಯಾವ ಕಾಲದಲ್ಲಿ ಮಳೆ ಬರುತ್ತದೆ ಎಂಬುದು ಅಧಿಕಾರಿಗಳಿಗೆ ತಿಳಿದ ವಿಚಾರ. ಮತ್ತೇಕೆ ಮಳೆಗಾಲಕ್ಕೂ ಮುನ್ನವೇ ಮುಗಿಸುವ ಕಾಲಮಿತಿ ವಿಧಿಸಲಿಲ್ಲ ಎಂಬುದು ಸಾರ್ವಜನಿಕರ ಪ‍್ರಶ್ನೆ. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರನ್ನು ಕೆಲಸಕ್ಕೆ ತೊಡಗಿಸಿದರೆ ಖಂಡಿತವಾಗಿಯೂ ಮುಗಿಸುವ ಸಾಧ್ಯತೆ ಇತ್ತು. ಆದರೆ, ಈ ಕುರಿತು ಅಧಿಕಾರಿಗಳು ಚಿಂತಿಸಲೇ ಇಲ್ಲ.
ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚದೇ ಇರುವುದರಿಂದ ಹಾಗೂ ಗುಂಡಿಗಳಿಗೆ ಜಲ್ಲಿ ಅಥವಾ ವೆಟ್‌ಮಿಕ್ಸ್ ಹಾಕದೇ ಇರುವುದು ಸಮಸ್ಯೆಗೆ ಕಾರಣ ಎನಿಸಿದೆ. ಈಗ ಮಳೆ ಸುರಿಯುತ್ತಿ ರುವುದರಿಂದ ಅಗೆದಿದ್ದ ಕಡೆ ಎಲ್ಲ ವಿಪರೀತ ಕೆಸರು ಸೃಷ್ಟಿಯಾಗಿದೆ. ವಾಹನಗಳ ಚಕ್ರಗಳು ಅವುಗಳಲ್ಲಿ ಹೂತು ಹೋಗುವುದು ಸಾಮಾನ್ಯ ಎನಿಸಿಬಿಟ್ಟಿದೆ. ಕನ್ನಂಡಬಾಣೆಯಲ್ಲಿ ಈ ಸಮಸ್ಯೆ ಹೆಚ್ಚಾಗಿ ವಾಹನ ಸವಾರರನ್ನು ಕಾಡುತ್ತಿದೆ. ಹಲವು ಕಡೆ ಈಗಾಗಲೆ ಚಕ್ರಗಳು ಹೂತು ಹೋಗಿ ಜನರು ಪರದಾಡಿದ್ದಾರೆ. ಈ ಕುರಿತು ನಗರಸಭಾ ಸದಸ್ಯ ಕೆ.ಎಸ್.ರಮೇಶ್ ಈ ವಿಷಯವನ್ನು ಕೌನ್ಸಿಲ್ ಸಭೆಯಲ್ಲಿ ಪ್ರಸ್ತಾಪಿಸಿ ಗಮನ ಸೆಳೆದಿದ್ದರು. ಈ ಹಿಂದೆ ನಗರದಲ್ಲಿ ರಸ್ತೆಗಳನ್ನು ಅಗೆದು ಒಳಚರಂಡಿ ಮಾಡಲಾಗಿತ್ತು. ಆದರೆ, ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಈ ಯೋಜನೆ ಅದರ ಸಾಲಿಗೆ ಸೇರುವ ಭೀತಿ ಇದೆ ಎಂದು ಸಂಶಯ ವ್ಯಕ್ತಪಡಿಸಿದ್ದರು.
