ADVERTISEMENT

ನಾಗರಹೊಳೆ: ಉತ್ತಮ ಮಳೆ, ವನ್ಯಜೀವಿಗಳ ಸ್ವಚ್ಛಂದ ವಿಹಾರ

ಉತ್ತಮ ಮಳೆ: ತುಂಬಿದ ಕೆರೆ ಕುಂಟೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2021, 21:00 IST
Last Updated 16 ಡಿಸೆಂಬರ್ 2021, 21:00 IST
ಗೋಣಿಕೊಪ್ಪಲು ಬಳಿಯ ನಾಗರಹೊಳೆ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನದಲ್ಲಿ ತುಂಬಿರುವ ಕೆರೆಗಳು
ಗೋಣಿಕೊಪ್ಪಲು ಬಳಿಯ ನಾಗರಹೊಳೆ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನದಲ್ಲಿ ತುಂಬಿರುವ ಕೆರೆಗಳು   

ಗೋಣಿಕೊಪ್ಪಲು: ಜಿಲ್ಲೆಯಲ್ಲಿ ಸುರಿದ ಉತ್ತಮ ಮಳೆಯಿಂದಾಗಿ ನಾಗರಹೊಳೆ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನ ಹಸಿರಿನಿಂದ ಕಂಗೊಳಿಸುತ್ತಿದೆ. ಮತ್ತೊಂದು ಕಡೆ ಕೆರೆಕುಂಟೆಗಳು ತುಂಬಿ ನಳನಳಿಸುತ್ತಿವೆ.

ಈ ಬಾರಿ ಆಗಸ್ಟ್‌‌ನಲ್ಲಿ ಆರಂಭಗೊಂಡ ಮಳೆ ಸೆಪ್ಟೆಂಬರ್‌‌ವರೆಗೂ ನಾಗರಹೊಳೆ ಅರಣ್ಯಕ್ಕೆ ಉತ್ತಮವಾಗಿ ಬಿದ್ದಿರಲಿಲ್ಲ. ಸೆಪ್ಟೆಂಬರ್ ಅಂತ್ಯದವರೆಗೂ ಕೆರೆ ಹಾಗೂ ಹಳ್ಳಕೊಳ್ಳಗಳು ನೀರಿಲ್ಲದೇ ಬಣಗುಡುತ್ತಿದ್ದವು. ಬೇಸಿಗೆಯಲ್ಲಿ ಮತ್ತೆ ನೀರಿನ ಅಭಾವ ಸೃಷ್ಟಿಯಾಗಲಿದೆ ಎಂಬ ಭಾವನೆ ಮೂಡಿತ್ತು. ಆದರೆ, ಅಕ್ಟೋಬರ್ ಮತ್ತು ನವೆಂಬರ್‌‌ನಲ್ಲಿ ಬಿದ್ದ ನಿರಂತರ ಮಳೆ ಈ ಆತಂಕವನ್ನು ದೂರವಾಗಿಸಿತು.

ನಾಗರಹೊಳೆ ವನ್ಯಜೀವಿ ಧಾಮದಲ್ಲಿರುವ 150ಕ್ಕೂ ಹೆಚ್ಚಿನ ಕೆರೆಗಳು ಈ ಎರಡು ತಿಂಗಳ ಅವಧಿಯಲ್ಲಿ ಮೈದುಂಬಿಕೊಂಡಿವೆ. ಕೆಲವು ಕೆರೆಗಳು ಕೋಡಿಬಿದ್ದು ಹರಿಯುತ್ತಿವೆ. ಜತೆಗೆ ಕೆರೆಗಳ ಆಜುಬಾಜುಗಳಲ್ಲಿ ಜಲ ಉದ್ಭವವಾಗಿದೆ.

ADVERTISEMENT

ತುಂಬಿದ ಕೆರೆಗಳಲ್ಲಿ ವನ್ಯಜೀವಿಗಳು ಸಂತೃಪ್ತಿಯಾಗಿ ನೀರು ಕುಡಿಯುತ್ತಿವೆ. ಆನೆ, ಹುಲಿಗಳು ನೀರಿನಲ್ಲಿ ಸ್ವಚ್ಚಂದವಾಗಿ ಈಜಾಡುತ್ತಿವೆ.

