
ಮಡಿಕೇರಿ: ದೈವಜ್ಞ ಬ್ರಾಹ್ಮಣ ಸಮಾಜದ ವತಿಯಿಂದ ಗುರುವಾರ ನಗರದಲ್ಲಿ ‘ದೈವಜ್ಞ ದರ್ಶನ’ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು.
ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ದೈವಜ್ಞ ಬ್ರಾಹ್ಮಣ ಮಠಾಧೀಶರಾದ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿ ಹಾಗೂ ಸುಜ್ಞಾನೇಶ್ವರ ಭಾರತೀ ಸ್ವಾಮೀಜಿ ಅವರು ಪುರಪ್ರವೇಶ ಮಾಡಿದರು.
ಹಳೆಯ ಬಸ್‌ನಿಲ್ದಾಣದಿಂದ ಮಹದೇವಪೇಟೆಯ ಚೌಡೇಶ್ವರಿ ದೇಗುಲದವರೆಗೂ ಅವರಿಬ್ಬರನ್ನೂ ಮೆರವಣಿಗೆಯಲ್ಲಿ ಕರೆ ತರಲಾಯಿತು.
ಶ್ವೇತ ವಸ್ತ್ರಧಾರಿಗಳಾಗಿ, ಕೇಸರಿ ಶಾಲು ಧರಿಸಿದ ಪುರುಷರು, ಸಾಂಪ್ರದಾಯಿಕ ಉಡುಪು ಧರಿಸಿದ ಮಹಿಳೆಯರು ಸ್ವಾಮೀಜಿಗಳಿಗೆ ಆದರಪೂರ್ವಕ ಸ್ವಾಗತ ಕೋರಿದರು. ಮಹಿಳೆಯರು ಪೂರ್ಣ ಕುಂಭ ಕಳಸ ಹೊತ್ತು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಹೂಗಳಿಂದ, ವಿದ್ಯುತ್ ದೀಪಗಳಿಂದ ಅಲಂಕೃತವಾಗಿದ್ದ ‘ಜ್ಞಾನೇಶ್ವರಿ ಪೀಠ ದೈವಜ್ಞ ಬ್ರಾಹ್ಮಣ ಮಠ’ ಎಂಬ ಶೀರ್ಷಿಕೆಯುಳ್ಳ ರಥದಲ್ಲಿ ಸ್ವಾಮೀಜಿಗಳನ್ನು ಕುಳ್ಳಿರಿಸಿ ಮೆರವಣಿಗೆಯಲ್ಲಿ ಅವರನ್ನು ಚೌಡೇಶ್ವರಿ ದೇಗುಲಕ್ಕೆ ಕರೆ ತಂದರು.
ಚಂಡೆ ವಾದ್ಯ ಸೇರಿದಂತೆ ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗಿಯಾಗಿದ್ದವು. ಭಜನೆಗಳನ್ನು ಹಾಡುತ್ತಾ ಭಕ್ತರು ಮೆರವಣಿಗೆಯುದ್ದಕ್ಕೂ ನರ್ತಿಸಿದರು.
ಅತ್ತ ಚೌಡೇಶ್ವರಿ ದೇಗುಲ ಹಾಗೂ ಅದರ ಮುಂದಿನ ರಸ್ತೆಯನ್ನು ವಿಶೇಷ ದೀಪಗಳಿಂದ ಸಿಂಗರಿಸಲಾಗಿತ್ತು. ಬೆಳಿಗ್ಗೆಯಿಂದ ದೇಗುಲದಲ್ಲಿ ವಿವಿಧ ಬಗೆಯ ಧಾರ್ಮಿಕ ಕೈಂಕರ್ಯಗಳು ನೆರವೇರಿದವು.
ದೇವತಾ ಪ್ರಾರ್ಥನೆಯೊಂದಿಗೆ ಫಲಾನ್ಯಾಸ, ಗುರುಗಣಪತಿ ಪೂಜೆ, ಸ್ವಸ್ತಿ ಪುಣ್ಯಾವಾಚನ, ಸತ್ಯನಾರಾಯಣ ಪೂಜೆಗಳು ನಡೆದವು. ಸಂಜೆ ಪಾದುಕಾ ಪೂಜೆ, ಸ್ವಾಮೀಜಿಗಳಿಗೆ ಫಲಪುಷ್ಪ ಸಮರ್ಪಣೆ, ಮಂತ್ರಾಕ್ಷತೆ ಕಾರ್ಯಕ್ರಮಗಳು ನಡೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.