ನಡೆದಾಡುವ ಜನಸಾಮಾನ್ಯರ ಪರಿಸ್ಥಿತಿಯಂತೂ ಶೋಚನೀಯವಾಗಿದೆ. ರಸ್ತೆಬದಿಯಲ್ಲಿ ಇಳಿಯಲಾರದಂತಹ ಸ್ಥಿತಿ ಇದೆ. ಗುಂಡಿಗಳನ್ನು ತೆಗೆದು ಪೈಪ್ ಹಾಕಿದ ಮೇಲೆ ಅದನ್ನು ಮೊದಲಿನ ಸ್ಥಿತಿಗೆ ತರಬೇಕಿತ್ತು ಎನ್ನುವುದು ಜನರ ಅಭಿಪ್ರಾಯ.
ಜಿಲ್ಲಾಧಿಕಾರಿ ಮುಂದೆಯೂ ಪ್ರಸ್ತಾಪ: ಕೆಲವೇ ದಿನಗಳ ಹಿಂದೆ ನಗರಸಭೆಯ ಆಡಳಿತಾಧಿಕಾರಿಯೂ ಆಗಿದ್ದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಸಮ್ಮುಖದಲ್ಲೇ ನಗರಸಭಾ ಸದಸ್ಯರು ಈ ವಿಷಯ ಪ್ರಸ್ತಾಪಿಸಿದ್ದರು. ಅವೈಜ್ಞಾನಿಕವಾಗಿ ಕಾಮಗಾರಿ ನಡೆಯುತ್ತಿದ್ದು, ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚುತ್ತಿಲ್ಲ ಎಂದು ದೂರಿದ್ದರು. ಆದರೆ, ಇದುವರೆಗೂ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ. ಕೆಲವೊಂದು ಕಡೆ ಹಾಕಿರುವ ವೆಟ್‌ಮಿಕ್ಸ್‌ಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ, ಕೆಲವು ಕಡೆ ನೆಲದೊಳಗೆ ಇಳಿದಿವೆ.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಅಮೃತ್ –2 ಯೋಜನೆ ಮಡಿಕೇರಿಯಲ್ಲಿ ಅನುಷ್ಟಾನಗೊಂಡಿದೆ. ನೀರಿನ ಪೈಪ್ ಅಳವಡಿಕೆಗಾಗಿ ತೆಗೆದ ಗುಂಡಿಯನ್ನು ಸಮರ್ಪಕವಾಗಿ ಮುಚ್ಚದೇ ಇರುವುದರಿಂದ ಜನಸಾಮಾನ್ಯರಿಗೆ ಸಮಸ್ಯೆಯಾಗಿರುವ ಕುರಿತು ಮಡಿಕೇರಿ ನಗರಸಭೆ ವತಿಯಿಂದ 2 ಪತ್ರಗಳನ್ನು ಬರೆದಿದ್ದೇವೆ. ಗುಂಡಿ ತೆಗೆಯುವ ಮುಂಚೆ ಹೇಗಿತ್ತೋ ಹಾಗೆ ತರುವುದು ಅವರ ಜವಾಬ್ದಾರಿಯಾಗಿದೆ.ಎಚ್.ಆರ್.ರಮೇಶ್ ಮಡಿಕೇರಿ ನಗರಸಭೆ ಪೌರಾಯುಕ್ತ
