ADVERTISEMENT

ಜಾಗ ಒತ್ತುವರಿ: ನ್ಯಾಯಾಲಯದ ಮೆಟ್ಟಿಲೇರಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 21 ಜನವರಿ 2019, 12:57 IST
Last Updated 21 ಜನವರಿ 2019, 12:57 IST

ಮಡಿಕೇರಿ: ಸೋಮವಾರಪೇಟೆ ತಾಲ್ಲೂಕಿನ ಹೆಬ್ಬಾಲೆಯ ಶ್ರೀಕಾಳಿಕಾಂಬಾ ವಿಶ್ವಕರ್ಮ ಕುಶಲ ಕೈಗಾರಿಕಾ ಸಹಕಾರ ಸಂಘದ 1 ಎಕರೆ ಜಾಗವನ್ನು ಪ್ರಭಾವಿಯೊಬ್ಬರು ಒತ್ತುವರಿ ಮಾಡಿಕೊಂಡಿದ್ದು ಅದನ್ನು ತೆರವು ಮಾಡಿಕೊಡಬೇಕು. ಇಲ್ಲದಿದ್ದರೆ ನ್ಯಾಯಾಲಯದ ಮೆಟ್ಟಿಲೇರಲಾಗುವುದು ಎಂದು ಸಂಘದ ಅಧ್ಯಕ್ಷ ಶ್ರೀಕಂಠ ಆಚಾರ್ಯ ಎಚ್ಚರಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸಹಕಾರ ಸಂಘಕ್ಕೆ ಕೈಗಾರಿಕೆ ಮಾಡಲು ಒದಗಿಸಿದ್ದ ಜಾಗವನ್ನು ಖಾಸಗಿ ವ್ಯಕ್ತಿಗಳು ಅತಿಕ್ರಮಣ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

1962ರಲ್ಲಿ ಚಿನ್ನ ನಿಯಂತ್ರಣ ಕಾಯ್ದೆ ಜಾರಿಯಾದಾಗ ಚಿನ್ನ ಕೆಲಸಗಾರರು ನಿರುದ್ಯೋಗ ಸಮಸ್ಯೆ ಎದುರಿಸಬಾರದು ಎಂದು ಸಂಘ ಸ್ಥಾಪಿಸಲಾಯಿತು. ಹೆಬ್ಬಾಲೆಯಲ್ಲಿ ಬೆಂಕಿಪೊಟ್ಟಣ ಕಾರ್ಖಾನೆ ನಿರ್ಮಿಸಲು ನಿರ್ಧರಿಸಲಾಯಿತು. ಇದಕ್ಕಾಗಿ ಸರ್ಕಾರ ಹೆಬ್ಬಾಲೆಯಲ್ಲಿ 2 ಎಕರೆ ಜಾಗ ನೀಡಿತ್ತು. ಆದರೆ, ಇದರಲ್ಲಿ 1 ಎಕರೆ ಜಾಗ ಒತ್ತುವರಿಯಾಗಿದೆ ಎಂದು ದೂರಿದರು.

ADVERTISEMENT

ಜಾಗ ಮಂಜೂರಾಗಿದ್ದರೂ ಅದನ್ನು ದುರಸ್ತಿ ಪಡಿಸಿಕೊಡುವಂತೆ ತಹಶೀಲ್ದಾರ್‌, ಜಿಲ್ಲಾಧಿಕಾರಿ, ಲೋಕಾಯುಕ್ತ ಕಚೇರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ, ಸ್ಥಳೀಯ ಪ್ರಬಲ ವರ್ಗದವರು ಅತಿಕ್ರಮಣ ಮಾಡಿಕೊಂಡು ಅದೇ ಜಾಗದಲ್ಲಿ ಮನೆ ನಿರ್ಮಿಸಲು ಮುಂದಾಗಿದ್ದಾರೆ ಎಂದು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ರಾಜ ಆಚಾರ್, ಕಾರ್ಯದರ್ಶಿ ವಸಂತ ಆಚಾರ್, ಡಂಕಣ ಆಚಾರ್, ನರೇನ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.