ADVERTISEMENT

‘ಇಲ್ಲ’ಗಳ ನಡುವೆ ಭವಿಷ್ಯಕ್ಕೆ ಹುಡುಕಾಟ; ದೇವರಪುರ ಹಾಡಿ ಜನರ ದುಃಸ್ಥಿತಿ

ಮತದಾನ ಬಹಿಷ್ಕಾರ

ಜೆ.ಸೋಮಣ್ಣ
Published 20 ಏಪ್ರಿಲ್ 2019, 19:45 IST
Last Updated 20 ಏಪ್ರಿಲ್ 2019, 19:45 IST
ಎರಡು ದಿನಗಳ ಹಿಂದೆ ನಡೆದ ಲೋಕಸಭಾ ಚುನಾವಣೆಯಲ್ಲಿ ಮತದಾನವನ್ನು ಬಹಿಷ್ಕರಿಸಿದ ಗೋಣಿಕೊಪ್ಪಲು ಬಳಿಯ ದೇವರಪುರ ಗಿರಿಜನ ಹಾಡಿಯ ಮನೆಗಳ ದುಃಸ್ಥಿತಿ
ಎರಡು ದಿನಗಳ ಹಿಂದೆ ನಡೆದ ಲೋಕಸಭಾ ಚುನಾವಣೆಯಲ್ಲಿ ಮತದಾನವನ್ನು ಬಹಿಷ್ಕರಿಸಿದ ಗೋಣಿಕೊಪ್ಪಲು ಬಳಿಯ ದೇವರಪುರ ಗಿರಿಜನ ಹಾಡಿಯ ಮನೆಗಳ ದುಃಸ್ಥಿತಿ   

ಗೋಣಿಕೊಪ್ಪಲು: ಎರಡು ದಿನಗಳ ಹಿಂದೆ ನಡೆದ ಲೋಕಸಭಾ ಚುನಾವಣೆಯ ಮತದಾನವನ್ನು ಬಹಿಷ್ಕರಿಸಿದ ದೇವರಪುರ ಗಿರಿಜನ ಹಾಡಿ ಜನರ ದುಃಸ್ಥಿತಿಯನ್ನು ಕಣ್ಣಾರೆಕಂಡೇ ತಿಳಿಯಬೇಕು.

ದೇಶ ಅಭಿವೃದ್ಧಿಯ ಪಥದಲ್ಲಿದೆ. ಗುಡಿಸಲು ಮುಕ್ತ, ಬಯಲು ಶೌಚಾಲಯ ಮುಕ್ತ ರಾಷ್ಟ್ರ ಮಾಡಲಾಗುತ್ತಿದೆ ಎಂದು ಸುಳ್ಳಿನ ಅರಮನೆ ಕಟ್ಟುತ್ತಿರುವ ಜನಪ್ರತಿನಿಧಿಗಳಿಗೆ ಹಾಡಿಯ ಸ್ಥಿತಿಗತಿ ಅಣಕವಾಡಿಸಲಿದೆ. ಒಮ್ಮೆ ಹಾಡಿಗೆ ಬಂದು ನೋಡಿದರೆ ಗೊತ್ತಾಗಲಿದೆ. ಜನರ ದಯನೀಯ ಬದುಕಿನ ಸ್ಥಿತಿ.

ಈ ಹಾಡಿ ಮೈಸೂರು ವಿರಾಜಪೇಟೆ, ಕಣ್ಣೂರು ಅಂತರರಾಜ್ಯ ಹೆದ್ದಾರಿಯ ಗೋಣಿಕೊಪ್ಪಲು– ತಿತಿಮತಿ ನಡುವೆ ಇದೆ. ಇಲ್ಲಿನ 160 ಕುಟುಂಬಗಳಿವೆ. ಇವರಲ್ಲಿ 120 ಕುಟುಂಬಗಳು ಜೇನುಕುರುಬರದ್ದಾದರೆ, 40 ಕುಟುಂಬಗಳು ಯರವರದ್ದಾಗಿವೆ.

