ADVERTISEMENT

ರಸ್ತೆ, ಸೇತುವೆ ಕಾಮಗಾರಿ ನಿಧಾನ: ಪರಿಹಾರ ಕಾಣದ ‘ಕಾಲೂರು’ ಸಂಕಷ್ಟ

ಗ್ರಾಮಸ್ಥರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 15 ಮೇ 2019, 13:09 IST
Last Updated 15 ಮೇ 2019, 13:09 IST
ನಿಧಾನಗತಿಯಲ್ಲಿ ಸಾಗುತ್ತಿರುವ ಸೇತುವೆ ಕಾಮಗಾರಿ 
ನಿಧಾನಗತಿಯಲ್ಲಿ ಸಾಗುತ್ತಿರುವ ಸೇತುವೆ ಕಾಮಗಾರಿ    

ಮಡಿಕೇರಿ: ಕಳೆದ ವರ್ಷ ಸುರಿದ ಭಾರಿ ಮಳೆ ಹಾಗೂ ಭೂಕುಸಿತದಿಂದ ಸಂಕಷ್ಟಕ್ಕೆ ಒಳಗಾಗಿದ್ದ ಸಮೀಪದ ಕಾಲೂರು ಗ್ರಾಮದ ಜನರು ಇನ್ನೂ ಚೇತರಿಸಿಕೊಂಡಿಲ್ಲ. ಸಂಪರ್ಕ ಕಲ್ಪಿಸುವ ಏಕೈಕ ರಸ್ತೆ ಬಂದ್‌ ಆಗಿದ್ದು ಸರ್ಕಾರದ ವಿರುದ್ಧ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಮಡಿಕೇರಿಯಿಂದ 12 ಕಿ.ಮೀ ದೂರವಿರುವ ಕಾಲೂರು ಗ್ರಾಮವು ಕಳೆದ ಆಗಸ್ಟ್‌ ಎರಡನೇ ವಾರದಲ್ಲಿ ಸುರಿದ ಭಾರೀಮಳೆಯಿಂದ ರಸ್ತೆ, ಸೇತುವೆಗೆ ಹಾನಿಯುಂಟಾಗಿತ್ತು. ರಸ್ತೆಯ ಮೇಲೆಲ್ಲಾ ಮಣ್ಣು ತುಂಬಿಕೊಂಡಿದೆ, ಈಗ ಮತ್ತೊಂದು ಮಳೆಗಾಲ ಸಮೀಪಿಸಿದ್ದರೂ ರಸ್ತೆ ಸುಧಾರಣೆಗೆ ಕ್ರಮ ಕೈಗೊಂಡಿಲ್ಲ.

ಪ್ರಕೃತಿ ವಿಕೋಪ ಸಂಭವಿಸಿ 9 ತಿಂಗಳು ಕಳೆದರೂ ಕಾಲೂರು ಜನರ ಗೋಳು ಕೇಳುವವರಿಲ್ಲ ಎಂಬ ನೋವಿನ ನುಡಿಗಳು ಕೇಳಿಬರುತ್ತಿವೆ. ರಸ್ತೆ ಮರು ನಿರ್ಮಾಣ ಕಾರ್ಯ ಮಳೆಗಾಲಕ್ಕೂ ಮುನ್ನ ಆಗುವುದೋ ಇಲ್ಲವೋ ಎನ್ನುವ ಭಯದಲ್ಲೇ ಸ್ಥಳೀಯರು ದಿನ ಕಳೆಯುತ್ತಿದ್ದಾರೆ. ರಸ್ತೆ, ಸೇತುವೆ ಮತ್ತು ಮೋರಿ ಕಾಮಗಾರಿ ಕೈಗೆತ್ತಿಕೊಂಡಿದ್ದರೂ ಮಂದಗತಿಯಲ್ಲಿ ಸಾಗುತ್ತಿರುವುದು ಸ್ಥಳೀಯರಿಗೆ ಆತಂಕ ತಂದಿದೆ.

ADVERTISEMENT

‘ಮಳೆಗಾಲಕ್ಕೂ ಮೊದಲೇ ರಸ್ತೆ ಕಾಮಗಾರಿ ಪೂರ್ಣಗೊಳಿಸುತ್ತೇವೆ....’ ಎಂದು ಹೇಳಿದ್ದ ಜಿಲ್ಲಾಡಳಿತ ಒಂದೆರಡು ಮಳೆ ಬಿದ್ದರೂ ರಸ್ತೆಯನ್ನು ಸುಧಾರಣೆ ಮಾಡಿಲ್ಲ. ಇದೇ ರೀತಿ ವಿಳಂಬ ಮಾಡಿದರೆ ಮುಂದೆ ಹೋರಾಟದ ಮಾರ್ಗ ಹಿಡಿಯಬೇಕಾಗುತ್ತದೆ’ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಎರಡು ಕಿ.ಮೀ ನಡಿಗೆ:‌ ರಸ್ತೆ, ಸೇತುವೆ ಕಾಮಗಾರಿ ಪೂರ್ಣಗೊಳ್ಳದ ಕಾರಣ ಬಸ್ ಸಂಚಾರವೂ ಸ್ಥಗಿತವಾಗಿದೆ. ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು 2 ಕಿ.ಮೀ ನಡೆದುಕೊಂಡು ಬರುವ ಪರಿಸ್ಥಿತಿಯಿದೆ. ಇನ್ನೇನು ಶಾಲೆ– ಕಾಲೇಜು ಆರಂಭಗೊಳ್ಳಲಿದ್ದು ರಸ್ತೆ ಸುಧಾರಣೆ ಆಗದಿದ್ದರೆ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಲಿದೆ ಎಂದು ಕವಿತಾ ಅವರು ಅಳಲು ತೋಡಿಕೊಂಡರು.

ಜಿಲ್ಲಾಡಳಿತದಿಂದ ಈವರೆಗೂ ತಮಗೆ ಪರಿಹಾರ ದೊರೆತ್ತಿಲ್ಲ. ಪರಿಹಾರ ಹಣ ಕುರಿತು ಸಂಬಂಧಿಸಿದ ಇಲಾಖೆಯಲ್ಲಿ ಪ್ರಶ್ನಿಸಿದರೇ ಬ್ಯಾಂಕ್‌ನಲ್ಲಿ ವಿಚಾರಿಸುವಂತೆ ಹೇಳುತ್ತಾರೆ. ಬ್ಯಾಂಕಕ್‌ನಲ್ಲಿ ವಿಚಾರಿಸಿದರೇ ಇನ್ನೂ ಬಂದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಅವರು ಅಸಹಾಯಕತೆ ತೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.