ADVERTISEMENT

ದೇವರ ಹೆಸರಲ್ಲಿ ನೃತ್ಯ ಪ್ರದರ್ಶನ

ನಾಪೋಕ್ಲು: ಮಕ್ಕೋಟು ಮಹಾಲಕ್ಷ್ಮಿ ಉತ್ಸವಕ್ಕೆ ತೆರೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2021, 13:34 IST
Last Updated 15 ಏಪ್ರಿಲ್ 2021, 13:34 IST
ನಾಪೋಕ್ಲು ಸಮೀಪದ ಕೈಕಾಡು ಗ್ರಾಮದ ಮಕ್ಕೋಟು ಮಹಾಲಕ್ಷ್ಮಿ ದೇವಾಲಯದಲ್ಲಿ ಗುರುವಾರ ಗ್ರಾಮಸ್ಥರು ನೃತ್ಯ ಪ್ರದರ್ಶಿಸಿದರು
ನಾಪೋಕ್ಲು ಸಮೀಪದ ಕೈಕಾಡು ಗ್ರಾಮದ ಮಕ್ಕೋಟು ಮಹಾಲಕ್ಷ್ಮಿ ದೇವಾಲಯದಲ್ಲಿ ಗುರುವಾರ ಗ್ರಾಮಸ್ಥರು ನೃತ್ಯ ಪ್ರದರ್ಶಿಸಿದರು   

ನಾಪೋಕ್ಲು: ಮಕ್ಕೋಟು ಮಹಾಲಕ್ಷ್ಮಿ ಉತ್ಸವ ಗುರುವಾರ ವಿಜೃಂಭಣೆಯಿಂದ ಜರುಗಿತು.

ಕೈಕಾಡು ಗ್ರಾಮದ ವಿವಿಧ ಕುಟುಂಬಗಳ ಮಂದಿ ಸಾಂಪ್ರದಾಯಿಕ ದಿರಿಸಿನಲ್ಲಿ ಪಾಲ್ಗೊಂಡು ದೇವಾಲಯದಲ್ಲಿ ನೃತ್ಯ ಪ್ರದರ್ಶಿಸಿದರು. ಈ ಉತ್ಸವದಲ್ಲಿ ನೃತ್ಯವೇ ಪ್ರಧಾನ, ನೃತ್ಯದ ಮೂಲಕ ಮಹಾಲಕ್ಷ್ಮಿಯನ್ನು ಪೂಜಿಸುವ ಉತ್ಸವವಿದು.

ಎರಡು ವರ್ಷಗಳಿಗೊಮ್ಮೆ ಉತ್ಸವ ನಡೆಯುತ್ತದೆ. ಪೀಲಿಯಾಟ್, ತೇಲಾಟ್, ಬಿಲ್ಲಾಟ್, ಕತ್ತಿಯಾಟ್, ಕೊಂಬಾಟ್, ಜೋಡಿಯಾಟ್, ಅಜ್ಜಿಯಾಟ್... ಹೀಗೆ ಹದಿನೆಂಟು ವಿಧದ ಕುಣಿತವನ್ನು ದೇವರ ಹೆಸರು ಹೇಳುತ್ತಾ ಕೈಕಾಡು, ಮಕ್ಕೋಟು ಕೇರಿಯ ಗ್ರಾಮಸ್ಥರು ನೃತ್ಯ ಮಾಡಿದರು.

ADVERTISEMENT

ಮಕ್ಕೋಟು ಕೇರಿಯ ದೇವತಕ್ಕರಾದ ಚೊಟ್ಟೆಯಂಡ, ಭಂಡಾರ ತಕ್ಕರಾದ ನೆರೆಯಂಡಮ್ಮಂಡ, ನಾಯಕಂಡ, ಕದ್ದಣಿಯಂಡ, ಪಾಡಿಯಂಡ, ಬಟ್ಟಿಯಂಡ ಕುಟುಂಬದ 18 ವರ್ಷ ಮೇಲ್ಪಟ್ಟ ಸದಸ್ಯರು ಒಟ್ಟಾಗಿ ದೇವಾಲಯದ ಪ್ರಾಂಗಣದಲ್ಲಿ ನರ್ತಿಸಿದರು. ಉತ್ಸವದೊಂದಿಗೆ ಹಬ್ಬಕ್ಕೆ ತೆರೆ ಎಳೆಯಲಾಯಿತು.

