ADVERTISEMENT

‘ಕೊಡಗು ಉತ್ಸವ’ದತ್ತ ಪ್ರವಾಸಿಗರ ಹೆಜ್ಜೆ

ಇಂದು ಮಡಿಕೇರಿಯಲ್ಲಿ ‘ಓಪನ್‌ ಸ್ಟ್ರೀಟ್‌ ಫೆಸ್ಟಿವಲ್‌’

ಅದಿತ್ಯ ಕೆ.ಎ.
Published 12 ಜನವರಿ 2019, 17:30 IST
Last Updated 12 ಜನವರಿ 2019, 17:30 IST
ಎಂ.ಡಿ. ಪಲ್ಲವಿ ಗಾಯನ
ಎಂ.ಡಿ. ಪಲ್ಲವಿ ಗಾಯನ   

ಮಡಿಕೇರಿ: ಪ್ರವಾಸಿಗರ ಸೆಳೆಯಲು ಮಡಿಕೇರಿಯಲ್ಲಿ ಆಯೋಜಿಸಿರುವ ಮೂರು ದಿನಗಳ ‘ಕೊಡಗು ಪ್ರವಾಸಿ ಉತ್ಸವ’ವು ಶನಿವಾರ ರಂಗು ಪಡೆದುಕೊಂಡಿತು.

ಶ್ವಾನ ಪ್ರದರ್ಶನಕ್ಕೆ ಅಭೂತಪೂರ್ವ ಸ್ಪಂದನೆ ಸಿಕ್ಕಿತು. ಶುಕ್ರವಾರ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ, ರಾಜಾಸೀಟ್‌ನ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಅಷ್ಟಾಗಿ ಜನರು ಬಂದಿರಲಿಲ್ಲ. ಆದರೆ, ಶನಿವಾರದ ಶ್ವಾನ ಪ್ರದರ್ಶನಕ್ಕೆ ಹೆಚ್ಚಿನ ಜನರು ಸೇರುವ ಮೂಲಕ ಉತ್ಸವ ಕಳೆಗಟ್ಟುವಂತೆ ಮಾಡಿದರು.

ಕೊನೆಯ ದಿನ ಭಾನುವಾರ ರಾಜಾಸೀಟ್‌ ರಸ್ತೆಯಲ್ಲಿ ‘ಓಪನ್‌ ಸ್ಟ್ರೀಟ್‌ ಫೆಸ್ಟಿವಲ್‌’ ಆಯೋಜಿಸಲಾಗಿದೆ.ರಸ್ತೆ ಬದಿಯಲ್ಲಿಯೇ ವಿವಿಧ ಅಂಗಡಿಗಳು ತೆರೆದುಕೊಳ್ಳಲಿವೆ. ಪ್ರವಾಸಿಗರು, ಸ್ಥಳೀಯರು ತಮಗಿಷ್ಟವಾದ ಸಾಮಗ್ರಿ ಖರೀದಿಸಬಹುದು. ಕೊಡವ ಖಾದ್ಯಗಳು ರಸ್ತೆಯಲ್ಲಿ ಸಿಗಲಿವೆ. ವಿವಿಧ ಕಲಾ ತಂಡಗಳು ರಸ್ತೆಯಲ್ಲಿ ಪ್ರದರ್ಶನ ನೀಡಲಿವೆ. ಡೊಳ್ಳು ಕುಣಿತ ಮತ್ತು ಕೀಲು ಕುದುರೆ ರಂಜಿಸಲಿದೆ ಎಂದು ಹೇಳುತ್ತಾರೆ ಆಯೋಜಕರು.

ADVERTISEMENT

ಮಾರ್ಗ ಬದಲಾವಣೆ: ಭಾನುವಾರ ಬೆಳಿಗ್ಗೆ 8ರಿಂದ ರಾತ್ರಿ 10ರ ತನಕ ಎಂ.ಎಂ.ವೃತ್ತದಿಂದ ರಾಜಾಸೀಟ್ ಬಳಿಯಿರುವ ಕುಂದೂರುಮೊಟ್ಟೆ ದೇವಸ್ಥಾನದ ಜಂಕ್ಷನ್ ತನಕ ವಾಹನ ಸಂಚಾರ ನಿರ್ಬಂಧಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

