ADVERTISEMENT

ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯ ಇರಲಿ: ಅಕ್ಬರ್ ಅಲಿ ಉಡುಪಿ

ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆಯ ರಾಜ್ಯ ಕಾರ್ಯದರ್ಶಿ ಅಕ್ಬರ್ ಅಲಿ ಉಡುಪಿ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 5:16 IST
Last Updated 22 ನವೆಂಬರ್ 2025, 5:16 IST
ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆ ವತಿಯಿಂದ ನಡೆಯುತ್ತಿರುವ ‘ನೆರೆಹೊರೆಯವರ ಹಕ್ಕುಗಳು’ ರಾಷ್ಟ್ರವ್ಯಾಪಿ ಅಭಿಯಾನದ ಅಂಗವಾಗಿ ಮಡಿಕೇರಿಯಲ್ಲಿ ಶುಕ್ರವಾರ ನಡೆದ ಪ್ರವಚನದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆಯ ರಾಜ್ಯ ಕಾರ್ಯದರ್ಶಿ ಅಕ್ಬರ್ ಅಲಿ ಉಡುಪಿ ಅವರು ಮಾತನಾಡಿದರು.
ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆ ವತಿಯಿಂದ ನಡೆಯುತ್ತಿರುವ ‘ನೆರೆಹೊರೆಯವರ ಹಕ್ಕುಗಳು’ ರಾಷ್ಟ್ರವ್ಯಾಪಿ ಅಭಿಯಾನದ ಅಂಗವಾಗಿ ಮಡಿಕೇರಿಯಲ್ಲಿ ಶುಕ್ರವಾರ ನಡೆದ ಪ್ರವಚನದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆಯ ರಾಜ್ಯ ಕಾರ್ಯದರ್ಶಿ ಅಕ್ಬರ್ ಅಲಿ ಉಡುಪಿ ಅವರು ಮಾತನಾಡಿದರು.   

ಮಡಿಕೇರಿ: ನೆರೆಹೊರೆಯವರೊಡನೆ ಎಲ್ಲರೂ ಉತ್ತಮ ಬಾಂಧವ್ಯ ಹೊಂದಿರಬೇಕು ಎಂದು ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆಯ ರಾಜ್ಯ ಕಾರ್ಯದರ್ಶಿ ಅಕ್ಬರ್ ಅಲಿ ಉಡುಪಿ ತಿಳಿಸಿದರು.

ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆ ವತಿಯಿಂದ ನಡೆಯುತ್ತಿರುವ ‘ನೆರೆಹೊರೆಯವರ ಹಕ್ಕುಗಳು’ ರಾಷ್ಟ್ರವ್ಯಾಪಿ ಅಭಿಯಾನದ ಅಂಗವಾಗಿ ಇಲ್ಲಿನ ಸಿಪಿಸಿ ಲೇಔಟ್‌ನ ‘ಮಸ್‌ಜಿದ್‌ ಉರ್ ರಹ್ಮಾ’ದಲ್ಲಿ ಶುಕ್ರವಾರ ನಡೆದ ಪ್ರವಚನದಲ್ಲಿ ಅವರು ಮಾತನಾಡಿದರು.

‘ನಾವು ನಮ್ಮ ನೆರೆಹೊರೆಯವರಿಗೆ ಸಹಾಯ ಮಾಡಬೇಕು. ಸಂಕಷ್ಟದ ವೇಳೆಯಲ್ಲಿ ಎಲ್ಲರೂ ಪರಸ್ಪರ ಸಹಕರಿಸಬೇಕು. ಯಾರಿಗೂ ತೊಂದರೆ ನೀಡದೇ, ಕಷ್ಟದ ಪರಿಸ್ಥಿತಿಯಲ್ಲಿ ಅವರನ್ನು ಸಂರಕ್ಷಿಸಬೇಕು’ ಎಂದು ಕಿವಿಮಾತು ಹೇಳಿದರು.

ADVERTISEMENT

ಉತ್ತಮ ನೆರೆಹೊರೆಯವರು ಯಾವಾಗಲೂ ತಮ್ಮ ಅಕ್ಕಪಕ್ಕದಲ್ಲಿರುವವರನ್ನು ಗೌರವಿಸುತ್ತಾರೆ. ಜೊತೆಗೆ, ತಾವಿರುವ ಪರಿಸರವನ್ನು ಸ್ವಚ್ಛವಾಗಿ, ಆಹ್ಲಾದಕರವಾಗಿಟ್ಟುಕೊಳ್ಳುತ್ತಾರೆ ಎಂದರು.

