
ಮಡಿಕೇರಿ: ಕೇಂದ್ರ ಸರ್ಕಾರ ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ’ (ಮನರೇಗಾ) ಕಾಯ್ದೆಯ ಬದಲಿಗೆ ಹೊಸದಾಗಿ ಜಾರಿಗೆ ತಂದಿರುವ ‘ವಿಕಸಿತ ಭಾರತ – ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ ಗ್ರಾಮೀಣ’ (ವಿಬಿ– ಜಿ ರಾಮ್ ಜಿ) ಕಾಯ್ದೆಯು ಪ್ರಜಾಪ‍್ರಭತ್ವ, ಒಕ್ಕೂಟ ವ್ಯವಸ್ಥೆ ಹಾಗೂ ಬಡವರ ವಿರೋಧಿಯಾಗಿದೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಟೀಕಿಸಿದರು.
‘ರಾಜ್ಯ ಸರ್ಕಾರಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ, ತಜ್ಞರೊಂದಿಗೆ ಚರ್ಚೆ ನಡೆಸದೇ ಕೇವಲ 72 ಗಂಟೆಗಳಲ್ಲೇ ಏಕಪಕ್ಷೀಯವಾಗಿ ಕಾಯ್ದಯನ್ನು ಜಾರಿಗೊಳಿಸಿರುವುದು ಸರ್ವಾಧಿಕಾರದ ನಡೆ’ ಎಂದು ಅವರು ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿಶ್ಲೇಷಿಸಿದರು.
‘ಯಾವುದೇ ರಾಜ್ಯ ಸರ್ಕಾರದೊಂದಿಗೆ ಚರ್ಚೆ ನಡೆಸದೇ ಯೋಜನೆಯ ವೆಚ್ಚವನ್ನು ಶೇ 40ರಷ್ಟು ರಾಜ್ಯಸರ್ಕಾರದ ಮೇಲೆ ಹೊರಿಸಿರುವ ಕ್ರಮ ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದೆ. ಇದರ ವಿರುದ್ದ ಕೇವಲ ರಾಜ್ಯ ಸರ್ಕಾರ ಮಾತ್ರವಲ್ಲ, ತಮಿಳುನಾಡು, ಪಂಜಾಬ್, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ ಸರ್ಕಾರಗಳೂ ಟೀಕಿಸಿವೆ. ಇನ್ನಾದರೂ ಕೇಂದ್ರ ಸರ್ಕಾರ ವಿರೋಧವನ್ನು ಪರಿಗಣಿಸಿ ಹೊಸ ಕಾಯ್ದೆಯನ್ನು ವಾಪಸ್ ಪಡೆದು ನರೇಗಾ ಕಾಯ್ದೆಯನ್ನೇ ಮುಂದುರಿಸಬೇಕು’ ಎಂದು ಆಗ್ರಹಿಸಿದರು.
‘ಮನರೇಗಾ ಕಾಯ್ದೆಯಲ್ಲಿ ಗ್ರಾಮ ಪಂಚಾಯಿತಿಗಳಿಗೆ ಪರಮಾಧಿಕಾರ ಇತ್ತು. ಹೊಸ ಕಾಯ್ದೆಯಲ್ಲಿ ಎಲ್ಲ ಅಧಿಕಾರವನ್ನೂ ಗ್ರಾಮ ಪಂಚಾಯಿತಿಗಳಿಂದ ಕಸಿದುಕೊಳ್ಳಲಾಗಿದೆ. ಯಾವ ಪಂಚಾಯಿತಿಯಲ್ಲಿ ಯೋಜನೆ ಜಾರಿ ಮಾಡಬೇಕು, ಯಾವ ಕಾಮಗಾರಿ ಕೈಗೊಳ್ಳಬೇಕು ಎಂಬ ತೀರ್ಮಾನವೆಲ್ಲವೂ ಕೇಂದ್ರ ಸರ್ಕಾರದ್ದೇ ಆಗಿದೆ. ಈ ಮೂಲಕ ಅಧಿಕಾರ ವಿಕೇಂದ್ರಿಕರಣದ ಪರಿಕಲ್ಪನೆಯನ್ನೆ ಕೇಂದ್ರ ಗಾಳಿಗೆ ತೂರಿ ಬಂಡವಾಳಷಾಹಿಗಳಿಗೆ ಅನುಕೂಲ ಮಾಡಿಕೊಟ್ಟಿದೆ’ ಎಂದು ಆರೋಪಿಸಿದರು.
ಯೋಜನೆಯ ಹೆಸರಿನಲ್ಲಿದ್ದ ‘ಮಹಾತ್ಮ ಗಾಂಧಿ’ ಅವರ ಹೆಸರನ್ನು ಬದಲಾಯಿಸುವ ಮೂಲಕ ಬಿಜೆಪಿ ಮತ್ತು ಆರ್‌ಎಸ್‌ಎಸ್ ತನ್ನ ಮನಸ್ಥಿತಿಯನ್ನು ತೋರಿಸಿದೆ ಎಂದು ಹೇಳಿದರು.
ನರೇಗಾದಲ್ಲಿ ಭ್ರಷ್ಟಾಚಾರ ಇದೆ ಎಂದು ಕೇಂದ್ರ ಹೇಳುತ್ತಿದೆ. ದೇಶದ ಬಹುತೇಕ ರಾಜ್ಯಗಳಲ್ಲಿರುವುದು ಬಿಜೆಪಿ ನೇತೃತ್ವದ ಸರ್ಕಾರವೇ. ಹಾಗಾದರೆ, ಅಲ್ಲೆಲ್ಲ ಭ್ರಷ್ಟಾಚಾರ ನಡೆದಿದೆ ಎಂದೇ ಅರ್ಥವಲ್ಲವೇ ಎಂದು ತಿರುಗೇಟು ನೀಡಿದರು. ‘ಭ್ರಷ್ಟಾಚಾರ ನಡೆಯದ ಒಂದೇ ಒಂದು ಯೋಜನೆ ಇಲ್ಲ. ಭ್ರಷ್ಟಾಚಾರ ನಿಗ್ರಹಿಸಿ ಯೋಜನೆ ಜಾರಿಗೊಳಿಸಬೇಕೆ ವಿನಹ ಸಾರಾಸಗಟಾಗಿ ಯೋಜನೆಯನ್ನೇ ಬದಲಾವಣೆ ಮಾಡುವುದಲ್ಲ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.