ADVERTISEMENT

ಇವರಲ್ಲಿ 40 ಕುಟುಂಬಗಳಿಗೆ 1988ರಲ್ಲಿ ಜಿಲ್ಲಾ ಪರಿಷತ್ ಅಧ್ಯಕ್ಷರಾಗಿದ್ದ ಜಮ್ಮಡ ಕರುಂಬಯ್ಯ ಹಾಗೂ ದೇವರಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಚೆಪ್ಪುಡೀರ ಅರುಣ್ ಮಾಚಯ್ಯ, ಸರ್ಕಾರದ ವತಿಯಿಂದ 12X20 ಅಡಿ ಸುತ್ತಳತೆಯ ಸೀಟಿನ ಜನತಾ ಮನೆಗಳನ್ನು ನಿರ್ಮಿಸಿಕೊಟ್ಟಿದ್ದರು. ಈಗ ಅವುಗಳೆಲ್ಲ ಕಸಿದು ಬೀಳುವ ಹಂತ ತಲುಪಿವೆ. ಆದರೂ, ಇಲ್ಲಿನ ಜನತೆ ಬೇರೆ ಮಾರ್ಗವಿಲ್ಲದೇ ಜೀವಭಯದಿಂದ ಅಲ್ಲಿಯೇ ವಾಸಿಸುತ್ತಿದ್ದಾರೆ.

ಈ ಮನೆಗಳಿಗೆ ಹಕ್ಕು ಪತ್ರಗಳೂ ಲಭಿಸಿವೆ. ಆದರೆ, ಈ ಜಾಗ ದೇವರಕಾಡಿಗೆ ಸೇರಿದ್ದು ಕೆಲವರು ನ್ಯಾಯಾಲಯದ ಮೆಟ್ಟಿಲೇರಿರುವುದರಿಂದ ಅವುಗಳನ್ನು ದುರಸ್ತಿಪಡಿಸಲು ಬಿಡುತ್ತಿಲ್ಲ. ಕೂಲಿಯನ್ನೇ ನಂಬಿರುವ ಈ ಜನರಿಗೆ ಮನೆ ಕುಸಿದು ಬಿದ್ದರೂ ಅದನ್ನು ಸರಿಪಡಿಸಿಕೊಳ್ಳಲಾಗದ ದಯನೀಯ ಸ್ಥಿತಿಗೆ ತಲುಪಿದ್ದಾರೆ. ಮತ್ತೆ ಕೆಲವರಿಗೆ ಹಕ್ಕು ಪತ್ರಗಳೂ ಲಭಿಸಿಲ್ಲ.

ಈ ಕಾರಣಕ್ಕೆ ಗ್ರಾಮ ಪಂಚಾಯಿತಿ ಯಾವುದೇ ಸೌಲಭ್ಯ ನೀಡುತ್ತಿಲ್ಲ. ಹೀಗಾಗಿ ಇಲ್ಲಿನ ಮನೆಗಳಿಗೆ ವಿದ್ಯುತ್ ಇಲ್ಲ. ರಸ್ತೆಯಿಲ್ಲ. ಕುಡಿಯುವ ನೀರಿನ ಸೌಲಭ್ಯವಿಲ್ಲ. ಬೀದಿ ದೀಪದ ವ್ಯವಸ್ಥೆಯಿಲ್ಲ, ಶೌಚಾಲಯ ಮೊದಲೇ ಇಲ್ಲ.

'ಜಿಲ್ಲೆಯಲ್ಲಿ ಸಾವಿರಾರು ಎಕರೆ ದೇವರಕಾಡು ಉಳ್ಳವರ ಪಾಲಾಗಿದೆ. ಅರಣ್ಯ ಇಲಾಖೆ ಅವುಳನ್ನು ಬಿಡಿಸುವುದಕ್ಕೆ ಮುಂದಾಗುತ್ತಿಲ್ಲ. ಆದರೆ, ಕಾರ್ಮಿಕರಾದ ನಾವು ವಾಸಿಸುವುದಕ್ಕೆ 30 ಅಡಿ ಜಾಗ ನೀಡಿ ಎಂದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಜೇನು ಕುರುಬ ಜನಾಂಗದ ಬಗ್ಗೆ ಸರ್ಕಾರಕ್ಕಿರುವ ನಿರ್ಲಕ್ಷ್ಯ ಧೋರಣೆಯನ್ನು ಬಳಸಿಕೊಂಡು ಸ್ಥಳೀಯ ಭೂಮಾಲೀಕರು ಬಡ ಕಾರ್ಮಿಕರಿಗೆ ಎತ್ತಂಗಡಿಯ ಕಿರುಕುಳ ನೀಡುತ್ತಿದ್ದಾರೆ' ಎಂದು ಹಾಡಿ ಮುಖಂಡ ಹಾಗೂ ದಸಂಸದ ಕಾರ್ಯಕರ್ತ ಜೇನುಕುರುಬರ ಸುಬ್ರಮಣಿ ಆರೋಪಿಸಿದರು.

