ADVERTISEMENT

ಮಡಿಕೇರಿ | ವಾಕ್ಸಮರದ ವೇದಿಕೆಯಾದ ನಗರಸಭೆ: ಅಧ್ಯಕ್ಷೆ, ಉಪಾಧ್ಯಕ್ಷರ ನಡುವೆ ಚಕಮಕಿ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 5:27 IST
Last Updated 30 ಅಕ್ಟೋಬರ್ 2025, 5:27 IST
<div class="paragraphs"><p>ಮಡಿಕೇರಿ ನಗರಸಭೆಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಬಿ.ವೈ.ರಾಜೇಶ್ ಮತ್ತು ಅಧ್ಯಕ್ಷೆ ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ ನಡುವೆ ಮಾತಿನ ಚಕಮಕಿ ನಡೆಯಿತು</p></div>

ಮಡಿಕೇರಿ ನಗರಸಭೆಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಬಿ.ವೈ.ರಾಜೇಶ್ ಮತ್ತು ಅಧ್ಯಕ್ಷೆ ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ ನಡುವೆ ಮಾತಿನ ಚಕಮಕಿ ನಡೆಯಿತು

   

ಮಡಿಕೇರಿ: ಆಡಳಿತ ಪಕ್ಷದ ಕೆಲವು ಸದಸ್ಯರು ಮತ್ತು ಅಧ್ಯಕ್ಷೆ, ಉಪಾಧ್ಯಕ್ಷರ ನಡುವಿನ ವಾಕ್ಸಮರದ ವೇದಿಕೆಯಾಗಿ ಇಲ್ಲಿ ಬುಧವಾರ ನಡೆದ ಮಡಿಕೇರಿ ನಗರಸಭೆಯ ಸಾಮಾನ್ಯಸಭೆ ಮಾರ್ಪಾಡಾಯಿತು.

ಕಾಂಗ್ರೆಸ್ ಸದಸ್ಯರ ಜೊತೆಜೊತೆಗೆ ಹಲವು ವಿಷಯಗಳಲ್ಲಿ ಆಡಳಿತ ಪಕ್ಷದ ಕೆಲವು ಸದಸ್ಯರೇ ಪ್ರಶ್ನೆಗಳನ್ನು ಸಭೆಯ ಮುಂದಿಟ್ಟರು. ಒಂದು ಹಂತದಲ್ಲಿ ಏನೂ ಅರ್ಥವಾಗದಂತಹ ಸ್ಥಿತಿ ಏರ್ಪಟ್ಟಾಯಿತು. ಪ್ರಮುಖ ವಿರೋಧ ಪಕ್ಷ ಮಾಡಬೇಕಿದ್ದ ಕೆಲಸವನ್ನು ಇವರೇ ನಿರ್ವಹಿಸಿದರು.

ADVERTISEMENT

ಇಂತಹದ್ದೊಂದು ವಿದ್ಯಮಾನ ಇಲ್ಲಿ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಕಂಡು ಬಂತು.

ರಾಜಾಸೀಟ್ ವಾಹನ ನಿಲುಗಡೆ ವಿಚಾರ ಚರ್ಚೆಗೆ ಬಂದಾಗ ಕಾಂಗ್ರೆಸ್‌ ಸದಸ್ಯ ಬಿ.ವೈ.ರಾಜೇಶ್ ಮಾತನಾಡಿ, ‘ರಾಜಾಸೀಟ್ ವಾಹನ ನಿಲುಗಡೆಯ ಟೆಂಡರ್ ಪಡೆದವರು ಉಲ್ಲಂಘಿಸಿದ್ದಾರೆ ಎಂದು ಹೇಳಲಾದ ನಿಯಮಗಳನ್ನು ಕೋಳಿ ಮಾರುಕಟ್ಟೆ, ಮೀನು ಮಾರುಕಟ್ಟೆಯ ಅಂಗಡಿಯವರು ಉಲ್ಲಂಘಿಸಿಲ್ಲವೇ?’ ಎಂದು ಪ್ರಶ್ನಿಸುವ ಮೂಲಕ ಚರ್ಚೆಗೆ ನಾಂದಿ ಹಾಡಿದರು. ಇವರಿಗೆ ಕೆಲವು ಬಿಜೆಪಿ ಸದಸ್ಯರೂ ದನಿಗೂಡಿಸಿದರು.

