ADVERTISEMENT

‘ಕೊಡಗಿಗೇ ₹ 2 ಸಾವಿರ ಕೋಟಿ ಪರಿಹಾರ ನೀಡಿ’

ಜಿಲ್ಲಾ ಕಾಂಗ್ರೆಸ್‌ ಮುಖಂಡರ ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2019, 13:25 IST
Last Updated 23 ಆಗಸ್ಟ್ 2019, 13:25 IST

ಮಡಿಕೇರಿ: ‘ಕೊಡಗು ಜಿಲ್ಲೆಯು ಪದೇ ಪದೇ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗುತ್ತಿದೆ. ಜಿಲ್ಲೆಗೇ ವಿಶೇಷವಾಗಿ ₹ 2 ಸಾವಿರ ಕೋಟಿ ಅನುದಾನ ಘೋಷಿಸಬೇಕು’ ಎಂದು ಜಿಲ್ಲಾ ಕಾಂಗ್ರೆಸ್ ಆಗ್ರಹಿಸಿದೆ.

‘ಕಳೆದ 2 ವರ್ಷಗಳಿಂದ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಸುಮಾರು 549ಕ್ಕೂ ಹೆಚ್ಚು ಮನೆಗಳು ನೆಲಸಮವಾಗಿವೆ. ಅತಿವೃಷ್ಟಿಯಿಂದ ಬೆಳೆಗಾರರು, ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ದಕ್ಷಿಣ ಕೊಡಗಿನಲ್ಲಿ ಸಾಕಷ್ಟು ನಷ್ಟ ಉಂಟಾಗಿದೆ’ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಟಾಟು ಮೊಣ್ಣಪ್ಪ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಕೋರಿದರು.

‘ಮೈತ್ರಿ’ ಸರ್ಕಾರವು ₹ 9.80 ಲಕ್ಷ ವೆಚ್ಚದಲ್ಲಿ ಪ್ರತಿ ಮನೆ ನಿರ್ಮಾಣ ಮಾಡಿತ್ತು. ಆದರೆ, ಈಗಿನ ಬಿಜೆಪಿ ಸರ್ಕಾರ ಮನೆ ಕಳೆದುಕೊಂಡವರಿಗೆ ಕೇವಲ ₹ 5 ಲಕ್ಷ, ದುರಸ್ತಿಗೆ ₹ 1 ಲಕ್ಷ ನೀಡಲು ನಿರ್ಧರಿಸಿದೆ. ಈ ಹಣ ಸಂತ್ರಸ್ತರಿಗೆ ಸಾಲದು. ಜಿಲ್ಲೆಯು ಗುಡ್ಡಗಾಡು ಪ್ರದೇಶವಾಗಿದ್ದು ಜಿಲ್ಲೆಗೇ ಪ್ರತ್ಯೇಕ ಅನುದಾನ ಘೋಷಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಅಧ್ಯಕ್ಷ ತೆನ್ನೀರಾ ಮೈನಾ ಮಾತನಾಡಿ, ‘ಇತ್ತೀಚೆಗೆ ಬಿಜೆಪಿಯ ಸಚಿವರೊಬ್ಬರು ಯಾರಿಗೆ ಯೋಗ್ಯತೆ ಇದೆಯೋ ಅವರಿಗೆ ಸಚಿವ ಸ್ಥಾನ ನೀಡಲಾಗುತ್ತದೆ ಎಂದು ಹೇಳಿದ್ದರು. ಆದರೆ, 4- 5 ಬಾರಿ ಗೆಲುವು ಸಾಧಿಸಿದ ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ನೀಡದಿರುವ ಇರುವುದರಿಂದ ಅವರಿಗೆ ಯೋಗ್ಯತೆ ಇಲ್ಲವೇ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ’ ಎಂದು ವ್ಯಂಗ್ಯವಾಡಿದರು.

ಪಕ್ಷದ ಸಾಮಾಜಿಕ ಜಾಲತಾಣದ ಅಧ್ಯಕ್ಷ ಸೂರಜ್ ಮಾತನಾಡಿ, ‘ಪ್ರಕೃತಿ ವಿಕೋಪದಿಂದ ಜಿಲ್ಲೆಯ ಜನರು ಸಂಕಷ್ಟದಲ್ಲಿದ್ದಾರೆ. ಧರ್ಮಸ್ಥಳ ಸಂಘ ಸೇರಿದಂತೆ ಮೈಕ್ರೊ ಫೈನಾನ್ಸ್ ಸಂಸ್ಥೆಗಳು ಮೊದಲ ಹಂತವಾಗಿ ಕನಿಷ್ಠ ₹ 20 ಸಾವಿರ ಸಾಲವನ್ನು ಮನ್ನಾ ಮಾಡಬೇಕು’ ಎಂದು ಮನವಿ ಮಾಡಿದರು.

ವಕ್ತಾರ ಸುರೇಶ್, ಯುವ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಹನೀಫ್‌ ಸಂಪಾಜೆ, ಮುಖಂಡರಾದ ಮುದ್ದುರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.