ವಾಹನದಲ್ಲಿ ಬಂದವರು ದೂರದಲ್ಲಿಯೇ ನಿಲುಗಡೆ ಮಾಡಿ ಗಾಂಧಿ ಮೈದಾನದತ್ತ ನಡೆದು ಬರಬೇಕು. ಇತ್ತೀಚಿನ ದಿನಗಳಲ್ಲಿ ಮಡಿಕೇರಿಯಲ್ಲಿ ಇದು ಮೊದಲ ಪ್ರಯೋಗ. ಯಶಸ್ಸು ಆಗುವ ನಿರೀಕ್ಷೆಯಲ್ಲಿ ರೆಸಾರ್ಟ್‌ ಹಾಗೂ ಹೋಂಸ್ಟೇ ಮಾಲೀಕರು ಇದ್ದಾರೆ.

ವಿದ್ಯಾರ್ಥಿಗಳ ದಂಡು: ಶನಿವಾರ ಗಾಂಧಿ ಮೈದಾನದಲ್ಲಿ ಶಾಲಾ–ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡರು. ಉತ್ಸವಕ್ಕೆ ಶಾಲೆಯ ಶಿಕ್ಷಕರೇ ಮಕ್ಕಳನ್ನು ಕರೆತಂದಿದ್ದು ವಿಶೇಷ. ಪ್ರದರ್ಶನ ಮಳಿಗೆ, ಶ್ವಾನ ಪ್ರದರ್ಶನವನ್ನು ವಿದ್ಯಾರ್ಥಿಗಳು ಕಣ್ತುಂಬಿಕೊಂಡರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಳಿಗೆ ವೀಕ್ಷಿಸಿದ ವಿದ್ಯಾರ್ಥಿಗಳು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ಪುರಾತತ್ವ ಇಲಾಖೆ ವತಿಯಿಂದ ಏರ್ಪಡಿಸಿರುವ ಛಾಯಾಚಿತ್ರ ಪ್ರದರ್ಶನ ಆಕರ್ಷಕವಾಗಿದೆ.

ಕೊಡಗು ಪ್ರಗತಿಪರ ಜೇನು ಕೃಷಿ ಸಹಕಾರ ಸಂಘ, ಸ್ವಚ್ಛ ಭಾರತ ಅಭಿಯಾನ, ಕೃಷಿ, ತೋಟಗಾರಿಕೆ ಇಲಾಖೆಯ ಪ್ರದರ್ಶನಗಳೂ ಕಣ್ಮನ ಸೆಳೆಯುತ್ತಿವೆ. ಇನ್ನೂ ಅದೇ ಸಾಲಿನಲ್ಲಿ ಮುಂದೆ ಸಾಗಿದರೆ ಕೊಡಗಿನ ಖಾದ್ಯ ಸವಿಯಲು ಸಿಗಲಿದೆ. ಉತ್ಸವದ ಕಾರಣ ದುಬಾರಿ ದರವೂ ಇಲ್ಲ ಎನ್ನುತ್ತಾರೆ ವ್ಯಾಪಾರಿಗಳು. ಮಾಂಸಾಹಾರಿ ಪ್ರಿಯರಿಗೂ ತಮ್ಮ ಖಾದ್ಯಗಳು ಲಭ್ಯ ಇವೆ.

ರಾಜಾಸೀಟ್‌ನಲ್ಲೂ...: ಪ್ರಸಿದ್ಧ ಪ್ರವಾಸಿ ತಾಣ ರಾಜಾಸೀಟ್‌ಗೆ ಭೇಟಿ ನೀಡುವವರ ಸಂಖ್ಯೆಯಲ್ಲೂ ಹೆಚ್ಚಾಗಿದೆ. ಎರಡನೇ ದಿನವೂ ಸಾವಿರಾರು ಜನರು ಫಲಪುಷ್ಪ ವೈಭವ ವೀಕ್ಷಿಸಿದರು.

ಕಾವೇರಿ ಮಾತೆ, ತೀರ್ಥೋದ್ಭವದ ಪ್ರತಿರೂಪ, ಆನೆ, ಗಿಟಾರ್‌, ನವಿಲು ಕಲಾಕೃತಿಗಳ ಎದುರು ನಿಂತು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.