ಪ್ರತಿಕ್ರಿಯಿಸಿದ ಬಿಜೆಪಿ ಸದಸ್ಯ ಸತೀಶ್, ‘ಟೆಂಡರ್ ಹಣವನ್ನು ಮೊದಲೇ ಪಾವತಿಸಿಕೊಳ್ಳದೆ ಹೇಗೆ ಕಾರ್ಯಾದೇಶ ಕೊಟ್ಟಿರಿ‌. ಈ ವಿಚಾರದಲ್ಲಿ ಕಾನೂನು ಪಾಲಿಸಿಲ್ಲ‌’ ಎಂದು ತರಾಟೆಗೆ ತೆಗೆದುಕೊಂಡರು. ಮಾತ್ರವಲ್ಲ, ‘ಈ ವಿಚಾರದಲ್ಲಿ ನಾನು ಜಿಲ್ಲಾಧಿಕಾರಿಗೆ ದೂರು ಕೊಡುವೆ’ ಎಂದೂ ಎಚ್ಚರಿಕೆ ನೀಡಿದರು.

ಬಿಜೆಪಿ ಸದಸ್ಯೆ ಶ್ವೇತಾ ಪ್ರತಿಕ್ರಿಯಿಸಿ, ‘ನ್ಯಾಯ ಎಲ್ಲರಿಗೂ ಒಂದೇ. ಕೋಳಿ ಅಂಗಡಿಯವರಿಗೆ ಒಂದು ನ್ಯಾಯ, ರಾಜಾಸೀಟ್ ವಾಹನ ನಿಲುಗಡೆ ಟೆಂಡರ್ ಪಡೆದವರಿಗೆ ಮತ್ತೊಂದು ನ್ಯಾಯ ಎಂಬುದಿಲ್ಲ. ಈ ವಿಚಾರದಲ್ಲಿ ಯಾರ ಒತ್ತಡ ಇದೆ ಎಂಬುದನ್ನು ಬಹಿರಂಗಪಡಿಸಿ’ ಎಂದು ಸವಾಲೆಸೆದರು.

ಈ ವೇಳೆ ಬಿ.ವೈ.ರಾಜೇಶ್ ಅವರು ‘ವೈಯಕ್ತಿಕ ಹಿತಾಸಕ್ತಿ ಬದಿಗಿಟ್ಟು ಅಭಿವೃದ್ಧಿಗೆ ಪೂರಕವಾಗಿ ನಡೆದುಕೊಳ್ಳಿ’ ಎಂದರು. ಈ ವೇಳೆ ಕೆಲ ಸದಸ್ಯರು ಪ್ರಯೋಗಿಸಿದ ಶಬ್ದಗಳಿಂದ ಕೆರಳಿದ ಅಧ್ಯಕ್ಷೆ ಕಲಾವತಿ ಮತ್ತು ಉಪಾಧ್ಯಕ್ಷ ಮಹೇಶ್ ಜೈನಿ ಜೋರು ಧ್ವನಿಯಲ್ಲಿ ಆಕ್ಷೇಪಗಳನ್ನು ವ್ಯಕ್ತಪಡಿಸಿದರು. ಗದ್ದಲ ತಾರಕಕ್ಕೇರಿ ಯಾರ ಮಾತೂ ಕೇಳದಂತಹ ಸ್ಥಿತಿ ನಿರ್ಮಾಣವಾಯಿತು.

ಇದಕ್ಕೂ ಮುನ್ನ ಚರ್ಚೆಗೆ ಬಂದ ಎನ್‌ಡಿಆರ್‌ಎಫ್‌ ಹಣದಲ್ಲಿ ಮಾಡುತ್ತಿದ್ದ ಕೆಲಸವನ್ನು ನಿಲ್ಲಿಸಿದ ವಿಚಾರವೂ ಕಾಂಗ್ರೆಸ್ ಸದಸ್ಯರು ಮತ್ತು ಅಧ್ಯಕ್ಷೆ, ಉಪಾಧ್ಯಕ್ಷರ ಮಾತಿನ ಚಕಮಕಿಗೆ ಕಾರಣವಾಯಿತು.

