ಮಡಿಕೇರಿ: ಮಂಡೇಪಂಡ ತಂಡವು ಭಾನುವಾರ ಇಲ್ಲಿ ಮುಕ್ತಾಯಗೊಂಡ ‘ಮುದ್ದಂಡ ಕಪ್’ ಕೊಡವ ಕೌಟುಂಬಿಕ ಹಾಕಿ ಟೂರ್ನಿಯ ಚಾಂಪಿಯನ್ ಆಗಿ ಹೊರಹೊಮ್ಮಿತು.
ಅಪಾರ ಸಂಖ್ಯೆಯ ಪ್ರೇಕ್ಷಕರ ಸಮ್ಮುಖದಲ್ಲಿ ನಡೆದ ಪಂದ್ಯದ ಮೊದಲಾರ್ಧದಲ್ಲಿ ಮಂಡೇಪಂಡ 1–0ಯಿಂದ ಚೇದಂಡ ತಂಡದ ವಿರುದ್ಧ ಮುನ್ನಡೆ ಕಾಯ್ದುಕೊಂಡಿತ್ತು. ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಿನಲ್ಲಿ ಪರಿವರ್ತಿಸಿದ ಗೌತಮ್ ಕೊಡುಗೆ ನೀಡಿದರು.
ದ್ವಿತೀಯಾರ್ಧದ ಕೆಲವೇ ನಿಮಿಷದಲ್ಲಿ ಮಳೆ ಆರಂಭಗೊಂಡಿದ್ದು, ಕ್ರಮೇಣ ಬಿರುಸಾದ ಕಾರಣ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಮತ್ತೆ ಮತ್ತೆ ಮಳೆಯಾಗಿದ್ದು, ಇಡೀ ಮೈದಾನ ನೀರು ತುಂಬಿದ ಕಾರಣ ಪಂದ್ಯ ಅಲ್ಲಿಗೆ ಮುಕ್ತಾಯಗೊಂಡು, ಮಂಡೇಪಂಡ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು.
3ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ನೆಲ್ಲಮಕ್ಕಡ 2–1ರಿಂದ ಕುಪ್ಪಂಡ (ಕೈಕೇರಿ) ತಂಡವನ್ನು ಮಣಿಸಿತು.
ಚಾಂಪಿಯನ್ ಮಂಡೇಪಂಡ ₹ 5 ಲಕ್ಷ, ದ್ವಿತೀಯ ಸ್ಥಾನ ಪಡೆದ ಚೇಂದಂಡ ₹ 3 ಲಕ್ಷ ಹಾಗೂ ಸೆಮಿಫೈನಲ್ ಪ್ರವೇಶಿಸಿದ್ದ ನೆಲ್ಲಮಕ್ಕಡ ಮತ್ತು ಕುಪ್ಪಂಡ (ಕೈಕೇರಿ) ತಂಡಗಳು ತಲಾ ₹ 1 ಲಕ್ಷ ಬಹುಮಾನ ಪಡೆದವು.
ದಾಖಲೆ ನಿರ್ಮಾಣ:
ಈ ಬಾರಿಯ ಬೆಳ್ಳಿ ಹಬ್ಬದ ‘ಮುದ್ದಂಡ ಕಪ್’ ಹಾಕಿ ಉತ್ಸವದಲ್ಲಿ 396 ತಂಡಗಳಿಂದ 5,544 ಆಟಗಾರರು ಪಾಲ್ಗೊಂಡಿದ್ದು, ಒಟ್ಟು 397 ಪಂದ್ಯಗಳು ನಡೆದವು. ಮಹಿಳೆಯರ 5ಎ ಸೈಡ್ ಟೂರ್ನಿಯಲ್ಲಿ 58 ತಂಡಗಳಿಂದ 464 ಆಟಗಾರ್ತಿಯರು ಆಡಿದ್ದು, 57 ಪಂದ್ಯಗಳ ಮೂಲಕ ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲಾಗಿದೆ ಎಂದು ಸಂಸ್ಥೆಯ ಪ್ರತಿನಿಧಿ ಸಿಂಧುಜಾ ಘೋಷಿಸಿ, ಪ್ರಮಾಣಪತ್ರ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.