ADVERTISEMENT

ಶಾಲೆಗೆ ಧರ್ಮವೊಂದರ ಪುಸ್ತಕ ಪೂರೈಕೆ: ವಿರೋಧ

ತನಿಖೆಗೆ ಹಿಂದೂ ಜಾಗರಣಾ ವೇದಿಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ಜುಲೈ 2019, 19:51 IST
Last Updated 17 ಜುಲೈ 2019, 19:51 IST

ಮಡಿಕೇರಿ: ‘ಕ್ರಿಶ್ಚಿಯನ್ ಧರ್ಮಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಜಿಲ್ಲೆಯ ಸರ್ಕಾರಿ ಶಾಲೆಯ ಗ್ರಂಥಾಲಯಗಳಿಗೆ ಅಂಚೆ ಮೂಲಕ ರವಾನಿಸಿ, ಜಿಲ್ಲೆಯಲ್ಲಿ ಮತಾಂತರದ ಹುನ್ನಾರ ನಡೆಯುತ್ತಿದೆ’ ಎಂದು ಹಿಂದೂ ಜಾಗರಣ ವೇದಿಕೆ ಮುಖಂಡರು ಆಪಾದಿಸಿದ್ದಾರೆ.

ನಗರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ವೇದಿಕೆ ಪ್ರಧಾನ ಕಾರ್ಯದರ್ಶಿ ಕುಕ್ಕೇರ ಅಜಿತ್, ‘ಕೇವಲ ಕ್ರಿಶ್ಚಿಯನ್ ಧರ್ಮಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಸರ್ಕಾರಿ ಗ್ರಂಥಾಲಯಗಳಿಗೆ ಅಂಚೆ ಮೂಲಕ ಕಳುಹಿಸುವುದಕ್ಕೆ ನಮ್ಮ ವಿರೋಧವಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪುಸ್ತಕಗಳು ಶಿವಮೊಗ್ಗ ಹಾಗೂ ಬೆಂಗಳೂರಿನ ಸಂಸ್ಥೆಯಿಂದ ಜಿಲ್ಲೆಯ ಶಾಲೆಗಳಿಗೆ ಸರಬರಾಜು ಆಗುತ್ತಿವೆ. ಇದರ ಹಿಂದೆ ವ್ಯವಸ್ಥಿತ ಮತಾಂತರಿಗಳ ಜಾಲವಿದೆ. ಕೂಡಲೇ ಪುಸ್ತಕಗಳನ್ನು ಹಿಂಪಡೆದು ಸೂಕ್ತ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಸರ್ಕಾರಿ ಶಾಲೆಗಳಲ್ಲಿ ಬಡ ಮಕ್ಕಳೇ ಹೆಚ್ಚಾಗಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಮಕ್ಕಳ ತಲೆಗೆ ಕ್ರಿಶ್ಚಿಯನ್ ತತ್ವಗಳನ್ನು ತುಂಬಿಸುತ್ತಿರುವುದು ಅಪಾಯಕಾರಿ ಎಂದು ಹೇಳಿದರು.

ಪುಸ್ತಕ ಪೂರೈಕೆ ಮೂಲ ಉದ್ದೇಶವೇ ಮತಾಂತರ. ಇದರ ವಿರುದ್ಧ ಸಂಘಟನೆಗೊಂಡು ಹೋರಾಟ ನಡೆಸಲಿದ್ದೇವೆ ಎಂದು ಎಚ್ಚರಿಸಿದರು.

ಗ್ರಂಥಾಲಯಗಳಿಗೆ ಪುಸ್ತಕ ರವಾನಿಸುವ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೂ ಯಾವುದೇ ಮಾಹಿತಿ ಇಲ್ಲ. ಕ್ರಿಶ್ಚಿಯನ್ ಧರ್ಮಕ್ಕೆ ಸಂಬಂಧಿಸಿದ ಬೇರೆ ಬೇರೆ ಪುಸ್ತಕಗಳನ್ನು ಬೇರೆ ಬೇರೆ ಹೆಸರಿನಲ್ಲಿ ಮುದ್ರಿಸಲಾಗಿದೆ. ಜಿಲ್ಲಾಡಳಿತ ಈ ಬಗ್ಗೆ ಶೀಘ್ರ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಕೆ.ಎಸ್.ಗಣೇಶ್, ತಾಲ್ಲೂಕು ಉಪಾಧ್ಯಕ್ಷ ಎಂ.ಆರ್. ಗಣೇಶ್, ಜಿಲ್ಲಾ ಉಪಾಧ್ಯಕ್ಷ ಬಿದ್ದಂಡ ಸುಜಾ ಸುಬ್ಬಯ್ಯ, ಜಿಲ್ಲಾ ಸಮಿತಿ ಸದಸ್ಯ ಶಾಂತೆಯಂಡ ತಿಮ್ಮಯ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.