‘ಯಾರು ತಮ್ಮ ನೆರೆಹೊರೆಯವರ ಪಾಲಿಗೆ ಒಳ್ಳೆಯವರಾಗಿರುತ್ತಾರೆ ಅವರು ದೇವರ ದೃಷ್ಟಿಯಿಂದಲೂ ಉತ್ತಮರಾಗಿರುತ್ತಾರೆ ಎಂಬುದನ್ನು ಯಾರೂ ಮರೆಯಬಾರದು. ನೆರೆಯವರು ಹಸಿದಿರುವಾಗ ಹೊಟ್ಟೆ ತುಂಬ ಉಂಡು ಮಲಗುವವನು ಸತ್ಯವಿಶ್ವಾಸಿಯಲ್ಲ. ಅಂತಹವರವನ್ನು ದೇವರು ಇಷ್ಟಪಡುವುದಿಲ್ಲ’ ಎಂದು ತಿಳಿಸಿದರು.

‘ರಸ್ತೆಯಲ್ಲಿ ನಡೆಯುವಾಗಲೂ ನಾವು ಉತ್ತಮ ವ್ಯಕ್ತಿಗಳಾಗಿಯೇ ನಡೆಯಬೇಕು. ಯಾವುದೇ ಕಾರಣಕ್ಕೂ ಕಸ ಹಾಕಬಾರದು, ರಸ್ತೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಬೇರೆಯವರಿಗೆ ಅಡೆತಡೆಗಳನ್ನು ಒಡ್ಡಬಾರದು, ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು’ ಎಂದು ಹೇಳಿದರು.

‘ನಮ್ಮೆಲ್ಲರ ಸೃಷ್ಟಿಕರ್ತನು ಒಬ್ಬನೇ. ಎಲ್ಲರೂ ಪರಸ್ಪರ ಸೋದರರು. ಎಲ್ಲ ದೈವಿಕ ಗ್ರಂಥಗಳೂ ಇದನ್ನೇ ಉಪದೇಶಿಸಿವೆ. ಅದರಂತೆ ನಾವೆಲ್ಲರೂ ಸೋದರರಂತೆ ಬದುಕಬೇಕು’ ಎಂದರು.

‘ಆದರೆ, ಇಂದು ಸ್ವಾರ್ಥ ಮನೋಭಾವದಿಂದ ಜನರು ತಮ್ಮೊಳಗೆ ಸಂಕುಚಿತತೆಯಿಂದ ಇದ್ದಾರೆ. ಖಾಸಗಿತನದ ಹೆಸರಿನಲ್ಲಿ ಜನರು ನೆರೆಹೊರೆಯ ಪರಿಕಲ್ಪನೆಯಿಂದ ದೂರವಾಗುತ್ತಿದ್ದಾರೆ. ಜನರ ಮಧ್ಯೆ ಅಂತರಗಳು ಅಗಾಧವಾಗಿ ಹೆಚ್ಚುತ್ತಿದ್ದು, ಪರಸ್ಪರ ಅನುಮಾನಗಳು ಹೆಚ್ಚಾಗುತ್ತಿವೆ. ಏಕಾಂಗಿತನ ಮತ್ತು ಅಭದ್ರತೆಗಳು ಮಾನಸಿಕ ಅಸ್ವಸ್ಥತೆಗೆ ಕಾರಣವಾಗುತ್ತಿವೆ. ಪರಸ್ಪರ ಹತ್ತಿರ ಇದ್ದರೂ ಮಾನಸಿಕವಾಗಿ ಬಹಳ ದೂರವಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಹಾಗಾಗಿ, ಇಂದು ಎಲ್ಲರೂ ನೆರೆಹೊರೆಯವರ ಹಕ್ಕುಗಳ ರಾಷ್ಟ್ರೀಯ ಅಭಿಯಾನವನ್ನು ಆರಂಭಿಸಬೇಕಿದೆ. ನಾವು ಮೊದಲು ಒಳ್ಳೆಯವರಾಗಿ, ನಮ್ಮ ನೆರೆಹೊರೆಯವರಿಗೆ ಒಳ್ಳೆಯವರಾಗಬೇಕು, ಜನರೆಲ್ಲರೂ ಪ್ರೀತಿ, ಸೌಹಾರ್ದತೆಯಿಂದ ಬದುಕಬೇಕು ಎಂದು ಪ್ರತಿಪಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.