ಅಮೃತ್–2 ಯೋಜನೆ ಕಾಮಗಾರಿಯನ್ನು ವ್ಯವಸ್ಥಿತವಾಗಿ ಮಾಡದೇ ಇರುವುದರಿಂದ ಜನರಿಗೆ ತುಂಬಾ ತೊಂದರೆಯಾಗುತ್ತಿದೆ. ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚದೇ ಇರುವುದರಿಂದ ವಾಹನಗಳ ಚಕ್ರಗಳು ಗುಂಡಿಗಳಲ್ಲಿ ಹೂತು ಹೋಗುತ್ತಿವೆ. ಚಕ್ರವನ್ನು ಗುಂಡಿಯಿಂದ ಮೇಲೆತ್ತುವಷ್ಟರಲ್ಲಿ ವಾಹನಗಳ ಮಾಲೀಕರು ಹೈರಣಾಗುತ್ತಿದ್ದಾರೆ. ಇನ್ನು ನಡೆದಾಡುವ ಜನಸಾಮಾನ್ಯರ ಪಾಡಂತೂ ಹೇಳತೀರದಾಗಿದೆ. ಜನರಿಗೆ ಇದೇ ರೀತಿ ತೊಂದರೆ ಮುಂದುವರೆದರೆ ಜನರ ಪರವಾಗಿ ಪ್ರತಿಭಟನೆಯನ್ನೂ ಮಾಡಲು ಹಿಂಜರಿಯುವುದಿಲ್ಲ ಕೆ.ಎಸ್.ರಮೇಶ್ ಮಡಿಕೇರಿ ನಗರಸಭೆ ಸದಸ್ಯಅಮೃತ್–2 ಯೋಜನೆ ಕಾಮಗಾರಿಯನ್ನು ವ್ಯವಸ್ಥಿತವಾಗಿ ಮಾಡದೇ ಇರುವುದರಿಂದ ಜನರಿಗೆ ತುಂಬಾ ತೊಂದರೆಯಾಗುತ್ತಿದೆ. ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚದೇ ಇರುವುದರಿಂದ ವಾಹನಗಳ ಚಕ್ರಗಳು ಗುಂಡಿಗಳಲ್ಲಿ ಹೂತು ಹೋಗುತ್ತಿವೆ. ಚಕ್ರವನ್ನು ಗುಂಡಿಯಿಂದ ಮೇಲೆತ್ತುವಷ್ಟರಲ್ಲಿ ವಾಹನಗಳ ಮಾಲೀಕರು ಹೈರಣಾಗುತ್ತಿದ್ದಾರೆ. ಇನ್ನು ನಡೆದಾಡುವ ಜನಸಾಮಾನ್ಯರ ಪಾಡಂತೂ ಹೇಳತೀರದಾಗಿದೆ. ಜನರಿಗೆ ಇದೇ ರೀತಿ ತೊಂದರೆ ಮುಂದುವರೆದರೆ ಜನರ ಪರವಾಗಿ ಪ್ರತಿಭಟನೆಯನ್ನೂ ಮಾಡಲು ಹಿಂಜರಿಯುವುದಿಲ್ಲ ಕೆ.ಎಸ್.ರಮೇಶ್ ಮಡಿಕೇರಿ ನಗರಸಭೆ ಸದಸ್ಯ
ನೀರಿನ ಪೈಪ್ ಅಳವಡಿಕೆಗೆ ತೆಗೆದಿರುವ ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚಿ ಅದರ ಮೇಲೆ ವೆಟ್‌ಮಿಕ್ಸ್ ಹಾಗೂ ಕಾಂಕ್ರೀಟ್ ಹಾಕಬೇಕು ಎಂಬ ಸೂಚನೆಗಳನ್ನು ಈಗಾಗಲೇ ನೀಡಲಾಗಿದೆ. ಜೊತೆಗೆ ಮಳೆ ಆರಂಭವಾಗಿರುವುದರಿಂದ ಮಳೆಗಾಲ ಮುಗಿಯುವವರೆಗೂ ಹೊಸದಾಗಿ ಗುಂಡಿಗಳನ್ನು ತೆಗೆಯಬಾರದು ಎಂಬ ನಿರ್ದೇಶನವನ್ನೂ ನೀಡಿದ್ದೇವೆ.ಮಹೇಶ್ ಜೈನಿ ಮಡಿಕೇರಿ ನಗರಸಭೆ ಉಪಾಧ್ಯಕ್ಷ
