
ಮಡಿಕೇರಿ: ನಗರದ ಕೋಟೆಯೊಳಗಿರುವ ಸರ್ಕಾರಿ ವಸ್ತು ಸಂಗ್ರಹಾಲಯವು ಈ ಹಿಂದೆ ಚರ್ಚ್ ಆಗಿತ್ತು. ಇದು ಕೊಡಗಿನ 2ನೇ ಅತಿ ಹಳೆಯ ಚರ್ಚ್ ಎಂಬ ಹಿರಿಮೆಗೂ ಪಾತ್ರವಾಗಿತ್ತು. ಈಗ ಇದು ಹಲವು ಅಪರೂಪದ ವಸ್ತುಗಳನ್ನು ಹೊಂದಿರುವ ನಾಡಿನ ವಸ್ತುಸಂಗ್ರಹಾಲಯಗಳ ಪೈಕಿ ಮುಂಚೂಣಿಯಲ್ಲಿ ನಿಲ್ಲುವಂತದ್ದು ಎನಿಸಿದೆ.
ಕೊಡಗಿನಲ್ಲಿ ಕ್ರಿ.ಪೂ.ದಿಂದ ಹಿಡಿದು 18ನೇ ಶತಮಾನದವರೆಗೆ ದೊರೆತ ಅನೇಕ ಪ್ರಾಚ್ಯಾವಶೇಷಗಳೂ ಇಲ್ಲಿವೆ. ಕ್ರಿ.ಪೂ 1,500ರಿಂದ 2 ಸಾವಿರದ ಕಾಲಘಟ್ಟಕ್ಕೆ ಸೇರಿದ ಮಡಕೆಗಳು, ನೂತನ ಶಿಲಾಯುಗದ ಆಯುಧಗಳೂ ಇರುವುದು ವಿಶೇಷ.
ಕೊಡಗಿನ ಅರಸ ವೀರರಾಜೇಂದ್ರ ಜಿಲ್ಲೆಯಲ್ಲಿ ಮೊದಲ ಬಾರಿಗೆ ವಿರಾಜಪೇಟೆಯಲ್ಲಿ ಸಂತ ಅನ್ನಮ್ಮ ಚರ್ಚ್ ನಿರ್ಮಿಸಲು ಅನುಮತಿ ನೀಡಿದರು. ಮುಂದೆ ಕೊನೆಯ ದೊರೆಯನ್ನು ಬ್ರಿಟಿಷರು ಇಂಗ್ಲೆಂಡಿಗೆ ಗಡಿಪಾರು ಮಾಡಿ ಇಲ್ಲಿಯೇ ನೆಲೆ ನಿಂತರು. ಆ ಸಮಯದಲ್ಲಿ 1855ರಲ್ಲಿ ಕೋಟೆಯೊಳಗೆ ಬ್ರಿಟಿಷರು ಸೇಂಟ್ ಮಾರ್ಕ್ಸ್ ಚರ್ಚ್ ಕಟ್ಟಿದರು. ಚಿಕ್ಕ ಕೊಠಡಿಯಲ್ಲಿ ನಡೆಯುತ್ತಿದ್ದ ಚರ್ಚ್ 1858ರ ಹೊತ್ತಿಗೆ ಪೂರ್ಣಗೊಂಡಿತು.
ಸ್ವಾತಂತ್ರ್ಯ ಬಂದು ಬ್ರಿಟಿಷರೆಲ್ಲರೂ ಕೊಡಗಿನಿಂದ ಹೋದ ನಂತರ ಈ ಚರ್ಚ್‌ಗೆ ಬರುವವರೇ ಇಲ್ಲದಾದರು. ಆಗ ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಂಡಿತು. 1971ರಲ್ಲಿ ಈ ಚರ್ಚ್ ಅನ್ನು ಸರ್ಕಾರಿ ವಸ್ತು ಸಂಗ್ರಹಾಲಯವಾಗಿ ಪರಿವರ್ತಿಸಲಾಯಿತು. ಅಲ್ಲಿಂದ ಇಲ್ಲಿಯವರೆಗೂ ಈ ಚರ್ಚ್‌ಗೆ ಕೋಟ್ಯಂತರ ಮಂದಿ ಭೇಟಿ ನೀಡಿ ವೀಕ್ಷಿಸಿರುವುದು ವಿಶೇಷ. ಈಗ ವರ್ಷಕ್ಕೆ 4ರಿಂದ 5 ಲಕ್ಷ ಮಂದಿ ಭೇಟಿ ನೀಡುತ್ತಿದ್ದಾರೆ.
ಈಗ ಇಲ್ಲಿ ಕೊಡಗಿನಲ್ಲಿ ದೊರೆತಿರುವ ಪ್ರಾಗೈತಿಹಾಸಿಕ ಕಾಲದ ಅನೇಕ ಅವಶೇಷಗಳನ್ನು ಇರಿಸಲಾಗಿದೆ. ಅಪರೂಪದ ಶಿಲ್ಪಗಳೂ ಇಲ್ಲಿವೆ. ಈ ವಸ್ತುಸಂಗ್ರಹಾಲಯಕ್ಕೆ ಒಮ್ಮೆ ಭೇಟಿ ನೀಡಿ, ಇಲ್ಲಿರುವ ಎಲ್ಲ ವಸ್ತುಗಳ ಇತಿಹಾಸವನ್ನು ತಿಳಿದುಕೊಂಡರೆ ಕೊಡಗಿನ ನಿಜ ಇತಿಹಾಸದ ದರ್ಶನವಾಗುತ್ತದೆ.
