ADVERTISEMENT

ಅಭಿವೃದ್ಧಿ ಹರಿಕಾರನಿಗೆ ಜಿಲ್ಲೆಯಲ್ಲಿ ನಮನ

ಡಿ.ದೇವರಾಜ ಅರಸು 104ನೇ ಜನ್ಮ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2019, 13:28 IST
Last Updated 20 ಆಗಸ್ಟ್ 2019, 13:28 IST
ಮಡಿಕೇರಿಯಲ್ಲಿ ಮಂಗಳವಾರ ನಡೆದ ಡಿ.ದೇವರಾಜ ಅರಸು ಅವರ ಜಯಂತಿಯನ್ನು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಉದ್ಘಾಟಿಸಿದರು
ಮಡಿಕೇರಿಯಲ್ಲಿ ಮಂಗಳವಾರ ನಡೆದ ಡಿ.ದೇವರಾಜ ಅರಸು ಅವರ ಜಯಂತಿಯನ್ನು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಉದ್ಘಾಟಿಸಿದರು   

ಮಡಿಕೇರಿ: ‘ಬಡವರು, ನಿರ್ಗತಿಕರು, ಹಿಂದುಳಿದ ವರ್ಗದವರನ್ನು ಮುಖ್ಯವಾಹಿನಿಗೆ ತರಲು ಶ್ರಮಿಸಿದ ಕೀರ್ತಿ ಡಿ.ದೇವರಾಜ ಅರಸು ಅವರಿಗೆ ಸಲ್ಲುತ್ತದೆ’ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಬಣ್ಣಿಸಿದರು.

ನಗರದ ಡಿ.ದೇವರಾಜ ಅರಸು ಭವನದಲ್ಲಿ ಮಂಗಳವಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಡೆದ ಡಿ. ದೇವರಾಜ ಅರಸು ಅವರ 104ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇವರಾಜ ಅರಸು ಅವರ ಪ್ರಾಮುಖ್ಯತೆಯನ್ನು ಇಂದಿನ ಯುವಜನರು ತಿಳಿದುಕೊಳ್ಳಬೇಕು. ನಾವು ಮಾಡಿದ ಕಾರ್ಯ ಮುಂದಿನ ಪೀಳಿಗೆಯ ಏಳಿಗೆಗೂ ಉಪಯೋಗ ಆಗವಾಗಬೇಕು’ ಎಂದು ಕರೆ ನೀಡಿದರು.

ADVERTISEMENT

ಜಿ.ಪಂ ಉಪ ಕಾರ್ಯದರ್ಶಿ ಗುಡೂರು ಭೀಮಸೇನ ಮಾತನಾಡಿ, ಡಿ.ದೇವರಾಜ ಅರಸು ಅಸಾಮಾನ್ಯ ಶಕ್ತಿ, ಹಲವು ಏರಿಳಿತಗಳನ್ನು ಕಂಡ ಅಪರೂಪದ ರಾಜಕಾರಣಿ. ರಾಜ್ಯ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದರು. ಅವರ ಕರ್ತವ್ಯ ನಿಷ್ಠೆ ಅದ್ಭುತವಾದದ್ದು ಎಂದರು.

ಸಾಮಾಜಿಕ ತಾರತಮ್ಯ ನಿವಾರಣೆಗೆ ಪ್ರಯತ್ನಿಸಿದರು. ಹಾವನೂರು ವರದಿ ಜಾರಿ, ಭೂಸುಧಾರಣೆ ಮತ್ತಿತರ ಕಾರ್ಯಕ್ರಮಗಳು ಹಾಗೂ ಜೀತಪದ್ಧತಿ ಮತ್ತು ಮಲಹೊರುವ ಪದ್ಧತಿ ನಿರ್ಮೂಲನೆ ಮಾಡಿದ್ದರು ಎಂದು ಹೇಳಿದರು.

ವ್ಯವಸ್ಥೆಯ ವಿರುದ್ಧ ಹೋರಾಡುವುದು ಅಷ್ಟು ಸುಲಭವಲ್ಲ. ಆದರೆ, ದಡ ಸೇರುವುದು ಕಷ್ಟ. ಅಂತಹದರಲ್ಲಿ ಡಿ.ದೇವರಾಜ ಅರಸು ಅವರು ದಡ ಸೇರಿದರು ಎಂದು ಸ್ಮರಿಸಿದರು.

ಡಿ.ದೇವರಾಜ ಅರಸು ಅವರ ಚಿಂತನೆ, ಪರಿವರ್ತನೆ, ಪರಿಪೂರ್ಣತೆ, ತ್ಯಾಗಮಯ ಜೀವನ ಎಲ್ಲರು ನೆನಪಿಸುವಂತದ್ದು, ಕೇಂದ್ರದಲ್ಲಿ ಮಂಡಲ ವರದಿ ಜಾರಿಗೊಳಿಸಿ ಅಭಿವೃದ್ಧಿಯ ಹರಿಕಾರ ಎಂದೇ ಡಿ.ದೇವರಾಜ ಪ್ರಖ್ಯಾತಿ ಪಡೆದವರು ಎಂದು ಬಣ್ಣಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪನ್ನೇಕರ್, ಜಿ.ಪಂ ಸಿಇಒ ಕೆ.ಲಕ್ಷ್ಮೀಪ್ರಿಯಾ ಇದ್ದರು. ಬಿಸಿಎಂ ಇಲಾಖಾ ಅಧಿಕಾರಿ ಶಿವಕುಮಾರ್ ಸ್ವಾಗತಿಸಿದರು. ಹರ್ಷಿತ ತಂಡ ನಾಡಗೀತೆ ಹಾಡಿದರು. ಭಾರತಿ ನಿರೂಪಿಸಿ ಸದ್ಭಾವನಾ ದಿನಾಚರಣೆ ಪ್ರಯುಕ್ತ ಪ್ರತಿಜ್ಞಾ ಬೋಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.