ADVERTISEMENT

ವಿಶೇಷ ಸಾಧನೆ: ಕಾರ್ಮಿಕರಿಗೆ ಸನ್ಮಾನ

ಮಾರ್ಚ್‌ 1ರಂದು ಕಾರ್ಯಕ್ರಮ, ಪೂರ್ವಭಾವಿ ಸಭೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2019, 14:20 IST
Last Updated 19 ಜನವರಿ 2019, 14:20 IST
ಮಡಿಕೇರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ರಾಮಕೃಷ್ಣ ಮಾತನಾಡಿದರು
ಮಡಿಕೇರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ರಾಮಕೃಷ್ಣ ಮಾತನಾಡಿದರು   

ಮಡಿಕೇರಿ: ಅಸಂಘಟಿತ ವಲಯದಲ್ಲಿ ವಿಶೇಷ ಸಾಧನೆ ಮಾಡಿದ ಕಾರ್ಮಿಕರನ್ನು ಗುರುತಿಸಿ ಗೌರವಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪೆನ್ನೇಕರ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಕಾರ್ಮಿಕರ ಸನ್ಮಾನ ದಿನವನ್ನು ಆಚರಿಸುವ ಮೂಲಕ ವಿಶೇಷ ಸಾಧನೆ ಮಾಡಿದ ಜಿಲ್ಲೆಯ ಅಸಂಘಟಿತ ಕಾರ್ಮಿಕರಿಗೆ ‘ಕಾರ್ಮಿಕ ಸನ್ಮಾನ ಪ್ರಶಸ್ತಿ’ ನೀಡಬೇಕು ಎಂದು ಅವರು ಹೇಳಿದರು.

ADVERTISEMENT

ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ಜಿಲ್ಲೆ–ರಾಜ್ಯ ಮಟ್ಟದಲ್ಲಿ ಮಾರ್ಚ್ 1ರಂದು ಕಾರ್ಮಿಕರ ಸನ್ಮಾನ ದಿನ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಕಾರ್ಮಿಕ ಅಧಿಕಾರಿ ರಾಮಕೃಷ್ಣ ಮಾತನಾಡಿ, ‘ವಿಶೇಷ ಅಸಂಘಟಿತ ವಲಯಗಳಾದ ಟೈಲರ್, ಮೆಕ್ಯಾನಿಕ್‌, ಚಿಂದಿ ಆಯುವವರು, ಸಾರಿಗೆ ಕಾರ್ಮಿಕರು, ಮತ್ತಿತರ ವಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಮಂಡಳಿ ವತಿಯಿಂದ ಸ್ಮಾರ್ಟ್‌ಕಾರ್ಡ್ ನೀಡಲಾಗುತ್ತಿದೆ ಎಂದು ತಿಳಿಸಿದರು.

ಒಟ್ಟು 11 ವಲಯಗಳಲ್ಲಿ ಕಾರ್ಯ ನಿರ್ವಹಿಸುವ ಎಲ್ಲ ಕಾರ್ಮಿಕರು ಸ್ಮಾರ್ಟ್‌ಕಾರ್ಡ್ ಪಡೆಯಲು ನಿಗದಿತ ಅರ್ಜಿ ನಮೂನೆಯನ್ನು ಅಗತ್ಯ ದಾಖಲೆಗಳೊಂದಿಗೆ ಕಾರ್ಮಿಕ ಇಲಾಖೆಗೆ ಸಲ್ಲಿಸುವಂತೆ ಮನವಿ ಮಾಡಿದರು.

ಕಾರ್ಮಿಕರಿಗೆ ಸನ್ಮಾನ ಪ್ರಶಸ್ತಿಗಾಗಿ ನಮೂನೆಯನ್ನು ಭರ್ತಿ ಮಾಡಿ ಫೆ. 5ರೊಳಗೆ ಕಚೇರಿಗೆ ಸಲ್ಲಿಸುವಂತೆ ಮನವಿ ಮಾಡಿದರು.

ಜಿಲ್ಲಾಮಟ್ಟದ ತ್ರಿಪಕ್ಷೀಯ ನಿರ್ವಹಣಾ ಸಮಿತಿಯು ಸಂಬಂಧಪಟ್ಟ ಅಸಂಘಟಿತ ವಲಯದ ಕಾರ್ಮಿಕರ ಸಂಘ, ಸಂಘಟನೆಗಳೊಂದಿಗೆ ಚರ್ಚಿಸಿ, ಆಯ್ದ ವಲಯಗಳಲ್ಲಿ ವಿಶೇಷ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ವರದಿ ಸಲ್ಲಿಸಬೇಕಿದೆ ಎಂದು ರಾಮಕೃಷ್ಣ ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಶ್ರೀನಿವಾಸ್‌, ಉದ್ಯೋಗ ವಿನಿಮಯಾಧಿಕಾರಿ ಜಗನ್ನಾಥ್, ಭೂಸೇನಾ ನಿಗಮ, ಲೋಕೋಪಯೋಗಿ, ನಿರ್ಮಿತಿ ಕೇಂದ್ರದ ಎಂಜಿನಿಯರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.