ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಗಾಳಿ, ಮಳೆ ತಗ್ಗಿದರೂ ಆತಂಕ ದೂರವಾಗಿಲ್ಲ, ಬವಣೆ ನಿಂತಿಲ್ಲ. ಒಂದೆಡೆ ಮಾಣಿ– ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ನಿರ್ಮಿಸಿದ್ದ ತಡೆಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದರೆ, ಮತ್ತೊಂದೆಡೆ ಹತ್ತಾರು ಗ್ರಾಮಗಳಲ್ಲಿ ಇನ್ನೂ ವಿದ್ಯುತ್ ಸಂಪರ್ಕ ಸಾಧ್ಯವಾಗಿಲ್ಲ. ಹೀಗಾಗಿ, ಹಲವು ಗ್ರಾಮಗಳು ಕತ್ತಲಿನಲ್ಲೇ ಮುಳುಗಿವೆ. ಜಿಲ್ಲೆಯ ಅತಿ ಎತ್ತರದ ತಡಿಯಂಡಮೋಳ್ ಬೆಟ್ಟಕ್ಕೆ ಪ್ರವಾಸಿಗರ ಚಾರಣ ನಿರ್ಬಂಧಿಸಿ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ.
ಮಂಗಳೂರನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ರಸ್ತೆ ಕುಸಿಯದಂತೆ ತಡೆಯಲು 2022ರಲ್ಲಿ ನಿರ್ಮಿಸಿದ್ದ ತಡೆಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಅತಂಕಕ್ಕೆಡೆ ಮಾಡಿದೆ. ಅದರ ಕೆಳಭಾಗದಲ್ಲಿ ವಾಸ ಇರುವ 5 ಕುಟುಂಬಗಳ ಪೈಕಿ 4 ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ ಕಳುಹಿಸಲಾಗಿದೆ. ಒಂದು ಕುಟುಂಬದವರು ಮಾತ್ರ ಬರಲೊಪ್ಪದೇ ಅಲ್ಲಿಯೇ ವಾಸವಿದ್ದಾರೆ.
ಸ್ಥಳಕ್ಕೆ ಗುರುವಾರ ಬಂದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಪರಿಶೀಲನೆ ನಡೆಸಿದರು. ಈ ವೇಳೆ ಅವರು ಕೂಡಲೇ ತಡೆಗೋಡೆ ದುರಸ್ಥಿ ಕಾರ್ಯ ನಡೆಸುವಂತೆ ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳಿಗೆ ಸೂಚಿಸಿದರು. ಮತ್ತೊಂದು ಕುಟುಂಬದವರ ಮನವೊಲಿಸಿ ಕಾಳಜಿ ಕೇಂದ್ರಕ್ಕೆ ಕಳುಹಿಸುವಂತೆ ತಹಶೀಲ್ದಾರ್ ಶ್ರೀಧರ್ ಅವರಿಗೆ ಹೇಳಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ, ‘ಗುಡ್ಡದ ಒಳಗಿಂದ ನೀರು ಬಂದು ಒತ್ತಡ ಸೃಷ್ಟಿಯಾಗಿ ಬಿರುಕು ಬಂದಿದೆ. ಆದರೆ, ಮುಖ್ಯ ತಡೆಗೋಡೆಯಲ್ಲಿ ಬಿರುಕು ಬಂದಿಲ್ಲ. ಅದಕ್ಕೆ ಪೂರಕವಾಗಿ ನಿರ್ಮಿಸಿರುವ ತಡೆಗೋಡೆಯಲ್ಲಿ ಬಿರುಕು ಬಂದಿದೆ ಎಂದು ಎಂಜಿನಿಯರ್‌ಗಳು ಹೇಳಿದ್ದಾರೆ. ಈ ಘಟನೆಯನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ’ ಎಂದು ತಿಳಿಸಿದರು.
ರೆಡ್‌ಕ್ರಾಸ್ ಸಂಸ್ಥೆಯಲ್ಲಿ ಕಾಳಜಿ ಕೇಂದ್ರ
ಮಡಿಕೇರಿ ನಗರದ ರೆಡ್‌ಕ್ರಾಸ್ ಸಂಸ್ಥೆಯಲ್ಲಿ ಕಾಳಜಿ ಕೇಂದ್ರವನ್ನು ತೆರೆಯಲಾಗಿದ್ದು, ಅಲ್ಲಿ 4 ಕುಟುಂಬಗಳ 10 ಮಂದಿ ಸದಸ್ಯರನ್ನು ಇರಿಸಲಾಗಿದೆ ಎಂದು ತಹಶೀಲ್ದಾರ್ ಶ್ರೀಧರ್ ‘ಪ್ರಜಾವಾಣಿ’ಗೆ ಹೇಳಿದರು.
ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದ ನಗರ ಸಭಾ ಅಧ್ಯಕ್ಷೆ ಕಲಾವತಿ ಮತ್ತು ಉಪಾಧ್ಯಕ್ಷ ಮಹೇಶ್ ಜೈನಿ ಅಗತ್ಯ ವ್ಯವಸ್ಥೆಗಳ ಕುರಿತು ಪರಿಶೀಲನೆ ನಡೆಸಿದರು.
10 ದಿನಗಳಿಂದ ವಿದ್ಯುತ್ ಇಲ್ಲದೆ ಪಾಕ-ಕೊಳಗದಾಳು ಗ್ರಾಮಸ್ಥರ ಪರದಾಟ
ಚೇರಂಬಾಣೆ-ಬೇಂಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಕ-ಕೊಳಗದಾಳು ಗ್ರಾಮದ ಜನರು 10 ದಿನಗಳಿಂದ ವಿದ್ಯುತ್ ಇಲ್ಲದೆ ಪರದಾಡುತ್ತಿದ್ದಾರೆ. ವಿದ್ಯುತ್ ಸಂಪರ್ಕ ಕಡಿತಗೊಂಡು ಗ್ರಾಮಸ್ಥರು ಕತ್ತಲಲ್ಲಿ ಕಾಲ ಕಳೆಯುವಂತ್ತಾಗಿದೆ. ವಯೋವೃದ್ಧರು ಕಷ್ಟ ಪಡುವಂತ್ತಾಗಿದ್ದು, ವಿದ್ಯಾರ್ಥಿಗಳು ಓದಲು, ಬರೆಯಲು ಪರದಾಡುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಿ ಕ್ರಮ ಕೈಗೊಳ್ಳಬೇಕು. ಮನವಿಗೆ ಯಾವುದೇ ಸ್ಪಂದನೆ ದೊರೆಯದೇ ಇದ್ದಲ್ಲಿ ಮುಂಬರುವ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಪಂಚಾಯಿತಿ ಸದಸ್ಯರಿಗೆ ಮನವಿ ಪತ್ರ ಸಲ್ಲಿಸಿದ ಗ್ರಾಮಸ್ಥರು ರಸ್ತೆ ಅವ್ಯವಸ್ಥೆ ಮತ್ತು ವಿದ್ಯುತ್ ಕಡಿತದಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.
ಮಡಿಕೇರಿಯಲ್ಲಿ ಕಾಳಜಿ ಕೇಂದ್ರ ಆರಂಭ ಇಂದಿನಿಂದ ತಡೆಗೋಡೆ ದುರಸ್ತಿ ಕಾರ್ಯ ಶನಿವಾರದ ಒಳಗೆ ಮುಗಿಯುವ ಸಾಧ್ಯತೆ
ಮನೆಗಾಗಿ ಕಣ್ಣೀರಿಟ್ಟ ಮಹಿಳೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ರಾಷ್ಟ್ರೀಯ ಹೆದ್ದಾರಿ 275ರಲ್ಲಿ ತಡೆಗೋಡೆ ವೀಕ್ಷಣೆಗೆ ತೆರಳಿದ್ದ ವೇಳೆ ಸ್ಥಳೀಯ ನಿವಾಸಿ ಮಹಿಳೆಯೊಬ್ಬರು ಮನೆಗಾಗಿ ಕಣ್ಣೀರು ಹಾಕಿದರು. ನಗರಸಭೆಗೆ ಸಾಕಷ್ಟು ಬಾರಿ ಮನವಿ ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ನಿಮ್ಮ ಕಾಲಿಗೆ ಬೀಳುವೆ ಎಂದು ನಮಸ್ಕರಿಸಲು ಮುಂದಾದರು. ಅವರನ್ನು ತಡೆದ ಜಿಲ್ಲಾಧಿಕಾರಿ ಅವರ ಸಮಗ್ರ ವಿವರ ಪಡೆಯುವಂತೆ ಅಧಿಕಾರಿಗಳಿಗೆ ಸೂಚಿಸಿ ಭರವಸೆ ನೀಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಹಿಳೆ ‘ಇಲ್ಲಿ ಮನೆಗೆ ಹೋಗಲು ದಾರಿ ಇಲ್ಲ. ನಮಗೆ ಮನೆ ಕೊಡಿ ಎಂದು ಅರ್ಜಿ ಕೊಟ್ಟು ಸಾಕಷ್ಟು ವರ್ಷಗಳೇ ಕಳೆಯಿತು. ಯಾರೊಬ್ಬರೂ ಗಮನ ಹರಿಸಿಲ್ಲ’ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.