‘ಅಧ್ಯಕ್ಷೆ, ಉಪಾಧ್ಯಕ್ಷರು ವೈಯಕ್ತಿಕ ಕಾರಣಕ್ಕಾಗಿ ಎನ್‌ಡಿಆರ್‌ಎಫ್‌ ಹಣದಲ್ಲಿ ಮಾಡುತ್ತಿದ್ದ ಕೆಲಸವನ್ನು ನಿಲ್ಲಿಸಿದರು. ಇದರಿಂದ ಈ ಹಣ ಬೇರೆಡೆಗೆ ಹೋಯಿತು’ ಎಂದು ಕಾಂಗ್ರೆಸ್ ಸದಸ್ಯ ಬಿ.ವೈ.ರಾಜೇಶ್ ಕಿಡಿಕಾರಿದರು.

ಪ್ರತಿಕ್ರಿಯಿಸಿದ ಉಪಾಧ್ಯಕ್ಷ ಮಹೇಶ್ ಜೈನಿ, ‘ಹಣ ಎಲ್ಲೂ ಹೋಗಿಲ್ಲ. ಮಳೆ ಇದ್ದುದ್ದರಿಂದ ಮಾತ್ರವೇ ಕೆಲಸ ನಿಲ್ಲಿಸಲಾಗಿತ್ತು. ಮಳೆ ನಿಂತ ನಂತರ ಕಾಮಗಾರಿ ಆರಂಭವಾಗಲಿದೆ. ಯಾವುದೇ ಕಾರಣಕ್ಕೂ ಅಕ್ರಮಕ್ಕೆ ಅವಕಾಶ ಇಲ್ಲ’ ಎಂದರು.

ಅಕ್ರಮ ತಾತ್ಕಾಲಿಕ ಮಳಿಗೆ ಕುರಿತೂ ಮಾತಿನ ಚಕಮಕಿ: ಮಧ್ಯಾಹ್ನದ ನಂತರ ಸೇರಿದ ಸಭೆಯೂ ಗದ್ದಲದ ಗೂಡಾಯಿತು. ಕೆಎಸ್‌ಆರ್‌ಟಿಸಿ ಬಸ್‌ ಡಿಪೊ ಸಮೀದ ಹೆದ್ದಾರಿ ಪಕ್ಕದಲ್ಲೇ ಅಕ್ರಮ ತಾತ್ಕಾಲಿಕ ಮಳಿಗೆಗಳಿದ್ದು, ಅವುಗಳನ್ನು ತೆರವುಗೊಳಿಸಬೇಕು ಎಂದು ಕಾಂಗ್ರೆಸ್‌ನ ಬಿ.ವೈ.ರಾಜೇಶ್ ದಾಖಲೆಗಳನ್ನು ಪ್ರದರ್ಶಿಸಿದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಸದಸ್ಯರೂ ಇನ್ನೂ ಹಲವು ಅಂಗಡಿಗಳು ಇದೇ ರೀತಿ ಇವೆ ಎಂದರು. ಕೊನೆಗೆ, ನಗರದಲ್ಲಿರುವ ಅಕ್ರಮ ತಾತ್ಕಾಲಿಕ ಮಳಿಗೆಗಳ ಕುರಿತೇ ಸಭೆ ನಡೆಸಲು ನಿರ್ಧರಿಸಲಾಯಿತು.

ಅಧ್ಯಕ್ಷರೇ ಸಹಿ ಹಾಕಿದ್ದಾರೆ!

ನಗರೋತ್ಥಾನ ಕಾಮಗಾರಿಯಲ್ಲಿ ಕೌನ್ಸಿಲ್ ಸಭೆಯ ಗಮನಕ್ಕೆ ತಾರದೇ ಕೆಲವೊಂದು ಕಾಮಗಾರಿಗಳನ್ನು ಬದಲಾವಣೆ ಮಾಡಿಕೊಂಡಿದ್ದನ್ನು ಬಹುತೇಕ ಎಲ್ಲ ಸದಸ್ಯರೂ ವಿರೋಧಿಸಿದರು.