ಕೂಲಿ ಕೆಲಸ ಮಾಡಿ ಬಂದ ಹಾಡಿಯ ಮಹಿಳೆಯರು ನೀರು ತರಲು ಕಿಲೋ ಮೀಟರ್ ದೂರ ಕಾಡಿನೊಳಗಿನ ಹಳ್ಳಕ್ಕೆ ಹೋಗಬೇಕಾಗಿದೆ. ಇಂತಹ ಸಂದರ್ಭದಲ್ಲಿ ಪ್ರತಿವರ್ಷ ಇಬ್ಬರು ಮೂವರು ಮಹಿಳೆಯರು ಕಾಡಾನೆಗೆ ಬಲಿಯಾಗುತ್ತಿದ್ದಾರೆ. ಇಂತಹ ಘಟನೆಗಳು ನಡೆಯುತ್ತಿದ್ದರೂ ಸರ್ಕಾರ ನಮ್ಮ ರಕ್ಷಣೆಗೆ ಮುಂದಾಗಿಲ್ಲ ಎಂಬುದು ಹಾಡಿ ಜನರ ಅಳಲು.

ಐದು ವರ್ಷಗಳ ಹಿಂದೆಯೇ ಹಾಡಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಕಂಬ ನೆಟ್ಟು ವಿದ್ಯುತ್ ಪರಿವರ್ತಕ ಅಳವಡಿಸಲಾಗಿದೆ. ಆದರೆ, ಸಂಪರ್ಕ ನೀಡದೇ ಅದೆಲ್ಲ ತುಕ್ಕು ಹಿಡಿದು ಹಾಳಾಗಿದೆ. ರಸ್ತೆಯಂತೂ ನಡೆದಾಡಲಾಗದ ಸ್ಥಿತಿಗೆ ತಲುಪಿದೆ. ಮುಖ್ಯರಸ್ತೆಯಿಂದ 2 ಕಿ.ಮೀ. ದೂರದಲ್ಲಿರುವ ಹಾಡಿಯ ವೃದ್ಧರು, ಗರ್ಭಿಣಿಯರು, ರೋಗಿಗಳು ಆಟೋದಲ್ಲಿ ಓಡಾಡಲು ಸಾಧ್ಯವಾಗುತ್ತಿಲ್ಲ. ತಲೆಯ ಮೇಲೊಂದು ಬೆಚ್ಚನೆಯ ಸೂರಿಲ್ಲದಿರುವುದರಿಂದ ಅವರ ಆರೋಗ್ಯವೂ ಕ್ಷೀಣಿಸಿದೆ. ಬಹಳ ಮಂದಿ ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ.

70 ವರ್ಷಗಳಿಂದ ಮತದಾನ ಮಾಡುತ್ತಾ ಬರುತ್ತಿದ್ದೇವೆ. ಅದರೆ, ಸೌಲಭ್ಯವೆಂಬುದು ಮರೀಚಿಕೆಯಾಗಿದೆ. ಓಟು ಹಾಕಿ ಪ್ರಯೋಜನವಾದರೂ ಏನು ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿದೆ. ನಮಗೆ ಕನಿಷ್ಠ ಸೌಲಭ್ಯ ಸಿಗುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು ಎಂದು ಹಾಡಿಯ 70 ಹರೆಯದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸಿದ್ದ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.