ಹಬ್ಬದ ದಿನ ಸಾಂಪ್ರದಾಯಿಕ ದಿರಿಸು ಧರಿಸಿ ದೇವಾಲಯಕ್ಕೆ ಬಂದು ಜಿಂಕೆಯ ಕೊಂಬು, ನವಿಲುಗರಿ ಮತ್ತಿತರ ನೃತ್ಯಕ್ಕೆ ಅಗತ್ಯವಿರುವ ವಸ್ತುಗಳನ್ನು ಹಿಡಿದು ಮೇದ ಜನಾಂಗದವರ ವಾದ್ಯಕ್ಕೆ ದೇವರನ್ನು ನೆನೆಯುತ್ತಾ ನೃತ್ಯಕ್ಕೆ ಹೆಜ್ಜೆ ಹಾಕಿದರು. ಒಂದೊಂದು ಬಗೆಯ ನೃತ್ಯವನ್ನು 15 ನಿಮಿಷ ಪ್ರದರ್ಶಿಸಲಾಯಿತು.

ದೇವರ ಆರಾಧನೆಯ ನೃತ್ಯ ನಡೆದ ಬಳಿಕ ದೇವಾಲಯದಲ್ಲಿ ಮಹಾಪೂಜೆ ಮಾಡಲಾಯಿತು. ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.

‘ಮಕ್ಕೋಟು ಮುನಿಯು ತಪಸ್ಸು ಮಾಡಿದ ಮಕ್ಕೋಟು ಕೇರಿಯಲ್ಲಿ ದೇವಿಯ ಉತ್ಸವವು ಎರಡು ವರ್ಷಗಳಿಗೊಮ್ಮೆ ನಡೆಯುತ್ತದೆ. ಒಂದು ವರ್ಷ ಅಯ್ಯಪ್ಪ ಉತ್ಸವ ಜರುಗುತ್ತದೆ. ದೇವಿಯು ತಳೆದ ರೂಪವನ್ನು ತೋರಿಸಲು ಕೇರಿಯ ಯುವಕರು ಶುದ್ಧರಾಗಿ ಕೊಂಬು, ಬಿಲ್ಲು–ಬಾಣ, ನವಿಲುಗರಿ, ಕತ್ತಿ ಹಿಡಿದು ಹದಿನೆಂಟು ವಿಧದ ನೃತ್ಯವನ್ನು ಪೀಲಿಯಾಟ್ ಕಳಿ ಎನ್ನುವ ಸ್ಥಳದಲ್ಲಿ ಮಾಡಿ ಹದಿನೈದು ದಿನ ರಾತ್ರಿ ಕುಣಿದು ಬಳಿಕ ಹಬ್ಬದ ದಿನ ನೃತ್ಯಗಳನ್ನು ಮಾಡಿ ದೇವರಿಗೆ ಸಮರ್ಪಿಸುತ್ತಾರೆ’ ಎಂದು ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಮುತ್ತಪ್ಪ ಮಾಹಿತಿ ನೀಡಿದರು.

ಉತ್ಸವಕ್ಕಾಗಿ ಭಕ್ತರು ಹದಿನೈದು ದಿನಗಳ ಹಿಂದೆ ದೇವಾಲಯದ ಪ್ರಾಂಗಣದಲ್ಲಿ ಒಟ್ಟು ಸೇರಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿ, ಸಂಪ್ರದಾಯಿಕ ಆಚರಣೆ ನೆರವೇರಿಸಿದ್ದರು. ಬಳಿಕ ದೇವಾಲಯದ ಅನತಿ ದೂರದಲ್ಲಿ ಹಿಂದಿನಿಂದ ಆಚರಣೆಗೆ ನಿಗದಿಪಡಿಸಿರುವ ಸ್ಥಳದಲ್ಲಿ ನೃತ್ಯಾಭ್ಯಾಸ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.