ಸುಂಟಿಕೊಪ್ಪ: ಇಲ್ಲಿನ ಶ್ರೀಪುರಂ ಅಯ್ಯಪ್ಪಸ್ವಾಮಿ ಕ್ಷೇತ್ರದಲ್ಲಿ ಅಯ್ಯಪ್ಪ ಭಕ್ತರ ನೇತೃತ್ವದಲ್ಲಿ 54ನೇ ವರ್ಷದ ಮಂಡಲ ಪೂಜೋತ್ಸವವು ಡಿ.26ರಂದು ನಡೆಯಲಿದೆ.
2018ರ ಪ್ರಕೃತಿ ವಿಕೋಪ, 2020ರ ನಂತರದ ಕೋವಿಡ್ ಹಿನ್ನೆಲೆಯಲ್ಲಿ ಅತ್ಯಂತ ಸರಳವಾಗಿ ಆಚರಿಸಿಕೊಂಡು ಬಂದಿದ್ದ ಮಂಡಲಪೂಜೋತ್ಸವವು ಇದೀಗ ಮತ್ಯೊಮ್ಮೆ ಅದ್ಧೂರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ. ಈ ಮಧ್ಯೆ ಬಿಸಿಲಿನ ತಾಪಮಾನ ಮತ್ತು ಬೆಳಿಗ್ಗೆ ಮತ್ತು ರಾತ್ರಿ ಕೊರೆಯುವ ಚಳಿಯಿಂದಾಗಿ ಜ್ವರ, ಶೀತದಂತಹ ಪ್ರಕರಣಗಳು ಹರಡುತ್ತಿರುವ ಆತಂಕವಿದ್ದರೂ, ಎಲ್ಲ ಸಿದ್ಧತೆಗಳೂ ಭರದಿಂದ ಸಾಗಿವೆ. ದೇವಾಲಯದ ಆಡಳಿತ ಮಂಡಳಿ ಮುಂಜಾಗ್ರತಾ ಕ್ರಮವನ್ನು ಕೈಗೊಂಡಿದೆ.
ಈ ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಅಯ್ಯಪ್ಪ ವ್ರತಧಾರಿಗಳ ಸಂಖ್ಯೆ ಈ ಬಾರಿ ಹೆಚ್ಚಾಗಿದೆ. ನೂರಾರು ಭಕ್ತರು ಮಂಡಲ ಪೂಜೆಗೆ ಹಗಲಿರುಳು ದುಡಿಯುತ್ತಿದ್ದು, ಇಂದಿನ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.
ಈ ಬಾರಿ ಅದ್ಧೂರಿತನಕ್ಜೆ ಸಾಕ್ಷಿಯಾಗಿ ರಾತ್ರಿ ವಿದ್ಯುತ್ ದೀಪ ಅಲಂಕೃತ ಮಂಟಪದಲ್ಲಿ ಅಯ್ಯಪ್ಪಸ್ವಾಮಿಯ ಉತ್ಸವ ಮೂರ್ತಿಯ ಭವ್ಯ ಶೋಭಯಾತ್ರೆಯನ್ನು ಕೇರಳದ ಸಿಂಗಾರಿ ಮೇಳ ಮುನ್ನಡೆಸಿದರೆ, ಯುವತಿಯರು ದೀಪಗಳನ್ನು ಹಿಡಿದು ಮೆರುಗು ನೀಡಲಿದ್ದಾರೆ. ಅಲ್ಲದೇ, ಸಂಜೆ ವಿಶೇಷ ದೀಪರಾಧನೆ ಮತ್ತು ದುರ್ಗಾಪೂಜೆಯ ಸಹ ನಡೆಯಲಿದೆ.
ಮಧ್ಯಾಹ್ನ 2 ಸಾವಿರಕ್ಕೂ ಅಧಿಕ ಮಂದಿ ಭಕ್ತರಿಗೆ ಅನ್ನಸಂತರ್ಪಣೆಯನ್ನು ವಿತರಿಸುವ ಹೊಣೆಗಾರಿಕೆಯನ್ನು ದೇವಾಲಯದ ಆಡಳಿತ ಮಂಡಳಿ ಹೊತ್ತುಕೊಂಡಿದೆ. ಈಗಾಗಲೇ ದಾನಿಗಳಿಂದ ಅಕ್ಕಿ, ಬೆಲ್ಲ, ಬೇಳೆ, ಧಾನ್ಯಗಳ ಸಂಗ್ರಹವಾಗಿದೆ. ವ್ರತಧಾರಿಗಳು ಮತ್ತು ಆಡಳಿತ ಮಂಡಳಿ ದೇವಾಲಯದ ಅಲಂಕಾರ ಮಾಡುವುದರಲ್ಲಿ ತಯಾರಿ ನಡೆಸುತ್ತಿದ್ದಾರೆ.
ದೇವಾಲಯದಲ್ಲಿ ಇಂದಿನ ಪೂಜೆಗಳ ವಿವರ
ಬೆಳಿಗ್ಗೆ 6.45 ಗಣಪತಿ ಹೋಮ, 7.10ಕ್ಕೆ ಕನ್ನಿಮೂಲ ಗಣಪತಿಗೆ ಎಳೆನೀರು ಅಭಿಷೇಕ, 7.30 ಚಂಡೆಮೇಳ, 9 ಗಂಟೆಗೆ ಅಯ್ಯಪ್ಪ ಸ್ವಾಮಿಗೆ ಪಂಚಾಮೃತ ಅಭಿಷೇಕ, 11ಕ್ಕೆ ಅಯ್ಯಪ್ಪ ಸ್ವಾಮಿಗೆ ಲಕ್ಷಾರ್ಚನೆ, 12ಕ್ಕೆ ಪಲ್ಲಪೂಜೆ, ಬಿಲ್ವಪತ್ರೆ ಅರ್ಚನೆ, ತುಳಸಿ ಅರ್ಚನೆ, ದೂರ್ವಚನೆ, ಪಂಚಾಮೃತ ಅಭಿಷೇಕ ಮಧ್ಯಾಹ್ನ 1 ಗಂಟೆಗೆ ಮಹಾಪೂಜೆ, ಆರತಿ ಪೂಜೆ ಹಾಗೂ ಗಂಭೀರ ಪಠಾಕಿ ನಡೆಯಲಿದೆ. ನಂತರ, 1 ಗಂಟೆಯಿಂದ 4 ಗಂಟೆಯವರೆಗೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6.30ಕ್ಕೆ ವಿಶೇಷ ದೀಪರಾಧನೆ ಮತ್ತು ಅದ್ದೂರಿ ಮೆರವಣಿಗೆ ನಡೆಯಲಿದೆ.
ಈ ಬಾರಿ 54ನೇ ಮಂಡಲಪೂಜೋತ್ಸವ ನಡೆಯಲಿದ್ದು, ಎಲ್ಲ ಸಿದ್ಧತೆಗಳು ಅಂತಿಮ ಹಂತದಲ್ಲಿದೆ. ಪ್ರಧಾನ ಅರ್ಚಕ ಗಣೇಶ್ ಉಪಾಧ್ಯಾಯ ಅವರ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ನೆರವೇರಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಬಿ.ಎಂ. ಸುರೇಶ್ (ಪುಟ್ಟ) ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.