ಉದುರದ ಎಲೆ: ಸಾಮಾನ್ಯವಾಗಿ ಅಕ್ಟೋಬರ್ ವೇಳೆಗೆ ಮಳೆ ಕಡಿಮೆಯಾಗಿ ನವೆಂಬರ್‌‌ನಲ್ಲಿ ಚಳಿಗಾಲ ಆರಂಭವಾಗುತ್ತಿತ್ತು. ಡಿಸೆಂಬರ್‌‌ನಲ್ಲಿ ಗಿಡಮರಗಳೆಲ್ಲ ಎಲೆ ಉದುರಿಸಿ ಚಿಗುರೆಲೆಗೆ ಅವಕಾಶ ಮಾಡಿಕೊಡುತ್ತಿದ್ದವು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯವರು ಬೆಂಕಿರೂಟ್‌‌ಗಳನ್ನು ಕಡಿದು ಸ್ವಚ್ಚಗೊಳಿಸಿ ಬೇಸಿಗೆಯ ಕಾಳ್ಗಿಚ್ಚು ಎದುರಿಸಲು ಸನ್ನದ್ಧರಾಗುತ್ತಿದ್ದರು. ಆದರೆ ಈ ಬಾರಿ ನೆಲದ ಹಸಿರು ಒಣಗಿಲ್ಲ. ಗಿಡಮರಗಳ ಎಲೆಗಳೂ ಉದುರಿಲ್ಲ. ಋತುಮಾನ ಬದಲಾದಂತೆ ಕಾಣುತ್ತಿದೆ. ಶಿಶಿರ ಋತು ಮುಗಿದು ವಸಂತ ಋತುವಿಗೆ ಮುನ್ನುಡಿ ಬರೆಯುತ್ತಿದ್ದ ಪ್ರಕೃತಿ ರಾಜ ಈಗಲೂ ಹಸಿರನ್ನೆ ಹೊದ್ದು ಮಲಗಿದ್ದಾನೆ.

ಅರಣ್ಯದಲ್ಲಿ ನೀರು ಮತ್ತು ಮೇವು ಸಮೃದ್ಧವಾಗಿದ್ದು ವನ್ಯಜೀವಿಗಳು ಸಂತಸದಿಂದಿವೆ. ಜಿಂಕೆಗಳ ಸಂತಾನ ಹೆಚ್ಚಾಗಿದೆ. ಇದರಿಂದ ಹುಲಿಗಳ ಸಂತತಿಯೂ ಗಣನೀಯವಾಗಿ ಹೆಚ್ಚಿದೆ. ಎಸಿಎಫ್ ಗೋಪಾಲ್ ಹೇಳುವಂತೆ ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ 156 ಹುಲಿಗಳಿವೆ. ಕಾಡುಕೋಣ, ಆನೆ, ಕಡವೆಗಳ, ನವಿಲು, ಕರಡಿಗಳ ಸಂತತಿಯೂ ಹೆಚ್ಚಾಗಿದೆ.

ನಾಗರಹೊಳೆ ಅಭಿವೃದ್ಧಿ ವಿರುದ್ಧ ಮೊಕದ್ದಮೆ: ಇತ್ತೀಚಿನ ವರ್ಷಗಳಲ್ಲಿ ನಾಗರಹೊಳೆ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿ ಅನುದಾನ ಹರಿದು ಬರುತ್ತಿದೆ. ಅರಣದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳಬಾರದು. ಬದಲಿಗೆ ಸಂರಕ್ಷಿಸಬೇಕು. ಅರಣ್ಯ ಸಂರಕ್ಷಣೆ ಬಗ್ಗೆ ಅಧಿಕಾರಿಗಳಿಗೆ ಕಾಳಜಿಯಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಾರೆ 81 ರ ಹರೆಯದ ನಾಗರಹೊಳೆ ನಿವೃತ್ತ ವಲಯ ಅರಣ್ಯಾಧಿಕಾರಿ ಹಾಗೂ ವೈಲ್ಡ್ ಫಸ್ಟ್ ಅಧ್ಯಕ್ಷ ಕೆ.ಎಂ.ಚಿಣ್ಣಪ್ಪ. ನಾಗರಹೊಳೆ ಅರಣ್ಯದಲ್ಲಿ ಕೈಗೊಂಡಿರುವ ಕೆಲವು ಅಭಿವೃದ್ಧಿ ಕಾರ್ಯಗಳ ವಿರುದ್ಧ ಅವರು ಹೈಕೋರ್ಟ್ ನಲ್ಲಿ ಮೊಕದ್ದಮೆ ಹೂಡಿದ್ದಾರೆ.

ನೂರಾರು ವರ್ಷಗಳಿಂದ ಇದ್ದ ಅರಣ್ಯದಂಚಿನ ನಾಣಚ್ಚಿ ಪ್ರವೇಶ ದ್ವಾರವನ್ನು ಬದಲಾಯಿಸಿ ಅರ್ಧ ಕಿಮೀ ಒಳಗೆ ನಿರ್ಮಿಸಲಾಗಿದೆ. ಇದು ಕೂಡ ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ತುತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.