ADVERTISEMENT

ಕಥನ ಪರಂಪರೆಗೆ ಹೊಸತನ ನೀಡಿ ಮೊಗಳ್ಳಿ ಗಣೇಶ್: ಟಿ.ಪಿ.ರಮೇಶ್

ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 5:43 IST
Last Updated 19 ಅಕ್ಟೋಬರ್ 2025, 5:43 IST
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿದರು
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿದರು   

ಮಡಿಕೇರಿ: ‘ಕನ್ನಡದ ಕಥನ ಪರಂಪರೆಗೆ ಹೊಸತನ ನೀಡಿದ ಸಾಹಿತಿ ಮೊಗಳ್ಳಿ ಗಣೇಶ್ ಅವರ ಅಪ್ರಕಟಿತ ಸಾಹಿತ್ಯವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಪಡಿಸಲು ಪ್ರಯತ್ನ ನಡೆಸಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ತಿಳಿಸಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ, ಜಿಲ್ಲಾ ಚಕೋರ ಸಾಹಿತ್ಯ ವೇದಿಕೆ, ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಕಾಲೇಜು ಸಭಾಂಗಣದಲ್ಲಿ ಶನಿವಾರ ನಡೆದ ಸಾಹಿತಿ ಮೊಗಳ್ಳಿ ಗಣೇಶ್ ಅವರ ಕುರಿತ ‘ವ್ಯಥೆಗಳ ಬರೆದ ಕಥೆಗಾರ ಮೊಗಳ್ಳಿ’ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಾಜನ ಕಾಲೇಜಿನ ಪ್ರಾಧ್ಯಾಪಕ ಪ್ರಕಾಶ್ ಮಾತನಾಡಿ, ‘ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಯುವ ಪೀಳಿಗೆ ಸಾಹಿತ್ಯದ ಓದು ಮತ್ತು ಸಾಹಿತ್ಯ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಡಿಜಿಟಲ್ ಯುಗದಲ್ಲಿ ಓದುವಿಕೆ ಕಡಿಮೆಯಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ರಂಗಭೂಮಿ ಕಲಾವಿದ ಭರಮಣ್ಣ ಬೆಟ್ಟಗೇರಿ ಅವರು ಮೊಗಳ್ಳಿ ಗಣೇಶ್ ಅವರ ‘ಮೂಟೆ’ ನಾಟಕವನ್ನೇ ಕೇಂದ್ರವಾಗಿಸಿಕೊಂಡು ಮಾತನಾಡಿದರು. ನಾಟಕದಲ್ಲಿ ಬರುವ ‘ಸುಖದ ಬೀಜದ ಹೆಸರು ಹೇಳಿ, ವಿಷವ ಬೀಜವ ಬಿತ್ತಿ ಕೊಲ್ಲಲು’ ಎಂಬ ಹಾಡನ್ನು ಹಾಡಿದರು. ಒಂದು ವಿಚಾರದ ವೈಯಕ್ತಿಕ ಮುಖವನ್ನು ಸಮಾಜಮುಖಿಯಾಗಿ ಪರಿವರ್ತಿಸಿದ ಕತೆ ಇದಾಗಿದೆ ಎಂದರು.

ಕಾಲೇಜು ಪ್ರಾಂಶುಪಾಲರಾದ ನಿರ್ಮಲ ಮಾತನಾಡಿ, ‘ಮೊಗಳ್ಳಿ ಗಣೇಶ್ ಅವರ ಕೃತಿಗಳನ್ನು ವಿದ್ಯಾರ್ಥಿಗಳು ಓದುವ ಮೂಲಕ, ಸಮಾಜಕ್ಕೆ  ಕೊಡುಗೆ ನೀಡಬೇಕು’ ಎಂದು ಹೇಳಿದರು.

ಮೊಗಳ್ಳಿ ಗಣೇಶ್ ಅವರನ್ನು ಕುರಿತು ಸಂಸ್ಕೃತಿ ಚಿಂತಕ ಜೆ.ಸೋಮಣ್ಣ ಪ್ರಧಾನ ಭಾಷಣ ಮಾಡಿದರು.   ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಅಲ್ಲಾರಂಡ ರಂಗ ಚಾವಡಿಯ ಅಧ್ಯಕ್ಷ ಅಲ್ಲಾರಂಡ ವಿಠಲ ನಂಜಪ್ಪ ಅವರು  ಮೊಗಳ್ಳಿ  ಅವರ ಕವನವೊಂದನ್ನು ವಾಚಿಸಿದರು.

ಮಹಿಳಾ ಪ್ರಥಮದರ್ಜೆ ಕಾಲೇಜು ಆಡಳಿತ ಮಂಡಳಿ ಸದಸ್ಯರಾದ ಬೇಗಂ, ಪುದಿಯನೆರವನ ರೇವತಿ ರಮೇಶ್, ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಪ್ರಭಾಕರ್, ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಸಂಚಾಲಕ ಎಚ್.ಎಲ್.ದಿವಾಕರ್, ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕ ಉದಯ ಕುಮಾರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.