‘ನಮ್ಮ ಗಮನಕ್ಕೆ ತಾರದೇ ಕಾಮಗಾರಿ ಬದಲಾವಣೆ ಮಾಡಿದ್ದು ಏಕೆ’ ಎಂದು ಅನಿತಾ ಪೂವಯ್ಯ ಪ್ರಶ್ನಿಸಿದರೆ, ಉಪಾಧ್ಯಕ್ಷ ಮಹೇಶ್ ಜೈನಿ, ‘ಆಡಳಿತ ಮಂಡಳಿ ಇರುವುದಾದರೂ ಏಕೆ’ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕೊನೆಗೆ ಪೌರಾಯುಕ್ತ ಎಚ್.ಆರ್.ರಮೇಶ್ ಅವರು, ‘ಬದಲಾದ ಕಾಮಗಾರಿಗಳ ಅನುಮೋದನೆಗೆ ಅಧ್ಯಕ್ಷರೇ ಸಹಿ ಹಾಕಿದ್ದಾರೆ’ ಎಂದಾಗ ಅಧ್ಯಕ್ಷೆ ಕಲಾವತಿ ಕಕ್ಕಾಬಿಕ್ಕಿಯಾದರು. ‘ಈ ಕೂಡಲೇ ಬದಲಾದ ಕಾಮಗಾರಿಗಳ ಅನುಮೋದನೆಗಾಗಿ ಸರ್ಕಾರಕ್ಕೆ ಕಳುಹಿಸಿದ ಪತ್ರವನ್ನು ತಡೆ ಹಿಡಿಯುವಂತೆ’ ಸೂಚಿಸಿದರು.

ಎಸ್‌ಡಿಪಿಐನ ಅಮಿನ್ ಮೊಹಿಸಿನ್‌ ಅವರು, ನಗರೋತ್ಥಾನ ಕಾಮಗಾರಿ ಪಡೆದಿರುವ ಗುತ್ತಿಗೆದಾರರೊಂದಿಗೆ ಸಭೆ ಏರ್ಪಡಿಸುವಂತೆ ಒತ್ತಾಯಿಸಿದರು. ಶೀಘ್ರದಲ್ಲೇ ನಗರೋತ್ಥಾನ ಕಾಮಗಾರಿಗೆ ಸಂಬಂಧಿಸಿದ ಎಲ್ಲರ ಸಭೆ ಕರೆಯಲಾಗುವುದು ಎಂದು ಪೌರಯುಕ್ತ ರಮೇಶ್ ತಿಳಿಸಿದರು.

ಸೋರುತಿಹುದು ಚಾವಣಿ!

ಹೊಸದಾಗಿ ನಿರ್ಮಾಣವಾಗಿರುವ ನಗರಸಭೆಯ ಅಂಗಳದ ಚಾವಣಿ ಸೋರುತ್ತಿರುವ ವಿಚಾರ ಸಭೆಯಲ್ಲಿ ಪ್ರಸ್ತಾಪವಾಯಿತು. ಸೋರದಂತೆ ತಡೆಗಟ್ಟಲು ಮತ್ತೊಂದು ವಿಸ್ತೃತ ಯೋಜನಾ ವರದಿ ತಯಾರಿಸಬೇಕು ಎಂಬ ಎಂಜಿನಿಯರ್ ಹೇಳಿಕೆಗೆ ಎಲ್ಲರೂ ಒಕ್ಕೊರಲಿನಿಂದ ವಿರೋಧ ವ್ಯಕ್ತಪಡಿಸಿದರು. ಈಗ ಅನುಮೋದನೆ ನೀಡಿರುವ ಹಣದಲ್ಲೇ ಚಾವಣಿ ಕೆಲಸ ಸಂಪೂರ್ಣಗೊಳ್ಳಬೇಕು ಎಂದು ನಿರ್ಣಯಿಸಲಾಯಿತು.