ರಸ್ತೆ ಅಗೆದು ಪೈಪ್ ಹಾಕುವ ಕೆಲಸವನ್ನು ಬೇಗನೇ ಆರಂಭಿಸಿ ಮಳೆಗಾಲಕ್ಕೂ ಮುನ್ನವೇ ಸಮರೋಪಾದಿಯಲ್ಲಿ ಮುಗಿಸಬೇಕಿತ್ತು. ಆದರೆ ಬೇರೆ ನಗರಗಳಲ್ಲಿ ಮಾಡುವಂತೆ ಇಲ್ಲಿಯೂ ಮಾಡಲಾಗಿದೆ. ಈಗ ಮಳೆ ಸುರಿಯುತ್ತಿರುವುದರಿಂದ ಎಲ್ಲೆಂದರಲ್ಲಿ ವಾಹನಗಳ ಚಕ್ರಗಳು ಹೂತು ಹೋಗುತ್ತಿವೆ. ದೇಚೂರಿನಲ್ಲಿ ಈಚೆಗೆ ಕಾರಿನ ಚಕ್ರ ಹೂತು ಹೋಗಿ ಮಾಲೀಕರು ಬಹಳ ಪರದಾಡಿದರು. ಆಟೊ ಚಾಲಕರಿಗೂ ಇಂತಹ ಗುಂಡಿಗಳಿಂದ ಸಮಸ್ಯೆಯಾಗುತ್ತಿದೆ. ಈ ವಿಷಯವನ್ನು ಈಗಾಗಲೇ ಮಡಿಕೇರಿ ನಗರಸಭೆ ಅಧ್ಯಕ್ಷರು ಉಪಾಧ್ಯಕ್ಷರ ಗಮನಕ್ಕೆ ತರಲಾಗಿದೆ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಪ್ರತಿಭಟನೆಯನ್ನೂ ನಡೆಸಲಾಗುವುದುಡಿ.ಎಚ್.ಮೇದಪ್ಪ ಕೊಡಗು ಜಿಲ್ಲಾ ಆಟೊ ಚಾಲಕರ ಸಂಘದ ಅಧ್ಯಕ್ಷ
ಸ್ತೆಬದಿ ಗುಂಡಿಗಳನ್ನು ಅಗೆದು ಸಾಕಷ್ಟು ಕಾಲವಾಯಿತು. ಆದರೂ ಇನ್ನೂ ಸಮರ್ಪಕವಾಗಿ ಮುಚ್ಚಿಲ್ಲ. ಮಳೆಯಿಂದ ವಾಹನಗಳ ಚಕ್ರಗಳು ಗುಂಡಿಗಳಲ್ಲಿ ಹೂತು ಹೋಗುವುದು ಸಾಮಾನ್ಯ ಎನಿಸಿದೆ. ದಯವಿಟ್ಟು ರಸ್ತೆ ಬದಿ ಮೊದಲು ಹೇಗಿತ್ತೋ ಆ ಸ್ಥಿತಿಗೆ ತನ್ನಿ. ಕನಿಷ್ಠ ವಾಹನಗಳ ಚಕ್ರಗಳು ಹೂತು ಹೋಗದ ಹಾಗೆ ಮಾಡಿ.ಎಂ.ಎ.ಇರ್ಷದ್ ಕಾವೇರಿ ಕಾರು ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ
ಮಡಿಕೇರಿಯ ಚಾಮುಂಡೇಶ್ವರಿ ನಗರ ಇಂದಿರಾನಗರ ದೇಚೂರು ಪುಟಾಣಿ ನಗರ ಸೇರಿದಂತೆ ಕೆಲವೆಡೆ ಗುಂಡಿಗಳನ್ನು ಮುಚ್ಚಿ ವೆಟ್‌ಮಿಕ್ಸ್ ಹಾಕಿದ್ದೇವೆ. ಇನ್ನೂ ಕೆಲವೆಡೆ ಬಾಕಿ ಉಳಿದಿದೆ. ಪೈಪ್‌ನಲ್ಲಿ ನೀರು ಬಿಟ್ಟು ಪರೀಕ್ಷಿಸಿದ ನಂತರ ಕಾಂಕ್ರೀಟ್ ಇಲ್ಲವೇ ಡಾಂಬರು ಹಾಕುತ್ತೇವೆ.ಬಿಪಿನ್‌ಚಂದ್ರ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಎಂಜಿನಿಯರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.