ADVERTISEMENT

ಅನ್ಯ ಭಾಷೆ ಪ್ರಭಾವ ಹೆಚ್ಚಾದರೆ ಕನ್ನಡಕ್ಕೆ ಅಪಾಯ

ತಾಲ್ಲೂಕಿನ ಚೇರಂಬಾಣೆಯಲ್ಲಿ ‘ನುಡಿಹಬ್ಬ’ಕ್ಕೆ ಸಂಭ್ರಮದ ತೆರೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2019, 14:55 IST
Last Updated 1 ಆಗಸ್ಟ್ 2019, 14:55 IST
ಚೇರಂಬಾಣೆಯಲ್ಲಿ ಬುಧವಾರ 10ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು
ಚೇರಂಬಾಣೆಯಲ್ಲಿ ಬುಧವಾರ 10ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು   

ಮಡಿಕೇರಿ: ಮಗು ತನ್ನ ತಾಯಿಯನ್ನು ಪ್ರೀತಿಸುವಂತೆ ಕನ್ನಡ ಮಾತೆಯನ್ನು ಆರೈಕೆ ಮಾಡುವ ಮಕ್ಕಳಾಗಿ ನಾವು ಬೆಳೆಯಬೇಕು ಎಂದು ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಪಿ.ಸಿ.ಜಯರಾಮ್ ತಿಳಿಸಿದರು.

ಚೇರಂಬಾಣೆ ಕೊಡವ ಸಮಾಜದಲ್ಲಿ ಮಡಿಕೇರಿ ತಾಲ್ಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಭಾಷೆ ಉಳಿದರೆ ಮಾತ್ರ ಸಂಸ್ಕೃತಿಯೂ ಉಳಿಯುತ್ತದೆ. ಅನ್ಯ ಭಾಷೆಗಳ ಪ್ರಭಾವ ಹೆಚ್ಚಾದರೆ ಕನ್ನಡಕ್ಕೆ ಅಪಾಯ ಖಂಡಿತ ಎಂಬುದನ್ನೂ ಮರೆಯಬಾರದು ಎಂದೂ ಜಯರಾಮ್ ಕಿವಿಮಾತು ಹೇಳಿದರು.

ADVERTISEMENT

ಸಮ್ಮೇಳನಾಧ್ಯಕ್ಷ ಕಿಗ್ಗಾಲು ಗಿರೀಶ್ ಮಾತನಾಡಿ, ಸಮ್ಮೇಳನ ಚೇರಂಬಾಣೆಯಂಥ ಗ್ರಾಮೀಣ ಪ್ರದೇಶದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆದಿದ್ದು ಸಂತೋಷ ತಂದಿದೆ. ಗ್ರಾಮೀಣ ಪ್ರತಿಭೆಗಳಿಗೆ ಇಂಥ ಸಮ್ಮೇಳನ ಸಾಹಿತ್ಯ ರಚನೆಗೆ ಮತ್ತಷ್ಟು ಪ್ರೋತ್ಸಾಹ ತರುವಂತಾಗಲಿ ಎಂದು ಹಾರೈಸಿದರು.

ಮುಖಂಡ ಬಿದ್ದಾಟಂಡ ತಮ್ಮಯ್ಯ ಮಾತನಾಡಿ, ‘ಕೊಡಗಿನಲ್ಲಿ ತಾನು ಗಮನಿಸಿದಂತೆ ಮಹಿಳೆಯರಿಗೆ ಸಾಹಿತ್ಯ, ಸಾಂಸ್ಕ‌ತಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಆಸಕ್ತಿಯಿದೆ. ಹೀಗಾಗಿಯೇ, ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯ ಸಂಬಂಧಿತ ಕಾರ್ಯ ಕ್ರಮಗಳಲ್ಲಿ ಕಾಣಿಸುತ್ತಾರೆ’ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್‌ನ ಮಡಿಕೇರಿ ತಾಲ್ಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್ ಮಾತನಾಡಿ, ಕನ್ನಡಮ್ಮನ ಸಾಹಿತ್ಯ ಸೇವೆ ಎಂತಹ ಪ್ರದೇಶದಲ್ಲಿದ್ದರೂ ಯಶಸ್ವಿಯಾಗುತ್ತೆ. ಕನ್ನಡ ಭಾಷೆ ಅತ್ಯಂತ ಸುಲಲಿತವಾಗಿದ್ದು ಕನ್ನಡ ಭಾಷೆಗೆ ಖಂಡಿತಾ ಉಜ್ವಲ ಭವಿಷ್ಯಲಿದೆ ಎಂದು ಹೇಳಿದರು.

ಕಸಾಪ ಜಿಲ್ಲಾ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್, ಗೌರವ ಕಾರ್ಯದರ್ಶಿ ಕೆ.ಎಸ್.ರಮೇಶ್, ಚೇರಂಬಾಣೆಯ ಗ್ರಾ.ಪಂ. ಅಧ್ಯಕ್ಷ ಅಶೋಕ್, ಪತ್ರಕರ್ತ ಚಿ.ನಾ. ಸೋಮೇಶ್, ಕಸಾಪ ಜಿಲ್ಲಾ ನಿರ್ದೇಶಕಎಂ.ಬಿ.ಜೋಯಪ್ಪ, ಕೆ.ಎಲ್.ರೋಹಿಣಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.