ADVERTISEMENT

ವಂಶಾಡಳಿತಕ್ಕೆ ಜೋತು ಬಿದ್ದ ಕಾಂಗ್ರೆಸ್‌: ಸಿ.ಟಿ.ರವಿ ಟೀಕೆ

ಕೊಡಗು ಜಿಲ್ಲಾ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2019, 12:18 IST
Last Updated 28 ಜೂನ್ 2019, 12:18 IST
ಮಡಿಕೇರಿಯ ಬಾಲಭವನದಲ್ಲಿ ಶುಕ್ರವಾರ ನಡೆದ ಬಿಜೆಪಿ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಶಾಸಕ ಸಿ.ಟಿ.ರವಿ ಚಾಲನೆ ನೀಡಿದರು 
ಮಡಿಕೇರಿಯ ಬಾಲಭವನದಲ್ಲಿ ಶುಕ್ರವಾರ ನಡೆದ ಬಿಜೆಪಿ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಶಾಸಕ ಸಿ.ಟಿ.ರವಿ ಚಾಲನೆ ನೀಡಿದರು    

ಮಡಿಕೇರಿ: ‘ಬಿಜೆಪಿಗೆ ಕಾರ್ಯಕರ್ತರೇ ಶಕ್ತಿ. ಅವರಿಂದಲೇ ಬಿಜೆಪಿ ಪಕ್ಷವು ಅಧಿಕಾರಕ್ಕೇರಿದೆ. ಅದೇ ಕಾಂಗ್ರೆಸ್‌ನದ್ದು ಡಿಎನ್‌ಎ ಆಡಳಿತ. ಅವರದ್ದೇ ವಂಶವು ಆಡಳಿತಕ್ಕೆ ಬರಬೇಕು ಎಂಬುದು ಆ ಪಕ್ಷದ ಹಿರಿಯರ ಆಸೆ’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯವಾಡಿದರು.

ನಗರದ ಬಾಲಭವನದಲ್ಲಿ ಶುಕ್ರವಾರ ನಡೆದ ಬಿಜೆಪಿ ಸಂಘಟನಾ ಸರ್ವ ಸದಸ್ಯ ಅಭಿಯಾನದಲ್ಲಿ ಅವರು ಮಾತನಾಡಿದರು.

‘ಅಟಲ್‌ ಬಿಹಾರಿ ವಾಜಪೇಯಿ ಅವರು ಸರ್ವಶ್ರೇಷ್ಠ ಆಡಳಿತ ನೀಡಿದ್ದರು. ಅವರ ಮಾದರಿಯಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಸಾಗುತ್ತಿದ್ದಾರೆ. ಪರಿಶ್ರಮ, ವಿಚಾರ, ಕಾರ್ಯಕರ್ತರ ಸಂಘಟನೆಯ ಪ್ರಯತ್ನದಿಂದ ಮತ್ತೊಬ್ಬ ಸರ್ವಶ್ರೇಷ್ಠ ನಾಯಕ ಬಿಜೆಪಿಯಿಂದ ಬರಲಿದ್ದಾರೆ. ಅದೇ ಬಿಜೆಪಿಯ ಶಕ್ತಿ’ ಎಂದು ಬಣ್ಣಿಸಿದರು.

‘ಈ ಡಿಎನ್‌ಎ ಆಡಳಿತವು ಇತರೆ ಕೆಲವು ಪ್ರಾದೇಶಿಕ ವಿರೋಧ ‍ಪಕ್ಷಗಳಲ್ಲೂ ಕಾಣಿಸುತ್ತಿದೆ. ರಾಜ್ಯದಲ್ಲಿ ಜೆಡಿಎಸ್‌ನದ್ದು ಅದೇ ವಂಶಾಡಳಿತದ ಹಣೆಬರಹ’ ಎಂದು ಕುಟುಕಿದರು.

‘ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ 17 ರಾಜ್ಯಗಳಲ್ಲಿ ಶೂನ್ಯ ಸಂಪಾದಿಸಿದೆ. ನಮಗೆ ಮೂರು ರಾಜ್ಯದಲ್ಲಿ ಮಾತ್ರ ಹಿನ್ನಡೆ ಉಂಟಾಗಿದೆ. ಮುಂದೆ ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳದಲ್ಲೂ ಬಿಜೆಪಿ ಕ್ಲೀನ್‌ ಸ್ವೀಪ್‌ ಮಾಡಲಿದೆ. ಅದಕ್ಕೆ ಬೂತ್‌ಮಟ್ಟದಲ್ಲಿ ಸಂಘಟನೆ ಅಗತ್ಯ’ ಎಂದು ಪ್ರತಿಪಾದಿಸಿದರು.

ADVERTISEMENT

ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ‘ಗ್ರಾಮ ವಾಸ್ತವ್ಯದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಜನರ ಸಮಸ್ಯೆ ಆಲಿಸುವ ಕೆಲಸ ಮಾಡಬೇಕಿತ್ತು. ಅದನ್ನು ಬಿಟ್ಟು ಜನರನ್ನೇ ಬೈಯುತ್ತಾ ಓಡಾಡುತ್ತಿದ್ದಾರೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರೂ ತಮ್ಮ ಘನತೆಗೆ ತಕ್ಕಂತೆ ಮಾತನಾಡುತ್ತಿಲ್ಲ’ ಎಂದು ಆಪಾದಿಸಿದರು.

ಶಾಸಕ ಎಂ.‍ಪಿ.ಅಪ್ಪಚ್ಚು ರಂಜನ್‌ ಮಾತನಾಡಿ, ‘ಡಿಸೆಂಬರ್‌ ಒಳಗೆ ರಾಜ್ಯ ಸರ್ಕಾರವು ಬಿದ್ದು ಹೋಗಲಿದೆ. ಕೊಡಗಿನ ಜನರ ಶಾಪವೇ ಈ ಸರ್ಕಾರಕ್ಕೆ ತಟ್ಟಲಿದೆ. ಪ್ರಕೃತಿ ವಿಕೋಪದ ವೇಳೆ ಇಡೀ ರಾಜ್ಯದ ಜನರು ನೆರವು ನೀಡಿದ್ದರು. ಅದು ಸದ್ಬಳಕೆ ಆಗಿಲ್ಲ, ಸಂಪೂರ್ಣ ಕೊಡಗು ನಿರಾಶ್ರಿತರಿಗೆ ತಲುಪಿಲ್ಲ’ ಎಂದು ದೂರಿದರು.

ವಿಧಾನ ಪರಿಷತ್‌ ಸದಸ್ಯ ಸುನಿಲ್‌ ಸುಬ್ರಮಣಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ.ಹರೀಶ್‌, ಉದಯಕುಮಾರ ಶೆಟ್ಟಿ, ರಾಜೇಂದ್ರ, ರೀನಾ ಪ್ರಕಾಶ್‌, ಶಾಂತಿ ಸತೀಶ್‌, ರಾಬಿನ್‌ ದೇವಯ್ಯ, ಸುಜಾ ಕುಶಾಲಪ್ಪ, ಎಚ್‌.ಸಿ.ಮೇದಪ್ಪ, ಮನು ಮುತ್ತಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.