ಇಲ್ಲಿ ಕೊಡಗಿನಲ್ಲೇ ದೊರೆತಿರುವ ಬುದ್ಧನ ಶಿಲ್ಪಗಳು, ಜೈನ ತೀರ್ಥಂಕರರ ಕಲ್ಲಿನ ಶಿಲ್ಪಗಳು, ಕಂಚಿನ ವಿಗ್ರಹಗಳು, ಹಿಂದೂ ಸಂಪ್ರದಾಯದ ಕಲ್ಲಿನ ಬಿಂಬಗಳು, ದೊರೆ ರಾಜೇಂದ್ರ ಅವರ ಕಾಲದ ಆಯುಧಗಳು, ಕಳೆದ ಶತಮಾನದ ಕೋವಿಗಳು, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರಿಗೆ ಸೇರಿಗೆ ಅನೇಕ ವಸ್ತುಗಳನ್ನು ಜೋಪಾನವಾಗಿ ಸಂರಕ್ಷಿಸಲಾಗಿದೆ.
ನೇಪಾಳದ ವಿಗ್ರಹಗಳೂ ಇಲ್ಲಿವೆ: ವಸ್ತುಸಂಗ್ರಹಾಲಯದಲ್ಲಿ ನೇಪಾಳದ್ದು ಎನ್ನಲಾದ ಶಿವ ಪಾವರ್ತಿಯರ ವಿಗ್ರಹಗಳೂ ಇವೆ. ಜತೆಗೆ, ವೃತ್ತಾಕಾರದ ಪೀಠದ ಶಿವನು ತನ್ನ ಮೇಲೆ ಎಡತೊಡೆಯ ಮೇಲೆ ಪಾರ್ವತಿಯನ್ನು ಕುಳ್ಳಿರಿಸಿಕೊಂಡಿರುವ ಅಪರೂಪದ ವಿಗ್ರಹವೂ ಇದೆ. ಕೋಣನ ತಲೆಯ ಮೇಲೆ ಕಾಲನ್ನಿರಿಸಿಕೊಂಡು ವಜ್ರಪರ್ಯಂಕ ಮುದ್ರೆಯಲ್ಲಿ ಕುಳಿತಿರುವ ಕಾಳಿಯ ವಿಗ್ರಹ ಹಾಗೂ ಇದಕ್ಕಿರುವ ಕಲಾತ್ಮಕವಾದ ಪ್ರಭಾವಳಿಗಳು ನೋಡುಗರ ಕಣ್ಮನ ಸೆಳೆಯುತ್ತಿವೆ.
ಚರ್ಚ್‌ನ ವಿಶೇಷತೆ
ಮಡಿಕೇರಿ ಕೋಟೆಯೊಳಗಿರುವ ಈಗ ಸರ್ಕಾರಿ ವಸ್ತುಸಂಗ್ರಹಾಲಯವಾಗಿರುವ ಸೇಂಟ್ ಮಾರ್ಕ್ ಚರ್ಚ್ ರೋಮನ್ ಗೋಥಿಕ್ ಶೈಲಿಯಲಿದೆ. ಪ್ರವೇಶದ್ವಾರದ ಮೇಲೆ ಎತ್ತರದ ಕಮಾನು ಇದೆ. ಈ ಚರ್ಚ್‌ನಲ್ಲಿರುವ ವಿಶಾಲ ಸಭಾಂಗಣ ಹಾಗೂ ಪಾರದರ್ಶಕ ಗಾಜಿನ ಕಿಟಕಿಗಳು ಮನಮೋಹಕವಾಗಿವೆ. ಈ ಚರ್ಚ್‌ನ ಗೋಡೆಗಳ ಮೇಲೆ ಅನೇಕ ಬ್ರಿಟಿಷ್ ಅಧಿಕಾರಿಗಳ ಸಮಾಧಿ ಫಲಕಗಳಿವೆ. ರಾಜಾಸೀಟ್ ಉದ್ಯಾನದಲ್ಲಿದ್ದ ಬ್ರಿಟಿಷರ ಗೋರಿಗಳ ಪೈಕಿ ಕೆಲವೊಂದು ಸಮಾಧಿ ಫಲಕಗಳನ್ನು ಇಲ್ಲಿಡಲಾಗಿದೆ. ಈ ಚರ್ಚ್‌ನ ಆವರಣದಲ್ಲಿ ವೀರಗಲ್ಲುಗಳ ತೋಟವೇ ಇದೆ. ಅತ್ಯುತ್ತಮ ವಿನ್ಯಾಸವುಳ್ಳ ಅನೇಕ ವೀರಗಲ್ಲುಗಳು ಇಲ್ಲಿವೆ. ಈ ಎಲ್ಲ ವೀರಗಲ್ಲುಗಳೂ ಕೊಡಗು ಜಿಲ್ಲೆಯಲ್ಲಿಯೇ ದೊರೆತಿರುವುದು ಕೊಡಗಿನ ಪ್ರಾಚೀನ ವೀರಪರಂಪರೆಗೆ ದ್ಯೋತಕ ಎನಿಸಿದೆ. ಇದರೊಂದಿಗೆ ಶಿಲಾಶಾಸನಗಳು ಸತಿಕಲ್ಲು ಕೋಲೆಕಲ್ಲುಗಳು ಫಿರಂಗಿಗಳು ಫಿರಂಗಿ ಗುಂಡುಗಳೂ ಇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.