ADVERTISEMENT

ಮಕ್ಕಳ ಮನವಿಗೆ ಮಣಿದ ನಗರಸಭೆ: ಗೌಳಿಬೀದಿ ರಸ್ತೆ ಪರಿಶೀಲಿಸಿದ ಪೌರಾಯುಕ್ತ ರಮೇಶ್‌

​ಪ್ರಜಾವಾಣಿ ವಾರ್ತೆ
Published 17 ಜನವರಿ 2020, 10:50 IST
Last Updated 17 ಜನವರಿ 2020, 10:50 IST
ಹದಗೆಟ್ಟ ರಸ್ತೆಯನ್ನು ಪರಿಶೀಲಿಸಿದ ನಗರಸಭೆ ಪೌರಾಯುಕ್ತ ರಮೇಶ್‌
ಹದಗೆಟ್ಟ ರಸ್ತೆಯನ್ನು ಪರಿಶೀಲಿಸಿದ ನಗರಸಭೆ ಪೌರಾಯುಕ್ತ ರಮೇಶ್‌   

ಮಡಿಕೇರಿ: ಗುಂಡಿ ಬಿದ್ದಿದ್ದ ರಸ್ತೆಯಿಂದ ಬೇಸತ್ತ ಮಕ್ಕಳು ಖುದ್ದು ನಗರಸಭಾ ಪೌರಾಯುಕ್ತರಿಗೆ ಮನವಿ ಸಲ್ಲಿಸಿ ಕಾಮಗಾರಿ ಆರಂಭಿಸುವಂತೆ ಪಟ್ಟು ಹಿಡಿದ ಘಟನೆ ನಗರದಲ್ಲಿ ಗುರುವಾರ ನಡೆದಿದೆ.

ಮಕ್ಕಳ ಮನವಿಗೆ ಮಣಿದ ಪೌರಾಯುಕ್ತ ರಮೇಶ್, ಗೌಳಿಬೀದಿ ರಸ್ತೆಯನ್ನು ಪರಿಶೀಲಿಸಿ ಮುಂದಿನ 15 ದಿನಗಳೊಳಗೆ ದುರಸ್ತಿ ಕಾರ್ಯ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಹಳ್ಳ, ಕೊಳ್ಳಗಳಾದ ರಸ್ತೆಗಳಿಂದ ವಾಹನ ಚಾಲಕರು ಹಾಗೂ ಪಾದಚಾರಿಗಳು ಪರದಾಡುತ್ತಲೇ ಇದ್ದಾರೆ. ಯಾರ ಮಾತಿಗೂ ನಗರಸಭೆಯ ಅಧಿಕಾರಿಗಳು ಬೆಲೆ ನೀಡುತ್ತಿಲ್ಲವೆಂದು ಮನಗಂಡ ಗೌಳಿಬೀದಿಯ ವಿದ್ಯಾರ್ಥಿಗಳು ತಾವೇ ಅಧಿಕಾರಿಗಳನ್ನು ಎಚ್ಚರಿಸುವ ಕಾರ್ಯಕ್ಕೆ ಮುಂದಾದರು.

ADVERTISEMENT

ಪೌರಾಯುಕ್ತರ ಕಚೇರಿಗೆ ತೆರಳಿದ 10ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಲಿಖಿತ ರೂಪದಲ್ಲಿ ಮನವಿ ಸಲ್ಲಿಸಿ |ಗೌಳಿಬೀದಿಯ ಕಲ್ಪವೃಕ್ಷ ಕಟ್ಟಡ ವ್ಯಾಪ್ತಿಯ ಒಳ ರಸ್ತೆಯನ್ನು ದುರಸ್ತಿ ಪಡಿಸುವಂತೆ ಒತ್ತಾಯಿಸಿದರು. ಸ್ಥಳ ಪರಿಶೀಲನೆ ನಡೆಸುವಂತೆ ಮನವಿ ಮಾಡಿದರು.

ಮಕ್ಕಳ ಮನವಿಗೆ ಮಣಿದ ರಮೇಶ್, ಇತರ ಅಧಿಕಾರಿಗಳೊಂದಿಗೆ ತೆರಳಿ ಹದಗೆಟ್ಟ ರಸ್ತೆಯನ್ನು ಪರಿಶೀಲಿಸಿದರು. ಗುಂಡಿ ಬಿದ್ದ ರಸ್ತೆಗಳಿಂದ ತಮಗಾಗುತ್ತಿರುವ ತೊಂದರೆಯನ್ನು ವಿದ್ಯಾರ್ಥಿಗಳು ವಿವರಿಸಿದರು.

ಅಧಿಕಾರಿಗಳ ಭರವಸೆ ಮತ್ತು ತಮ್ಮ ವಿನೂತನ ಪ್ರಯತ್ನಕ್ಕೆ ವಿದ್ಯಾರ್ಥಿಗಳು ಹೆಮ್ಮೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.