ADVERTISEMENT

ಆರ್‌ಟಿಸಿಯಲ್ಲಿ ಹೆಸರು ನಾಪತ್ತೆ: ದೋಷ ಸರಿಪಡಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 4:09 IST
Last Updated 8 ಜುಲೈ 2025, 4:09 IST
ಭಾಗಮಂಡಲದ ನಾಡ ಕಚೇರಿಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿದ ಅಮೆ ಕುಟುಂಬದ ಸದಸ್ಯರು ಆರ್‌ಟಿಸಿಯಲ್ಲಿನ ದೋಷ ಸರಿಪಡಿಸುವಂತೆ ಒತ್ತಾಯಿಸಿದರು
ಭಾಗಮಂಡಲದ ನಾಡ ಕಚೇರಿಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿದ ಅಮೆ ಕುಟುಂಬದ ಸದಸ್ಯರು ಆರ್‌ಟಿಸಿಯಲ್ಲಿನ ದೋಷ ಸರಿಪಡಿಸುವಂತೆ ಒತ್ತಾಯಿಸಿದರು   

ನಾಪೋಕ್ಲು: ಕಂದಾಯ ಇಲಾಖೆಯ ಅಧಿಕಾರಿಗಳು ಆರ್‌ಟಿಸಿಯಲ್ಲಿ ಕುಟುಂಬದ ಹೆಸರು ತೆಗೆದು ಹಾಕಿದ್ದಾರೆ. ಈ ಮೂಲಕ ಕುಟುಂಬಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಅಮೆ ಕುಟುಂಬದ ಸದಸ್ಯರು ಆರೋಪಿಸಿದರು.

ಭಾಗಮಂಡಲದ ನಾಡ ಕಚೇರಿಗೆ ಸೋಮವಾರ ತೆರಳಿದ ಕುಟುಂಬದ 40 ಸದಸ್ಯರು ಆರ್‌ಟಿಸಿಯಲ್ಲಿ ಬಾಲಕೃಷ್ಣ ಅವರ ಹೆಸರು ಇಲ್ಲದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಹಿರಿಯರಾದ ಅಮೆ ಬಾಲಕೃಷ್ಣ ಮಾತನಾಡಿ, ‘ಭಾಗಮಂಡಲ ನಾಡ ಕಚೇರಿ ವ್ಯಾಪ್ತಿಯ ತಾವೂರು ಗ್ರಾಮದ ಸರ್ವೆ ನಂಬರ್ 60/1 ಅಮೆ ಕುಟುಂಬಸ್ಥರಿಗೆ ಸೇರಿದ ಗದ್ದೆ ಇದೆ. ಹಲವು ವರ್ಷಗಳಿ೦ದ ಸಾಗುವಳಿ ಮಾಡುತ್ತಾ ಬಂದಿದ್ದಾರೆ. ಕುಟುಂಬದ ಸದಸ್ಯರು ಜಮಾಮಂದಿಗೆ ಸೇರಿದ್ದಾರೆ. 2001ರಲ್ಲಿ ಆರ್‌ಟಿಸಿ ಬಂದಿದ್ದು, ಇತ್ತೀಚೆಗೆ ಕುಟುಂಬದ ಸದಸ್ಯನಾದ ನನ್ನ ಹೆಸರನ್ನು ತೆಗೆದುಹಾಕಿದ್ದಾರೆ. ಸಮೀಪದ ಸುಳ್ಯದ ತೊಡಿ ಕಾನದಲ್ಲಿರುವ ಕುಟುಂಬದ ನಾಲ್ವರು ಸದಸ್ಯರ ಹೆಸರು ಸೇರ್ಪಡೆಗೊಳಿಸಿದ್ದಾರೆ. ಆರ್‌ಟಿಸಿ ಗೆ ಯಾವುದೇ ವ್ಯಕ್ತಿಯ ಹೆಸರನ್ನು ಸೇರಿಸಬೇಕಿದ್ದಲ್ಲಿ ಕುಟುಂಬದ ಸದಸ್ಯರು ಒಪ್ಪಿಗೆ ಪತ್ರ ಬೇಕು. ಇದನ್ನು ಪಡೆಯದೆ ಕಂದಾಯ ಇಲಾಖೆಯ ಅಧಿಕಾರಿಗಳು ಹೆಸರನ್ನು ಸೇರ್ಪಡೆಗೊಳಿಸಿದ್ದು ಹೇಗೆ’ ಎಂದು ಪ್ರಶ್ನಿಸಿದರು.

ADVERTISEMENT

ತಾವೂರು ಗ್ರಾಮದ ಆಸ್ತಿ 6/2 ರಲ್ಲಿ ಪಟ್ಟೆದಾರ ಮುದ್ದಪ್ಪನವರ ಹೆಸರಿನಲ್ಲಿದ್ದ ಜಾಗವನ್ನು ಸ್ಥಳೀಯ ಮುಸ್ಲಿಂ ಕುಟುಂಬಕ್ಕೆ ದಾನವಾಗಿ ನೀಡಲಾಗಿತ್ತು. ಜಾಗದ ಸಮೀಪದ ರಸ್ತೆಯು ಸೇರಿದಂತೆ ಜಾಗವನ್ನು 2017–18 ರಲ್ಲಿ ವಕ್ಫ್ ಖಾತೆಗೆ ಸೇರ್ಪಡೆಗೊಳಿಸಿದ್ದಾರೆ. ಆ ಮೂಲಕ ಇಲಾಖೆ ಎರಡು ಸಮುದಾಯಗಳ ನಡುವೆ ಸಾಮರಸ್ಯವನ್ನು ಕದಡಲು ಯತ್ನಿಸುತ್ತಿದೆ ಎಂದು ದೂರಿದರು.

‘ಇದು ಕಣ್ತಪ್ಪಿನಿಂದ ಆದ ದೋಷವಲ್ಲ. ಅಧಿಕಾರಿಗಳ ನಿರ್ಲಕ್ಷದಿಂದ ಈ ರೀತಿಯ ಸಮಸ್ಯೆ ಉದ್ಭವಿಸುತ್ತಿದೆ. ಉದ್ದೇಶಪೂರ್ವಕವಾಗಿ ಮಾಡಿದ್ದು’ ಎಂದು ಕುಟುಂಬದವರು ಆರೋಪಿಸಿದರು.

ಕಂದಾಯ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿದ ಕುಟುಂಬದ ಸದಸ್ಯರು ಕೂಡಲೇ ದೋಷವನ್ನು ಸರಿಪಡಿಸುವಂತೆ ಒತ್ತಾಯಿಸಿದರು.

ದೋಷ ಸರಿಪಡಿಸುವುದಾಗಿ ಕಂದಾಯ ಇಲಾಖೆ ಅಧಿಕಾರಿಗಳು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.